Chethana Belagere Column: I AM THERE...ನಾನಿದ್ದೀನಿ ಮಗಳೇ, ನಾನಿದ್ದೀನಿ...
ಹೌದು, ಎಲ್ಲರಿಗೂ ಅವರವರ ಅಪ್ಪ ಎಂದರೆ ಮೊದಲ ಹೀರೋ. ಆದರೆ ನನ್ನ ಅಪ್ಪ ಒಂದು ಬ್ಲಾಕ್ ಬಸ್ಟರ್ ಸಿನಿಮಾಗೆ ಬೇಕಾದ ಸಂಪೂರ್ಣ ಪ್ಯಾಕೇಜ್. ನನ್ನ ಜೀವನದ ನಾಯಕನಷ್ಟೇ ಅಲ್ಲ ನನ್ನ ಕಥೆಯ ಎಲ್ಲವೂ! ನಿರ್ದೇಶಕನಾಗಿ ನನ್ನ ದಾರಿಗೆ ಬೆಳಕು ನೀಡಿದ್ದಾರೆ. ನಿರ್ಮಾಪಕ ನಾಗಿ ನನ್ನ ಕನಸುಗಳಿಗೆ ಬೆಂಬಲ ನೀಡಿದ್ದಾರೆ.

ಅಂಕಣಗಾರ್ತಿ ಚೇತನಾ ಬೆಳಗೆರೆ

ಸವಿನೆನಪು
ಚೇತನಾ ಬೆಳಗೆರೆ
(ಇಂದು ಪತ್ರಕರ್ತ ರವಿ ಬೆಳಗೆರೆ ಜನ್ಮದಿನ)
‘ಪಾಪಾ ಕೆಹತೇ ಹೇ ಬಡಾ ನಾಮ್ ಕರೇಗಿ ಬೇಟಿ ಹಮಾರೀ ಆಯುಷ್ ಕಾಮ್ ಕರೇಗಿ ಮಗರ್ ಏ ತೋ ಮೇ ತೋ ಹಿ ಜಾನು ಹೇ ತೇರಿ ಮಂಜಿಲ್ ಹೇ ಕಹಾ...- ಎಂದು ಜೋರಾಗಿ ಹಾಡುತ್ತಾ, ಆ ನೀಲಿ ಬಣ್ಣದ ಸುಜುಕಿ ಬೈಕ್‌ನ ಟ್ಯಾಂಕರ್ ಮೇಲೆ 12 ವರ್ಷದ ನನ್ನನ್ನು ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದ ಅಪ್ಪನಿಗೆ ಬಹುಶಃ ಅಂದೇ ಗೊತ್ತಿತ್ತು ನನ್ನ ‘ಗೊತ್ತು-ಗುರಿ’ ಎಲ್ಲಿದೆ ಎನ್ನುವುದು. ಈಗ ಸುಮಾರು 30 ವರ್ಷಗಳ ನಂತರ, ಅವರ ಹೆಸರಲ್ಲಿ ಅರ್ಧಭಾಗ ನನ್ನ ಹೆಸರೊಂದಿಗೆ ಛಾಪುಗೊಂಡು ನನ್ನ ಗುರುತಾಗಿದೆ. ನನ್ನ ಗುರಿ ಅವರು ಹಾಕಿಕೊಟ್ಟ ಗೆರೆಯ ಸಾಗುತ್ತಿದೆ. ಹೌದು, ಎಲ್ಲರಿಗೂ ಅವರವರ ಅಪ್ಪ ಎಂದರೆ ಮೊದಲ ಹೀರೋ. ಆದರೆ ನನ್ನ ಅಪ್ಪ ಒಂದು ಬ್ಲಾಕ್ ಬಸ್ಟರ್ ಸಿನಿಮಾಗೆ ಬೇಕಾದ ಸಂಪೂರ್ಣ ಪ್ಯಾಕೇಜ್. ನನ್ನ ಜೀವನದ ನಾಯಕನಷ್ಟೇ ಅಲ್ಲ ನನ್ನ ಕಥೆಯ ಎಲ್ಲವೂ! ನಿರ್ದೇಶಕನಾಗಿ ನನ್ನ ದಾರಿಗೆ ಬೆಳಕು ನೀಡಿದ್ದಾರೆ. ನಿರ್ಮಾಪಕನಾಗಿ ನನ್ನ ಕನಸುಗಳಿಗೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: Roopa Gururaj Column: ರಾಜನಿಗೆ ಪಾಠ ಕಲಿಸಿದ ಯುವಕರು
ಮತ್ತೆ ಪರದೆಯ ಹಿಂದೆ ನನ್ನ ಭವಿಷ್ಯವನ್ನು ರೂಪಿಸಿದ ಕಥೆಗಾರನಾಗಿದ್ದಾರೆ. ಪ್ರೀತಿಯ ಸುರಿಮಳೆ ಸುರಿಸಿದ ನಾಯಕನಾದರೂ ಹಲವಾರು ಬಾರಿ ಖಳನಾಯಕನಂತೆ ಕಾಣಿಸಿಯೂ ಇದ್ದಾರೆ. ನನ್ನ ಜೀವನದ ನಲವತ್ತು ವರ್ಷಗಳ ಪ್ರತಿದಿನದ ಸಿನಿಮಾದಲ್ಲಿನ ಡ್ರಾಮಾ, ಥ್ರಿಲ್ಲರ್, ಕಾಮಿಡಿ ಎಲ್ಲವನ್ನು ಮುಚ್ಚಟವಾಗಿ ಮುಗಿಸಿ, ‘ಸಿನಿಮಾ ಸೂಪರ್ ಹಿಟ್ ಗುರೂ’ ಎಂದು ಎಲ್ಲರೂ ಹೇಳುವ ಮುನ್ನವೇ ಎದ್ದು ಹೊರಟ ಪ್ರೇಕ್ಷಕನೂ ಆಗಿದ್ದಾರೆ.
ಅಪ್ಪ ಹೇಳುತ್ತಿದ್ದರು, ನಾನು 80 ವರ್ಷಗಳ ನಂತರ ಮನೆಗೆ ಬಂದ ಲಕ್ಷ್ಮಿ ಅಂತೆ, ಎಲ್ಲರಿಗೂ ಸಂಭ್ರಮ. ಅಪ್ಪನಿಗಂತೂ ಹೇಳಲಾರದ ಹೆಮ್ಮೆ! ನನ್ನ ಮೊದಲನೆಯ ಬರ್ತ್‌ಡೇ ತುಂಬಾ ಗ್ರ್ಯಾಂಡ್ ಇವೆಂಟ್ ಅಂತೆ! ಆ ಒಂದು ಬರ್ತ್‌ಡೇ ಆದ ಮೇಲೆ, ನಮ್ಮ ಮನೆಯಲ್ಲಿ ಬರ್ತ್ ಡೇಗಳ ಸಂಭ್ರಮ ಅಂತ ಶುರುವಾಗಿದ್ದು ಅಪ್ಪ ‘ಹಾಯ್ ಬೆಂಗಳೂರ್’ ಶುರು ಮಾಡಿದ ಮೇಲೆಯೇ.
ಹುಬ್ಬಳ್ಳಿಯಲ್ಲಿ ನಾನು, ಅಪ್ಪ ಮತ್ತು ಸೀನಣ್ಣ ಮೂವರೇ ಇದ್ದ ದಿನಗಳವು. ಅಮ್ಮ ಬಳ್ಳಾರಿಯಲ್ಲಿ ಗವರ್ನಮೆಂಟ್ ಶಾಲೆಯಲ್ಲಿ ಟೀಚರ್. ಅಪ್ಪ ಹಠ ಮಾಡಿ ‘ಹುಬ್ಬಳ್ಳಿಯ ಓದಿಸುತ್ತೇನೆ’ ಎಂದು ನನ್ನನ್ನು ಕರೆತಂದಿದ್ದರು. ಆಸಾಮಿ ಹೇಗೆ ನೋಡಿಕೊಳ್ಳುತ್ತಾನೋ ಎಂಬ ಭಯದಿಂದಲೇ ಅಮ್ಮ ನನ್ನನ್ನು ಅಪ್ಪನೊಂದಿಗೆ ಇರಲು ಕಳುಹಿಸಿದ್ದರು.
ಪ್ರತಿದಿನ ಜಡೆ ಬಾಚಿ, ಆ ರಿಬ್ಬನ್ ಕಟ್ಟಲು ಹೆಣಗಾಡಿ ಸೋಲುತ್ತಿದ್ದರು ನನ್ನ ಅಪ್ಪ. ಕೂದ ಲೊಂದಿಗಿನ ಗುದ್ದಾಟ ಸಾಕಾಗಿ ಅಪ್ಪ ನನಗೆ ಬಾಬ್ ಕಟ್ ಮಾಡಿಸಿಕೊಂಡು ಬಂದರು. ಆ ದಿನಗಳಲ್ಲಿ ಒಮ್ಮೆ ನನ್ನ ಬರ್ತ್‌ಡೇ! ಅಪ್ಪ ನನಗೆ ಹೊಸ ಬಟ್ಟೆ, ಜತೆಗೆ ಒಂದು ಸೈಕಲ್ ಕೊಡಿಸ್ತೀನಿ ಅಂತ ಪ್ರಾಮಿಸ್ ಮಾಡಿದ್ದರು.
ನನಗೆ ಸಂಭ್ರಮವೋ ಸಂಭ್ರಮ. ಈ ಕೇಕ್ ಕಟಿಂಗ್, ಫ್ರೆಂಡ್ಸ್‌ಗಳೊಂದಿಗೆ ಔಟಿಂಗ್, ಪಾರ್ಟಿ ಇದೆಲ್ಲ ನಮ್ಮ ಮನೆಯಲ್ಲಿ ಇರಲಿಲ್ಲ. ಅಮ್ಮ ಅವಳ ಹಳೆಯ ರೇಷ್ಮೆ ಸೀರೆಯಲ್ಲಿ ನನಗೂ, ಬಾನಿಗೂ ಒಂದೇ ತರಹದ ಲಂಗ ಹೊಲಿಸುತ್ತಿದ್ದರು ಅಥವಾ ಹೇಗೋ ಮ್ಯಾನೇಜ್ ಮಾಡಿ ಒಂದು ಫ್ರಾಕ್ ತಂದುಕೊಡುತ್ತಿದ್ದರು. ಊಟಕ್ಕೆ ನನ್ನ ಫೇವರೆಟ್ ಶಾವಿಗೆ ಪಾಯಸ, ಕೆನೆ ಮೊಸರನ್ನ.... ಇಷ್ಟೇ ನನ್ನ ಬರ್ತ್‌ಡೇ ಸೆಲೆಬ್ರೇಶನ್ಸ್! ಆದರೆ ಆ ವರುಷ ಅಪ್ಪ ಸೈಕಲ್ ಪ್ರಾಮಿಸ್ ಮಾಡಿದ್ರಲ್ಲ!
ನಾನು ಕಾಯುತ್ತಾ ಕುಳಿತೆ. ಗಂಟೆ ನಾಲ್ಕರಿಂದ ಆರಾಯಿತು ಅಪ್ಪನ ಸುಳಿವಿಲ್ಲ. ನಾನು ಕಾದು ಕಾದು 9 ಗಂಟೆಗೆ ಅಳುತ್ತಲೇ ನಿದ್ರೆಗೆ ಜಾರಿದೆ. ಅಪ್ಪ ಎಷ್ಟು ಹೊತ್ತಿಗೆ ಬಂದರೋ ನನಗೆ ಗೊತ್ತಿಲ್ಲ. ಬೆಳಗ್ಗೆ ಎದ್ದು ಪೆಚ್ಚು ಮೋರೆ ಹಾಕಿಕೊಂಡು ನನ್ನನ್ನು ಎಬ್ಬಿಸಲು ಬಂದರು. ಹದಿಮೂರು ವರ್ಷದ ನನಗೆ ಅದೇನು ಅರ್ಥವಾಯಿತೋ “ಅಪ್ಪ, ನಿನ್ನೆ ಶಾಲೆ ಯಲ್ಲಿ ನನ್ನ ಫ್ರೆಂಡ್ ಸೈಕಲ್ ಇಂದ ಬಿದ್ದು ತುಂಬಾ ಪೆಟ್ಟು ಮಾಡಿಕೊಂಡಿದ್ದಾಳೆ, ಒಳ್ಳೇ ದಾಯ್ತು ನೀವು ನನಗೆ ಸೈಕಲ್ ಕೊಡಿಸಿಲ್ಲ. ದೊಡ್ಡವಳಾದ ಮೇಲೆ ಒಂದೇ ಸಲ ಸುಜುಕಿ ಬೈಕ್ ಕೊಡಿಸಿ" ಎಂದು ತಬ್ಬಿಕೊಂಡೆ. ಅಪ್ಪ ಕಣ್ಣೀರಾದರು.
ಾವು ಪ್ರತಿಯೊಂದನ್ನೂ ಸಂಭ್ರಮಿಸುವುದನ್ನು ನಮ್ಮ ಮನೆಯಲ್ಲಿ ಕಲಿಸಿದ್ದಾರೆ. ಅಪ್ಪ-ಅಮ್ಮ ಎಂದಿಗೂ ದುಡ್ಡಿನ ಅಹಂ ನಮ್ಮ ತಲೆಗೆ ಹತ್ತುವಂತೆ ಮಾಡಿಲ್ಲ. ಆ ಬಡತನದ ದಿನಗಳಲ್ಲಿ ಮೂರು ವರ್ಷಗಳಾದರೂ ಅದೇ ಯೂನಿಫಾರ್ಮ್ ಹಾಕಿಕೊಂಡು ಹೋಗು ತ್ತಿದ್ದ ಉದಾಹರಣೆಗಳಿವೆ.
ನನ್ನ ವೇ ಸೈಜ್ ಹೆಚ್ಚಾಗಿ, ಆ ಬೆಲ್ಟ ಇನ್ನು ನನ್ನ ಸೊಂಟಕ್ಕೆ ಹಿಡಿಸುವುದಿಲ್ಲ, ಪಿನ್ನು ಹಾಕಿ ಮ್ಯಾನೇಜ್ ಮಾಡಲು ಇನ್ನು ಅಸಾಧ್ಯ ಅಂದಾಗ ಅಮ್ಮ ಅದೇನೋ ಮಾಡಿ ಹೊಸ ಯೂನಿಫಾರ್ಮ್ ಕೊಡಿಸುತ್ತಿದ್ದರು. ಒಮ್ಮೆ ಒಣಕಲ್ ಜಾತ್ರೆಗೆ ಕರೆದೊಯ್ದು, ಇಪ್ಪತ್ತು ರುಪಾಯಿಯ ಮಣಿಸರವನ್ನು ಕೊಡಿಸಿದ್ದರು. ಅದನ್ನು ಸಂಭ್ರಮದಿಂದ ಹಾಕಿಕೊಂಡು ಆಟವಾಡುತ್ತಿದ್ದ ನನ್ನನ್ನು ನಿಲ್ಲಿಸಿ ನಮ್ಮ ಬಾಡಿಗೆ ಮನೆಯ ಓನರ್ ಕೇಳಿದರು- “ಯಾರು ಕೊಟ್ಟರು?" ಅಂತ.
“ಅಮ್ಮ" ಅಂದೆ. ಅದಕ್ಕೆ ಅವರು “ಈ ಶೋಕಿಗಳಿಗೆ ಏನೂ ಕಡಿಮೆ ಇಲ್ಲ, ಬಾಡಿಗೆ ಮಾತ್ರ ಕೊಡುವ ಯೋಗ್ಯತೆ ಇಲ್ಲ" ಅಂದುಬಿಟ್ಟರು. ಅಂದಿನಿಂದ ನಾನು ಹಾಗೆಲ್ಲ ಸರಗಳನ್ನು ಹಾಕುವುದನ್ನು ಬಿಟ್ಟೆ. ಅಮ್ಮ ಸುಮಾರು ವರ್ಷ ಜಾತ್ರೆಗಳಿಂದ ಕೇವಲ ಬತ್ತಾಸು, ಮಿಠಾಯಿ ತರಲು ಪ್ರಾರಂಭಿಸಿದರು. ಹೀಗೆ ಬಡತನದ ದಿನಗಳನ್ನ ಕಳೆದ ನನಗೆ, ನಮ್ಮ ಮನೆಯಲ್ಲಿ ಎಲ್ಲರಿಗೂ ಬರ್ತ್‌ಡೇ ಸೆಲೆಬ್ರೇಶನ್ ಅಂತ ಶುರುವಾಗಿದ್ದು ಅಪ್ಪ ‘ಹಾಯ್..’ ಶುರುಮಾಡಿ ಅದರಲ್ಲಿ ಸ್ವಲ್ಪ ಹಣ ನೋಡತೊಡಗಿದ ಮೇಲೆಯೇ.
ಒಮ್ಮೊಮ್ಮೆ ಅನಿಸುತ್ತದೆ, ಅಪ್ಪನ ಬರ್ತ್‌ಡೇಗಳನ್ನು ಅಜ್ಜಿ ಹೇಗೆ ಸೆಲೆಬ್ರೇಟ್ ಮಾಡು ತ್ತಿದ್ದರು ಎಂದು ನಾನೆಂದಿಗೂ ಕೇಳಲೇ ಇಲ್ಲವಲ್ಲ ಅಂತ! ಆದರೆ ಅವರ ಪ್ರತಿ ಹುಟ್ಟು ಹಬ್ಬಕ್ಕೂ ನಾನು ಒಂದು ಪತ್ರ ಬರೆದುಕೊಡುತ್ತಿದ್ದೆ.
ಅವರು ತುಂಬಾ ಖುಷಿಪಟ್ಟು ಜೋಪಾನವಾಗಿ ಅದನ್ನು ಎತ್ತಿಟ್ಟುಕೊಳ್ಳುತ್ತಿದ್ದರು ನನ್ನ ಮೊದಲ ಸಂಬಳ ಬಂದಾಗ ಅದೂ ‘ಹಾಯ್..’ ಆಫೀಸ್‌ನಲ್ಲಿ, ಅಪ್ಪನೇ ಒಂದು ಎನ್ವಲಪ್‌ಗೆ ಹಾಕಿ 1200 ರುಪಾಯಿಗಳನ್ನು ಕೊಟ್ಟಿದ್ದರು. ಆಗ ಅಪ್ಪನಿಗೆ ಒಂದು ಶರ್ಟ್ ಕೊಡಿಸಿದ್ದ ನೆನಪು. ನಾನು ‘ಹಾಯ್’ನ ಎಂಪ್ಲಾಯಿ ಆಗಿz, ಕಾರಣ ನಾನು ಸೆಕೆಂಡ್ ಪಿಯುಸಿ ಫೇಲ್ ಆಗಿದ್ದೆ.
ಫಿಸಿಕ್ಸ್ ಅರ್ಥವಾಗದ ದಿನಗಳವು. “ಅಪ್ಪ ನಾನು ಫೇಲ್ ಆಗಿದ್ದೀನಿ, ಐ ಯಾಮ್ ಸೋ ಸಾರಿ" ಎಂದು ಬಿಕ್ಕಳಿಸಿ ಅಳುತ್ತಿದ್ದ ನನಗೆ “ಮಗಳೇ ನಾನು ಟೆಂತ್ ಫೇಲ್, ನೀನು ಎರಡು ವರ್ಷ ಹೆಚ್ಚು ಓದಿದ್ದೀಯಾ. ಡೋಂಟ್ ವರಿ, ನಾಳೆಯಿಂದ ‘ಹಾಯ್’ ಆಫೀಸಿಗೆ ಬಾ"
ಅಂದರು.
ನಾನು ‘ಹಾಯ್’ ಆಫೀಸ್‌ನಲ್ಲಿ ಯಶೋಮತಿ ಹತ್ತಿರ ಕುಳಿತು ಡಿಟಿಪಿ ಕಲಿತು, ಪೇಜ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡೆ. ನಿವೇದಿತಾ ಆಂಟಿ ಹತ್ತಿರ ಇಂಡೆಂಟ್ ಹಾಕುವು ದನ್ನು ಕಲಿತೆ. ಅಕೌಂಟ್ ಹೇಗೆ ಮ್ಯಾನೇಜ್ ಮಾಡುವುದು? ಪೆಟ್ಟಿ ಕ್ಯಾಶ್ ಎಂದರೇನು? ಅನ್ನುವುದನ್ನು ಪೂರ್ಣಿಮಾ ಹತ್ತಿರ ಕಲಿತೆ. ಸೀನಣ್ಣನೊಂದಿಗೆ ಗೀತಾಂಜಲಿ ಪ್ರಿಂಟರ್ಸ್‌ಗೆ ಹೋಗಿ ಪೇಪರ್ ಹೇಗೆ ಪ್ರಿಂಟ್ ಆಗುತ್ತದೆ ಎಂದು ನೋಡಿದೆ.
ಎಚ್.ಡಿ ಸುನಿತಾ, ಜೋಗಿ ಅಂಕಲ್, ಉದಯ್ ಮರಕಿಣಿ, ಆಲೂರು ಅಂಕಲ್, ವಿದ್ಯಾ ಆಂಟಿ ಹೀಗೆ ಇನ್ನೂ ಹಲವು ಬರಹಗಾರರ ಒಡನಾಟದೊಂದಿಗೆ ಜರ್ನಲಿಸಂನ ಗರಡಿಗೆ ಎಂಟ್ರಿ ಕೊಟ್ಟೇಬಿಟ್ಟಿದ್ದೆ. ಹೀಗೆ ಚೂರುಪಾರು ಪತ್ರಿಕೋದ್ಯಮದ ಪರಿಚಯವಾಗುತ್ತಿದ್ದಂತೆ ನನ್ನಲ್ಲಿ ಅದೆಲ್ಲಿಂದಲೋ ಒಂದು ರೀತಿಯ ಆತ್ಮವಿಶ್ವಾಸ ಮೂಡಲು ಪ್ರಾರಂಭವಾಯಿತು. ನೋಡುನೋಡುತ್ತಾ ನಾನು ಆಯ್ಕೆ ಮಾಡಿಕೊಂಡಿದ್ದ ಜರ್ನಲಿಸಂ, ಇಂಗ್ಲಿಷ್ ಲಿಟರೇ ಚರ್, ಸೈಕಾಲಜಿ ಸಬ್ಜೆಕ್ಟ್ ನನಗೆ ಬಹಳ ಇಂಟರೆಸ್ಟಿಂಗ್ ಅನ್ನಿಸೋಕೆ ಶುರುವಾಯಿತು.
ಅಷ್ಟರಲ್ಲಿ ಅಪ್ಪನ ಕಪ್ಪು ಸುಂದರಿಯೂ ಪ್ರೌಢತ್ವಕ್ಕೆ ಕಾಲಿಟ್ಟಿದ್ದಳು. ಚೆನ್ನೈನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ನನ್ನ ಸ್ನಾತಕೋತ್ತರ ವ್ಯಾಸಂಗ ಶುರುಮಾಡಿದೆ. ನನಗೆ ಇನ್ನೂ ನೆನಪಿದೆ, ನಾನು ಬರೆದ ಅಸೈನ್‌ಮೆಂಟ್‌ಗಳನ್ನು ಅಲ್ಲಿಂದ ಇ-ಮೇಲ್‌ನಲ್ಲಿ ಕಳಿಸಿದರೆ ಪಾಪ ಅಪ್ಪ ರಾತ್ರಿಯೆಲ್ಲ ಎದ್ದು ಕುಳಿತು ಎಡಿಟ್ ಮಾಡಿ ವಾಪಸು ಕಳುಹಿಸು ತ್ತಿದ್ದರು.
ಬರ್ತಾ ಬರ್ತಾ ನನ್ನ ಇಂಗ್ಲಿಷ್ ಬರವಣಿಗೆಗಳು ಚೊಕ್ಕವಾಗಿ ಬರತೊಡಗಿದ್ದವು. ಅಸೈನ್ ಮೆಂಟ್‌ಗಳಲ್ಲಿ ‘ಎ ಪ್ಲಸ್’ ಬರಲು ಶುರುವಾಗಿದ್ದವು. ಅಪ್ಪ ಹಿರಿಹಿರಿ ಹಿಗ್ಗಿದರು. ಕಾಲೇಜ್ ಮುಗಿಯುತ್ತಿದ್ದಂತೆ ‘ವಿಜಯ ಟೈಮ್ಸ’ನಲ್ಲಿ ಕೆಲಸ. ರೋಜಾ ಕಾಂಡತ್ ನನಗೆ ಚೀಫ್ ರಿಪೋರ್ಟರ್. “ಯಾವ ಬೀಟ್ ಮಾಡ್ತೀಯಾ?" ಎಂದು ಕೇಳಿದರು.
ನಾನು ಒಂದು ಕ್ಷಣವೂ ಯೋಚಿಸದೆ “ಕ್ರೈಂ" ಎಂದಿದ್ದೆ. ಅವರು ಅರ್ಥವಾಯಿತು ಎನ್ನುವ ಹಾಗೆ ನಕ್ಕು ನನಗೆ ಕ್ರೈಂ ಬೀಟ್ ಅಸೈನ್ ಮಾಡಿದರು. ನನ್ನ ಕ್ರೈಮ್ ರಿಪೋರ್ಟಿಂಗ್‌ನ ಎಕ್ಸ್‌ಪೀರಿಯೆನ್ಸ್ ಇನ್ನೊಮ್ಮೆ ಬರೆಯುವೆ. ಇವತ್ತು ಹೇಳುವ ವಿಷಯ ಬೇರೇನೋ ಇದೆ. ನನ್ನ ಅಪ್ಪ ಖಳನಾಯಕನು ಕೂಡ ಎಂದು ನಾನು ಹೇಳಿದೆನಲ್ಲ, ಯಾಕೆ ಗೊತ್ತಾ? ನನ್ನ ಜೀವನ ತುಂಬಾ ಕಷ್ಟಕರವಾದಾಗ ಡಿಸಿಷನ್‌ಗಳನ್ನು ಹೇಗೆ ಕಾನಿಡೆಂಟ್ ಆಗಿ ತೆಗೆದುಕೊಳ್ಳ ಬೇಕು ಎಂದು ಹೇಳಿಕೊಟ್ಟವರು ಅವರೇ.
ಆದರೆ ಅದೇ ಅಪ್ಪ ನನ್ನಲ್ಲಿ ಬಹಳಷ್ಟು ಇನ್‌ಸೆಕ್ಯುರಿಟೀಸ್ ಅನ್ನೂ ಹುಟ್ಟು ಹಾಕಿದರು. ಪಾಪ, ಅವರೇನೂ ಬೇಕಂತಲೇ ಮಾಡಿರಲಿಲ್ಲವೇನೋ? ಆದರೆ ನನ್ನೊಳಗೆ ಅವು ಗಟ್ಟಿ ಯಾಗಿ ಮನೆಮಾಡಿಬಿಟ್ಟಿವೆ! ಮೊದಲನೆಯದು, ನಾನು ಕನ್ನಡದಲ್ಲಿ ಬರೆದರೆ ಎಲ್ಲಿ ಅಪ್ಪ “ಛೀ .... ಏನೇ ಇದು ಹೀಗೆ ಬರೆದಿದ್ದೀಯಾ?" ಎಂದು ಅಂದುಬಿಡುತ್ತಾರೇನೋ ಎಂಬ ಭಯದಿಂದ ನಾನು ಕನ್ನಡದಂದೂ ಬರೆಯಲೇ ಇಲ್ಲ. ಇದು ನನ್ನ ಎರಡನೆಯದೋ ಅಥವಾ ಮೂರನೆಯದೋ ಪ್ರಯತ್ನ ಇರಬೇಕು ಅಷ್ಟೇ!
ಮತ್ತೆ, ನನಗೆ ಸಂಗೀತವೆಂದರೆ ಪ್ರಾಣ. ಕಿಕ್ಕೇರಿ ಕೃಷ್ಣಮೂರ್ತಿಯವರ ‘ಆದರ್ಶ ಸುಗಮ ಸಂಗೀತ ಶಾಲೆ’ಯಲ್ಲಿ ಅಪ್ಪನಿಗೆ ಹೇಳದೆ ಹೋಗಿ ಸಂಗೀತ ಕಲಿಯುತ್ತಿದ್ದೆ. ಒಮ್ಮೆ ನಾವೆಲ್ಲ, ‘ಹಾಯ್’ ಕಚೇರಿಯ ಸಿಬ್ಬಂದಿಯೊಂದಿಗೆ ಗೋಕರ್ಣದ ಓಂ ಬೀಚ್‌ಗೆ ಹೋಗಿದ್ದೆವು. ಅಲ್ಲಿ ಎಲ್ಲರೂ ಹಾಡುತ್ತಿದ್ದರು. ನಿವೇದಿತ ಆಂಟಿ ಮತ್ತು ಸ್ವರ್ಣ, ಆಫೀಸ್‌ನಲ್ಲಿ ನಾನು ಗುನುಗು ತ್ತಿರುವುದನ್ನು ಕೇಳಿದವರಾಗಿದ್ದರಿಂದ “ಚೇತು ನೀನು ಹಾಡಲೇಬೇಕು" ಎಂದು ಹಠ ಹಿಡಿದರು. ನಾನು ಇನ್ನೇನು ಒಲ್ಲದ ಮನಸ್ಸಿನಿಂದಲೇ ಹೇಗೋ ಹಾಡುವುದಕ್ಕೆ ಅಂತ ಸಜ್ಜಾಗುವಷ್ಟರಲ್ಲಿ ಅಪ್ಪ “ಚೇತು, ಅಪಸ್ವರ ಮಾತ್ರ ಹಾಡಬೇಡ" ಅಂದುಬಿಟ್ಟರು.
ಅದೇ ಕೊನೆ! ನನ್ನ ಸಂಗೀತ ನಮ್ಮ ಮನೆಯ ಸ್ನಾನದ ಕೋಣೆಯ ಗೋಡೆಗಳಿಗೆ ಮಾತ್ರ ಸೀಮಿತವಾಯಿತು. ಆದರೆ ಅದು ಅವರ ‘ಪ-ಕ್ಷನಿ ಗುಣ’ವನ್ನು ಸೂಚಿಸುತ್ತದೆ ಎಂಬುದು ನನಗೆ ತುಂಬಾ ದಿನಗಳ ನಂತರ ಅವರು ‘ಎಂದೂ
ಮರೆಯದ ಹಾಡು’ ಕಾರ್ಯಕ್ರಮ ಒಂದರಲ್ಲಿ “ಈ ಆಪಸ್ವರದಲ್ಲಿ ಯಾರಾದರೂ ಹಾಡಿ ಬಿಟ್ಟರೆ ಎನ್ನುವ ಭಯ ಸದಾ ಕಾಡುತ್ತದೆ" ಎಂದು ಹೇಳಿದಾಗ ಅರಿವಾಗಿತ್ತು. “ಅಪ್ಪನ ಹೆಸರನ್ನು ಹೇಳಿಕೊಂಡು ಜರ್ನಲಿಸ್ಟ್ ಆದಳು" ಅಂತ ಅಂದುಬಿಡುತ್ತಾರೆ ಜನ ಎಂದು ಹೆದರಿ ಅಪ್ಪನ ಕ್ರೈಂ ಡೈರಿಯ ಗರಡಿಯಿಂದ ಹೊರಬಂದವಳು ಎಂದಿಗೂ ಹಿಂತಿರುಗಿ ನೋಡಲೇ ಇಲ್ಲ. ಹಲವಾರು ಬಾರಿ ಅಪ್ಪ ನನಗೆ ಕರೆ ಮಾಡಿ “ಮಗಳೇ ನಿನ್ನ ಇಂಗ್ಲಿಷ್ ಎಷ್ಟು ಚಂದ! ಯು ರೈಟ್ ಸೋ ವೆಲ್!
ಐ ಯಾಮ್ ವೆರಿ ಪ್ರೌಡ್ ಆಫ್ ಯು!" ಎಂದು ಹೇಳಿದ್ದಿದೆ. ನನಗೆ ಅಷ್ಟೇ ಸಾಕಾಗುತ್ತಿತ್ತು. ನನ್ನ ಪ್ರತಿಯೊಂದು ಹಠವೂ ಅವರು ನನಗೆ ಕೊಟ್ಟ ಆ ಇನ್‌ಸೆಕ್ಯೂರ್ಡ್ ಫೀಲಿಂಗ್ಸ್ ನ ಕೊಡುಗೆ. ಒಬ್ಬ ಶಿಲ್ಪಿ ಹೇಗೆ ಕಲ್ಲನ್ನು ಕೆತ್ತಿ ಕೆತ್ತಿ ಶಿಲ್ಪವಾಗಿಸುತ್ತಾನೋ, ಹಾಗೆ ನನಗೆ ಗೊತ್ತಿಲ್ಲದೆಯೇ ಅಪ್ಪ ನನ್ನನ್ನು ಕೆತ್ತಿದ್ದಾರೆ. ಒಂದು ರೀತಿಯ ಇಂಡಿಪೆಂಡೆ, ಏನನ್ನು ಬೇಕಾ ದರೂ ಇಂಡಿಪೆಂಡೆಂಟ್ ಆಗಿ ಸಾಧಿಸಬಬಹುದು ಅನ್ನುವ ಛಲವನ್ನು ತುಂಬಿದ್ದಾರೆ.
ನನಗೆ ಈಗಲೂ ಪೇಚಾಟ ಗೊತ್ತಿಲ್ಲ, ‘ವಾಟ್ ನೆಕ್ಸ್ಟ್?’ ಎಂದು ನನ್ನನ್ನು ನಾನು ಪ್ರಶ್ನಿಸಿ ಕೊಂಡು ಮುನ್ನುಗುವ ತಾಕತ್ತನ್ನು ಹೇಳಿಕೊಟ್ಟಿದ್ದಾರೆ. “ಪ್ರತಿ ಸಮಸ್ಯೆಗೂ ಒಂದು ಪರಿಹಾರ ವಿರುತ್ತೆ ಮಗಳೇ, ತಾಳ್ಮೆಯಿಂದ ಯೋಚಿಸು ಐ ಅI Sಏಉಉ" ಎಂದು ಸದಾ ಹೇಳುತ್ತಿದ್ದರು ಅಪ್ಪ. ಇಷ್ಟು ಉದ್ದದ ಸಾಲಿನಲ್ಲಿ ಕೊನೆಯ ಮೂರು ಪದವಿದೆಯಲ್ಲ “ ಐ ಅI Sಏಉಉ" ಇದು ನನ್ನನ್ನು ಸದಾ ಹುರಿದುಂಬಿಸಿ ಮುನ್ನುಗುವಂತೆ ಮಾಡುತ್ತದೆ.
ಅಪ್ಪನ ಹೆಸರಿನ ಆಸರೆಯಿಲ್ಲದೆ ಪತ್ರಿಕೋದ್ಯಮದ ಜಗತ್ತಿನಲ್ಲಿ ನನ್ನದೇ ಛಾಪು ಮೂಡಿ ಸುತ್ತಾ 20 ವರ್ಷಗಳನ್ನು ಆಗಲೇ ಕಳೆದಿದ್ದೇನೆ! ಇಂದು ಮಾರ್ಚ್ 15, ಅಪ್ಪನ 67ನೇ ಹುಟ್ಟುಹಬ್ಬ! ಅಪ್ಪನ ಹುಟ್ಟುಹಬ್ಬವೆಂದರೆ ಮನೆಯಲ್ಲಿ ಎಲ್ಲರಿಗೂ ಸಂಭ್ರಮ. ನಮ್ಮ ಮನೆಯ ಪದ್ಧತಿಯಂತೆ ಅಪ್ಪನ ಫೇವರೆಟ್ ಫುಡ್ ಆದ ಶಾವಿಗೆ ಪಾಯಸ, ಮಾವಿನಕಾಯಿ ಬಿಸಿ ಉಪ್ಪಿನಕಾಯಿ, ಅನ್ನ ತಿಳಿಸಾರು ರೆಡಿಯಾಗಿರುತ್ತೆ.
ಆಫೀಸ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ತಲೆಗೆ ಸ್ವಲ್ಪ ಎಣ್ಣೆ ಹಚ್ಚಿ ಬಿಸಿಬಿಸಿ ನೀರಿನಲ್ಲಿ ಮಿಂದು ಅಮ್ಮ ಕೊಡಿಸುತ್ತಿದ್ದ ಟೀ-ಶರ್ಟ್ ಹಾಕಿಕೊಂಡು ಚೇಂಬರ್‌ನ ಹೊರ ಗಡೆ ಇದ್ದ ಟೇಬಲ್ ಹತ್ತಿರ ಬಂದು ಕುಳಿತರೆ, ನಮ್ಮ ‘ಹಾಯ್’ನ ಸಿಬ್ಬಂದಿ ವರ್ಗದವರಿಗೆ ಏನೋ ಸಂಭ್ರಮ. ಒಂದು ವಿಭಿನ್ನವಾದ ಕೇಕ್ ತರಿಸಿ, ಅವರ ಫೋಟೋಗಳನ್ನೆಲ್ಲ ಆಫೀಸಿನ ಸುತ್ತಲೂ ಅಂಟಿಸಿ ಹೆಣ್ಣುಮಕ್ಕಳೆಲ್ಲ ಅಪ್ಪನಿಗೆ ಆರತಿ ಮಾಡಿ, ಅಮ್ಮ ಕಳುಹಿಸಿದ ಹೋಳಿಗೆಯೋ, ಪಾಯಸವೋ ಬಾಯಿಗಿಟ್ಟು, ಒಂದಿಷ್ಟು ಮಾತು, ಹರಟೆ ಹೊಡೆದು ಹುಟ್ಟುಹಬ್ಬವನ್ನ ಆಚರಿಸುತ್ತಿದ್ದೆವು.
ಅಪ್ಪ ಇಲ್ಲದೆ ಈ ನಾಲ್ಕು ವರ್ಷಗಳ ಮಾರ್ಚ್ 15 ತೀರಾ ನೀರಸ. ಅಮ್ಮ ಎಷ್ಟೇ ಪ್ರಯತ್ನ ಪಟ್ಟರೂ ಅವರ ದುಗುಡ, ಏನೋ ಒಂದು ತರಹದ ಆತಂಕ ಮುಖದಲ್ಲಿ ಕಂಡೇಬಿಡುತ್ತದೆ. ನಾನು, ಬಾನಿ, ಕರ್ಣ ಕಳೆದ ಮೂರು ವರ್ಷಗಳಿಂದ ಅಪ್ಪನ ಹುಟ್ಟಿದ ದಿನವನ್ನು ಹಬ್ಬ ದಂತೆಯೇ ಆಚರಿಸಬೇಕೆಂದು ತೀರ್ಮಾನಿಸಿ, ಅಪ್ಪನ ಹೆಸರಿನಲ್ಲಿ ಒಂದು ಮ್ಯೂಸಿಕಲ್ ಈವ್ ನಿಂಗ್ ಏರ್ಪಾಟು ಮಾಡಿಕೊಂಡು ಬರುತ್ತಿದ್ದೇವೆ.
ರಾಘವೇಂದ್ರ ಕಾಂಚನ್, ರಾಮಚಂದ್ರ ಹಡಪದ್, ಜೋಗಿ ಇವರೆಲ್ಲರ ಪರಮಪದ ಟೀಮ್‌ನವರು ನಮ್ಮೊಂದಿಗಿದ್ದಾರೆ. ಈ ವರ್ಷ ಅಪ್ಪನ ಫೇವರೆಟ್ ಹಾಡುಗಳ ಜೋಳಿಗೆ ಯೊಂದಿಗೆ ಬರಲು ತಯಾರಾಗಿದ್ದಾರೆ. ಏಪ್ರಿಲ್ ನಾಲ್ಕರಂದು ಖೊಡೆಸ್ ಸಭಾಂಗಣದಲ್ಲಿ ಅಪ್ಪನ ‘ಖಾಸ್‌ಗೀತ್’ಗಳನ್ನು ಹೊತ್ತು ತರಲಿದ್ದೇವೆ. ಅ ಸ್ವರ್ಗದಲ್ಲಿ ಅಪ್ಪ “ಚೀಯರ್ಸ್" ಅನ್ನುತ್ತಿರುವುದು ಕೇಳಿಸುತ್ತಿದೆ.
ಅಪ್ಪಾ, ‘ವಿಶ್ ಯು ಹ್ಯಾಪಿ ಬರ್ತ್‌ಡೇ’... ನಮ್ಮೊಂದಿಗೆ ನೀವು ಎಂದೆಂದೂ ಜೀವಂತ. ನಿಮ್ಮ ಆಸೆಯ ತೇರನ್ನು ನಾವು ಮೂರೂ ಜನ ಮಕ್ಕಳು ಎಳೆಯುತ್ತಿದ್ದೇವೆ. ನಿಮ್ಮ ಕನಸಿನ ಅರಮನೆಯನ್ನು ಆಗಲೇ ಹೊಕ್ಕಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮತ್ತು ನಿಮ್ಮ ಓದುಗ ದೊರೆಗಳ ಮೇಲೆ ಸದಾ ಇರಲಿ.
ನಿಮ್ಮ ಪ್ರೀತಿಯ
ಚಿನ್ನಿ (ಚೇತು)