Sunday, 28th April 2024

ಜಗತ್ತಿನ ಹೊಟ್ಟೆಯಲ್ಲಿ ನಮ್ಮ ದೇಶದ ಸಿಟ್ರಸ್ !

ಶಶಾಂಕಣ

shashidhara.halady@gmail.com

ಬೇರೆ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ವಲಸೆ ಬಂದ ಸಸ್ಯ ಮತ್ತು ತರಕಾರಿಗಳ ಕುರಿತು ಸಾಕಷ್ಟು ವಿಚಾರಗಳನ್ನು ನೀವು ಕೇಳಿರಬಹುದು; ದೂರದ
ದಕ್ಷಿಣ ಅಮೆರಿಕದಿಂದಲೋ, ಯುರೋಪಿನಿಂದಲೋ ಬಂದ ತರಕಾರಿ ಮತ್ತು ಸಸ್ಯಗಳ ಕುರಿತು ನಮಗೆ ಸಾಕಷ್ಟು ಕುತೂಹಲ, ಅಪಾರ ಬೆರಗು ಸಹ!

ಉದಾಹರಣೆಗೆ ಮೆಣಸಿನ ಕಾಯಿಯು ದಕ್ಷಿಣ ಅಮೆರಿಕದ ಸಸ್ಯ; ಅದನ್ನು ಕೊಲಂಬಸ್ (೧೪೫೧- ೧೫೦೬) ಮತ್ತು ಯುರೋಪಿಯನರು ಹೊರಜಗತ್ತಿಗೆ ಪರಿಚಯಿಸಿದರು; ನಮ್ಮ ದೇಶದಲ್ಲಿ ಈ ವಿದೇಶಿ ಸಸ್ಯವು ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ; ನಾನಾ ರೀತಿಯ ಮೆಣಸಿನ ಗಿಡಗಳು, ಕಾಯಿಗಳು ನಮ್ಮ ನಾಲಗೆಯ ರುಚಿಯನ್ನು ತಣಿಸಿವೆ. ಚೂರು ಮೆಣಸು, ಬೋಂಡಾ ಮೆಣಸು, ಜೀರಿಗೆ ಮೆಣಸು, ಕ್ಯಾಪ್ಸಿಕಂ, ಹಸಿ ಮೆಣಸು ಇ.ಇ. ವಿಶೇಷವೆಂದರೆ, ಮೆಣಸಿನ ಕಾಯಿಯು ಯುರೋಪಿನಲ್ಲಿ ಪರಿಚಯಗೊಳ್ಳುವ ತನಕ, ನಮ್ಮ ನಾಡಿನ ಕಾಳು ಮೆಣಸು ಮಾತ್ರ ಆ ಜನರಿಗೆ ಖಾರ ನೀಡುವ ಸಂಬಾರ ಪದಾರ್ಥ ಎನಿಸಿತ್ತು!

ಇದೇ ರೀತಿ, ಗೋಡಂಬಿ ಗಿಡವು ಮೂಲತಃ ದಕ್ಷಿಣ ಅಮೆರಿಕದ ಬ್ರೆಜಿಲ್ ಪ್ರದೇಶದ್ದು; ಇದನ್ನು ಸಹ ಯುರೋಪಿಯನ್ ಸಾಹಸಿಗರು ಅಮೆರಿಕದಿಂದ ಯುರೋಪಿಗೆ
ತಂದು, ಅಲ್ಲಿಂದ ಗೋವಾ ಮೂಲಕ ನಮ್ಮ ದೇಶಕ್ಕೆ ಪರಿಚಯಿಸಿದರು. ಇಂತಹ ಹಲವು ವಿದೇಶಿ ಮೂಲದ ಸಸ್ಯಗಳು ನಮ್ಮ ನಾಲಗೆಯ ರುಚಿ ಹೆಚ್ಚಿಸಿವೆ; ಎಷ್ಟರ ಮಟ್ಟಿಗೆ ಎಂದರೆ, ಮೆಣಸಿನ ಕಾಯಿಯಂತಹ ರುಚಿಕರ, ಖಾರ, ಘಾಟಿನ ಸಸ್ಯವನ್ನು ಹೊರಗಿಟ್ಟು ನಮ್ಮ ದಿನಚರಿಯನ್ನು ಇಂದು ಊಹಿಸಿಕೊಳ್ಳಲು ಸಹ ಸಾಧ್ಯ ವಿಲ್ಲ.

ಇದಕ್ಕೆ ಸಂವಾದಿಯಾಗಿ, ನಮ್ಮ ದೇಶದ ಮೂಲದ ಹಲವು ಸಸ್ಯಗಳು ಯುರೋಪ್, ಅಮೆರಿಕ ಮೊದಲಾದ ಪ್ರದೇಶಗಳಿಗೆ ಪಯಣಿಸಿವೆ, ವಲಸೆ ಹೋಗಿವೆ. ಅವುಗಳಲ್ಲಿ ಅಗ್ರಗಣ್ಯ ಎಂದರೆ ಲಿಂಬೆ ಮತ್ತು ಸಿಟ್ರಸ್ ಜಾತಿಯ ಸಸ್ಯಗಳು. ಅದರಲ್ಲೂ ಲಿಂಬೆ, ಕಿತ್ತಳೆ ಮೊದಲಾದ ಸಿಟ್ರಸ್ ಹಣ್ಣುಗಳು ಜಗತ್ತಿನ ನಾಗರಿಕತೆಯ ವಿಕಸನಕ್ಕೆ ನೀಡಿರುವ ಕೊಡುಗೆ ಅಪಾರ, ಅಮೂಲ್ಯ. ಈ ಒಂದು ವಾಸ್ತವವನ್ನು ನಮ್ಮ ದೇಶದವರು ಹೆಮ್ಮೆಯಿಂದ ಹೇಳಿಕೊಂಡು ಪ್ರಚಾರ ಮಾಡಿಕೊಳ್ಳ ಬಹುದು!

ಹದಿ ನೈದು ಮತ್ತು ಹದಿನಾರನೆಯ ಶತಮಾನದಲ್ಲಿ ಯುರೋಪಿನಿಂದ ಹಡಗಿನಲ್ಲಿ ಪೂರ್ವದತ್ತ ಹೊರಟ ಯುರೋಪಿಯನ್ ನಾವಿಕರ ಪಡೆಯು, ಹಲವು ತಿಂಗಳುಗಳ ಕಾಲ ಸಮುದ್ರದಲ್ಲಿ ಪಯಣಿಸುವಾಗ, ಅವರಿಗೆ ವಿಟಮಿನ್ ಸಿ ಕೊರತೆ ಯಾಗಿ, ಸ್ಕರ್ವಿ ಎಂಬ ಯಾತನಾಮಯ ರೋಗ ಕಾಡುತ್ತಿತ್ತು; ಅದನ್ನು ಅವರು ಸಮರ್ಥವಾಗಿ ಎದುರಿಸಿದ್ದು ಲಿಂಬೆ ಮತ್ತು ಸಿಟ್ರಸ್ ಜಾತಿಯ ಹಣ್ಣುಗಳ ಬಳಕೆಯಿಂದ, ಲಿಂಬೆ ರಸವನ್ನು ನಿಯತವಾಗಿ ಸೇವಿಸುವ ಮೂಲಕ. ಆದ್ದರಿಂದ, ಬ್ರಿಟಿಷರು ಹದಿನೇಳನೆಯ ಶತಮಾನದಲ್ಲಿ ಭಾರತವನ್ನು ವಶಪಡಿಸಿಕೊಳ್ಳಲು ನಡೆಸಿದ ವಸಾಹತುಶಾಹಿ ದಂಡಯಾತ್ರೆಯ ಯಶಸ್ಸಿಗೆ, ನಮ್ಮ ದೇಶದ ಲಿಂಬೆ ಮತ್ತು ಸಿಟ್ರಸ್ ಹಣ್ಣುಗಳ ಕೊಡುಗೆ ಅಪಾರ, ಅಮೂಲ್ಯ!

ಆದರೆ, ಅದಕ್ಕೂ ಬಹಳ ಮೊದಲೇ ಲಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳು ನಮ್ಮ ದೇಶದಿಂದ ಯುರೋಪ್ ಮೊದಲಾದ ದೇಶಗಳನ್ನು ತಲುಪಿದ್ದವು. ಬಹು ಪುರಾತನ ಕಾಲದಲ್ಲಿ ನಡೆದ ವಲಸೆ, ನಂತರ ಅರೆಬಿಯನ್ ವರ್ತಕರ ಮೂಲಕ ಲಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಯುರೋಪ್ ತಲುಪಿದವು ಎಂದು ತಿಳಿಯಲಾಗಿದೆ. ಎರಡನೆಯ ಶತಮಾನದಲ್ಲೇ ಇಟೆಲಿ ಮತ್ತು ರೋಮ್ ಸಾಮ್ರಾಜ್ಯವನ್ನು ನಮ್ಮ ದೇಶದ ಲಿಂಬೆ ಪ್ರವೇಶಿಸಿತ್ತು. ಪರ್ಷಿಯಾ, ಇರಾಕ್, ಈಜಿಪ್ಟ್ ಗೆ
ಕ್ರಿ.ಶ.೭೦೦ರಲ್ಲಿ ಲಿಂಬೆ ಪ್ರವೇಶವಾಯಿತು. ಹತ್ತನೆಯ ಶತಮಾನದಲ್ಲಿ ಅರೇಬಿಯಾದ ತೋಟಗಳಲ್ಲಿ ಲಿಂಬೆಯನ್ನು ಅಲಂಕಾರಿಕ ಸಸ್ಯವನ್ನಾಗಿ ಬೆಳೆಸಲಾಗು ತ್ತಿತ್ತು. ಯುರೋಪ್‌ನಲ್ಲಿ ೧೫ನೆಯ ಶತಮಾನದಲ್ಲಿ, ಅಮೆರಿಕದಲ್ಲಿ ಹದಿನಾರನೆ ಶತಮಾನದಲ್ಲಿ ಲಿಂಬೆಯ ತೋಟಗಳು, ಕಿತ್ತಳೆಯ ತೋಟಗಳು (ಆರೆಂಜರಿ) ತಲೆ ಎತ್ತಿದವು.

೧೪೯೩ರಲ್ಲಿ ಕ್ರಿಸ್ಟೊಫರ್ ಕೊಲಂಬಸನು ಲಿಂಬೆಯ ಬೀಜಗಳನ್ನು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಅಮೆರಿಕಕ್ಕೆ ಕೊಂಡೊಯ್ದ. ರಾಯಲ್ ನೇವಿಯ ವೈದ್ಯ ಜೇಮ್ಸ್ ಲಿಂಡ್‌ನು ಸ್ಕರ್ವಿ ರೋಗ ತಡೆಯಲು ಲಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳ ಪ್ರಯೋಗ ಮಾಡಿದ್ದು ೧೭೪೭ರಲ್ಲಿ. ಲಿಂಬೆ ಮತ್ತು ಹಲವು ಸಿಟ್ರಸ್ ಹಣ್ಣುಗಳ ಮೂಲ
ಯಾವುದು ಗೊತ್ತಾ? ಬಹು ಪುರಾತನ ಕಾಲ ದಿಂದಲೂ ಹಿಮಾಲಯದ ತಪ್ಪಲಿನಲ್ಲಿ, ಅಸ್ಸಾಂ, ಮ್ಯಾನ್ಮಾರ್, ದಕ್ಷಿಣ ಚೀನಾ ಪ್ರದೇಶದಲ್ಲಿ ಲಿಂಬೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿತ್ತು. ಇದು ಎಷ್ಟು ಪುರಾತನ ಕಾಲ ಎಂದರೆ, ಹಲವು ಲಕ್ಷ ವರ್ಷಗಳ ಹಿಂದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಹುಳಿ ಕಿತ್ತಳೆ / ಕಾಡು ಕಿತ್ತಳೆ (ಬಿಟ್ಟರ್ ಆರೆಂಜ್) ಮತ್ತು ಸಿಟ್ರಾನ್ (ಕಾಡು ಲಿಂಬೆ) ಗಿಡಗಳ ಸಂಕರದಿಂದ ಲಿಂಬೆಯ ತಳಿಗಳು ಉತ್ಪನ್ನಗೊಂಡವು. ನಿಸರ್ಗ ದಲ್ಲೇ ಈ ಸಂಕರ ನಡೆದು, ಲಿಂಬೆ ಮತ್ತು ಇತರ ಹಲವು ಸಿಟ್ರಸ್ ತಳಿಗಳು ರೂಪುಗೊಂಡವು.

ಆಯುರ್ವೇದ ಔಷಧ ಪದ್ಧತಿಯಲ್ಲಿ ಲಿಂಬೆ ರಸದ ವ್ಯಾಪಕ ಬಳಕೆಯನ್ನು ಗಮನಿಸಿದರೆ, ಲಿಂಬೆಯ ಔಷಧಿಯ ಗುಣಗಳನ್ನು ನಮ್ಮ ದೇಶದವರು ಸಾವಿರಾರು ವರ್ಷಗಳ ಮುಂಚೆಯೇ ಗುರುತಿಸಿದ್ದರು ಎನಿಸುತ್ತದೆ. ವಿಟಮಿನ್ ಸಿ ಹೇರಳವಾಗಿರುವ ಲಿಂಬೆಯು, ಹುಳಿ ಗುಣ ಹೊಂದಿದ್ದು, ನಾನಾ ರೀತಿಯಲ್ಲಿ  ಬಳಕೆಯಾಗು ತ್ತಿದೆ. ಎಷ್ಟರ ಮಟ್ಟಿಗೆ ಎಂದರೆ, ಹಾಲನ್ನು ಮೊಸರು ಮಾಡಲು ಈಗಲೂ ಲಿಂಬೆರಸವನ್ನು ಬಳಸುವ ಪುರಾತನ ಪದ್ಧತಿಯು ಅಲ್ಲಲ್ಲಿ ಮುಂದುವರಿದಿದೆ!

ಲಿಂಬೆಯ ಜತೆಯಲ್ಲೇ, ಹಲವು ಸಿಟ್ರಸ್ ಪ್ರಭೇದಗಳನ್ನು ಗುರುತಿಸಬಹುದು. ಕಿತ್ತಳೆ, ಗಜನಿಂಬೆ, ಎಳ್ಳಿ, ದುಡ್ಲಿ, ಮುಸುಂಬಿ, ಸಿಹಿ ಕಂಚಿ, ಕಹಿ ಕಂಚಿ, ಚಕ್ಕೋತ, ಕಿಮೋ – ಈ ರೀತಿ ನಾನಾ ರೀತಿಯ ಸಿಟ್ರಸ್ ತಳಿಗಳು ಪುರಾತನ ಕಾಲದಿಂದಲೇ ಮನುಷ್ಯನಿಗೆ ಪರಿಚಿತ. ಜಗತ್ತಿನ ಎಲ್ಲಾ ಸಿಟ್ರಸ್ ಪ್ರಭೇದದ ಹಣ್ಣುಗಳಿಗೆ ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿದ್ದ ತಳಿಗಳೇ ತಂದೆ ತಾಯಿ ಇದ್ದಂತೆ ಎಂಬ ವಿಚಾರವೇ ವಿಸ್ಮಯ ಹುಟ್ಟಿಸುವಂತಹದ್ದು.

ಲಿಂಬೆ ಮತ್ತು ಕಿತ್ತಳೆಯ ಕುರಿತು ಈ ರೀತಿಯ ಒಂದು ಕುತೂಹಲ ನನ್ನಲ್ಲಿ ಹುಟ್ಟಲು, ‘ಕಾಡು ಕಿತ್ತಳೆ’ಯ ಕುರಿತು ಈಚೆಗೆ ನಡೆಯುತ್ತಿರುವ ಚರ್ಚೆಯೇ ಕಾರಣ! ಸುಳ್ಯದ ‘ನಾಡ ಮಾವು ಮಿತ್ರರು’ (ನಾಮಾಮಿ) ಎಂಬ ವಾಟ್ಸಾಪ್ ಗುಂಪು ಕಾಡು ಕಿತ್ತಳೆಯ ಕುರಿತು ಸಾಕಷ್ಟು ಮಾಹಿತಿಯನ್ನು ಇತ್ತೀಚೆಗೆ ಕಲೆಹಾಕಲು ಆರಂಭಿಸಿತು; ಆ ಗುಂಪಿನ ಮನೋಹರ ಉಪಾಧ್ಯ, ಸಾಹಿತಿ ಶ್ರೀ ಪಡ್ರೆ (ಅಡಿಕೆ ಪತ್ರಿಕೆ) ಮುಂತಾದವರು ನಮ್ಮ ನಾಡಿನ ವಿವಿಧ ಭಾಗಗಳಲ್ಲಿರುವ ಕಾಡು ಕಿತ್ತಳೆಯ ತಳಿಗಳ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆಗೆ ಒಳಪಡಿಸಲು ಪ್ರಯತ್ನ ನಡೆಸಿದರು ಮತ್ತು ಅದು ಇನ್ನೂ ಮುಂದುವರಿದಿದೆ. ಈಗ ನಾವು, ನೀವು
ತಿನ್ನುವ ರುಚಿಕರ ಸಿಹಿ ಕಿತ್ತಳೆಯ ಮೂಲ ಎನಿಸಿರುವ ಕಾಡು ಕಿತ್ತಳೆಯ ಗಿಡಗಳು, ಪಶ್ಚಿಮ ಘಟ್ಟಗಳಲ್ಲಿ ಅಲ್ಲಲ್ಲಿ ಸಾಕಷ್ಟು ಕಡೆ ಹರಡಿವೆ ಎಂಬ ವಿಚಾರ ಅಚ್ಚರಿ ಮೂಡಿಸುತ್ತಿದೆ.

ಕಾಫಿ ತೋಟದ ಅಂಚಿನಲ್ಲಿ, ಅಡಕೆ ತೋಟದ ಬದಿಯಲ್ಲಿ, ಕಾಡಿನ ನಡುವೆ ಹರಿಯುವ ನದಿಗಳ ಅಂಚಿನಲ್ಲಿ ಹಲವು ರೀತಿಯ ಕಾಡು ಕಿತ್ತಳೆಗಳು ಈಗ ಪತ್ತೆಯಾಗಿವೆ ಅಥವಾ ಮರುಪರಿಚಯಗೊಂಡಿವೆ. ಮರುಪರಿಚಯ ಎಂಬ ಪದ ಏಕೆ ಬಳಸಿದೆನೆಂದರೆ, ಕಾಡು ಕಿತ್ತಳೆಗಳು ನಮ್ಮ ರಾಜ್ಯದಲ್ಲಿ ಬಹು ಹಿಂದಿನಿಂದಲೂ ಇವೆ! ಇವು ಅವಶ್ಯವಾಗಿ ಪಶ್ಚಿಮ ಘಟ್ಟಗಳಲ್ಲಿರುವ ಪುರಾತನ ಸಿಟ್ರಸ್ ಪ್ರಭೇದಗಳೇ ಇರಬೇಕು. (ಈ ಕುರಿತು ಸಂಶೋಧನೆ ಅಗತ್ಯವಿದೆ). ನಾಯಿ ಕಿತ್ತಳೆ, ಇಳ್ಳಿ ಹಣ್ಣು, ಚಿಟ್ಟಕಿತ್ತಳೆ ಮೊದಲಾದ ಹೆಸರುಗಳಿಂದ ಇವು ಸುಳ್ಯ, ಸಿರ್ಸಿ, ಸಾಗರ, ಚಿಕ್ಕಮಗಳೂರು ಮೊದಲಾದ ಕಡೆ ಮೊದಲಿನಿಂದಲೂ ಪರಿಚಿತ.

ಸಿಹಿ ಕಿತ್ತಳೆ ಗಿಡಗಳನ್ನು ಕಸಿ ಮಾಡಲು ಕಾಡು ಕಿತ್ತಳೆ ಗಿಡಗಳ ಕಾಂಡವನ್ನು ಬಳಸುವುದುಂಟು. ಸಿಹಿಕಿತ್ತಳೆ ಹಣ್ಣಿನಲ್ಲಿ ನಾಲ್ಕಾರು ಬೀಜಗಳು ಕಂಡುಬಂದರೆ,
ಕಾಡು ಕಿತ್ತಳೆಯಲ್ಲಿ ಹತ್ತಾರು ಬೀಜಗಳಿರುತ್ತವೆ ಮತ್ತು ಸಾಮಾನ್ಯವಾಗಿ ಇವು ಹುಳಿ; ಗಾತ್ರದಲ್ಲೂ ಚಿಕ್ಕವು. ಆದರೆ, ಒಂದು ಕಾಡು ಕಿತ್ತಳೆ ಮರದಲ್ಲಿ ವರ್ಷಕ್ಕೆ ಐನೂರಕ್ಕೂ ಹೆಚ್ಚು ಹಣ್ಣುಗಳಾಗುವುದನ್ನು ಆ ಪ್ರದೇಶದ ಜನರು ಗಮನಿಸಿದ್ದಾರೆ. ಅಲ್ಲಿನ ಕಾಡಿನಂಚಿನಲ್ಲಿ, ತೋಟದ ಬದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಈ ಮರಗಳಿಂದ ದೊರೆಯುವ ಹಣ್ಣನ್ನು ತಾವು ತಿಂದಿದ್ದೇವೆ ಎಂದು ಹಲವು ಹಿರಿಯರು ನೆನಪಿಸಿಕೊಂಡು, ‘ನಾಮಾಮಿ’ ವಾಟ್ಸಾಪ್ ಗುಂಪಿನಲ್ಲಿ ತಮ್ಮ ಅನುಭವವನ್ನು
ಹಂಚಿಕೊಂಡರು ಮತ್ತು ಇದನ್ನು ದಾಖಲಿಸುವ ಪ್ರಯತ್ನ ನಡೆದಿದೆ.

ಕಾಡು ಕಿತ್ತಳೆ ಅಥವಾ ಇಳ್ಳಿ ಹಣ್ಣು ಮಲೆನಾಡಿಗರಿಗೆ ಸಾಕಷ್ಟು ಪರಿಚಿತ. ಇದರ ಜತೆಯಲ್ಲೇ ಹಲವು ಸಿಟ್ರಸ್ ತಳಿಯ ಹಣ್ಣುಗಳು ನಮ್ಮಲ್ಲಿ ಬೆಳೆಯುತ್ತವೆ. ಬಯಲು
ಸೀಮೆಯಲ್ಲೊಂದು ಇಳ್ಳಿ ಹಣ್ಣು ಇದೆ; ಇದು ಸಿಟ್ರಸ್ ಗುಂಪಿಗೆ ಸೇರಿದ ಸಸ್ಯ; ಆದರೆ ಇದರಿಂದ ಜ್ಯೂಸ್ ತಯಾರಿಸಲು ಮಾತ್ರ ಸಾಧ್ಯ. ಆದರೆ, ಶಿರಸಿ ಪ್ರದೇಶ ದಲ್ಲಿ ಇಳ್ಳಿ ಹಣ್ಣು ಎಂದರೆ  ಕಾಡುಕಿತ್ತಳೆ. ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಸಿಹಿ ಕಂಚಿ ಮತ್ತು ಕಹಿ ಕಂಚಿ ಎಂಬ ಎರಡು ಪ್ರಭೇದದ ಸಿಟ್ರಸ್ ಮರಗಳು ಕಾಣಸಿಗುತ್ತವೆ. ಇವುಗಳ ದೊಡ್ಡ ಗಾತ್ರದ ಹಣ್ಣುಗಳನ್ನು ತಿನ್ನಬಹುದು; ಆದರೆ ರುಚಿ ತುಸು ಕಡಿಮೆ ಎನ್ನಬಹುದು.

ಸಿಟ್ರಸ್ ಪ್ರಭೇದದ ಮೂಲವು ನಮ್ಮ ದೇಶ ಮತ್ತು ದಕ್ಷಿಣ ಏಷ್ಯಾವೇ ಆದರೂ, ಇಂದು ವಿದೇಶಗಳಲ್ಲಿ ಇವುಗಳ ವಿವಿಧ ತಳಿಗಳ ಅಭಿವೃದ್ಧಿ ಆಗಿದೆ. ಈ ರೀತಿ ಬೇರೆ ದೇಶಗಳಲ್ಲಿ ಅಭಿವೃದ್ಧಿ ಹೊಂದಿ, ಅಲ್ಲಿನ ಅಧಿಕೃತ ಹಣ್ಣು ಎಂದೇ ಗುರುತಿಸಲ್ಪಡುತ್ತಿರುವ ಹಣ್ಣುಗಳಲ್ಲಿ ಮೂಸಂಬಿ ಪ್ರಮುಖ. ಮೂಸಂಬಿ ಹಣ್ಣು ಮೂಲತಃ ನಮ್ಮ
ದೇಶದ ಸಿಟ್ರಸ್ ಪ್ರಭೇದಗಳಿಂದ ರೂಪುಗೊಂಡ ಹಣ್ಣು. ಆದರೆ, ಇಂದು ಅಽಕೃತ ಮಾಹಿತಿಯನ್ನು ಗಮನಿಸಿದರೆ, ಮೂಸಂಬಿಯು ಇರಾನಿನ ದಕ್ಷಿಣ ಭಾಗದ ಹಣ್ಣು ಎಂದು ಪರಿಚಯಗೊಳ್ಳುತ್ತಿದೆ!

ಅದಕ್ಕೆ ಕಾರಣವಿದೆ. ಮೂಸಂಬಿಯು ಹುಳಿ ಕಿತ್ತಳೆ (ಸಿಟ್ರಸ್ ಆರೆಂಟಿಯಮ್) ಮತ್ತು ಕಾಡು ಲಿಂಬೆ / ಗಜ ಲಿಂಬೆ (ಸಿಟ್ರಸ್ ಮೆಡಿಕಾ) ಸಸ್ಯಗಳ ಸಂಕರದಿಂದ ರೂಪುಗೊಂಡ ಹಣ್ಣು. ಸಿಟ್ರಸ್ ಮೆಡಿಕಾದ ಮೂಲವು ಹಿಮಾಲಯದ ತಪ್ಪಲು; ಹುಳಿ ಕಿತ್ತಳೆ ಸಹ ಭಾರತ ಮೂಲದ್ದು. ಇವೆರಡನ್ನೂ ಸಂಕರಗೊಳಿಸಿ, ಮೂಸಂಬಿ ಎಂಬ ಹಣ್ಣನ್ನು ಉತ್ಪಾದಿಸಿದ ಕೀರ್ತಿ ಇರಾನ್‌ಗೆ ಸಂದಿದೆ! ಮೂಸಂಬಿಯ ವಿಭಿನ್ನ ತಳಿಯು ಮೊಸಾಂಬಿಕ್ ದೇಶದಲ್ಲಿ ರೂಪುಗೊಂಡಿದ್ದು, ಇದನ್ನು ಪೋರ್ಚುಗೀಸರು ಭಾರತಕ್ಕೆ ತಂದರು ಎಂದು ದಾಖಲೆಗಳು ಹೇಳುತ್ತವೆ.

ಮೂಸಂಬಿ ಎಂಬ ಪದವು ಇರಾನ್ ಮತ್ತು ಮೊಸಾಂಬಿಕ್ ಪದಗಳಿಂದ ಬಂದಿದೆ ಎನ್ನಲಾದೆ. ಮೂಸಂಬಿಯ ಮೂಲ ಇರಾನ್ ದೇಶವಾದರೂ, ಅದನ್ನು
ರೂಪುಗೊಳಿಸುವಲ್ಲಿ ಬಳಸಿದ ಎರಡು ಸಿಟ್ರಸ್ ಸಸ್ಯಗಳು ನಮ್ಮ ದೇಶದ್ದು ಎಂದು ಅಭಿಮಾನಪಟ್ಟುಕೊಳ್ಳಬಹುದು. ಮುಸಂಬಿಯ ವಿಶೇಷವೆಂದರೆ, ಇದನ್ನು ಸೇವಿಸುವದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಇರಾನ್ ದೇಶದಲ್ಲಿ ನೆಗಡಿ ಜ್ವರವಾದಾಗ ಇದರ ರಸವನ್ನು ನಾಟಿ ಔಷಧವಾಗಿ ಉಪಯೋಗಿಸುವರು! ಅಂತಹ ಔಷಧಿಯ ಗುಣಗಳು ಈ ಹಣ್ಣಿಗೆ ಇರುವುದಂತೂ ನಿಜ. ಕಾಡು ಕಿತ್ತಳೆಯ ಕುರಿತು ಮಾತನಾಡುವಾಗೆಲ್ಲಾ, ನಾಡ ಕಿತ್ತಳೆಯ ವಿಚಾರವೂ ಬರಲೇಬೇಕು.
ರುಚಿಕರ ಹಣ್ಣು ಕಿತ್ತಳೆಯು ನಮ್ಮ ರಾಜ್ಯದವರಿಗೆ ಕೊಡಗಿನ ಕಿತ್ತಳೆ ಎಂದೇ ಪರಿಚಿತ. ಕೆಲವು ದಶಕಗಳ ಹಿಂದೆ ಕೊಡಗಿನ ಕಿತ್ತಳೆ ಮರಗಳಿಗೆ ರೋಗವೊಂದು
ಬಂದು, ಹಲವು ಮರಗಳು ನಾಶವಾದವು.

ನಾಗಪುರದ ಕಿತ್ತಳೆಯು ಗಾತ್ರದಲ್ಲಿ ದೊಡ್ಡದಗಿದ್ದು, ಸಿಪ್ಪೆ ತೆಗೆಯಲು ಸುಲಭವಾಗಿದ್ದರಿಂದ, ಅದು ಇಂದು ಹೆಚ್ಚು ಜನಪ್ರಿಯ. ಇಂತಹ ಹಲವು ಸಿಟ್ರಸ್ ಹಣ್ಣುಗಳ
ಮೂಲವಾಗಿರುವ ಕಾಡು ಕಿತ್ತಳೆ ತಳಿಯು ಈಚಿನ ವರ್ಷಗಳಲ್ಲಿ ನಿಧಾನವಾಗಿ ಕಣ್ಮರೆಯಾಗುವುದನ್ನು ಗುರುತಿಸಲಾಗಿದೆ. ತನ್ನ ಪಾಡಿಗೆ ತಾನು ಬೆಳೆಯುತ್ತಿದ್ದ ಕಾಡು ಕಿತ್ತಳೆ ಅಥವಾ ನಾಯಿ ಕಿತ್ತಳೆಗೆ ಇಂತಹ ಅವಜ್ಞೆ ಏಕೆಂದರೆ, ಅದರಿಂದ ವಾಣಿಜ್ಯಕ ಉಪಯೋಗ ಇಲ್ಲ ಎಂಬ ಅಭಿಪ್ರಾಯ.

ಬಹುಪಾಲು ಕೃಷಿಕರು ಇಂದು ವಾಣಿಜ್ಯಕ ಬೆಳೆಯತ್ತ ಹೆಚ್ಚು ಗಮನ ಹರಿಸಿರುವುದರಿಂದ, ಕಾಡು ಕಿತ್ತಳೆ, ನಾಯಿ ಕಿತ್ತಳೆ, ಇಳ್ಳಿ ಕಾಯಿ, ಎಳ್ಳಿ ಕಾಯಿ, ಹೆರಳೆ ಕಾಯಿ, ದುಡ್ಲೆ ಕಾಯಿ,(ಉಪ್ಪಿನ ಕಾಯಿ ಮಾಡಬಹುದು), ಗಜನಿಂಬೆ, ಸಿಹಿ ಕಂಚಿ ಮೊದಲಾದ ಸಿಟ್ರಸ್ ಪ್ರಭೇದಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ; ಎಷ್ಟರ ಮಟ್ಟಿಗೆ ಎಂದರೆ, ಹಿರಿಯರು ಇದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳಬಲ್ಲರಾದರೂ, ಇಂದಿನ ಯುವ ಪೀಳಿಗೆಗೆ ಇಂತಹ ಹಣ್ಣುಗಳ ಪರಿಚಯವೇ ಮರೆತುಹೋಗುತ್ತಿದೆ!

ಅದಾಗಬಾರದು ಅಲ್ಲವೆ? ಆದ್ದರಿಂದಲೇ, ಈಗ ‘ನಾಮಾಮಿ’ ಮಿತ್ರರು ಕಾಡು ಕಿತ್ತಳೆಯ ತಳಿಗಳನ್ನು ಗುರುತಿಸುವ ಪ್ರಯತ್ನದಲ್ಲಿ ತೊಡಗಿರುವುದು ನಿಜಕ್ಕೂ
ಅನುಕರಣಾರ್ಹ. ನಿಮಲ್ಲೂ ಕಾಡು ಕಿತ್ತಳೆ ಮತ್ತು ದುಡ್ಲೆ ಮೊದಲಾದ ಸಿಟ್ರಸ್ ತಳಿಯ ಮಾಹಿತಿ ಇದ್ದರೆ, ಅವರೊಂದಿಗೆ ಹಂಚಿಕೊಳ್ಳಬಹುದು.

(ಚಿತ್ರ: ಮೂಡಿಗೆರೆಯ ಚಿಟ್ಟ ಕಿತ್ತಳೆ : ಕೃಪೆ: ನಾಮಾಮಿ ಮಿತ್ರರು, ಸುಳ್ಯ).

Leave a Reply

Your email address will not be published. Required fields are marked *

error: Content is protected !!