Sunday, 19th May 2024

ಲೇಖಕ, ನಟ, ಕ್ರಿಕೆಟಿಗ, ಸ್ವಾಮೀಜಿ…ಬಗ್ಗೆ ಅಭಿಮಾನ ಎಷ್ಠಿರಬೇಕು ?

ಇದೇ ಅಂತರಂಗ ಸುದ್ದಿ

vbhat@me.com

ಕನ್ನಡದವರೇನೋ ಎಂಬಷ್ಟರಮಟ್ಟಿಗೆ ಕನ್ನಡಿಗರಿಗೆ ಆಪ್ತರಾಗಿರುವ, ತೆಲುಗಿನ ಖ್ಯಾತ ಲೇಖಕ ಯಂಡಮೂರಿ ವೀರೇಂದ್ರ ನಾಥ ಅವರ ಅಭಿಮಾನಿಯೊಬ್ಬ ಒಮ್ಮೆ ಅವರನ್ನು ಸಾಕ್ಷಾತ್ ಭೇಟಿಯಾದಾಗ ಭಗವಂತನನ್ನು ಕಂಡಷ್ಟು ಆನಂದತುಂದಿಲ ನಾದ. ಆತನ ಬಾಯಿಂದ ಮಾತುಗಳೇ ಹೊರಡಲಿಲ್ಲ. ಆತ ತನ್ನ ಮೆಚ್ಚಿನ ಲೇಖಕ ಯಂಡಮೂರಿಯವರನ್ನು ನಿರೀಕ್ಷಿಸಿರಲಿಲ್ಲ. ಆತನಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬುದು ಗೊತ್ತಾಗಲಿಲ್ಲ. ಇಂಥವರು ಯಾವ ಸೇವೆಗೂ ಸಿದ್ಧರಾಗಿ ಬಿಡುತ್ತಾರೆ. ಅವರಿಗೆ ತಮ್ಮ ಜೀವನದಲ್ಲಿ ಒಂದು ಸಲವಾದರೂ ತಮ್ಮ ಆರಾಧ್ಯದೈವ ಲೇಖಕನನ್ನು ಭೇಟಿ ಮಾಡಬೇಕು ಎಂಬ ಆಸೆ ಇರುತ್ತದೆ. ಅಂಥವರು ಎದುರಿಗೆ ಪ್ರತ್ಯಕ್ಷವಾದರೆ ಅವರ ಆನಂದಕ್ಕೆ ಪಾರವೇ ಇರುವು ದಿಲ್ಲ.

ಇಂಥವರಿಗೆ ಯಂಡಮೂರಿ ಕೆಲವು ಉಪಯುಕ್ತ ಕಿವಿಮಾತುಗಳನ್ನು ಹೇಳಿದ್ದಾರೆ. ಒಬ್ಬ ಲೇಖಕ, ನಟ, ಕ್ರಿಕೆಟಿಗ ಇಲ್ಲವೇ, ಒಬ್ಬ ಸಾಧು, ಸನ್ಯಾಸಿ, ಬಾಬಾ ಇಂತಹ ಯಾರಿಗೋ ನೀವು ಅಭಿಮಾನಿಯಾಗಿರುತ್ತೀರಿ. ಅವರನ್ನು ಭೇಟಿಯಾಗಲು ಹೋದಾಗ ಭಕ್ತಿಯಿಂದ, ಪ್ರೀತಿಯಿಂದ ಏನನ್ನಾದರೂ ತೆಗೆದುಕೊಂಡು ಹೋಗುವುದು ಸಹಜ. ನಾನು ಇಲ್ಲಿ ಹೇಳುತ್ತಿರುವುದು ಅದನ್ನಲ್ಲ. ಕೆಲವು ಸೆಲೆಬ್ರಿಟಿಗಳು ನಿಮಗೆ ತಿಳಿಯದಂತೆ ನಿಮ್ಮಿಂದ ಅನೇಕ ರೀತಿಯ ಕೆಲಸಗಳನ್ನು, ಸೇವೆಗಳನ್ನು ಮಾಡಿಸಿಕೊಳ್ಳು ತ್ತಾರೆ.

ತಾವು ಹೋಗಬೇಕಾಗಿದ್ದ ಯಾವುದೋ ಮದುವೆಗೆ ನಿಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಲು ಹೇಳುತ್ತಾರೆ. ಅವರ ಮೇಲಿನ ಗೌರವದಿಂದ ನೀವು ಅವರು ಹೇಳಿದ ಕೆಲಸಗಳನ್ನೆ ಮಾಡುತ್ತಾ ಹೋಗುತ್ತೀರಿ. ‘ಅನಕಾಪಲ್ಲಿಯ ಬೆಲ್ಲ ಚೆನ್ನಾಗಿರು ತ್ತದೋ?’ ಎಂದು ಕೇಳುತ್ತಾರೆ. ನೀವು ಅದನ್ನೂ ತೆಗೆದುಕೊಂಡು ಹೋಗಿ ಕೊಡುತ್ತೀರಿ. ‘ತಾಯಿ ಯಾವುದೋ ಪೌಡರ್ ಹಾಕಿ ಕಾಫಿ ಮಾಡ್ತಾಳೆ, ಚಿಕ್ಕಮಗಳೂರಿನ ಕಾಫಿ ಚೆನ್ನಾಗಿರುತ್ತದಂತೆ’ ಎನ್ನುತ್ತಿರುವಂತೆ, ತಕ್ಷಣ ಚಿಕ್ಕಮಗಳೂರಿನಲ್ಲಿರುವ ಸ್ನೇಹಿತನಿಗೆ ಫೋನ್ ಮಾಡಿ ಐದು ಕೆಜಿ ಉತ್ತಮ ಗುಣಮಟ್ಟದ ಕಾಫಿ ಪೌಡರ್ ಕಳಿಸುವಂತೆ ಹೇಳುತ್ತೀರಿ. ಮರುದಿನ ನಿಮ್ಮ ಆರಾಧ್ಯದೈವಕ್ಕೆ ಅರ್ಪಿಸುತ್ತೀರಿ.

ಇವೆ ನಿಮಗೆ ಖುಷಿ ಕೊಡುತ್ತವೆ. ನೀವು ಅವರಿಗೆ ಸಮ್ಮೋಹಿತರಾಗುತ್ತೀರಿ. ಅವರು ಹೇಳಿದಂತೆ ಕೇಳಲಾರಂಭಿಸುತ್ತೀರಿ. ಈ ಸೆಳೆತದಿಂದ ಹೊರಬರಲಾಗದೇ ಆ ಸಂತೋಷದಲ್ಲಿ ಪುಳಕ ಅನುಭವಿಸುತ್ತೀರಿ. ನೀವು ಯಾರನ್ನು ಜೀವನದಲ್ಲಿ ಒಮ್ಮೆ ಯಾದರೂ ಭೇಟಿ ಮಾಡಬೇಕು ಎಂದು ಅಂದುಕೊಂಡಿರುತ್ತೀರೋ, ಅವರ ಜತೆ ಇಷ್ಟೊಂದು ಸಲುಗೆ ಏರ್ಪಟ್ಟ ಬಗ್ಗೆ
ನಿಮಗೆ ಅತೀವ ಆನಂದವಾಗಿರುತ್ತದೆ.

ಒಳ್ಳೆಯದೇ. ಆದರೆ ಒಂದು ನಿಮಿಷ ತಾಳಿ, ಆತ ನಿಮ್ಮ ದೌರ್ಬಲ್ಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬುದು ನಿಮಗೆ ಗೊತ್ತಾಗುವುದಿಲ್ಲ. ನಿಮಗೆ ಆತ ಆರಾಧ್ಯದೈವ. ಆದರೆ ನೀವು ಆತನ ಪಾಲಿಗೆ ಆ ಕ್ಷಣದ ಮಿಕ! ನಾವು ಅಭಿಮಾನ ಪಡುವವರ ಸೇವೆಯಲ್ಲಿ ನಾವು ಸಂತೋಷವಾಗಿಯೇ ಇದ್ದೇವೆ, ನಿಮಗೇನು ಕಷ್ಟ-ನಷ್ಟ ಅಂತ ನೀವು ಕೇಳಬಹುದು.

ನಿಮ್ಮ ಮಗ ತನ್ನ ಕೋಣೆಯಲ್ಲಿ ನೆಚ್ಚಿನ ಕ್ರಿಕೆಟಿಗನ ಒಂದು ಹತ್ತಾರು ಫೋಟೋಗಳನ್ನು ಹಾಕಿಕೊಂಡಿದ್ದರೆ ನಿಮಗೆ ಹೇಗೆ
ಅನ್ನಿಸುತ್ತದೆ? ಆತನ ಫೋಟೋ ಹಾಕಿಕೊಂಡರೆ ನಿನಗೇನೂ ಸಿಗುತ್ತದೆ ಎಂದು ಗದರುತ್ತೀರಿ. ನಿಮ್ಮ ಹದಿನಾರು ವಯಸ್ಸಿನ
ಮಗಳು ತನ್ನ ವಿದ್ಯಾಭ್ಯಾಸವನ್ನು ಬಿಟ್ಟು, ತನ್ನ ನೆಚ್ಚಿನ ನಟನ ಮನೆಯಲ್ಲಿ ಅಡುಗೆಯವಳಾಗಿ ಸೇರಿಕೊಳ್ಳುತ್ತೇನೆ ಅಂತಾಳೆ.
ನೀವು ಒಪ್ಪುತ್ತೀರಾ? ಅವಳನ್ನು ಅವನ ಮನೆಗೆ ಕಲಿಸುತ್ತೀರಾ? ನಿಮ್ಮ ತಂಗಿಯ ಮದುವೆಗೆ ಇಟ್ಟಿದ್ದ ಹಣವನ್ನು ನಿಮ್ಮ ತಂದೆ ತನ್ನ ವಿಶ್ವಾಸದ ಒಬ್ಬ ಬಾಬಾ ಅಥವಾ ಸ್ವಾಮೀಜಿ ಆಶ್ರಮಕ್ಕೆ ಕೊಟ್ಟುಬಿಡುತ್ತೇನೆಂದರೆ ನೀವು ಒಪ್ಪುವಿರಾ? ಲೇಖಕ, ನಟ, ಕ್ರಿಕೆಟಿಗ ಇಲ್ಲವೇ, ಒಬ್ಬ ಸಾಧು, ಸನ್ಯಾಸಿ, ಬಾಬಾ ಮುಂತಾದವರ ಬಗ್ಗೆ ಅಭಿಮಾನ ಇಟ್ಟುಕೊಳ್ಳಿ, ಪರವಾಗಿಲ್ಲ. ಆದರೆ ಅದು ಒಂದು ಮಿತಿಯನ್ನು ದಾಟದಿರಲಿ.

ಹಾಗೆ ದಾಟಿದರೆ ಅದು ಮೂರ್ಖತನವಾಗುತ್ತದೆ ಎಂಬುದೂ ಗೊತ್ತಿರಲಿ. ನಿಮ್ಮ ಅಭಿಮಾನವನ್ನು ಬಳಸಿಕೊಳ್ಳುವವರನ್ನು,
ಅದನ್ನು ಲಘುವಾಗಿ ಪರಿಗಣಿಸುವವರನ್ನು ತಲೆ ಮೇಲೆ ಇಟ್ಟುಕೊಳ್ಳಬೇಡಿ. ಹೀಗೆ ತನ್ನ ಸೇವೆ ಮಾಡುವ ನೂರಾರು ಜನರನ್ನು
ಯಾವ ಸೆಲೆಬ್ರಿಟಿಯೂ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅಷ್ಟಕ್ಕೂ ನೀವ್ಯಾರು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ನಿಮ್ಮಿಂದ ಸಹಾಯ ಪಡೆದಿದ್ದಕ್ಕೆ ಆ ಕ್ಷಣಕ್ಕೆ ಹೊಂದುವ ಕೆಲವು ಮಾತುಗಳನ್ನು ಹೇಳಿ ನಿಮ್ಮನ್ನು ಸಾಗ ಹಾಕಿರುತ್ತಾರೆ.
ನಿಮ್ಮ ಅಭಿಮಾನದ ಮೌಲ್ಯ ಅರಿಯದವರನ್ನು ಇಷ್ಟಪಟ್ಟರೆ ನಿಮಗೆ ಬೇಸರ ನಿಶ್ಚಿತ.

ನಿಮ್ಮ ಅಭಿಮಾನ ಸ್ವೀಕರಿಸುವುದಕ್ಕೂ ಯೋಗ್ಯತೆ ಇರಬೇಕು ಎಂಬುದು ಅವರಿಗಿಂತ ಮುನ್ನ ನಿಮಗೆ ಗೊತ್ತಿರಬೇಕು. ಆಗ ನೀವು ಸೆಲೆಬ್ರಿಟಿಗಳಿಂದ ಮೋಸ ಹೋಗುವುದಿಲ್ಲ.

ಔತಣಕೂಟದಲ್ಲಿ ಜೈಲ್ ಸಿಂಗ್
‘ರಾಷ್ಟ್ರಪತಿ ಜೈಲ್ ಸಿಂಗ್ ಅವರಿಗೆ ಸರಿಯಾಗಿ ಇಂಗ್ಲಿಷ್ ಮಾತಾಡಲು ಬರೊಲ್ಲ. ವಿದೇಶಿ ಗಣ್ಯರು ಬಂದಾಗ, ಕೆಟ್ಟದಾಗಿ ಏನೇನೋ ಮಾತಾಡ್ತಾರೆ. ಇದರಿಂದ ವಿದೇಶಿ ಗಣ್ಯರಿಗೆ ಭಾರಿ ಮುಜುಗರವಾಗುತ್ತದೆ. ಕೆಲವರಿಗೆ ಜೈಲ್ ಸಿಂಗ್ ಇಂಗ್ಲಿಷ್ ಕೇಳಿ ನಗು ಬಂದಿದ್ದುಂಟು. ರಾಷ್ಟ್ರಪತಿಯವರು ಇಂಗ್ಲಿಷ್‌ನಲ್ಲಿ ಮಾತಾಡಲಾರಂಭಿಸಿದರೆ ಯಡವಟ್ಟು ತಪ್ಪಿದ್ದಲ್ಲ’ ಎಂದು ಪ್ರಧಾನಿ ಇಂದಿರಾ ಗಾಂಧಿಗೆ ಅವರ ಸಂಪುಟದ ಕೆಲವು ಸದಸ್ಯರು ಆಗಾಗ ದೂರುತ್ತಿದ್ದರು.

ಜೈಲ್ ಸಿಂಗ್ ರಾಷ್ಟ್ರಪತಿ ಆಗಿದ್ದ ದಿನಗಳ ಬಗ್ಗೆ ಪುಸ್ತಕ ಬರೆದ ಹಾಗೂ ಅವರಿಗೆ ಡೆಪ್ಯುಟಿ ಸೆಕ್ರೆಟರಿ ಆಗಿದ್ದ ಕೆ.ಸಿ.ಸಿಂಗ್ ಪ್ರಕಾರ, ಇದು ಅರ್ಧ ನಿಜ ಮತ್ತು ಅರ್ಧ ಸುಳ್ಳು. ಜೈಲ್ ಸಿಂಗ್ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿರಲಿಲ್ಲ. ಅದು ಅವರಿಗೂ ಗೊತ್ತಿತ್ತು. ಆದರೆ ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಆ ಭಾಷೆ ಗೊತ್ತಿತ್ತು. ಹೀಗಾಗಿ ಅವರು ಚುಟುಕಾಗಿ ಮಾತಾ ಡುತ್ತಿದ್ದರು. ಅವರಿಗೆ ಅಗಾಧ ಕಾಮನ್ ಸೆ ಇತ್ತು. ಹೀಗಾಗಿ ಎಷ್ಟೇ ಕಡಿಮೆ ಮಾತಾಡಲಿ, ಆ ಪದಗಳಲ್ಲಿಯೇ ರಂಜಿಸುತ್ತಿದ್ದರು. ನಗು ಮೂಡಿಸುವ ಚತುರೋಕ್ತಿಗಳಿಂದ ಗಮನ ಸೆಳೆಯುತ್ತಿದ್ದರು.

ಒಮ್ಮೆ ರಾಷ್ಟ್ರಪತಿ ಭವನದಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್ ಗೌರವಾರ್ಥ ಔತಣಕೂಟ. ಜೈಲ್ ಸಿಂಗ್ ಏನಾದರೂ ಎಡವಟ್ಟು ಮಾತಾಡಿ ಮುಜುಗರವನ್ನುಂಟು ಮಾಡಬಹುದೆಂದು ರಾಷ್ಟ್ರಪತಿಗಳಿಗೆ ಮಾತಾಡಲು ಅವಕಾಶ ನೀಡದೇ, ಸ್ಪೀಕರ್
ಬಲರಾಮ್ ಜಾಖಡ್ ಪದೇ ಪದೆ ಮಧ್ಯಪ್ರವೇಶಿಸುತ್ತಿದ್ದರು. ಇದರಿಂದ ಜೈಲ್ ಸಿಂಗ್ ತುಸು ಕಸಿವಿಸಿಗೊಂಡರು. ಒಂದು ಸಂದರ್ಭದಲ್ಲಂತೂ ಜೈಲ್ ಸಿಂಗ್ ಮಾತು ಆರಂಭಿಸಿದಾಗ ಜಾಖಡ್ ಅರ್ಧಕ್ಕೆ ತುಂಡರಿಸಿ, ತಾವೇ ಮಾತಾಡಲಾರಂಭಿಸಿ ದರು.

ಅಷ್ಟು ಹೊತ್ತು ಹೇಗೋ ಅವುಡುಗಚ್ಚಿಕೊಂಡು ಸುಮ್ಮನಿದ್ದ ಜೈಲ್ ಸಿಂಗ್, ‘ರಾಣಿಯವರೇ, ಬಲರಾಮ್ ಜಾಖಡ್ ಇದ್ದಾರಲ್ಲ, ಅವರು ನನಗೆ ಸಹಾಯಕ ಸಚಿವರಾಗಿದ್ದರು’ ಎಂದು ಹೇಳಿ ಮುಯ್ಯಿ ತೀರಿಸಿಕೊಂಡರು. ಜೈಲ್ ಸಿಂಗ್ ಅವರನ್ನು ಸ್ಪೀಕರ್ ಜಾಕಡ್ ಬೇಕೆಂದೇ ಅಡ್ಡಿಪಡಿಸುತ್ತಿzರೆ ಎಂಬುದನ್ನು ಗಮನಿಸಿದ್ದ ರಾಣಿ, ರಾಷ್ಟ್ರಪತಿ ಅವರಿಗೆ ಸಮಾಧಾನವಾಗಲಿ ಎಂದು, ‘ಬಹಳ ವರ್ಷಗಳಿಂದ ನನ್ನ ಉಡುಪುಗಳನ್ನು ಹೊಲಿಯುತ್ತಿದ್ದ ಟೇಲರ್ ಸಹ ಒಮ್ಮೆ ಹೌಸ್ ಆಫ್ ಕಾಮನ ಸ್ಪೀಕರ್ ಆಗಿದ್ದ’ ಎಂದು ಹೇಳಿದರು. ಅದಕ್ಕೆ ಜೈಲ್ ಸಿಂಗ್ ಖುಷಿಯಿಂದ ಬಾಯ್ತುಂಬಾ ನಕ್ಕರು.

ಇಂದಿರಾ ಗಾಂಧಿ ಮತ್ತು ರಾಣಿ ಎಲಿಜಬೆತ್ ಪರಸ್ಪರ ಮಾತಾಡುವಾಗ, ಮಧ್ಯೆಮಧ್ಯೆ ಜೈಲ್ ಸಿಂಗ್ ಏನನ್ನೋ ಗೊಣಗಿ ಸುಮ್ಮನಾಗುತ್ತಿದ್ದರು. ಇದನ್ನು ಗಮನಿಸಿದ ರಾಣಿಯ ಪತಿ ಪ್ರಿ ಫಿಲಿಪ್, ‘ನೀವು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಿರಲ್ಲ?’ ಎಂದು ಕೇಳಿದಾಗ, ಜೈಲ್ ಸಿಂಗ್, ‘ಈ ರೀತಿಯ ಔತಣಕೂಟದಲ್ಲಿ ಉದ್ದನೆಯ ಭಾಷಣ ಮಾಡಬಾರದು, ಬಿಸಿ ಆಹಾರ ಪದಾರ್ಥಗಳು ತಣ್ಣಗಾಗುತ್ತದೆ’ ಎಂದು ಹೇಳಿದರು. ಅದಕ್ಕೆ ಇಬ್ಬರೂ ಜೋರಾಗಿ ನಕ್ಕರು. ಅದಕ್ಕೆ ಪ್ರಿ ಫಿಲಿಪ್,  ‘ಯೆಸ್.. ಯೆಸ್.. ನಿಮ್ಮ ಮಾತಿಗೆ ನನ್ನ ಸಹಮತವಿದೆ.

ನನಗೂ ಅನೇಕ ಸಲ ಹೀಗೆ ಅನಿಸಿದೆ’ ಎಂದು ಹೇಳಿ ಮತ್ತೊಮ್ಮೆ ನಕ್ಕರು. ಅನಂತರ ಜೈಲ್ ಸಿಂಗ್ ಮತ್ತು ಪ್ರಿ ಫಿಲಿಪ್ ಬಹಳ ಹತ್ತಿರವಾದರು! ಏಪ್ರಿಲ್ ಒಂದರ ಸಂಚಿಕೆ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಓದುವಾಗ, ಏಪ್ರಿಲ್ ಒಂದರಂದು (ಮೂರ್ಖರ ದಿನದಂದು) ನಡೆದ ಒಂದು ಪ್ರಸಂಗ. ಆಗ ನಾನು ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದೆ. ಬೆಳಗ್ಗೆ ಆರು
ಗಂಟೆ ಹೊತ್ತಿಗೆ, ಹಾಸ್ಟೆಲ್‌ಗೆ ‘ಸಂಯುಕ್ತ ಕರ್ನಾಟಕ’ ಬರುತ್ತಿತ್ತು. ಅದನ್ನು ಓದಲು ನಮ್ಮಲ್ಲಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಪತ್ರಿಕೆ ಬಂದು ಬೀಳುತ್ತಿದ್ದಂತೆ, ಅದನ್ನು ಎತ್ತಿಕೊಳ್ಳಲು ನಾಲ್ಕಾರು ಜನ ಓಡೋಡಿ ಬರುತ್ತಿದ್ದರು.

ಆ ಪೈಕಿ ಒಬ್ಬ ಮುಂಗಾಲಪುಟಕಿ, ಪೇಪರ್ ಹುಡುಗನನ್ನು ಗೇಟ್ ಸನಿಹವೇ ಅಡ್ಡಗಟ್ಟಿ ಪತ್ರಿಕೆಯನ್ನು ಕಸಿದುಕೊಂಡು
ಓದುತ್ತಿದ್ದ. ತಾನೇ ಮೊದಲು ಪತ್ರಿಕೆಯನ್ನು ಓದಬೇಕು ಎಂಬುದು ಅವನ ತವಕವಾಗಿತ್ತು. ಪತ್ರಿಕೆಯನ್ನು ಹಿಡಿದರೆ ಅರ್ಧಗಂಟೆಯಾದರೂ ಬೇರೆಯವರಿಗೆ ಕೊಡುತ್ತಿರಲಿಲ್ಲ. ಮಧ್ಯದ ಪುಟಗಳನ್ನೂ ತೆಗೆಯಲು ಬಿಡುತ್ತಿರಲಿಲ್ಲ. ಇವನಿಗೆ ಹೇಗಾದರೂ ಮಾಡಿ ಶಾಸ್ತಿ ಮಾಡಬೇಕು ಎಂದು   ನಾವು ಮೂರ್ನಾಲ್ಕು ಮಂದಿ ನಿರ್ಧರಿಸಿದೆವು.

ಏಪ್ರಿಲ್ ಒಂದರಂದು ನಾವು ಬೆಳಗ್ಗೆ ಐದೂವರೆಗೇ ಎದ್ದು, ಎಲ್ಲರಿಗಿಂತ ಮೊದಲು ಪತ್ರಿಕೆ ಹಾಕುವ ಹುಡುಗನಿಂದ ಆ ದಿನದ
ಪತ್ರಿಕೆಯನ್ನು ತೆಗೆದುಕೊಂಡೆವು. ಪತ್ರಿಕೆಯ ಒಳಪುಟಗಳ ಹಾಳೆಗಳನ್ನು ತೆಗೆದು, ಅದರೊಳಗೆ ನಿನ್ನೆಯ ಪುಟಗಳನ್ನು ಹಾಕಿ,
ಮುಖಪುಟವನ್ನು ಮಾತ್ರ ಅಂದಿನದನ್ನೇ ಇಟ್ಟು, ಪತ್ರಿಕೆಯನ್ನು ಹಂಚುವ ಹುಡುಗನಿಗೆ ಕೊಟ್ಟೆವು. ಆತ ಅದನ್ನು ಹಾಸ್ಟೆಲಿನಲ್ಲಿ
ಎಸೆದು ಹೋದ.

ಅಂದು ಮೂರ್ಖರ ದಿನ ಎಂಬುದರ ಲವಲೇಶವೂ ಅರಿಯದ ಆ ಮುಂಗಾಲಪುಟಕಿ, ಓಡೋಡಿ ಬಂದು ಅಂದಿನ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಎತ್ತಿ ಓದಲಾರಂಭಿಸಿದ. ನಾವು ದೂರದಲ್ಲಿ ನಿಂತು ನೋಡುತ್ತಿದ್ದೆವು. ಮುಖಪುಟವನ್ನು ಓದಿದ ಬಳಿಕ ಒಳಪುಟಗಳನ್ನು ತೆರೆದ. ಒಂದು ನಿಮಿಷವಾಗುತ್ತಿದ್ದಂತೆ, ಇದು ನಿನ್ನೆ ಓದಿದ ಸುದ್ದಿಯಲ್ಲವಾ ಎಂದು ಅನಿಸಿತು. ಮುಂದಿನ ಪುಟಕ್ಕೆ ಹೋದ. ಅಲ್ಲಿಯೂ ಹಳೆಯ ಸುದ್ದಿ. ಹಾಗೆ ಮುಂದಿನ ಪುಟ, ಅದಕ್ಕೂ ಮುಂದಿನ ಪುಟ ತೆರೆದ. ಅಲ್ಲೂ ನಿನ್ನೆಯ ಸುದ್ದಿಯೇ. ‘ಈ ಸಂಯುಕ್ತ ಕರ್ನಾಟಕದವರಿಗೆ ಬುದ್ಧಿಯೇ ಇಲ್ಲ.

ನಿನ್ನೆಯ ಸುದ್ದಿಯನ್ನೇ ಇಂದೂ ಪ್ರಕಟಿಸಿದ್ದಾರೆ. ಓದುಗರೇನು ಮೂರ್ಖರು ಎಂದು ಭಾವಿಸಿದ್ದೀರಾ? ಥತ್ !’ ಎಂದು ಶಾಪ
ಹಾಕುತ್ತಾ ಪತ್ರಿಕೆಯನ್ನು ಎಸೆದ. ‘ಏಪ್ರಿಲ್ ಫೂಲ್’ ಎಂದು ಜೋರಾಗಿ ಹೇಳಿದಾಗ ಅವನ ಮುಖ ನೋಡಬೇಕಿತ್ತು. ಅದೇ ಕೊನೆ, ಅದಾದ ಬಳಿಕ ಆ ಮುಂಗಾಲಪುಟಕಿ, ಪತ್ರಿಕೆ ಕಸಿದುಕೊಳ್ಳುವುದನ್ನು ನಿಲ್ಲಿಸಿದ್ದು. /

ಮಲ್ಯ ಟ್ವೀಟ್ ಮಾಡೋದು ಯಾವಾಗ?
ಮೊನ್ನೆ ರಾಮ ನವಮಿ ದಿನದಂದು, ಬ್ಯಾಂಕುಗಳಿಗೆ ಉಂಡೆ ನಾಮ ತಿಕ್ಕಿದ ಉದ್ಯಮಿ ಡಾ.ವಿಜಯ ಮಲ್ಯ ಅವರು, Happy Ram Navami ಎಂದು ಟ್ವೀಟ್ ಮಾಡಿದ್ದರು. ಶುರುವಾಯ್ತು ನೋಡಿ ಕಾಮೆಂಟ್ಸ ಸುರಿಮಳೆ! ಮಲ್ಯ ಟ್ವೀಟ್ ಮಾಡಿದ್ದಾರೆ ಅಂದ್ರೆ ಇಂದು ಬ್ಯಾಂಕುಗಳಿಗೆ ರಜಾ ಇರಬೇಕು, ಅವರು ಬ್ಯಾಂಕ್‌ಗಳಿಗೆ ರಜಾ ಇರುವ ದಿನವೇ ಟ್ವೀಟ್ ಮಾಡ್ತಾರೆ, ಮಲ್ಯ ಅವರು ಟ್ವೀಟ್ ಮಾಡಿದ್ದಾರೆ ಅಂದ್ರೆ ಇಂದು ಬ್ಯಾಂಕ್ ರಜಾ ಇರಲೇಬೇಕು, ಇಂಗ್ಲೆಂಡಿನಲ್ಲಿ ಕುಳಿತು ಪ್ರತಿ ಹಬ್ಬಕ್ಕೂ ಶುಭಾಷಯ ಹೇಳುವ ನೀವು ನಿಜವಾದ ಭಾರತೀಯ, You can visit bangalore, India. Today is Bank Holiday, so no worries. Good time for a quick visit, ಭಾರತದಲ್ಲಿ ಬ್ಯಾಂಕುಗಳು ರಜಾ ಇದ್ದ ದಿನ ತಪ್ಪದೇ ಟ್ವೀಟ್ ಮಾಡುವ ಮಲ್ಯ ನಿನಗೆ ಶರಣು… ಎಂದು ನೂರಾರು ಜನ ಟ್ವೀಟ್ ಮಾಡಿದ್ದರು.

ತಮಾಷೆ ಅಂದ್ರೆ, ಮಲ್ಯ ಅವರು ಇದಕ್ಕೂ ಮುನ್ನ ಮಕರ ಸಂಕ್ರಾಂತಿ, ಹೊಸ ವರ್ಷ, ಗುರುಪೂರಬ, ದಾಂತೇರಸ್, ದಸರಾ, ಗುಡಿ ಪಡ್ವಾ, ಮಹಾ ನವಮಿ, ಓಣಂ, ಗಣೇಶ ಚತುರ್ಥಿ, ಈದ್, ಈಸ್ಟರ್, ಯುಗಾದಿ, ಹೋಳಿ, ಕ್ರಿಸ್ಮಸ್… ಹೀಗೆ ಬ್ಯಾಂಕ್ ರಜಾ ಇರುವ ದಿನ ಮಾತ್ರ ಟ್ವೀಟ್ ಮಾಡಿದ್ದರು.

ಟಾಟಾ ಪತ್ರ
ಜೆಆರ‍್ಡಿ ಟಾಟಾ ಅವರ ಪತ್ರ ಪ್ರೇಮ ಲೋಕವಿಖ್ಯಾತ. ಅವರು ತೀರಾ ಸಣ್ಣ ವಿಷಯಗಳ ಬಗ್ಗೆಯೂ ಪತ್ರ ಬರೆಯುತ್ತಿದ್ದರು. ಅವರು ಯಾವುದೇ ದೇಶದಲ್ಲಿರಲಿ, ತಮ್ಮೊಂದಿಗೆ ತಮ್ಮ ಸೆಕ್ರೆಟರಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಅವರೊಂದಿಗೆ ಅವರ ಆಫೀಸ್ (ಸೆಕ್ರೆಟರಿಯೇಟ) ಸಹ ಇರುತ್ತಿತ್ತು. ಬೆಳಗ್ಗೆ ಅರ್ಧ ಗಂಟೆ ಅವರು ಯಾರಿಗೆ ಪತ್ರ ಬರೆಯಬೇಕು ಎಂಬುದರ ಬಗ್ಗೆ ಡಿಕ್ಟೇಷನ್ ಕೊಡುತ್ತಿದ್ದರು.

ಸೆಕ್ರೆಟರಿ ಇಲ್ಲದಿದ್ದಾಗ, ತಮ್ಮ ಮುಂಬೈ ಆಫೀಸಿಗೆ ಫೋನ್ ಮಾಡಿ, ಯಾರಿಗೆ ಪತ್ರ ಬರೆಯಬೇಕು ಎಂಬುದನ್ನು ಹೇಳುತ್ತಿದ್ದರು. ಒಮ್ಮೆ ಅವರಿಗೆ ಅಸೌಖ್ಯವಾದಾಗ, ಆಸ್ಪತ್ರೆಗೇ ತಮ್ಮ ಸೆಕ್ರೆಟರಿಯನ್ನು ಕರೆಯಿಸಿಕೊಂಡು ಅಲ್ಲಿಯೇ ಹತ್ತಾರು
ಪತ್ರಗಳಿಗೆ ಡಿಕ್ಟೇಷನ್ ಕೊಟ್ಟಿದ್ದರು. ಪತ್ರ ಓದಿ ಮುಗಿಸುತ್ತಿದ್ದಂತೆ ಉತ್ತರ ಬರೆಯದಿದ್ದರೆ ಅವರಿಗೆ ಸಮಾಧಾನ ಆಗುತ್ತಿರಲಿಲ್ಲ.
ತಮ್ಮ ಜೀವಿತ ಅವಧಿಯಲ್ಲಿ ಅವರು ಬರೆದ ಪತ್ರಗಳ ಸಂಖ್ಯೆ ಲಕ್ಷವನ್ನು ದಾಟಿರಬಹುದು. 1949 ರ ಮೇ 23ರಂದು ತಮ್ಮ
ಸ್ನೇಹಿತ ಜಿಯಾನ್ನಿ ಬೆರ್ಟೋಲಿ ಎಂಬುವವರಿಗೆ ಬರೆದ ಈ ಪತ್ರವನ್ನು ಗಮನಿಸಿ.

ನನ್ನ ಪ್ರೀತಿಯ ಜಿಯಾನ್ನಿ,
ಮೇ ೧೯ ರಂದು ನೀವು ಬರೆದ ಪತ್ರಕ್ಕೆ ಧನ್ಯವಾದಗಳು. ನೀವು ನನಗೆ ಚೆರ್ರ‍ಿ ಹಣ್ಣುಗಳನ್ನು ಕಳುಹಿಸುತ್ತೀರಿ ಎಂದು ಹೇಳಿದ್ದೀರಿ. ಅವು ಈ ತನಕ ನನ್ನ ಕೈಸೇರಿಲ್ಲ. ಒಂದೋ ನೀವು ಅವುಗಳನ್ನು ಕಳುಹಿಸಲು ಮರೆತಿರಬಹುದು, ಇಲ್ಲವೇ ಅವು ಬೇರೆಯವರ ಹೊಟ್ಟೆಯನ್ನು ಸೇರಿರಬಹುದು. ಇನ್ನು ಮುಂದಾದರೂ ಅವು ಬರುತ್ತವೆ ಎಂಬುದು ಗ್ಯಾರಂಟಿಯಿಲ್ಲ ಬಿಡಿ.
ನೀವು ಚೆರ್ರ‍ಿ ಮತ್ತು ಈ ಹಿಂದೆ, ಚಾಕೊಲೇಟ್ ಹಾಗೂ ಚೀಸ್‌ಗಳ ಪಾರ್ಸೆಲ್‌ನ್ನು ಹೇಗೆ ಕಳುಹಿಸುತ್ತಿದ್ದಿರಿ ಎಂಬುದು ನನಗೆ ಗೊತ್ತಿಲ್ಲ. ಇನ್ನು ಮುಂದೆ ಕಳುಹಿಸುವಾಗ, ವಿಮಾನದ ಪೈಲಟ್ ಮೂಲಕ ಸರಿಯಾದ ದಾಖಲೆ -ಪತ್ರಗಳೊಂದಿಗೆ
ಕಳುಹಿಸಲು ಮರೆಯಬೇಡಿ. ಅದಕ್ಕೆ ತಗಲುವ ವೆಚ್ಚವನ್ನು ನನ್ನ ಖಾತೆಗೆ ಸೇರಿಸಿ.

ದಾಖಲೆಯಿಲ್ಲದ ಪಾರ್ಸೆಲ್ಲುಗಳನ್ನು ಕಳುಹಿಸುವುದಾಗಲಿ, ಅದನ್ನು ಸ್ವೀಕರಿಸುವುದಾಗಲಿ, ವಿಮಾನ ಸಾರಿಗೆ ನಿಯಮದ
ಪ್ರಕಾರ ಕಾನೂನುಬಾಹಿರ. ಅರೆ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಇಂಟರನ್ಯಾಷನಲ್ ಸಂಸ್ಥೆಯ ಸೇವೆಯನ್ನು ನಾನು
ದುರುಪಯೋಗಪಡಿಸಿಕೊಳ್ಳಲಾರೆ. ಅದೇನೇ ಇರಲಿ, ನೀವು ಕಳಿಸಿದ ಚೆರ್ರ‍ಿಗಳನ್ನು ನಾನು ಮತ್ತು ಥೆಲ್ಲಿ ನಮ್ಮ ಕಲ್ಪನೆಯಲ್ಲಿ ಸೇವಿಸಿದೆವು. ನಿಮಗೆ ನನ್ನ ಪ್ರೀತಿ.. ನಿಮ್ಮವ ಜೇಹ್

error: Content is protected !!