ಮೆಡಿಕಲ್ ದಂಧೆಯಲ್ಲಿ ಎಲ್ಲರೂ ಪಾಲುದಾರರು
ಮೆಡಿಕಲ್ ದಂಧೆಯಲ್ಲಿ ಎಲ್ಲರೂ ಪಾಲುದಾರರು
Vishwavani News
September 22, 2022
ವೈದ್ಯರು, ಕಂಪನಿ ಮತ್ತು ರೋಗಿಗಳಿಂದಲೇ ಬೆಂಬಲ | ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಷ್ಣು ಹಯಗ್ರೀವ ಅಭಿಮತ
ಬೆಂಗಳೂರು: ಮೆಡಿಕಲ್ ದಂಧೆ ಎಂಬ ಶಬ್ದವನ್ನು ಬಳಸದೆ, ಇಂತಹ ಸಾಧ್ಯತೆಗಳಿಗೆ ಕೇವಲ ವೈದ್ಯರು ಮಾತ್ರವಲ್ಲದೇ ಆ ವರ್ತುಲ ದಲ್ಲಿರುವ ಎಲ್ಲರೂ ಕಾರಣ ಎಂದು ಡಾ. ವಿಷ್ಣು ಹಯಗ್ರೀವ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ನಡೆದ ಮೆಡಿಸನ್ ದಂಧೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೆಡಿಕಲ್ ದಂಧೆ ಎಂಬ ಶಬ್ದವನ್ನು ನಾನು ಬಳಕೆ ಮಾಡಲು ಇಷ್ಟಪಡುವುದಿಲ್ಲ. ಇದು ಭಾರತ ದೇಶದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲಿಯೂ ಈ ಸಮಸ್ಯೆ ಇದೆ. ಕಳ್ಳತನ ಗೊತ್ತಾಗುವವರೆಗೆ ಎಲ್ಲರೂ ಸತ್ಯ ಹರಿಶ್ಚಂದ್ರರೇ ಆಗಿರುತ್ತಾರೆ. ಕೆಲವರು ಮಾಡುವ ತಪ್ಪಿನಿಂದ ಇಡೀ ವೈದ್ಯಕೀಯ ಕ್ಷೇತ್ರಕ್ಕೆ ಕಪ್ಪುಚುಕ್ಕಿ ಬರುತ್ತಿದೆ. ಇದನ್ನು ಒಪ್ಪುಕೊಳ್ಳುತ್ತಲೇ ಇದಕ್ಕೆ ಕೇವಲ ವೈದ್ಯರು ಮಾತ್ರವಲ್ಲದೆ, ಆ ವರ್ತುಲದಲ್ಲಿ ಬರುವ ಎಲ್ಲರೂ ಕಾರಣ ಎನ್ನಬಹುದು. ಹೀಗಾಗಿ, ಎಲ್ಲರೂ ಸಮಾಜಿಕ ಹೊಣೆಗಾರಿಕೆ ಮತ್ತು ಮೌಲ್ಯಯುತ ಬದುಕು ನಡೆಸಬೇಕಿದೆ ಎಂದರು.
ನೈಸರ್ಗಿಕವಾಗಿ ಹರಿಯುವ ನೀರೆ, ನಮ್ಮ ಆರೋಗ್ಯದ ಗುಟ್ಟು. ನಮ್ಮ ದೇಹದ ಶೇ.೮೦ ರಷ್ಟು ನೀರಿನಿಂದಲೇ ಆಗಿದೆ. ಹೀಗಾಗಿ, ನೀರಿನ ಜತೆಯಲ್ಲಿಯೇ ನಮ್ಮ ಆರೋಗ್ಯದ, ಔಷಧಿಯ ನಿರ್ಧಾರ ವಾಗುತ್ತದೆ. ವೈದ್ಯರ ಬಗ್ಗೆ ಪರ, ವಿರೋಧವಾದ ವಿಚಾರ ಗಳನ್ನು ನಾವು ಕೇಳುತ್ತೇವೆ. ಕಾಯಿಲೆ ಗುಣವಾಗಲು ಔಷಧಿಯ ಅವಶ್ಯಕತೆ ಇದೆ.
ಹಿಂದೆ ಶೀತ ಬಂದರೆ ಮನೆಯಲ್ಲಿಯೇ ಕಷಾಯ ಕುಡಿದು, ನಾಲ್ಕು ದಿನ ಕಾಯ್ದು ಸುಮ್ಮನಾಗುತ್ತಿದ್ದರು. ಆದರೆ, ಕೋವಿಡ್ ನಂತರ ಶೀತ ಬಂದರೆ ಸಾಕು ಆಸ್ಪತ್ರೆಗೆ ದಾಖಲಾಗುವ ಮಟ್ಟಕ್ಕೆ ಬದಲಾಗಿದೆ. ಹೀಗಾಗಿ, ಔಷಧಿ ಬಳಕೆ ಹೆಚ್ಚಾಗುತ್ತಿದೆ. ಕೆಲವೊಮ್ಮೆ ವೈದ್ಯರು ಔಷಧಿ ಬೇಡ ಎಂದರೂ ರೋಗಿಯೇ ಕೊಡಿ ಎನ್ನವ ಸ್ಥಿತಿಯಿದೆ ಎಂದರು.
ಮೆಡಿಕಲ್ ದಂಧೆ ಎಂಬ ಶಬ್ದ ಬರಲು ವೈದ್ಯರು ಶೇ.೫ ರಷ್ಟು ಮಾತ್ರವೇ ಕಾರಣ. ನಮ್ಮ ದೇಶದಲ್ಲಿ ರಿಸರ್ಚ್ ಕಡಿಮೆ ಇಲ್ಲ. ಬಹುತೇಕ ಕಾರಣಕ್ಕೆ ಅಮೆರಿಕ ಕಡೆಗೆ ನೋಡುತ್ತೇನೆ. ಎ-ಡಿಯಿಂದ ಅಪ್ರೂವ್ ಆದರೆ ಮಾತ್ರ ಅದು ಒಳ್ಳೆಯ ಔಷಧಿ ಎನ್ನುತ್ತಾರೆ.
ಇದಕ್ಕೆ ಕೆಲವು ಜರ್ನಲ್‌ಗಳು ಕೂಡ ಕಾರಣ ಎನ್ನಬಹುದು. ಹಿಂದೆ ಔಷಽ ತಯಾರಾಗಲು ಹತ್ತು ವರ್ಷವಾಗುತ್ತಿತ್ತು. ಆಗ ಅದರ ಬೆಲೆಯನ್ನು ನಿಗದಿ ಮಾಡುತ್ತಾರೆ. ಅವರು ಹತ್ತು ವರ್ಷ ಮಾಡಿದ ವೆಚ್ಚವನ್ನು ಸೇರಿಸಿ ಅದರ ಬೆಲೆ ನಿಗದಿ ಮಾಡ್ತಾರೆ.
ಅದನ್ನು ಪ್ರಮೋಟ್ ಮಾಡಲು ಅಗತ್ಯವಿರುವ ಜರ್ನಲ್‌ಗಳಲ್ಲಿ ಬರೆಸುತ್ತಾರೆ. ಡ್ದಾಕ್ಟರ್‌ಗಳನ್ನು ಸಂಪರ್ಕ ಮಾಡಿ, ಶಿಫಾರಸು ಮಾಡಲು ಹೇಳುತ್ತಾರೆ. ಡಾಕ್ಟರ್‌ಗೆ ವಿವಿಧ ಸೌಲಭ್ಯ ಒದಗಿಸುತ್ತಾರೆ. ಇದು ತಪ್ಪು ಎಂದುಕೊಂಡರೆ, ಆ ಕಂಪನಿ ಅದನ್ನು ಕೊಡದೆ
ಇದ್ದರೆ ಏನಾಗುತ್ತಿತ್ತು ಎಂಬುದನ್ನು ಯೋಚಿಸಬೇಕಿದೆ ಎಂದು ವಿಶ್ಲೇಷಿಸಿದರು.
ಜನೌಷಧಿ ಅತ್ಯುತ್ತಮ: ಎಷ್ಟೋ ಹಂತದಲ್ಲಿ ವೈದ್ಯಕೀಯ ಕ್ಷೇತ್ರ ಕಲುಷಿತವಾಗುತ್ತಿದೆ. ಜನರಿಕ್ ಡ್ರಗ್ ಬಗ್ಗೆ ಅನುಮಾನವಿದೆ. ಜನರಿಕ್ ಔಷಧಿ ಉತ್ತಮವಾದುದು. ಮೋದಿ ಅವರು ತೆಗೆದುಕೊಂಡ ತೀರ್ಮಾನ ಒಳ್ಳೆಯದು. ರೋಗಿಗಳೇ ಇದರ ಬಗ್ಗೆ ಅನು ಮಾನ ವ್ಯಕ್ತಪಡಿಸುತ್ತಾರೆ. ದುಡ್ಡು ಜಾಸ್ತಿಯಾದರೂ ಪರವಾಗಿಲ್ಲ ಒಳ್ಳೆಯದು ಬರೆದುಕೊಡಿ ಎಂದು ಕೇಳುತ್ತಾರೆ. ಒಳ್ಳೆಯದು ಬರೆದುಕೊಟ್ಟು ಹೆಚ್ಚು ಬೆಲೆಯಾದರೆ, ಆಗ ಡಾಕ್ಟರ್ ಮೇಲೆ ಅನುಮಾನಪಡುತ್ತಾರೆ.
ಹೀಗಾಗಿ, ಯಾರೂ ಇಂತಹ ಆಮಿಷಕ್ಕೆ ಒಳಗಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇಂತಹದ್ದನ್ನು ಮಾಡಿದವರು ಇರುತ್ತಾರೆ. ಈ ದಂಧೆಗೆ ಎಲ್ಲರೂ ಪಾಲುದಾರರು. ಕಂಪನಿಗಳು, ವೈದ್ಯರು, ರೋಗಿಗಳು, ಜರ್ನಲ್‌ಗಳು, ರಾಜಕೀಯ ವ್ಯವಸ್ಥೆ ಸೇರಿದಂತೆ
ನಾವೆಲ್ಲರೂ ಇದರಲ್ಲಿ ಪಾಲುದಾರರು ಎನ್ನಬಹುದು.
ಖಾಸಗಿ ಆಸ್ಪತ್ರೆಗಳ ಲಾಭಿ: ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಅವ್ಯವಹಾರಗಳ ಕುರಿತು ಕೇಳುಗರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅವರು ಕೋಟ್ಯಂತರ ಬಂಡವಾಳ ಹೂಡಿ ಆಸ್ಪತ್ರೆ ಕಟ್ಟಿರುತ್ತಾರೆ. ಸರಕಾರಿ ಆಸ್ಪತ್ರೆಗಳಿಲ್ಲದ ಸೌಲಭ್ಯಗಳನ್ನು ನೀಡಿರುತ್ತಾರೆ. ಅವರ ನೀಡುವ ಸೇವೆಗೆ ತಕ್ಕದಾಗಿ ಶುಲ್ಕ ವಿಧಿಸುತ್ತಾರೆ. ಆದರೆ, ಕೆಲವರು ಸುಖಾಸುಮ್ಮನೆ ಶುಲ್ಕ ವಿಧಿಸಿದ
ಪ್ರಕರಣಗಳು ಇವೆ. ಹೀಗಾಗಿ, ಇಷ್ಟೇ ಸರಿ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಕೆಲವೊಮ್ಮೆ ಸಾವಿನ ನಂತರ ಶವ ಇಟ್ಟುಕೊಂಡರು ಎಂಬ ಆರೋಪಗಳು ಕೇಳಿಬರುತ್ತವೆ. ಇದನ್ನು ಎರಡು ಅರ್ಥದಲ್ಲಿ ನಾವು ನೋಡಬೇಕಾಗುತ್ತದೆ. ರೋಗಿಯ ಸ್ಥಿತಿಯನ್ನು ಅನಸರಿಸಿ ಆತನನ್ನು ಕೊನೆಯ ಕ್ಷಣದವರೆಗೆ ಬದುಕಿಸುವ ಪ್ರಯತ್ನ ನಡೆಸುವಾಗ ಕೆಲವೊಮ್ಮೆ ಅವಶ್ಯಕವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಇದನ್ನೇ ಕೆಲವರು ಅಪಾರ್ಥ ಮಾಡಿಕೊಳ್ಳಬಹುದು. ಜತೆಗೆ, ಇದೇ ಪ್ರಕ್ರಿಯೆಯನ್ನು ಕೆಲವು ಆಸ್ಪತ್ರೆಗಳು ಕೂಡ ದುರುಪಯೋಗ ಮಾಡಿಕೊಳ್ಳಬಹುದು. ಹೀಗಾಗಿ, ಇಂತಹದ್ದೇ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು.
ಈ ಸಂಬಂಧ ವಿಧೇಯಕ ರೆಡಿ
ಜನರಿಕ್ ಔಷಧಿಗಳನ್ನೇ ಬಳಸುವ ಮತ್ತು ಔಷಧಿ ಕಂಪನಿಗಳ ಜತೆಗೆ ವೈದ್ಯರು ಗುರುತಿಸಿಕೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಸರಕಾರ ವಿಧೇಯಕವೊಂದನ್ನು ಸಿದ್ಧಪಡಿಸಿದೆ. ೨೦೨೨ ರ ೨೩ ಮೇರಂದು ಈ ಸಂಬಂಧ ಕರಡು ಪ್ರತಿ ಸಿದ್ಧಗೊಂಡಿದ್ದು, ಸಾರ್ವಜನಿಕರ ಆಕ್ಷೇಪಣೆಗೆ ಲಭ್ಯವಿದೆ. ಈ ಬಗ್ಗೆ ಸರಕಾರಕ್ಕೆ ಸಲಹೆಗಳನ್ನು ನೀಡುವ ಸ್ವಾತಂತ್ರ್ಯ ಜನರಿಗಿದೆ. ಅದನ್ನು
ಮಾಡಿ, ಆ ಕಡರು ವಿಧೇಯಕವಾಗುವಂತೆ ಮಾಡಿದ್ದಲ್ಲಿ, ಅಲ್ಲಲ್ಲಿ ಇಂತಹ ದಂಧೆಯಲ್ಲಿ ಭಾಗಿಯಾಗುತ್ತಿರುವವರಿಗೂ ಕಡಿವಾಣ
ಬೀಳಬಹುದು. ಕರೋನಾ ಸಂದರ್ಭದಲ್ಲಿ ಕೆಲವು ಔಷಧಿ ಸಿಗುತ್ತಿರಲಿಲ್ಲ, ಕೆಲವರು ಎಷ್ಟಾದರಾಗಲೀ ಎಂದು ಬ್ಲಾಕ್ ಮಾರ್ಕೆಟ್‌ನಲ್ಲಿ ತರುತ್ತಿದ್ದರು. ಆದರೆ, ಎಷ್ಟೋ ಜನರು ಬದುಕಿದರೆ ಸಾಕು ಎಂಬ ಕಾರಣಕ್ಕೆ ಬ್ಲಾಕ್ ಮಾರ್ಕೆಟ್‌ನಲ್ಲಿ ಔಷಧಿ ಖರೀದಿಸಿದರು ಎಂದು ತಿಳಿಸಿದರು.
***
ಜನೌಷಧಿ ಕೇಂದ್ರದ ಔಷಧಿಗಳ ಖರೀದಿ ತಪ್ಪಲ್ಲ
ಗೂಗಲ್ ವೈದ್ಯಕೀಯ ಸಲಹೆ ಖಂಡಿತ ತಪ್ಪು
ಸಾಮಾಜಿಕ ಜವಾಬ್ದಾರಿ ಎಲ್ಲರದ್ದೂ ಆಗಿರಲಿ
ಕೋವಿಡ್ ಲಸಿಕೆ ದೇಶದಲ್ಲೇ ತಯಾರಿಸಿದ್ದು ಹೆಮ್ಮೆ.