Saturday, 14th December 2024

ಗೀತಾಮಂದಿರದ ಭಿತ್ತಿಗಳಲ್ಲಿ ಗೀತೆಯದೇ ವಿಶ್ವರೂಪದರ್ಶನ !

ತಿಳಿರು ತೋರಣ

srivathsajoshi@yahoo.com

ಅಕ್ಟೋಬರ್ ೨೦೨೨ರಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ಅಮೆರಿಕ ಪ್ರವಾಸದಲ್ಲಿದ್ದವರು ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶಕ್ಕೂ ಭೇಟಿಯಿತ್ತಿದ್ದರು. ಸ್ಥಳೀಯ ಶ್ರೀ ಶಿವವಿಷ್ಣು ದೇವಸ್ಥಾನಕ್ಕೆ ಅವರನ್ನು ವೇದಘೋಷದೊಂದಿಗೆ ಸ್ವಾಗತಿಸುವ, ಅಲ್ಲಿ ಅವರು ಭಗವದ್ಗೀತೆ ಯನ್ನು ಕುರಿತು ಪ್ರವಚನ ನೀಡುವ ಕಾರ್ಯಕ್ರಮ ಇತ್ತು. ಅದು ವಾರಾಂತ್ಯದ ದಿನವಾಗಿದ್ದರಿಂದ ನಾನೂ ಭಾಗವಹಿಸಿದ್ದೆ.

‘ಕೋಟಿಗೀತಾ ಲೇಖನಯಜ್ಞ’ ಯೋಜನೆಯ ಬಗ್ಗೆ ನನಗೆ ಮೊತ್ತಮೊದಲಿಗೆ ಗೊತ್ತಾದದ್ದು ಆಗಲೇ. ಆವತ್ತಿನ ಕಾರ್ಯಕ್ರಮದಲ್ಲಿ ಅಲ್ಲಿ ಸೇರಿದ್ದ ನಮಗೆಲ್ಲ
ಸ್ವಾಮೀಜಿಯವರೇ ಆ ಯೋಜನೆಯ ವಿವರಗಳನ್ನು ತಿಳಿಸಿದರು. ಕೈಗೆ ಕಂಕಣ ತೊಡಿಸಿ ಲೇಖನಯಜ್ಞದ ದೀಕ್ಷೆ ಕೊಟ್ಟರು. ಸಂಪೂರ್ಣ ಭಗವದ್ಗೀತೆ ಅಚ್ಚಾಗಿರುವ ಒಂದು ಪುಸ್ತಕ ಮತ್ತು ಸಂಪೂರ್ಣ ಭಗವದ್ಗೀತೆಯನ್ನು (ಎಲ್ಲ ೧೮ ಅಧ್ಯಾಯಗಳ ೭೦೦ ಶ್ಲೋಕಗಳನ್ನೂ) ಸ್ವಹಸ್ತದಿಂದ ಬರೆಯುವುದಕ್ಕೆ ಅನುವಾಗುವಂತೆ ಗೆರೆ ಹಾಕಿರುವ ಕಾಪಿಪುಸ್ತಕದಂಥ ಒಂದು ಪುಸ್ತಕವನ್ನೂ ಕೊಟ್ಟರು.

‘೧೮ ಜನವರಿ ೨೦೨೪ರಿಂದ ೧೭ ಜನವರಿ ೨೦೨೬ರ ಒಳಗೆ, ಅಂದರೆ ಪುತ್ತಿಗೆ ಮಠದ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಉಡುಪಿಗೆ ಬಂದು ಶ್ರೀಕೃಷ್ಣನ ಸನ್ನಿಧಾನದಲ್ಲಿ ನಿಮ್ಮ ಹಸ್ತಲಿಖಿತ ಪುಸ್ತಕವನ್ನು ಕೋಟಿಗೀತಾ ಲೇಖನಯಜ್ಞದ ದ್ರಷ್ಟಾರರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಹಸ್ತಾಕ್ಷರದೊಂದಿಗೆ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಿ ಕೃಷ್ಣ ಪರಮಾತ್ಮನ ಪ್ರಸಾದ ಸ್ವೀಕರಿಸಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಧನ್ಯರಾಗಿ ರೆಂದು ಸಕುಟುಂಬರಾದ ನಿಮ್ಮನ್ನು ಹಾರ್ದಿಕವಾಗಿ ಉಡುಪಿಗೆ ಆಹ್ವಾನಿಸುತ್ತಿದ್ದೇವೆ’ ಎಂಬ ಸೂಚನೆಯೂ ಆ ಪುಸ್ತಕದಲ್ಲಿತ್ತು.

ನೋಂದಾವಣೆ ಪ್ರಕ್ರಿಯೆಯ ಚಿಕ್ಕದೊಂದು ಶುಲ್ಕವನ್ನು, ಉದಾರ ಧನಸಹಾಯ ಮಾಡಬಯಸುವವರಿಂದ ದೇಣಿಗೆಯನ್ನೂ ಅಲ್ಲಿದ್ದ ಸ್ವಯಂಸೇವಕ ಕಾರ್ಯಕರ್ತರು ಸಂಗ್ರಹಿಸಿದರು. ಕ್ರಮಬದ್ಧತೆ, ಪಾರದರ್ಶಕತ್ವ, ಅಚ್ಚುಕಟ್ಟುತನ, ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೋದ್ಧಾರದ ಸತ್ಕಾರ್ಯವೊಂದರಲ್ಲಿ ತೊಡಗಿಸಿಕೊಳ್ಳುವಂತೆ ದಿವ್ಯಪ್ರೇರಣೆ ಆ ಯೋಜನೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಕೋವಿಡ್ ಮಹಾಮಾರಿಯಿಂದಾಗಿ ಕವಿದಿದ್ದ ಅಂಧಕಾರದಲ್ಲಿ
ಭರವಸೆಯ ಕಿರಣವಾಗಿ ಭಗವದ್ಗೀತೆಯನ್ನು ನಾನು ಅದಾಗಲೇ ಅಪ್ಪಿಕೊಂಡಾಗಿತ್ತು- ೨೦೨೧ರ ಫೆಬ್ರವರಿಯಲ್ಲೇ ‘ಗೀತಾಪರಿವಾರ’ದ ಪರಿಚಯವಾಗಿ ಆನ್‌ಲೈನ್ ತರಗತಿಗಳಲ್ಲಿ ಭಗವದ್ಗೀತೆ ಶ್ಲೋಕಗಳ ಶುದ್ಧ ಉಚ್ಚಾರಣೆ ಕಲಿಕೆ ಆರಂಭಿಸಿದ್ದರಿಂದ, ಮತ್ತು ಗೀತಾಪರಿವಾರದ ಸಂಪ್ರದಾಯದಂತೆ ಕಲಿಕೆಯ ಜತೆಜತೆಗೇ ಕಲಿಸುವಿಕೆಯಲ್ಲೂ ತೊಡಗಿಸಿಕೊಂಡಿದ್ದರಿಂದ.

ಹಾಗಾಗಿ ೨೦೨೨ರ ಅಕ್ಟೋಬರ್ ಹೊತ್ತಿಗೆ ಸಂಪೂರ್ಣ ಭಗವದ್ಗೀತೆಯ ಪಠನ ಮತ್ತು ಶ್ರವಣ ನನಗೆ ಅದೆಷ್ಟೋ ಬಾರಿ ಆಗಿತ್ತು. ಉಚ್ಚಾರಸ್ಪಷ್ಟತೆಗೆ,
ಧ್ವನಿಶುದ್ಧಿಗೆ, ಸಂಸ್ಕೃತ ಭಾಷೆಯ ತಿಳಿವಳಿಕೆ ಹೆಚ್ಚುವುದಕ್ಕೆ ಭಗವದ್ಗೀತೆ ಒಂದು ಪರಿಣಾಮಕಾರಿ ಸಾಧನವೆಂದು ಅರಿವಾಗತೊಡಗಿತ್ತು. ಅಷ್ಟಾದರೂ ಅದು ಹಿಮಗುಡ್ಡೆಯ ತುದಿಬಿಂದು ಮಾತ್ರ. ಅದರ ಆಳ-ಅಗಲ ಕಲ್ಪನಾತೀತ. ಅಂಥದರಲ್ಲಿ ಇದೀಗ ಸಂಪೂರ್ಣ ಭಗವದ್ಗೀತೆಯನ್ನು ಸ್ವಹಸ್ತಾಕ್ಷರದಲ್ಲಿ ಬರೆಯುವ ಕೆಲಸವೆಂದರೆ ಅರಿವಿನ ಇನ್ನೊಂದು ಪದರವನ್ನು ತೆರೆದಂತೆ. ಅಮೃತದ ಮತ್ತೊಂದು ಗುಟುಕನ್ನು ಅಂತರಂಗದೊಳಕ್ಕೆ ಇಳಿಸಿಕೊಂಡಂತೆ.

‘ದಿನಕ್ಕೆ ಕನಿಷ್ಠ ಎರಡು ಶ್ಲೋಕಗಳನ್ನು ಭಕ್ತಿಯಿಂದ ಬರೆಯಿರಿ’ ಎಂದು ಹೇಳಿದ್ದರು. ಏನು ಮಹಾ, ಆರಾಮಾಗಿ ಬರೆಯಬಹುದು ಎಂದೇ ನಾನಂದು ಕೊಂಡಿದ್ದು. ಆದರೆ ಅದು ಅಂದುಕೊಂಡಷ್ಟು ಸುಲಭವಾಯಿತೇ? ಕೃಷ್ಣನಾಣೆಗೂ ಇಲ್ಲ! ತಪ್ಪು ಭಗವದ್ಗೀತೆಯದಲ್ಲ, ಸಂಸ್ಕೃತ ಶ್ಲೋಕಗಳದಲ್ಲ, ಆಧುನಿಕ ತಂತ್ರಜ್ಞಾನ ನಮ್ಮ ಅಂತಃಶಕ್ತಿಯನ್ನು ಹೇಗೆ ಹೊಸಕಿಹಾಕಿದೆ ಎಂದು ಮೊದಲ ದಿನವೇ ಅನುಭವವಾಯಿತು! ಕೈಯಲ್ಲಿ ಪೆನ್ನು/ಪೆನ್ಸಿಲ್
ಹಿಡಿದುಕೊಂಡು ಕಾಗದದ ಮೇಲೆ ಬರೆದು ಅದೆಷ್ಟು ವರ್ಷಗಳು ಸಂದಿವೆ!

ಕ್ಷೇಮಸಮಾಚಾರದ ಪತ್ರಬರವಣಿಗೆಯಂತೂ ಓಬೀರಾಯನ ಕಾಲದ್ದೆಂದು ಪರಿಗಣಿಸಿಯಾಗಿದೆ. ಈಗ ನಾವೆಲ್ಲ ಮೊಬೈಲ್‌ಫೋನ್ ಮಾಯಾವಿಯ ದಾಸಾನುದಾಸರಾಗಿದ್ದೇವೆ. ಹಸ್ತಮುದ್ರೆ ಮುಖಭಾವಗಳ ಇಮೋಜಿಗಳಿಂದ, ವಾಯ್ಸ್ ಮೆಸೇಜುಗಳಿಂದಲೇ ನಮ್ಮ ಸಂವಹನ. ಸವಿವರ ಟೆಕ್ಸ್ಟ್ ಕಳು
ಹಿಸಲು ಕೀಬೋರ್ಡ್ ಕುಟ್ಟಬೇಕೆಂದರೂ ಉದಾಸೀನ. ಅಂದಮೇಲೆ ಶ್ಲೋಕಗಳನ್ನು ಕೈಬರಹದಲ್ಲಿ ಬರೆಯುವುದೆಂದರೆ ಕಷ್ಟವೇ. ಹಾಗೆ ಮೊದ ಮೊದಲಿಗೆ ದಿನಕ್ಕೆ ಒಂದೆರಡು ಶ್ಲೋಕಗಳನ್ನು ಬರೆಯುವುದೂ ದುಸ್ತರವೇ ಆಗುತ್ತಿತ್ತು. ಮೊದಲ ಅಧ್ಯಾಯದ ೨೯ನೆಯ ಶ್ಲೋಕದಲ್ಲಿ ಅರ್ಜುನನಿ ಗಾದಂತೆ ‘ಸ್ತ್ರೀ ದನ್ತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ| ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ’ ಅನುಭವ. ಅರ್ಜುನನಿಗೆ ಗಾಂಡೀವ ಕೈಯಿಂದ ಜಾರಿದಂತಾದರೆ ನನಗೆ ಲೆಕ್ಕಣಿಕೆ ಕೈಯಿಂದ ಜಾರುತ್ತಿದೆಯೆನೋ ಎಂಬಂತಾಗುತ್ತಿತ್ತು.

ಬರೆಯುವಾಗ ಕೈನಡುಕ, ಬರೆದಾದ ಮೇಲೆ ಕೈ ಮತ್ತು ಭುಜ ನೋವು. ಬಾಲ್ ಪಾಯಿಂಟ್ ಪೆನ್ ಬದಲಿಗೆ ಇಂಕ್‌ಪೆನ್ ತಗೊಂಡೆ. ಕೆಲಸ ಸುಲಭವಾಗ ತೊಡಗಿತು. ಯಾವುದೋ ಒಂದು ದಿವ್ಯಕ್ಷಣದಲ್ಲಿ ಆರಂಭಿಕ ಜಡತ್ವವೆಲ್ಲ ಕರಗಿಹೋಯಿತು. ಹೊಸ ಚೈತನ್ಯವೊಂದು ಪುಟಿದೆದ್ದಿತು. ಪ್ರತಿದಿನವೂ ಬೆಳಗ್ಗೆ ಸ್ನಾನವಾದ ಮೇಲೆ ಎರಡಲ್ಲ ಐದು ಶ್ಲೋಕ ಬರೆಯುತ್ತೇನೆಂಬ ಉಮೇದು ಚಿಗುರಿತು. ‘ಯುದ್ಧಾಯ ಕೃತನಿಶ್ಚಯಃ…’ ಅಲ್ಲ, ಹದಿನೆಂಟೂ ಅಧ್ಯಾಯಗಳನ್ನೂ ಅಚ್ಚುಕಟ್ಟಾಗಿ ಬರೆದುಮುಗಿಸುತ್ತೇನೆಂದು ಕೃತನಿಶ್ಚಯಃ ಆಯ್ತು. ಆಮೇಲೆ ಹಿಂದಿರುಗಿ ನೋಡಿದ್ದೇ ಇಲ್ಲ. ೨೦೨೩ರ ಮಾರ್ಚ್ ಹೊತ್ತಿಗೆ ಎಲ್ಲ ೭೦೦ ಶ್ಲೋಕಗಳನ್ನೂ ಬರೆದು ಮುಗಿಸಿದ್ದಾಯ್ತು.

ನನ್ನ ಅಕ್ಷರಗಳ ಗಾತ್ರ ಚಿಕ್ಕದಾದ್ದರಿಂದ ಒಂದಿಷ್ಟು ಪುಟಗಳು ಖಾಲಿಯೇ ಉಳಿದವು. ಬರೆದಾದ ಪುಟಗಳನ್ನು ತಿರುವಿ ನೋಡಿದಾಗ ತೃಪ್ತಿಯೆನಿಸಿತು.
ಚಿಕ್ಕಂದಿನಲ್ಲಿ ಕಾಪಿಪುಸ್ತಕದಲ್ಲಿ ಕಾಪಿ ಬರೆಯುತ್ತಿದ್ದದ್ದು, ಪರೀಕ್ಷೆಯಲ್ಲಿ ಹತ್ತು ಅಂಕಗಳ ಪ್ರಶ್ನೆಗಳಿಗೆ ಪುಟಗಟ್ಟಲೆ ಉತ್ತರ ಬರೆಯುತ್ತಿದ್ದದ್ದು ನೆನಪಾ
ದುವು. ಹ್ಯಾಂಡ್‌ರೈಟಿಂಗ್ ಹಾಳಾಗಿಲ್ಲವೆಂದು ಖುಷಿಯಾಯಿತು. ಸಂಪೂರ್ಣ ಭಗವದ್ಗೀತೆಯನ್ನು ಸ್ವಹಸ್ತಾಕ್ಷರದಲ್ಲೇನೋ ಬರೆದಾಯ್ತು, ಆದರೆ ಉಡುಪಿಗೆ ಹೋಗಿ ಅದನ್ನು ಸಮರ್ಪಿಸುವುದು ಯಾವಾಗ ಎಂಬ ಪ್ಲಾನ್ ಇರಲಿಲ್ಲ.

೨೦೨೩ರ ಇಸವಿಯಿಡೀ ನಾನು ಭಾರತಕ್ಕೆ ಭೇಟಿ ನೀಡಿದ್ದಿಲ್ಲ. ಅಲ್ಲದೇ ಪುತ್ತಿಗೆ ಮಠದ ಪರ್ಯಾಯ ಅವಧಿಯಲ್ಲಿ- ಅಂದರೆ ೧೮ ಜನವರಿ ೨೦೨೪ರಿಂದ ೧೭ ಜನವರಿ ೨೦೨೬ರ ಒಳಗೆ- ಪುಸ್ತಕವನ್ನು ಸಮರ್ಪಿಸಿದರೇ ಒಳ್ಳೆಯದೆಂದು ಸೂಚನೆಯಿದ್ದದ್ದು. ೨೦೨೪ರ ಜನವರಿಯಲ್ಲಿ ಒಂದುದಿನ ನನ್ನ ದೊಡ್ಡ ಅಣ್ಣ ಊರಲ್ಲಿರುವವರು ಹೀಗೇ ವಾರಾಂತ್ಯದ ದೂರವಾಣಿ ಕರೆಯಲ್ಲಿ ಉಭಯ ಕುಶಲೋಪರಿ ಮಾತನಾಡುತ್ತ ಈವರ್ಷ ಏಪ್ರಿಲ್‌ನಲ್ಲಿ ಅವರ ಮೊಮ್ಮಗನಿಗೆ ಬ್ರಹ್ಮೋಪದೇಶ ಮತ್ತು ಆ ಸಂದರ್ಭದಲ್ಲೇ ಚಂಡಿಕಾಹೋಮ ಸಹ ಆಯೋಜಿಸಿದ್ದೇವೆ ಅಂತಂದರು. ತತ್‌ಕ್ಷಣ ನಿರ್ಧರಿಸಿದೆ ಭಾರತಪ್ರವಾಸಕ್ಕೆ, ಊರಿಗೆ ಹೋದಾಗ ಉಡುಪಿಗೂ ಹೋಗಿಬರಲಿಕ್ಕೆ ಇದೇ ಸುಸಂದರ್ಭ ಎಂದು.

ಏತನ್ಮಧ್ಯೆ ಗೀತಾಪರಿವಾರದಿಂದ ನಾನು ವಾಷಿಂಗ್ಟನ್ ಡಿಸಿ ಪ್ರದೇಶದ ಆಸಕ್ತರಿಗೆ ನಡೆಸುತ್ತಿದ್ದ ಭಗವದ್ಗೀತೆ ಶ್ಲೋಕಪಠನ ತರಗತಿಯಲ್ಲಿ ೧೮ ಅಧ್ಯಾಯ ಗಳ ಕಲಿಸುವಿಕೆ ಏಪ್ರಿಲ್ ೧೫ರೊಳಗೆ ಮುಗಿಸಿದೆ. ಮೂರು ವಾರಗಳ ರಜೆಯಲ್ಲಿ ಭಾರತಕ್ಕೆ ಬಂದಿಳಿದೆ. ಊರಲ್ಲಿ ಬಂಧುಮಿತ್ರರ ಭೇಟಿಯ ತವಕ ಒಂದೆಡೆಯಾದರೆ ಉಡುಪಿ ಕೃಷ್ಣನ ಸನ್ನಿಽಯಲ್ಲಿ ಕೋಟಿಗೀತಾ ಲೇಖನಯಜ್ಞದಲ್ಲಿ ನನ್ನ ಕಡೆಯಿಂದ ‘ಸಮಿಧೆ’ಯನ್ನು ಅರ್ಪಿಸುವ ತವಕ ಇನ್ನೊಂದೆಡೆ. ೨೪ ಏಪ್ರಿಲ್ ಬುಧವಾರ ಅದಕ್ಕೆ ಸೂಕ್ತ ದಿನವೆಂದು ನನ್ನ ಭಾರತಪ್ರವಾಸ ವೇಳಾಪಟ್ಟಿಯಲ್ಲಿ ಗುರುತಿಸಿದೆ. ನನ್ನ ಇನ್ನೊಬ್ಬ ಅಣ್ಣ ಮುಂಬೈಯಲ್ಲಿರುವವರು ಊರಿಗೆ ಬಂದಿದ್ದವರು, ಕೋಟಿಗೀತಾ ಲೇಖನಯಜ್ಞದ ದೀಕ್ಷೆ ತಗೊಂಡು ೧೮ ಅಧ್ಯಾಯಗಳ ಬರವಣಿಗೆ ಮುಗಿಸಿರುವವರು ಅವರ ಪುಸ್ತಕದೊಂದಿಗೆ ಜತೆಗೂಡಿದರು.

ಉಡುಪಿ ಕೃಷ್ಣನ ದರ್ಶನಕ್ಕಾದರೆ ತಾವೂ ಬರುತ್ತೇವೆಂದು ಪತ್ನಿ ಸಹನಾ ಮತ್ತು ನನ್ನ ಅಕ್ಕ ಮುಂದಾದರು. ಅವರಿಬ್ಬರು ಲೇಖನಯಜ್ಞದಲ್ಲಿ ಪಾಲ್ಗೊಂಡವರಲ್ಲವಾದರೂ ಗೀತಾಪರಿವಾರದಲ್ಲಿ ಗೀತೆ ಕಲಿಕೆ/ಕಲಿಸುವಿಕೆಯಲ್ಲಿ ತೊಡಗಿಸಿಕೊಂಡವರೇ. ಹೀಗೆ ನಾವು ನಾಲ್ವರು ಗೀತಾಮೃತ ಪಿಪಾಸುಗಳು ಉಡುಪಿಗೆ ಹೊರಟೆವು. ಮೊದಲು ಕೃಷ್ಣದರ್ಶನ, ತದನಂತರ ಪುಸ್ತಕ ಸಮರ್ಪಣೆ, ಆಮೇಲೆ ಭೋಜನಪ್ರಸಾದ ಸ್ವೀಕರಿಸಿ ಹಿಂದಿರುಗುವು ದೆಂದು ನಮ್ಮ ಪ್ಲಾನ್ ಇದ್ದದ್ದು.

ಅಲ್ಲಿ ಮಾಹಿತಿಕೇಂದ್ರದಲ್ಲಿ ವಿಚಾರಿಸಿದಾಗ ‘ಅದೇ ಅನುಕ್ರಮದಲ್ಲಿ ಮಾಡಬೇಕೆಂದೇನಿಲ್ಲ, ಮಧ್ಯಾಹ್ನದ ಹೊತ್ತಾಗಿದೆ ಮೊದಲಿಗೆ ಅನ್ನಬ್ರಹ್ಮನ
ಅನುಗ್ರಹ ಪಡೆಯಿರಿ. ಒಂದೂವರೆಗೆಲ್ಲ ಸ್ವಾಮೀಜಿಯವರು ಗೀತಾಮಂದಿರಕ್ಕೆ ಬರುತ್ತಾರೆ. ಆದಿನದ ಪುಸ್ತಕ ಸಮರ್ಪಣೆಗಾರರನ್ನೆಲ್ಲ ಆಶೀರ್ವದಿಸು ತ್ತಾರೆ. ಅವರಿಗೆಲ್ಲ ಕೃಷ್ಣದರ್ಶನದ ವಿಶೇಷ ಪಾಸ್ ಸಹ ಕೊಡಲಾಗುತ್ತದೆ. ಆರಾಮಾಗಿ ದರ್ಶನ ಮಾಡಿಕೊಂಡು ಹೋಗುವಿರಂತೆ’ ಎಂದರು. ಸರಿ, ಬಾಳೆಲೆಯಲ್ಲಿ ಕೃಷ್ಣಮಠದ ಊಟ. ಅನ್ನ-ಸಾರು- ಪಲ್ಯ-ಹುಳಿ-ಪಾಯಸ. ಬೇರೆಲ್ಲೂ ಸಿಗದ ಅನನ್ಯ ಪರಮದಿವ್ಯ ರುಚಿ. ಆಮೇಲೆ ಗೀತಾಮಂದಿರಕ್ಕೆ ತೆರಳಿದೆವು. ಅಖಂಡ ಉದಯಾಸ್ತಮಾನ ಗೀತಾಪಾರಾಯಣಕ್ಕೆ ಬಂದಿದ್ದ ಆವತ್ತಿನ ತಂಡದವರಿಂದ ಸುಶ್ರಾವ್ಯವಾಗಿ ಪಾರಾಯಣ ನಡೆದಿತ್ತು.

ಪುಸ್ತಕ ಸಮರ್ಪಣೆಗೆಂದು ನಮ್ಮಂತೆಯೇ ಬಂದಿದ್ದ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ನೋಂದಾವಣೆ ಕೌಂಟರ್‌ನಲ್ಲಿ ನಮ್ಮ ವಿವರ ಪಡೆದು ಅಲ್ಲಿಯೇ ಪ್ರಮಾಣಪತ್ರ ಮುದ್ರಿಸಿ ಲ್ಯಾಮಿನೇಟ್ ಮಾಡಿ ಸಿದ್ಧಪಡಿಸಿದರು. ಕೃಷ್ಣದರ್ಶನದ ಪಾಸ್ ವಿತರಿಸಿದರು. ಆವತ್ತಿನ ದಿನದ ಸಮರ್ಪಣೆಗೊಳ್ಳುವ ಪುಸ್ತಕಗಳು ಮತ್ತು ಪ್ರಮಾಣಪತ್ರಗಳನ್ನೆಲ್ಲ ಒಟ್ಟಿಗೆ ಒಂದುಕಡೆ ಸುಂದರವಾಗಿ ಜೋಡಿಸಿಟ್ಟರು. ಎಲ್ಲವೂ ಅಚ್ಚುಕಟ್ಟು. ಪುನೀತ ಭಾವನೆ ಉಂಟು ಮಾಡುವ ವಾತಾವರಣ. ಸ್ವಾಮೀಜಿಯವರು ಬಂದು ಪುಸ್ತಕಗಳ ಅಟ್ಟೆಗೆ ಮಂಗಳಾರತಿ ಬೆಳಗಿ ಆಮೇಲೆ ಒಬ್ಬೊಬ್ಬರನ್ನೇ ಕರೆದು ಪ್ರಮಾಣಪತ್ರ ಮತ್ತು ಸ್ವಾಮೀಜಿಯವರ ಸಹಿಯೂ ಸೇರಿಕೊಂಡ ನಮ್ಮ ಬರಹದ ಪುಸ್ತಕಗಳನ್ನು ಮಂತ್ರಾಕ್ಷತೆ ಸಹಿತ ಪ್ರಸಾದರೂಪ ದಲ್ಲಿ ಕೊಟ್ಟರು. ಭಕ್ತಾದಿಗಳೆಲ್ಲ ಕೃತಾರ್ಥಭಾವದಿಂದ ಪುಳಕಿತರಾದರು.

ಮುಂದಿನದು ನನ್ನ- ಮತ್ತು ನನ್ನೊಡನೆ ಸಹನಾ, ನನ್ನ ಅಣ್ಣ ಮತ್ತು ಅಕ್ಕ- ಎಲ್ಲರ ಪಾಲಿಗೆ ಅವಿಸ್ಮರಣೀಯ ರೋಮಾಂಚನದ ಅನುಭವ. ಅದು ಕೃಷ್ಣಕೃಪೆಯೋ ಸ್ವಾಮೀಜಿಯವರ ವಿಶೇಷಾನುಗ್ರಹವೋ ಅಥವಾ ಭಗವದ್ಗೀತೆಯ ದಿವ್ಯತೆಯೋ ಗೊತ್ತಿಲ್ಲ, ಸ್ವಾಮೀಜಿ ನನ್ನನ್ನು ಗುರುತಿಸಿ ‘ಯಾವಾಗ ಬಂದಿರಿ ವಾಷಿಂಗ್ಟನ್‌ನಿಂದ? ಎಷ್ಟು ದಿನ ಊರಲ್ಲಿರುತ್ತೀರಿ?’ ಎಂದು ಪ್ರೀತಿಯಿಂದ ಮಾತನಾಡಿಸಿದರು. ಅದಕ್ಕೆ ಕಾರಣವೂ ಇದೆ. ೨೦೨೨ರ ಅಕ್ಟೋ ಬರ್‌ನಲ್ಲಿ ವಾಷಿಂಗ್ಟನ್‌ನ ಶ್ರೀ ಶಿವವಿಷ್ಣು ದೇವಸ್ಥಾನ ದಲ್ಲಿ ಕೋಟಿಗೀತಾ ಲೇಖನಯಜ್ಞದ ದೀಕ್ಷೆ ಕೊಟ್ಟಿದ್ದಾಗಲೂ ಹೌದು; ಅದಕ್ಕೆ ಮುಂಚೆಯೂ ನ್ಯೂ ಜೆರ್ಸಿಯ ಕೃಷ್ಣವೃಂದಾವನ ದಲ್ಲಿ ಒಂದೆರಡು ಸಲ ಅವರು ನನ್ನನ್ನು ಮಾತನಾಡಿಸಿದ್ದಾರೆ.

‘ತಿಳಿರುತೋರಣ ಅಂಕಣವನ್ನು ತಪ್ಪದೇ ಓದುತ್ತೇನೆ, ತುಂಬ ಚೆನ್ನಾಗಿ ಬರೆಯುತ್ತೀರಿ!’ ಎಂದುಹೇಳಿ ಬೆರಗು ಮೂಡಿಸಿದ್ದಾರೆ. ಅವರ ಸ್ಮರಣಶಕ್ತಿಯೇ ಬೆರಗುಮೂಡಿಸುವಂಥದ್ದು. ಯಾರನ್ನೇ ಆದರೂ ಒಮ್ಮೆ ಭೇಟಿಮಾಡಿದರೆ, ಒಮ್ಮೆ ಮಾತನಾಡಿಸಿದರೆ ಸಾಕು, ಹೆಸರು-ಊರು ಸಮೇತ ನೆನಪಿಟ್ಟು ಕೊಳ್ಳುತ್ತಾರೆ. ಮಾತಿಗೆ ತೊಡಗಿದರೆ ಧಾರ್ಮಿಕ ಆಧ್ಯಾತ್ಮಿಕ ವಿಷಯಗಳಷ್ಟೇ ಅಲ್ಲ ಪ್ರಪಂಚದ ಪ್ರಚಲಿತ ವಿದ್ಯಮಾನಗಳು, ವೈಶ್ವಿಕ ರಾಜಕೀಯ
ಸಾಮಾಜಿಕ ಸ್ಥಿತಿಗತಿಗಳು, ಕ್ರೀಡೆ, ಸಾಹಿತ್ಯವೇ ಮುಂತಾಗಿ ಎಲ್ಲದರಲ್ಲೂ ಅವರು ಅಪ್-ಟು-ಡೇಟ್ ಇದ್ದಾರೆಂದು ಗೊತ್ತಾಗುತ್ತದೆ. ನಿಜವಾಗಿಯಾದರೆ ಮಿಕ್ಕ ಅನೇಕ ಸ್ವಾಮೀಜಿಗಳಂತೆ ಕರ್ಮಠ ಗಂಭೀರವದನರಾಗಿರದೆ ಮಂದಸ್ಮಿತರಾಗಿ ಪಾದರಸದಂತೆ ಚುರುಕಿನವರಾಗಿ ಜನಸಾಮಾನ್ಯರೊಡನೆ ಬೆರೆಯುವುದರಿಂದಲೇ, ಮಠದ ಚೌಕಟ್ಟಿಗೆ ಸೀಮಿತರಾಗದೆ ಸಾಗರೋಲ್ಲಂಘನ ಮಾಡಿ ವಿಶ್ವಪರ್ಯಟನೆಯಲ್ಲಿ ವಿಶ್ವಾದ್ಯಂತ ಕೃಷ್ಣಭಕ್ತಿ ಗೀತಾಸಂದೇಶ
ಪ್ರಸರಣದಲ್ಲಿ ತೊಡಗಿರುವುದರಿಂದಲೇ ಸುಗುಣೇಂದ್ರತೀರ್ಥ ಸ್ವಾಮೀಜಿ ನಮಗೆಲ್ಲ ಅಚ್ಚುಮೆಚ್ಚು.

ಅವರು ಅಭಿದಾನಕ್ಕೆ ತಕ್ಕುದಾಗಿ ಸುಗುಣಗಳೊಡೆಯ ಎಂದು ನನ್ನ ವ್ಯಾಖ್ಯಾನ. ಉಭಯಕುಶಲೋಪರಿಯ ಬಳಿಕ ನಮಗೆ ನಾಲ್ವರಿಗೆ ಗೀತಾಮಂದಿರದ ವಿಶೇಷ ‘ಗೈಡೆಡ್ ಟೂರ್’. ಅದೂ ಹೇಗೆ- ಸ್ವಾಮೀಜಿಯವರೇ ನಮ್ಮ ಗೈಡ್! ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ! ಉಡುಪಿಯಲ್ಲಿ ಕೃಷ್ಣಮಠದ ಪಕ್ಕದಲ್ಲೇ ಇರುವ ಗೀತಾಮಂದಿರವು ಶ್ರೀ ಸುಗುಣೇಂದ್ರತೀರ್ಥರದೇ ಕಲ್ಪನೆಯ ಕೂಸು. ೩೦ ವರ್ಷಗಳ ಹಿಂದೆ ಆಗಿನ ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾರಿಂದ ಶಿಲಾನ್ಯಾಸ ಮತ್ತು ನೇಪಾಳದ ದೊರೆ ಬೀರೇಂದ್ರರಿಂದ ಉದ್ಘಾಟನೆಗೊಂಡ ಭವ್ಯ ಸೌಧ. ಈಸಲದ ಪುತ್ತಿಗೆ ಮಠದ ಪರ್ಯಾಯವನ್ನು ‘ವಿಶ್ವ ಗೀತಾ ಪರ್ಯಾಯ’ವೆಂದೇ ಘೋಷಿಸಿರುವುದರಿಂದ ಗೀತಾಮಂದಿರವೂ ಒಂದು ಪ್ರಮುಖ ಆಕರ್ಷಣೆ.

ಅದರ ನವೀಕರಣ ಕಾಮಗಾರಿಗಳು ಭರದಿಂದ ಸಾಗಿವೆ. ಉಡುಪಿ ಕ್ಷೇತ್ರಾವಾಸಕ್ಕಾಗಿ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅಷ್ಟೋತ್ತರ ಭವನ (೧೦೮ ವಸತಿ ಕೊಠಡಿಗಳ ಸಮುಚ್ಚಯ) ಸೇರ್ಪಡೆಯಾಗುತ್ತಿದೆ. ಸಾವಿರ ಜನರು ಕುಳಿತುಕೊಳ್ಳಬಲ್ಲ ಭವ್ಯ ಸಭಾಂಗಣ, ವಿಶ್ವರೂಪದರ್ಶನವನ್ನು
ಆಕಾಶವೀಕ್ಷಣೆಯಂತೆ ನೋಡಲು ಸಾಧ್ಯವಾಗುವ ಪ್ಲಾನೆಟೇರಿಯಂ ಸಹ ಅದೇ ಸೌಧದಲ್ಲಿ ನಿರ್ಮಾಣವಾಗುತ್ತಿವೆ. ಇದೆಲ್ಲವನ್ನೂ ಸ್ವಾಮೀಜಿಯವರೇ  ಸ್ವತಃ ಮುತುವರ್ಜಿ ವಹಿಸಿ ಮಾಡಿಸುತ್ತಿದ್ದಾರೆ. ಬರಿಗಾಲಲ್ಲಿ ನಡೆದು ಮೆಟ್ಟಿಲು ಹತ್ತಿ ಇಳಿದು ಎಲ್ಲ ಅಂತಸ್ತುಗಳ ಇಂಚಿಂಚನ್ನೂ ಅಭಿಮಾನದಿಂದ ತೋರಿಸುವ ಅವರ ಅತ್ಯುತ್ಸಾಹವೇ ಸಾಕ್ಷಿ ಅವರು ಗೀತಾಮಂದಿರವನ್ನು, ಗೀತಾಸಂದೇಶದ ಪ್ರಸರಣವನ್ನು ಅದೆಷ್ಟು ‘ಹೃದಯಕ್ಕೆ ಹತ್ತಿರದ ವಿಷಯ’ವಾಗಿ ಎತ್ತಿಕೊಂಡಿದ್ದಾರೆಂಬುದಕ್ಕೆ.

ಗೀತಾಮಂದಿರದ ಮೊದಲ ಅಂತಸ್ತಿನಲ್ಲಿರುವ ಗೀತಾಧ್ಯಾನಮಂದಿರದ ಗೋಡೆಗಳ ಮೇಲೆ ಸಂಪೂರ್ಣ ಭಗವದಗ್ಗೀತೆಯ ಅಷ್ಟೂ ಶ್ಲೋಕಗಳನ್ನು ದೇವನಾಗರಿ ಲಿಪಿಯಲ್ಲಿ ಕೆತ್ತಲಾಗಿದೆ. ಉಳಿದಿರುವ ಜಾಗವನ್ನು ವಿಷ್ಣುಸಹಸ್ರನಾಮ ಶ್ಲೋಕಗಳ ಕೆತ್ತನೆಯು ಅಲಂಕರಿಸಿದೆ. ಅಷ್ಟೇ ಆಗಿದ್ದರೆ ಹೇಳಿ ಕೊಳ್ಳುವಂಥ ವಿಶೇಷ ಅನಿಸುತ್ತಿರಲಿಲ್ಲವೇನೋ. ಆದರೆ ಆ ಸಮಗ್ರ ವಿನ್ಯಾಸಕ್ಕೆ ಕಲಶ ಪ್ರಾಯವಾಗಿ ಕಂಡುಬರುವುದು ಭಗವದ್ಗೀತೆಯ ಶ್ಲೋಕಗಳಿಂ
ದಾಯ್ದ ಚಿಕ್ಕಚಿಕ್ಕ ಸೂಕ್ತಿಗಳಿಗೆ ಹೊಂದಿಕೊಳ್ಳುವಂತೆ ಪುರಾಣಕಥೆಗಳ ಚಂದದ ಭಿತ್ತಿಚಿತ್ರಗಳು. ಖ್ಯಾತ ಗಂಜೀಫಾ ಕಲಾವಿದ ರಘುಪತಿ ಭಟ್ಟರ ಕೈಚಳಕದಲ್ಲಿ ಮೂಡಿರುವ ಸುಂದರ ಕಲಾಕೃತಿಗಳ ಕೆತ್ತನೆ.

ಉದಾಹರಣೆಗೆ: ‘ಕರ್ಮಣ್ಯೇವಾಽಕಾರಸ್ತೇ’- ಹನುಮಂತ ರಾಮನ ಚರಣಸ್ಪರ್ಶ ಮಾಡುತ್ತಿರುವ ಚಿತ್ರ; ‘ನ ಪ್ರಹೃಷ್ಯೇತ್ ಪ್ರಿಯಂ ಪ್ರಾಪ್ಯ’ – ಪಟ್ಟಾಭಿಷೇಕ ನಡೆಯಬೇಕಿದ್ದ ದಿನವೇ ವನವಾಸಕ್ಕೆ ತೆರಳುವಂತೆ ಆe ಪಡೆದ ಶ್ರೀರಾಮನ ಚಿತ್ರ; ‘ಏಕಮ ಪ್ಯಸ್ಥಿತಃ ಸಮ್ಯಕ್’- ಹಿಡಿ ಅವಲಕ್ಕಿಯನ್ನು ಹಿಂಜರಿಯುತ್ತಲೇ
ಕೃಷ್ಣನಿಗರ್ಪಿಸಿದ ಕುಚೇಲ; ‘ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್’- ಭಕ್ತ ಧ್ರುವ; ‘ನಾಭಾವೋ ವಿದ್ಯತೇ ಸತಃ’- ಲಾಕ್ಷಾಗೃಹದಹನ ಪ್ರಸಂಗ; ‘ಸಂಗಾತ್ಸಂಜಾಯತೇ ಕಾಮಃ’- ರಾವಣ; ‘ಯದ್ಯದಾಚರತಿ ಶ್ರೇಷ್ಠಃ’- ಶ್ರೀಕೃಷ್ಣನೇ ಗುರುಗಳ ಉಪನ್ಯಾಸ ಕೇಳುತ್ತಿರುವ ದೃಶ್ಯ;  ಅನನ್ಯಾಶ್ಚಿಂತ ಯಂತೋ ಮಾಂ’- ದ್ರೌಪದಿಯ ವಸ್ತ್ರಾಪಹರಣದ ವೇಳೆ ಕೃಷ್ಣನಿಂದ ರಕ್ಷಣೆ; ‘ಮಚ್ಚಿತ್ತಃ ಸರ್ವದುರ್ಗಾಣಿ’- ಆನೆಗಳಿಂದ ತುಳಿಸಿಕೊಂಡರೂ ಪಾರಾದ
ಪ್ರಹ್ಲಾದ; ‘ಸ್ವಲ್ಪಮಪ್ಯಸ್ಯ ಧರ್ಮಸ್ಯ’- ಗಜೇಂದ್ರಮೋಕ್ಷ; ‘ಪತ್ರಂ ಪುಷ್ಪಂ ಫಲಂ ತೋಯಂ’- ಶಬರಿ; ‘ಶುನಿಚೈವ ಶ್ವಪಾಕೇ ಚ’- ರಂತಿದೇವ; ‘ಶ್ರದ್ಧಾವಾನ್ ಲಭತೇ eನಮ್’- ನಚಿಕೇತ; ಹಾಗೆಯೇ ಅಂಬರೀಷ, ನಹುಷ, ಅಜಾಮಿಳ, ಜಡಭರತ, ಶುಕಮುನಿ, ಭಸ್ಮಾಸುರ, ಬಲಿಚಕ್ರವರ್ತಿ, ಸುಭದ್ರೆ ಮುಂತಾಗಿ ಪುರಾಣಪಾತ್ರಗಳು.

ನಮ್ಮ ‘ಗೈಡೆಡ್ ಟೂರ್’ನಲ್ಲಿ ಸ್ವಾಮೀಜಿಯವರು ಅಂಥ ಪ್ರತಿಯೊಂದು ಕೆತ್ತನೆಯ ಬಳಿ ನಿಂತು ಆಯಾ ಪೌರಾಣಿಕ ಪ್ರಸಂಗಗಳ ಸಂಕ್ಷಿಪ್ತ ವಿವರಣೆ ನೀಡಿದ್ದನ್ನು ಆಲಿಸಿದ ಅನುಭವವಂತೂ ವರ್ಣನಾತೀತ. ಭಗವದ್ಗೀತೆಯೇ ಜೀವನಾದರ್ಶ ಸಂದೇಶಗಳ ಸಾಗರ. ಅದಕ್ಕೆ ಪುರಾಣಕಥೆಗಳ ಸಮೀಕರಣದ ಹೊಸ ಆಯಾಮ. ಅದನ್ನು ಸ್ವಾಮೀಜಿಯವರ ಮುಖದಿಂದಲೇ ಕೇಳುವುದೆಂದರೆ- ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ… ಭಗವದ್ಗೀತೆಯನ್ನು ಸಂಪೂರ್ಣವಾಗಿ ಒಂದೇಒಂದು ಸಲ ಸ್ವಹಸ್ತಾಕ್ಷರಗಳಲ್ಲಿ ಬರೆದದ್ದು ಕೂಡ ಇಷ್ಟು ಪುಣ್ಯಪ್ರದವಾಗಬಹು ದೆಂದು ನಾನು ಕನಸುಮನಸಲ್ಲೂ ಖಂಡಿತ ಎಣಿಸಿರಲಿಲ್ಲ.

‘ಸಕೃದ್ಗೀತಾಂಭಸಿ ಸ್ನಾನಂ ಸಂಸಾರಮಲನಾಶನಮ್… ಗೀತಾಗಂಗೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ’ ಅಂತೆಲ್ಲ ಗೀತೆಯ ಮಹಾತ್ಮೆ ಓದುವುದು/ಕೇಳುವುದು ಒಂದು ತೂಕವಾದರೆ ಹೀಗೆ ಸ್ವಂತ ಅನುಭವಿಸುವುದರ ತೂಕವೇ ಬೇರೆ. ಈ ರೀತಿಯ ದಿವ್ಯಾನುಭವಗಳು ನಿಮ್ಮದಾಗಬೇಕಾದರೆ ನೀವೂ ಕೋಟಿಗೀತಾ ಲೇಖನಯಜ್ಞದಲ್ಲಿ ಪಾಲ್ಗೊಳ್ಳಬೇಕು ಎಂದು ನನ್ನದೊಂದು ಆಪ್ತ, ಆರ್ದ್ರ ಆಶಯ. ವಿವರಗಳಿಗೆ:www.sriputhige.org