Saturday, 14th December 2024

ನನಗೆ ಜಾತಿ ಭೇದ ಗೊತ್ತಿಲ್ಲ: ನಡಹಳ್ಳಿ

ಮುಸ್ಲಿಂ ಬಡಾವಣೆ ನಿವಾಸಿಗಳ ಬೇಡಿಕೆಗೆ ಸ್ಪಂಧನೆ

ಮುದ್ದೇಬಿಹಾಳ: ನನಗೆ ಜಾತಿ ಭೇದ ಗೊತ್ತಿಲ್ಲ. ನಾನು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವವನು. ಅಭಿವೃಧ್ದಿ ವಿಷಯದಲ್ಲಿ ನನಗೆ ಎಲ್ಲ ಜಾತಿ, ಧರ್ಮದವರು ಸರಿ ಸಮಾನರು. ಯಾವತ್ತಿಗೂ ನಾನು ಜಾತಿ ರಾಜಕಾರಣ ಮಾಡಿಲ್ಲ, ಮಾಡೋದೂ ಇಲ್ಲ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ತಮ್ಮ ಗೃಹ ಕಚೇರಿ ದಾಸೋಹ ನಿಲಯಕ್ಕೆ ಆಗಮಿಸಿದ್ದ ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಮಹಿಬೂಬ ನಗರ, ಆಜಾದ ನಗರ ನಿವಾಸಿಗಳ ಅಹವಾಲು, ಕುಂದು ಕೊರತೆ ಆಲಿಸಿ ಮಾತನಾಡಿದ ಅವರು. ನನ್ನ ಮುಂದಿರುವ ಗುರಿ ಅಭಿವೃದ್ದಿ ಮಾತ್ರ. ದಾಸ್ಯದ ಸಂಕೋಲೆಯಿಂದ ಮುಕ್ತರಾಗಿರುವ ನನ್ನ ಜನರಿಗೆ ಅಭಿವೃಧ್ದಿ ಎಂದರೇನು ಅನ್ನೋದನ್ನು ಪರಿಚಯಿಸಿ ಕೊಡುವುದಷ್ಟೇ ನನ್ನ ಕೆಲಸ. ಸರ್ಕಾರದ ಯೋಜನೆಗಳು ಅರ್ಹರೆಲ್ಲರಿಗೂ ತಲುಪಬೇಕು. ಸರ್ಕಾರದ ಅಭಿವೃಧ್ದಿಪರ ಅನುದಾನ ಸಾರ್ಥಕ ಕಾರ್ಯಕ್ಕೆ ಬಳಕೆ ಆಗಬೇಕು ಅನ್ನೋದು ನನ್ನ ಸಂಕಲ್ಪ. ಈ ನಿಟ್ಟಿನಲ್ಲಿ ಏನೇ ಅಡ್ಡಿ, ಆತಂಕ ಎದುರಾದರೂ ನಾನು ಹಿಂಜರಿಯುವುದಿಲ್ಲ ಎಂದರು.

ಆಜಾದ ನಗರಕ್ಕೆ ಆಜಾದ ಎಂದು ಹೆಸರಿಟ್ಟಿರುವುದು ಅತ್ಯಂತ ಸೂಕ್ತವಾದದ್ದಾಗಿದೆ. ಆದರೆ ಅಲ್ಲಿನ ಜನರಿಗೆ ಆಜಾದಿಯ ನಿಜವಾದ ಅರ್ಥವನ್ನು ಮಾಡಿಸಬೇಕಿದೆ. 25 ವರ್ಷಗಳ ಕಾಲ ನೀವು ಆಜಾದಿಯ ಅರ್ಥವೇ ಗೊತ್ತಿಲ್ಲದಂತೆ ಬದುಕು ನಡೆಸಿದ್ದೀರಿ. ಆಜಾದಿ ಅಂದರೆ ಸ್ವಾತಂತ್ರ್ಯ. ಆ ಸ್ವಾತಂತ್ರ್ಯ ನಿಮಗೆ ಈಗಿ ಸಿಕ್ಕಿದೆ. ನೀವೆಲ್ಲ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ನಿಮ್ಮ ಬಡಾವಣೆಗಳಿಗೆ ಮೂಲ ಸೌಕರ್ಯ ಪಡೆದುಕೊಂಡು ಅಭಿವೃಧ್ದಿಯ ಸುಖ ಅನುಭವಿಸಬೇಕು. ಇದಕ್ಕೆ ನಾನು ನಿಮಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇನೆ ಎಂದರು.

http://vishwavani.news/jayadeva/

ಈ ವೇಳೆ ಎರಡೂ ಬಡಾವಣೆಗಳ ಪ್ರತಿನಿಧಿಯಾಗಿ ಮಾತನಾಡಿದ ಪುರಸಭೆ ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ ಅವರು ನಮ್ಮ ಬಡಾವಣೆಗಳಲ್ಲಿ ಮುಸ್ಲಿಂ ಸಮಾಜದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಬಹಳಷ್ಟು ವರ್ಷಗಳಿಂದ ಅಲ್ಲಿ ಮೂಲ ಸೌಕರ್ಯ ಒದಗಿಸುವುದು ಸಾಧ್ಯವಾಗಿಲ್ಲ. ಹಿಂದೆ ಬಂದವರೆಲ್ಲ ಪೊಳ್ಳು ಭರವಸೆಗಳನ್ನು ಕೊಡುತ್ತಿದ್ದರೇ ಹೊರತು ಅವುಗಳನ್ನು ಈಡೇರಿಸಲು ಮನಸ್ಸು ಮಾಡುತ್ತಿರಲಿಲ್ಲ. ನೀವು ಈಗ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಎಲ್ಲಾ ಕಡೆ ಅಭಿವೃಧ್ದಿಯ ಮಹಾಪೂರವನ್ನೇ ಹರಿಸತೊಡಗಿದ್ದೀರಿ.

ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಇದು ನಮ್ಮೆಲ್ಲ ಜನರ ಮೆಚ್ಚುಗೆಗೆ ಕಾರಣವಾಗಿದೆ. ನಮ್ಮ ಬಡಾವಣೆಗಳಿಗೂ ಮೂಲ ಸೌಕರ್ಯ ದೊರಕುವಂತೆ ನೋಡಿಕೊಂಡು ನಮ್ಮ ಜನರ ಜೀವನ ಮಟ್ಟವೂ ಸುಧಾರಿಸಲು ನೆರವಾ ಗಬೇಕು ಎಂದು ಕೋರಿದರು.

ಎಲ್ಲ ಅಹವಾಲು ಆಲಿಸಿದ ಶಾಸಕರು ನಿಮ್ಮ ಬಡಾವಣೆಗಳನ್ನು ಅಭಿವೃಧ್ದಿ ಮಾಡುವ ಜವಾಬ್ಧಾರಿ ನನ್ನದು. ನಿಮ್ಮೆಲ್ಲ ಬೇಡಿಕೆಗಳಿಗೆ ಸದಾ ಸ್ಪಂಧಿಸುತ್ತೇನೆ. ಆದರೆ ನೀವು ಕೆಲ ಕಟ್ಟುಪಾಡು ಮತ್ತು ಸಂಕೋಲೆಗಳಿಂದ ಹೊರಗೆ ಬಂದು ಸ್ವಾತಂತ್ರ್ಯದ ನಿಜವಾದ ಸುಖವನ್ನು ಅನುಭವಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಡಾ| ಪರಶುರಾಮ ಪವಾರ, ಕಟ್ಟಡ ನಿರ್ಮಾಣ ಕಾರ್ಮಿಕರ ಸಮಿತಿ ಮುಖಂಡ ಅಲ್ಲಾಭಕ್ಷ ದೇಸಾಯಿ (ಲಾರಾ), ಎ.ಎಂ.ಮೋಮಿನ್, ಆಯಾ ಬಡಾವಣೆಗಳ ಮುಖಂಡರು, ಸಾರ್ವಜನಿಕರು ಸೇರಿ ಹಲವರು ಇದ್ದರು. ಈ ವೇಳೆ ಆಯಾ ಬಡಾವಣೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳ ಬೇಡಿಕೆಗಳ ಪಟ್ಟಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.