Friday, 13th December 2024

ಕೋಡಂಗಿ ಅರಮನೆಗೆ ಹೋದರೆ ರಾಜನಾಗೊಲ್ಲ, ಅರಮನೆ ಹುಚ್ಛಾಸ್ಪತ್ರೆ ಆಗುತ್ತೆ !

ಇದೇ ಅಂತರಂಗ ಸುದ್ದಿ

vbhat@me.com

ರಾಷ್ಟ್ರ ನಾಯಕನನ್ನು ಪ್ರತಿರೂಪಿಸುವ ಕಸರತ್ತಿನ ಹಿಂದೆ ಅನೇಕರ ಯೋಗದಾನ, ಸಹಯೋಗ ಇದ್ದೇ ಇರುತ್ತದೆ. ಬರಾಕ್ ಒಬಾಮ ಅವರನ್ನು
ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮುನ್ನ, ಸುಮಾರು 240 ಸದಸ್ಯರನ್ನೊಳಗೊಂಡ ಒಂದು ತಂಡ ಸತತ ಒಂದು ವರ್ಷ ಕಾಲ ಹೆಣಗಿತ್ತು. ಸಾಕಷ್ಟು ಸ್ಟ್ರೆಟಜಿ ಮಾಡಿತ್ತು.

ಜಾಗತಿಕ ವಲಯದಲ್ಲಿ ಅವರನ್ನು ಒಬ್ಬ ಪ್ರತಿಭಾನ್ವಿತ ನಾಯಕ ಎಂದು ರೂಪಿಸಲು ಸಾಕಷ್ಟು ಕಸರತ್ತು ಮಾಡಿತ್ತು. ಆ ಸಂದರ್ಭದಲ್ಲಿ ಒಬಾಮ ಅವರ ನಾಯಕತ್ವ ಗುಣಗಳನ್ನು ಪ್ರತಿಪಾದಿಸುವ ನೂರಾರು ಅಂಶಗಳು ಅನಾವರಣಗೊಂಡವು. ಒಬಾಮ ಏಕಾಏಕಿ ಜಾಗತಿಕ ವಿಷಯಗಳ ಬಗ್ಗೆ ಮಾತಾಡ ಲಾರಂಭಿಸಿದರು. ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸತೊಡಗಿದರು. ಹಠಾತ್ತನೆ ಅವರಿಂದ The Audacity of Hope: Thoughts on Reclaiming the American Dream ಎಂಬ ಪುಸ್ತಕವನ್ನು ಬಂತು. ಆರೇಳು ತಿಂಗಳು ಕಳೆಯುವುದರೊಳಗೆ ಅಮೆರಿಕ ಅಧ್ಯಕ್ಷರಾಗಲು ಒಬಾಮ ಒಬ್ಬ ಅರ್ಹ ಅಭ್ಯರ್ಥಿ ಎಂಬಂತೆ ಅವರನ್ನು ಬಿಂಬಿಸಲಾಯಿತು.

ಒಬ್ಬ ನಾಯಕನ ಹಿಂಬದಿಗೆ ಇಂಥ ಶಕ್ತಿಶಾಲಿ, ಪ್ರತಿಭಾನ್ವಿತರ ನ್ನೊಳಗೊಂಡ ಒಂದು ಧ್ಯೇಯಬದ್ಧ ತಂಡ ನಿರಂತರ ಕೆಲಸ ಮಾಡುತ್ತಿರುತ್ತದೆ. ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿ ಆಗುವ ಆರೇಳು ತಿಂಗಳ ಮುನ್ನವೂ ಇಂಥದೇ ಒಂದು ಕಾರ್ಯನಿಷ್ಠ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು. ಇದ್ದಕ್ಕಿದ್ದಂತೆ ಮೋದಿ ಬಿರುಗಾಳಿಯಂತೆ ಭಾರತದ ರಾಜಕೀಯ ಆಗಸದಲ್ಲಿ ಬೀಸಿ ಬಂದರು. ನಾಯಕ ಅಥವಾ ಅಭ್ಯರ್ಥಿಯ
ಶಕ್ತಿ-ತಾಕತ್ತು-ದೌರ್ಬಲ್ಯಗಳನ್ನು ಅಳೆದು ತೂಗಿ, ಅವರನ್ನು ಸೂಕ್ತವಾಗಿ position ಮಾಡಲಾಗುತ್ತದೆ. ಈ ಕೆಲಸವನ್ನು ಅವರ ಹಿಂದಿರುವ ಅರ್ಪಣಾ ಮನೋಭಾವವಿರುವ ತಂಡ ನಿರಂತರವಾಗಿ ಮಾಡುತ್ತದೆ. ಮೋದಿ ಯಶಸ್ಸಿಗೆ ಈ ತಂಡ ಕಾರಣವಾಯಿತು. ಇಂದಿಗೂ ಆ ತಂಡ ಹಗಲಿರುಳು ಎನ್ನದೇ ಕೆಲಸ ಮಾಡುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಇಂಥದೇ ಒಂದು ತಂಡವನ್ನು ಹೊಂದಿzರೆ. ಆ ತಂಡದ ಕಾರ್ಯಕ್ಷಮತೆ ಬಗ್ಗೆ ಯಾರಿಗಾದರೂ ಕೆಲವು ಅನುಮಾನಗಳು ಕಾಡದೇ ಹೋಗುವುದಿಲ್ಲ. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅವರು ವರ್ತಿಸುತ್ತಿರುವ ರೀತಿಯನ್ನು ನೋಡಿದವರಿಗೆ ಈ ಅನುಮಾನ ಮತ್ತಷ್ಟು ಗಾಢವಾಗಿ feel ಆಗಬಹುದು. ಈ ತಂಡಕ್ಕೆ ರಾಹುಲ್ ಗಾಂಧಿಯವರನ್ನು ಹೇಗೆ position ಮಾಡಬೇಕು ಎಂಬ ಬಗ್ಗೆ
ಸ್ಪಷ್ಟತೆ ಇದ್ದಂತಿಲ್ಲ. ರಾಹುಲ್ ಗಾಂಧಿ ಅವರ ಅಸಲಿಯತ್ತು ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಶೋಕೇಸ್ ಮಾಡಲು ಹೊರಟಂತಿದೆ. ಯಾವುದೇ ಪ್ರಾಡಕ್ಟ್ ಅನ್ನು ಮಾರ್ಕೆಟ್ ಮಾಡುವ ಮುನ್ನ ಅದರ ಗುಣಾವಗುಣಗಳನ್ನು ಅರಿಯಬೇಕು. ಅದರ ಮೈನಸ್ ಪಾಯಿಂಟ್ ಬಿಟ್ಟು, ಪ್ಲಸ್ ಪಾಯಿಂಟುಗಳನ್ನಷ್ಟೇ ಹೈಲೈಟ್ ಮಾಡಬೇಕು. ಇದು ಎಂಥವರಿಗೂ ಅರ್ಥವಾಗುವಂಥದ್ದು. ಇಲ್ಲದ ಗುಣಗಳನ್ನು ಹೈಲೈಟ್ ಮಾಡಲು
ಪ್ರಯತ್ನಿಸಿದಾಗ ಸಮಸ್ಯೆಯಾಗುತ್ತದೆ.

ರಾಹುಲ್ ಗಾಂಧಿಯವರ ಇತ್ತೀಚಿನ ವರಸೆಗಳನ್ನು ಅವಲೋಕಿಸಿದರೆ, ಅವರನ್ನು ಮಹಾನ್ ಬುದ್ಧಿಜೀವಿಯಂತೆ, ಚಿಂತಕನಂತೆ, ಹೊಸ ವಿಷಯಗಳ ಹರಿಕಾರನಂತೆ ಬಿಂಬಿಸಲು ಹರಸಾಹಸಪಡುತ್ತಿರಬಹುದೇ ಎಂಬ ಅನುಮಾನ ಯಾರನ್ನಾದರೂ ಕಾಡುತ್ತದೆ. ಅವರ ಬಾಯಿಂದ ಅವರ ಗ್ರಹಿಕೆಗೆ ಮೀರಿದ ವಿಷಯಗಳನ್ನು ಹೇಳಿಸುವುದು, ಅವರ ಪಾಂಡಿತ್ಯಕ್ಕಿಂತ ಮಿಗಿಲಾದ ವೇದಿಕೆಗಳಲ್ಲಿ ಅವರನ್ನು ಕೂಡ್ರಿಸುವುದು, ಅವರಿಂದ ಯಾವುದೋ ಇಲ್ಲಿ ತನಕ ಯಾರಿಗೂ ಗೊತ್ತಿಲ್ಲದ ವಿಷಯಗಳನ್ನು ಉದುರಿಸಲು ಪ್ರಯತ್ನಿಸುವುದು… ಮುಂತಾದ ಕಸರತ್ತುಗಳು ನಡೆಯುತ್ತಿರುವುದನ್ನು ಗಮನಿಸಬಹುದು.

ರಾಹುಲ್ ಗಾಂಧಿಯವರಿಗೆ ಸಮಸ್ಯೆ ಆಗುತ್ತಿರುವುದೇ ಇಲ್ಲಿ. ಅವರು ಹೇಳುವ ವಿಷಯ ಈ ದೇಶದ mass ಗೆ ಕನೆಕ್ಟ್ ಆಗುವಂತಿದ್ದರೆ ಪರವಾಗಿಲ್ಲ. ಅವರು ಆರಿಸಿಕೊಳ್ಳುತ್ತಿರುವ ವೇದಿಕೆ, ಹೇಳುವ ವಿಷಯಗಳೆರಡೂ ಒಂದಕ್ಕೊಂದು ಸಂಬಂಧವಿಲ್ಲದ್ದು. ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿ ಯಾಗಿ ನಡೆಸಿ, ಬ್ರಿಟನ್ ನೆಲದಲ್ಲಿ ನಿಂತು ಚೀನಾವನ್ನು ಹೊಗಳಿ, ಭಾರತವನ್ನು ಟೀಕಿಸುವ ಹಂತಕ್ಕೆ ಹೋಗಬಾರದಿತ್ತು ಎಂಬುದು ಎಂಥವರಿ ಗಾದರೂ ಅರ್ಥವಾಗುವಂಥದ್ದು. ಇದನ್ನು ಅವರ ಪಕ್ಷ ದವರೇ ಖಾಸಗಿಯಾಗಿ ಮಾತಾಡುವಾಗ ಒಪ್ಪುವುದಿಲ್ಲ. ರಾಹುಲ್ ಗಾಂಧಿಯವರನ್ನು ಅವರು ಇರುವ ಹಾಗೆ ಬಿಟ್ಟರೆ ಒಳ್ಳೆಯದು.

ದೇವೇಗೌಡರ ಇಮೇಜನ್ನು ಬದಲಿಸಬೇಕು ಎಂದು ಅವರ ಪಬ್ಲಿಕ್ ರಿಲೇಷನ್ ಮ್ಯಾನೇಜರುಗಳು ನಿರ್ಧರಿಸಿದರೆ, ಅವರ USP (Unique Selling Proposition) ಯಾವುದು ಎಂಬುದನ್ನು ಕಂಡುಹಿಡಿಯಬೇಕು. ಅವರನ್ನು ಏಕಾಏಕಿ ಕೇಂಬ್ರಿಡ್ಜ್ ಗೋ, ಸ್ಟ್ಯಾನ್ ಫೋರ್ಡಿಗೋ, ಹಾರ್ವರ್ಡಿಗೋ
ಕರೆದುಕೊಂಡು ಹೋಗಿ ಉಪನ್ಯಾಸ ಮಾಡಿಸುವ ಸಾಹಸಕ್ಕೆ ಮುಂದಾಗಬಾರದು. ಅವು ಅವರ ವೇದಿಕೆಗಳಲ್ಲ. ಆ ವೇದಿಕೆಗಳಲ್ಲಿ ಎಷ್ಟೇ ಚೆನ್ನಾಗಿ ಮಾತಾಡಿದರೂ ಅವರ ಇಮೇಜ್ ಬದಲಾಗುವುದಿಲ್ಲ. ಅಂಥ (ಇಮೇಜ) ಬದಲಾವಣೆ ಅಸಲಿಗೆ ಅವರಿಗೆ ಬೇಕಿರುವುದಿಲ್ಲ. ಅಷ್ಟಕ್ಕೂ ಅವರಿಂದ ಏನೋ ಕಸರತ್ತು ಮಾಡಿಸಬೇಕು ಅಂತ ಬಯಸಿದರೆ, ಸರಳ, ಸುಲಭವಾಗಿ ಭತ್ತದ ಗದ್ದೆಯಲ್ಲಿ ನಾಟಿ ಮಾಡಿಸಬಹುದು ಅಷ್ಟೇ. ನಾಯಕನಲ್ಲಿ
ಇರುವ, ಇಷ್ಟು ದಿನ ಹೈಲೈಟ್ ಆಗದ ಸಂಜಾತ ಗುಣವನ್ನು ಹೆಕ್ಕಿ ತೆಗೆದು ಹೊರಜಗತ್ತಿಗೆ ತೋರಿಸಬೇಕು.

ಅದು ಬಿಟ್ಟು ನಾಯಕನಿಗೆ ಹೊತ್ತುಕೊಳ್ಳಲಾಗದ ಭಾರವನ್ನು ಹೊರಿಸಲು ಹೋಗಬಾರದು. ಪಂಡಿತ ಜವಾಹರಲಾಲ್ ನೆಹರುಗೆ ಇಂಟೆಲೆಕ್ಚುವಲ್ ಎಂದು ಕರೆಯಿಸಿಕೊಳ್ಳುವ ವ್ಯಕ್ತಿತ್ವ ಇತ್ತು. ಅವರು ಸ್ವತಃ ಲೇಖಕರಾಗಿದ್ದರು, ಸಾಕಷ್ಟು ಓದಿಕೊಂಡಿದ್ದರು. ಅವರಿಗೆ ಭಾಷೆಗಳು ಒಲಿದಿದ್ದವು. ಅವರು ಉತ್ತಮ ಸಂವಹನಕಾರರಾಗಿದ್ದರು. ಎಲ್ಲರನ್ನೂ ಸೆಳೆದುಕೊಳ್ಳುವ ಆಕರ್ಷಕ ವ್ಯಕ್ತಿತ್ವ ಅವರದ್ದಾಗಿತ್ತು. ಅವರು ಭಾರತ ಮತ್ತು ಫಾರಿನ್‌ಗೆ ಒಗ್ಗಿಕೊಳ್ಳಬಲ್ಲವರಾಗಿದ್ದರು. ಹಾಗಂತ ಅವರ ಮಗಳು ಇಂದಿರಾಗೆ ಅಂಥ ವ್ಯಕ್ತಿತ್ವ ಇರಲಿಲ್ಲ. ಅದು ಅವರಿಗೆ ಗೊತ್ತಿತ್ತು. ಹಾಗೆಂದು ಅವರಿಗೆ ಆ ಔನ್ನತ್ಯವನ್ನು ಏರುವ ಸಾಮರ್ಥ್ಯವಿತ್ತು. ಆದರೆ ಅವರಿಗೆ ಅಂಥ ವ್ಯಕ್ತಿತ್ವ ಬೆಳೆಸಿಕೊಂಡರೆ Mass ಜತೆಗೆ ಕನೆಕ್ಟ್ ಆಗುವುದು ತೊಡಕಾಗಬಹುದು ಎಂದು ಜಾಣ್ಮೆಯಿಂದ ಆ ಪ್ರಯತ್ನಕ್ಕೆ ಮುಂದಾಗಲಿಲ್ಲ. ಅವರ ಮಗ ರಾಜೀವ್ ಗಾಂಧಿಗೆ ಅಂಥ ಯಾವ ಚಪಲ-ಚೌಬುಗಳೂ ಇರಲಿಲ್ಲ. ಅವರು ಅವರಂತಿದ್ದರು. ಇನ್ಯಾರೋ ಆಗಲು ಹಂಬಲಿಸಲಿಲ್ಲ.

ಸೋನಿಯಾ ಗಾಂಧಿಯವರಿಗೆ ತಮ್ಮ ಮೈನಸ್ ಪಾಯಿಂಟುಗಳು ಚೆನ್ನಾಗಿ ಗೊತ್ತಿದ್ದವು. ಬಾಯಿ ಬಿಟ್ಟರೆ ಬಣ್ಣಗೇಡು ಎಂದು ಗೊತ್ತಿದ್ದವರು ಕಾಷ್ಠಮೌನಿಯಾಗಿರುವುದು ಜಾಣತನ. ಆ ದೃಷ್ಟಿಯಿಂದ ಅವರು ನಿಜಕ್ಕೂ ಜಾಣೆ. ತಮಗೆ ಮೌನವೇ ಹೆಚ್ಚು ಒಪ್ಪುತ್ತದೆ ಎಂಬುದನ್ನು ಅವರು ಬಹುಬೇಗ ಅರ್ಥ ಮಾಡಿಕೊಂಡು ಹಾಗೇ ಇರುವುದನ್ನು ರೂಢಿಸಿಕೊಂಡರು. ತಮಗೆ extra hats ಇರಬೇಕು ಎಂದು ಅವರಿಗೆ ಯಾವತ್ತೂ
ಅನಿಸಲಿಲ್ಲ. ಹೀಗಾಗಿ ಸಹಜವಾಗಿ ಇದ್ದರು. ವಿದೇಶಿ ಮಹಿಳೆ ಯಾಗಿದ್ದರೂ, ಹೆಚ್ಚು ಹೆಚ್ಚು ಭಾರತೀಯ ನಾರಿಯಂತೆ ಕಾಣಲು ಪ್ರಯತ್ನಿಸಿದರು. ಅವರು ಸೀರೆ ಅಥವಾ ಪತ್ತಲ ಬಿಟ್ಟು ಬೇರೆ ದಿರಿಸಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಬೌದ್ಧಿಕ ಔನ್ನತ್ಯ ತೋರಿಸುವ ಕುಬಿ ಅವರಿಗಿರಲಿಲ್ಲ.

ಆದರೆ ರಾಹುಲ್ ಗಾಂಧಿ ಅವರ ಸಮಸ್ಯೆ ಇರುವುದೇ ಇಲ್ಲಿ. ಅಷ್ಟಕ್ಕೂ ಅದು ಅವರ ಸಮಸ್ಯೆ ಇರಲಿಕ್ಕಿಲ್ಲ. ಅವರ ಇಮೇಜ್ ಬಿಲ್ಡ್ ಮಾಡುವ ಹಿನ್ನೆಲೆ ತಂಡದ ಸಮಸ್ಯೆ ಇದ್ದಿರಬಹುದು. ಅವರಿಂದ ಅವರಿಗೆ ಸರಿ ಹೊಂದದ ಪಾತ್ರ ಅಥವಾ ಅಭಿನಯವನ್ನು ಮಾಡಿಸಲು ಹೊರಟಿರುವುದು ಅವರಿಗೆ ಅಲವರಿಕೆಯಾಗುತ್ತಿದೆ. ಈ ಅವಸರದಲ್ಲಿ ಅವರಿಂದ ಏನೇನೋ ಎಡವಟ್ಟುಗಳಾಗುತ್ತಿವೆ. ಅವರದ್ದಲ್ಲದ ವಿಚಾರಗಳನ್ನು ಅವರ ಬಾಯಿಂದ
ಹೇಳಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡದಲ್ಲಿ ಒಂದು ಗಾದೆಯಿದೆ – ‘ಕೋಡಂಗಿಯೊಬ್ಬ ಅರಮನೆಗೆ ಹೋದರೆ ರಾಜನಾಗುವುದಿಲ್ಲ. ಅದರ ಬದಲು ಅರಮನೆ ಹುಚ್ಚಾಸ್ಪತ್ರೆ ಆಗುತ್ತದೆ.’ ಅಜರುದ್ದೀನ್, ದ್ರಾವಿಡ್, ಬಿನ್ನಿಗಳು ಕ್ರಿಕೆಟ್ ಬಗ್ಗೆ ಮಾತಾಡಿದರೆ ಚೆಂದ. ಅವರು ತೆಂಗಿನ ಕೃಷಿ, ಹೈನುಗಾರಿಕೆ ಬಗ್ಗೆ ಮಾತಾಡಲು ಹೋಗಬಾರದು.

ಸಂಸದರಾಗಿ ಅನರ್ಹರಾಗಿರುವ ರಾಹುಲ್ ಗಾಂಧಿ ಮುಂದೊಂದು ದಿನ ಅರ್ಹರಾಗುತ್ತಾರೆ ಬಿಡಿ. ಅದು ಸಮಸ್ಯೆ ಅಲ್ಲ. ಈ ಅವಧಿಯಲ್ಲಿ ಅವರು ಸಂಸದರಾದರೂ ಅಷ್ಟೇ, ಬಿಟ್ಟರೂ ಅಷ್ಟೇ. ಅವರೇನು ಪ್ರಧಾನಿಯಾಗುವುದಿಲ್ಲ. ಆದರೆ ಅವರು ನಿಜವಾದ, ಸಹಜವಾದ ರಾಹುಲ್ ಗಾಂಧಿಯಾಗಿ
ಪರಿವರ್ತನೆಯಾಗಬೇಕಾದುದು ಮುಖ್ಯ. ಕಾರಣ ಕಟ್ಟಿಕೊಟ್ಟ ಬುತ್ತಿ ಮತ್ತು ಹೇಳಿಕೊಟ್ಟ ಮಾತು ಬೇಗನೆ ಖಾಲಿಯಾಗಿಬಿಡುತ್ತದೆ.

ಹೀಗಿದ್ದರು ಜಯಲಲಿತಾ

ಜಯಲಲಿತಾ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ವಿಚಾರಣೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಕೋರ್ಟನ್ನು ಸ್ಥಾಪಿಸಲಾಗಿತ್ತು. ವಿಚಾರಣೆ ಇದ್ದಾಗ ಜಯಲಲಿತಾ ಖುದ್ದಾಗಿ ಹಾಜರಾಗುತ್ತಿದ್ದರು. ಪ್ರತಿ ಸಲ ಅವರು ಬಂದಾಗ ಹತ್ತಾರು ಸಾವಿರ ಅಭಿಮಾನಿಗಳು ಸೇರುತ್ತಿದ್ದರು. ಅವರನ್ನು ನಿಯಂತ್ರಿಸುವುದೇ ಬೆಂಗಳೂರು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.

ಜಯಲಲಿತಾ ಅವರು ತಮಿಳುನಾಡಿನಿಂದ ವಿಶೇಷ ವಿಮಾನದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದರು. ಅಲ್ಲಿಂದ ಭಾರಿ ಬಂದೋಬಸ್ತಿನಲ್ಲಿ ಅವರನ್ನು ಪರಪ್ಪನ ಅಗ್ರಹಾರ ಜೈಲಿನ ಕೋರ್ಟಿಗೆ ಕರೆದುಕೊಂಡು ಬರಬೇಕಾಗುತ್ತಿತ್ತು. ಒಮ್ಮೆ ಜಯಲಲಿತಾ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದಲ್ಲಿ ಬಂದಿಳಿದರು. ವಿಮಾನಕ್ಕೆ ಹಚ್ಚಿದ ಏಣಿಯಿಂದ ಇಳಿದು ಬರುವಾಗ ಕೊನೆ ಮೆಟ್ಟಿಲು ನೆಲದಿಂದ
ತುಸು ಎತ್ತರದಲ್ಲಿ ಇದ್ದುದರಿಂದ ಅವರಿಗೆ ಅನಾನುಕೂಲವಾಯಿತು. ಎಲ್ಲಾ ಮೆಟ್ಟಿಲುಗಳು ಒಂದೇ ಎತ್ತರದಲ್ಲಿದ್ದು, ಕೊನೆಯ ಒಂದು ಮೆಟ್ಟಿಲು ಮಾತ್ರ ಬೇರೆ ಎತ್ತರದಲ್ಲಿದ್ದರೆ, ಹೆಜ್ಜೆ ತಪ್ಪುತ್ತದ, ಜಯ ಅವರಿಗೆ ಹಾಗೇ ಆಯಿತು. ಇದು ತೀರಾ ಕ್ಷುಲ್ಲಕ ಅಥವಾ ತೀರಾ ಸಣ್ಣ ವಿಷಯ.

ಇದರಿಂದ ತುಸು ಕಿರಿಕಿರಿಯಾದ ಜಯಾ, ತಮ್ಮೊಂದಿಗಿದ್ದ ಶಿಷ್ಟಾಚಾರ ಅಧಿಕಾರಿಯತ್ತ ಕ್ಯಾಕರಿಸಿ ನೋಡಿದರು. ಆದರೆ ಏನೂ ಹೇಳಲಿಲ್ಲ. ‘ಅಮ್ಮಾ’ಗೆ ಕೋಪ ಬಂದಿದೆ ಎಂದು ಆ ಅಧಿಕಾರಿಗೆ ತಕ್ಷಣ ಗೊತ್ತಾಯಿತು. ಅದನ್ನು ಅಮ್ಮಾ ಬಾಯಿಬಿಟ್ಟು ಹೇಳಿರಲಿಲ್ಲ. ಅನಂತರ ಜಯಲಲಿತಾ ಕಾರಿನಲ್ಲಿ ಕುಳಿತುಕೊಂಡ ಬಳಿಕ, ಬೇರೊಂದು ಕಾರಿನಲ್ಲಿದ್ದ ಆ ಶಿಷ್ಟಾಚಾರ ಅಧಿಕಾರಿ, ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡ ತಮಿಳುನಾಡಿನ ಸಚಿವರು
ಮತ್ತು ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಕ್ಷಣ ತಂದು, ಅಮ್ಮಾಗೆ ಇದರಿಂದ ಆದ ತೊಂದರೆಯನ್ನು ವಿವರಿಸಿದ. ಎಲ್ಲರೂ ಗಾಬರಿ ಗೊಂಡರು.

ಹಾಗೆ ನೋಡಿದರೆ ಅದೇನು ಭಾರಿ ಪ್ರಮಾದವೇನೂ ಆಗಿರಲಿಲ್ಲ. ಅದಕ್ಕೆ ಅವರಾರೂ ಕಾರಣರಾಗಿರಲಿಲ್ಲ. ಅಷ್ಟಕ್ಕೂ ಅದು ಏಣಿಯನ್ನು ವಿನ್ಯಾಸ ಮಾಡಿದವರ ತಪ್ಪು. ಕೊನೆ ಮೆಟ್ಟಿಲಿ ನಿಂದ ನೆಲಕ್ಕೆ ಒಂದೂವರೆ ಅಡಿ ಅಂತರವಿದ್ದುದರಿಂದ, ಕೊನೆ ಮೆಟ್ಟಿಲನ್ನು ಜಯಾ ತುಸು ನಿಧಾನವಾಗಿ ಇಳಿಯಬೇಕಾಯಿತು. ವಿಷಯ ಅಷ್ಟೇ. ಆದರೆ ಆ ಅಧಿಕಾರಿ, ಇಂಥ ಸಣ್ಣ ಪುಟ್ಟ ಸಂಗತಿಗಳನ್ನು ಗಮನಿಸದೇ ಇದ್ದುದರಿಂದ ಅಮ್ಮಾ ಬೇಸರ ಗೊಂಡರು ಎಂಬಂತೆ ಎಲ್ಲರಿಗೂ ಹೇಳಿದ. ಅಸಲಿಗೆ ಅಮ್ಮಾ ಬೇಸರಗೊಂಡಿದ್ದಿರಲೂಬಹುದು.

ಈ ವಿಷಯವನ್ನು ಚೆನ್ನೈನಲ್ಲಿರುವ ಅಧಿಕಾರಿಗಳ ಗಮನಕ್ಕೂ ತರಲಾಯಿತು. ಬೇರೊಂದು ಏಣಿಯನ್ನು ವ್ಯವಸ್ಥೆ ಮಾಡೋಣ ಅಂದ್ರೆ ಜಯಲಲಿತಾ ಆಗಮಿಸಿದ ವಿಮಾನಕ್ಕೆ ಅಲ್ಲಿರುವ ಬೇರೆ ಏಣಿಗಳು ಸರಿ ಹೊಂದುತ್ತಿರಲಿಲ್ಲ. ಹೀಗಾಗಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿದ್ದ ಸರಿಯಾದ ಏಣಿಗಳನ್ನು ಪರಿಶೀಲಿಸಿ, ಅದಕ್ಕೆ ಸರಿ ಹೊಂದುವ ವಿಮಾನವನ್ನು ಚೆನ್ನೈನಿಂದ ಕಳಿಸುವಂತೆ ಆ ಅಧಿಕಾರಿ ಸೂಚಿಸಿದ!

ಇತ್ತ ಜಯಲಲಿತಾ ಪರಪ್ಪನ ಅಗ್ರಹಾರದಲ್ಲಿದ್ದ ವಿಶೇಷ ಕೋರ್ಟಿನ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು ಎರಡು ಗಂಟೆ ವಿಚಾರಣೆ ಬಳಿಕ, ಜಯಲಲಿತಾ ವಾಪಸ್ ಹೋಗಲು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರಿಗಾಗಿ ಬೇರೆಯ ವಿಮಾನ ಕಾಯುತ್ತಿತ್ತು. (ಬೆಳಗ್ಗೆ ಅವರು
ಆಗಮಿಸಿದ ವಿಮಾನವನ್ನು ಖಾಲಿ ಕಳಿಸಲಾಗಿತ್ತು) ಅಮ್ಮಾ ಯಾವ ಕಿರಿಕಿರಿಯಿಲ್ಲದೇ ಏಣಿ ಹತ್ತುತ್ತಾ ವಿಮಾನವೇರಿದರು. ಒಂದು ಮೆಟ್ಟಿಲು ವ್ಯತ್ಯಾಸವಾದದ್ದರಿಂದ ಏಣಿಗೆ ಸರಿ ಹೊಂದುವ ಬೇರೆ ವಿಮಾನವನ್ನು ಏರ್ಪಾಡು ಮಾಡಲಾಗಿತ್ತು! ಅದು ಜಯಲಲಿತಾ.

ಪ್ರತಿ ಪತ್ರಕ್ಕೂ ಉತ್ತರಿಸುತ್ತಿದ್ದ ಜೆಆರ್‌ಡಿ ಜೆಆರ್‌ಡಿ ಟಾಟಾ ಮೌಲ್ಯಗಳ ಜತೆ ರಾಜಿ ಆಗುವವರಲ್ಲ ಎಂಬುದು ಅವರ ಜತೆ ಕೆಲಸ ಮಾಡುವವರಿಗೆ ಗೊತ್ತಿದೆ. ಹೀಗಾಗಿ ಅವರು ಯಾವುದೇ ಉದ್ಯಮವನ್ನು ಬೇರೆಯವರಿಗೆ ವಹಿಸಿಕೊಟ್ಟಾಗ, ಟಾಟಾ ಸಂಸ್ಥೆ ಏನನ್ನು ಪ್ರತಿನಿಧಿಸುವುದೋ, ಅದಕ್ಕೆ ಸ್ವಲ್ಪವೂ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಟಾಟಾ ಸ್ಟೀಲ್ ಸಂಸ್ಥೆಯನ್ನು ಸ್ಥಾಪಿಸಿದಾಗ, ಸ್ವತಃ ಜೆಆರ್‌ಡಿ ಅವರೇ ಆ ಸಂಸ್ಥೆಯ ಆಶಯ, ಧ್ಯೇಯೋದ್ದೇಶಗಳನ್ನುಬರೆದಿದ್ದರು. ತಮ್ಮ ಸಂಸ್ಥೆಯ ವಿವಿಧ ಉದ್ಯಮಗಳನ್ನು ನಿರ್ವಹಿಸುವ ಮುಖ್ಯಸ್ಥರಿಗೆ ಜೆಆರ್‌ಡಿ ಎಂದೂ ಸೂಚನೆ ಕೊಡುತ್ತಿರ ಲಿಲ್ಲ. ಹಾಗೆಂದು ಎಲ್ಲವನ್ನೂ ಅವರ ಸುಪರ್ದಿಗೆ ಬಿಟ್ಟು ನಿಶ್ಚಿಂತರಾಗಿರುತ್ತಿರಲಿಲ್ಲ. ಅವರ ಗಮನಕ್ಕೆ ಸಣ್ಣ ದೂರು ಬಂದರೂ, ಅವರೇ ಖುದ್ದಾಗಿ ಪರಿಶೀಲಿಸುತ್ತಿದ್ದರು.

ಜೆಆರ್‌ಡಿ ಅವರಿಗೆ ಸಂಸ್ಥೆಯ ನೌಕರರು ಪತ್ರ ಬರೆಯಬಹುದಿತ್ತು. ಅದನ್ನು ಅವರು ಇಷ್ಟಪಡುತ್ತಿದ್ದರು. ಅವರ ಮುಂದೆ ಯಾವ ಸಮಸ್ಯೆಯನ್ನಾದರೂ ಬರೆಯಬಹುದಿತ್ತು. ಜೆಆರ್‌ಡಿ ಟಾಟಾ ಸಂಸ್ಥೆಯ ಮುಖ್ಯಸ್ಥರಾಗಿದ್ದಾಗ, ದೇಶದೆಡೆಗಳಲ್ಲಿ ಸುಮಾರು ಮೂರುಲಕ್ಷ ಸಿಬ್ಬಂದಿಯಿದ್ದರು. ‘ಜೆ.ಆರ್.ಡಿ. ಟಾಟಾ, ಮುಂಬೈ’ ಎಂದು ಬರೆದರೆ ಸಾಕಿತ್ತು. ಅದು ಜೆಆರ್‌ಡಿ ಟೇಬಲ್ಲಿಗೆ ಬರುತ್ತಿತ್ತು. ಆ ಪತ್ರಗಳನ್ನುನಿರ್ವಹಿಸಲೆಂದೇ ಇಬ್ಬರನ್ನು ನೇಮಿಸಿದ್ದರು.

ಈ ರೀತಿ ಜೆಆರ್‌ಡಿ ಅವರಿಗೆ ಯಾರೇ ಪತ್ರ ಬರೆದರೂ ಉತ್ತರ ಸಿಗುತ್ತಿತ್ತು. ಅಲ್ಲದೇ ಯಾವುದಾದರೂ ಸಮಸ್ಯೆ ಹೇಳಿಕೊಂಡರೆ, ಅದಕ್ಕೆ ಪರಿಹಾರ ಸಿಗುತ್ತಿತ್ತು. ಜೆಆರ್‌ಡಿಯವರಿಗೆ ಖುದ್ದಾಗಿ ಸಮಸ್ಯೆಯನ್ನು ಹೇಳಿಕೊಂಡೂ ಪ್ರಯೋಜನ ಆಗಲಿಲ್ಲ ಎಂಬ ಮಾತೇ ಇರಲಿಲ್ಲ. ಯಾವಸಿಬ್ಬಂದಿಯಿಂದ ಪತ್ರ ಬಂದರೂ ಸಂಬಂಧಪಟ್ಟ ಘಟಕದ ಮುಖ್ಯಸ್ಥರ ಗಮನಕ್ಕೆ ಬರುತ್ತಿದ್ದುದರಿಂದ, ಅವರೂ ಯಾವುದೇ ಸಮಸ್ಯೆ ಜೆಆರ್‌ಡಿತನಕ ಹೋಗದಂತೆ ನೋಡಿಕೊಳ್ಳುತ್ತಿದ್ದರು. ಕೆಳ ಹಂತದಲ್ಲಿಯೇ ಸಮಸ್ಯೆ ಇತ್ಯರ್ಥಪಡಿಸುವ ವ್ಯವಸ್ಥೆಯನ್ನು ತಮ್ಮ ತಮ್ಮ ಉದ್ಯಮಗಳಲ್ಲಿ ಆಚರಣೆಗೆ ತಂದಿರುತ್ತಿದ್ದರು. ಅಷ್ಟಾಗಿಯೂ ಜೆಆರ್‌ಡಿ ಗಮನಕ್ಕೆ ಬಂದರೆ, ಆ ಸಮಸ್ಯೆ ಗಂಭೀರವಾದುದು ಎಂದು ಪರಿಗಣಿಸಲಾಗುತ್ತಿತ್ತು.

ಜೆಆರ್‌ಡಿ ವಿದೇಶ ಪ್ರವಾಸದಲ್ಲಿದ್ದಾಗ, ಅವರ ಆಪ್ತ ಕಾರ್ಯದರ್ಶಿ ಈ ಸಂಗತಿಗಳನ್ನು ಅವರ ಗಮನಕ್ಕೆ ತರಬೇಕಿತ್ತು. ‘ಸಮಸ್ಯೆಗಳು ಪ್ರತಿದಿನವೂ ಬರುತ್ತವೆ, ಅವನ್ನು ಅದೇ ದಿನ ಬಗೆಹರಿಸಬೇಕು. ಯಾವ ಕಾರಣಕ್ಕೂ ಸಮಸ್ಯೆಗಳನ್ನು ಮುಂದೂಡುವುದರಿಂದ ಅವು ಇತ್ಯರ್ಥವಾಗುವುದಿಲ್ಲ’ ಎಂದು
ಅವರು ಹೇಳುತ್ತಿದ್ದರು.

ಹೀಗೊಂದು ಸಂಭಾಷಣೆ ಪಾರ್ಕಿನಲ್ಲಿ ಇಬ್ಬರ ನಡುವಿನ ಸಂಭಾಷಣೆ :
‘ನಾನು ನಿಮ್ಮನ್ನು ಎಲ್ಲಾ ನೋಡಿದ ಹಾಗಿದೆಯಲ್ಲ’ ‘ಹೌದಾ?! ಎಲ್ಲಿರಬಹುದು?’ ‘ಫೇಸ್ ಬುಕ್‌ನಲ್ಲಿರಬಹುದಾ?’ ‘ನಾನು ಫೇಸ್ ಬುಕ್‌ನಲ್ಲಿ ಇಲ್ಲ’
‘ಹಾಗಾದ್ರೆ ಟ್ವಿಟರ್‌ನಲ್ಲಿರಬಹುದಾ?’ ‘ಅಲ್ಲೂ ನನ್ನ ಅಕೌಂಟ್ ಇಲ್ಲ’ ‘ಹಾಗಾದ್ರೆ ಇನ್ಸ್ಟಾ ಗ್ರಾಂನಲ್ಲಿರಬಹುದಾ?’ ‘ಇಲ್ಲ, ಅಲ್ಲೂ ನನ್ನ ಅಕೌಂಟ್ ಇಲ್ಲ’
‘ಲಿಂಕ್ಡ್ ಇನ್ ನಲ್ಲಿರಬಹುದಾ?’ ‘ಸಾಧ್ಯವೇ ಇಲ್ಲ’ ‘ವಾಟ್ಸಾಪ್ ಸ್ಟೇಟಸ್‌ನಲ್ಲಿರಬಹುದಾ?’ ‘ನನ್ನ ನಂಬರ್ ನಿಮ್ಮ ಬಳಿ ಇಲ್ಲವಲ್ಲ!’

‘ಹಾಗಾದ್ರೆ ಎಲ್ಲಿರಬಹುದು?’
‘ನಾನು ನಿಮ್ಮ ಪಕ್ಕದಮನೆಯವ’