ಶ್ವೇತಪತ್ರ
shwethabc@gmail.com
ಇದು ನಮ್ಮ ಬದುಕು, ಹಾಗಾಗಿ ಅದಕ್ಕೆ ಅರ್ಥ ತುಂಬುವವರು ನಾವೇ ಆಗಿರಬೇಕು. ಹಿಮಾಲಯ ಪರ್ವತವು ಬದುಕಿನ ಅರ್ಥವನ್ನು ತುಂಬಲು ನಮಗೆ ಸಹಾಯ ಮಾಡುವುದಿಲ್ಲ. ನಮ್ಮ ಹೊರತಾಗಿ ಬೇರಾರೂ ಇದರ ಸಹಾಯಕ್ಕೆ ಬರುವುದಿಲ್ಲ. ಬದುಕು ನಮ್ಮದಾಗಿ ರುವುದರಿಂದ ಅದು ನಮ್ಮ ಪ್ರವೇಶ ಕ್ಕಷ್ಟೇ ಸೀಮಿತವಾಗಿರುತ್ತದೆ. ಅದರೊಳಗೆ ಜೀವಿಸುವುದಷ್ಟೇ ನಮಗೆ ಗೋಚರಿಸುವ ರಹಸ್ಯವಾಗಿರು ತ್ತದೆ.
ಅರೆ! ನಾವೆಲ್ಲ ಎಂಥ ವೇಗದ ಹಾದಿಯಲ್ಲಿ ಬದುಕಿ ಬಿಟ್ಟಿದ್ದೇವೆಂದರೆ ನಮ್ಮ ಓಟದ ಹಾದಿ ಒಳ್ಳೆಯದಾ ಕೆಟ್ಟದ್ದಾ? ಎಂದು ಯೋಚಿಸಲೂ ವ್ಯವಧಾನವೇ
ಇಲ್ಲದಂತಾಗಿದೆ. ಈ ಓಟದಲ್ಲಿ ಬೇಕೆನಿಸಿದ್ದು, ಬೇಡದ್ದು ತನ್ನ ಪಾಡಿಗೆ ತಾನು ಬದುಕಿನ ಜೋಳಿಗೆಗೆ ಬಂದು ಸೇರಿಬಿಟ್ಟಿರುತ್ತದೆ. ಮುಂದೆಂದೋ ಒಂದು ದಿನ, ‘ಅರೆ! ಮನುಷ್ಯನಾಗಿ ನಾನೆಷ್ಟು ಬೆಳೆದೆ?’ ಎಂದು ಯೋಚಿಸಿದರೆ ಅಲ್ಲೊಂದು ನಿಟ್ಟುಸಿರು, ಖಾಲಿತನ ಹಾಗೂ ಬರೀ ಪ್ರಶ್ನೆಗಳೇ ಮೂಡುತ್ತವೆ. ಉತ್ತರ ಹೊಳೆಯದಿದ್ದರೂ ಬದುಕಿಗೆ ಅರ್ಥ ಮತ್ತು ಉದ್ದೇಶವನ್ನು ತುಂಬುವ ಪಯಣದ ಹುಡುಕಾಟವಂತೂ ನಡೆದೇ ಇರುತ್ತದೆ.
ನಮ್ಮೆಲ್ಲರ ದೊಡ್ಡ ಸಮಸ್ಯೆಯೇ ಇದು. ಈ ಹೊತ್ತನ್ನು ಬಿಟ್ಟು ಕಾಣದ ನಾಳೆಗಳೆಡೆಗೆ ಇಣುಕುತ್ತಾ, ಅಳಿಸಿಹೋದ ನಿನ್ನೆಗಳ ಬಗ್ಗೆ ಚಿಂತಿಸುತ್ತಾ ಕಳೆದು ಹೋಗುವುದು. ಚೌಕಟ್ಟಿ ನಾಚೆ ನಾವು ನೋಡದಿರುವಂತೆ ನಮ್ಮನ್ನು ಕಟ್ಟಿ ಹಾಕುವುದು ನಮ್ಮ ಈ ಯೋಚನಾ ಪ್ರಕ್ರಿಯೆಗಳೇ. ನಾವೆಲ್ಲ ಈ ಚೌಕಟ್ಟನ್ನು ದಾಟಿ ಹೊರ ನಡೆಯಬೇಕಿದೆ. ಏಕೆ ಗೊತ್ತೇ? ಆಲೋಚನೆ ಎಂಬ ಬಳಕೆಯನ್ನು ಅತಿಯಾಗಿ ಮುಂದುವರಿಸಿಕೊಂಡು ಹೋದರೆ ಮೈ ಮನಸ್ಸುಗಳು ಬಳಲುತ್ತವೆ.
ಹಾಗಾಗಿ ದೃಷ್ಟಿಕೋನಗಳನ್ನು ಬದಲಾಯಿಸಬೇಕಿದೆ. ಆಗ ಯೋಚನೆಯ ಸತ್ಯಾಸತ್ಯತೆಗಳು ಬದಲಾಗುತ್ತವೆ. ಖಂಡಿತವಾಗಿಯೂ ನಮ್ಮೆಲ್ಲರದ್ದು ಇಂದು ಓಟದ ಬದುಕು. ಇಲ್ಲಿ ನಮ್ಮನ್ನು ಆಳುತ್ತಿರುವುದು ಪ್ರಗತಿದಾಯಕ ಮನಸ್ಥಿತಿ. ಇದೊಂಥರ ಟ್ರೈನಿನೊಳಗಡೆ ಕುಳಿತು ಹಳಿಗಳ ಮೇಲಲ್ಲ ಹಳಿಗಳ ಕೆಳಗೆ ಚಲಿಸುವ ಅನುಭವ. ಹಿಂತಿರುಗಲಾಗುವುದಿಲ್ಲ, ಕೆಳಗಿಳಿಯುವುದಂತೂ ಮತ್ತೂ ದೂರದ ಮಾತು. ಮುಂದಿನ ನಿಲ್ದಾಣ ಯಾವುದಂತ ಟ್ರೈನಿನ ಆಚೆ
ತಲೆ ಹಾಕಿ ನೋಡುತ್ತಾ ಸಾಗುವುದಷ್ಟೇ ಕೆಲಸ. ಇದರ ಮಧ್ಯೆ ಬಂದೆರಗುವ ಹಲವಾರು ಸಂಗತಿಗಳನ್ನು ‘ಇದು ಒಳ್ಳೆಯದು, ಇದು ಕೆಟ್ಟದ್ದು’ ಎಂದು ಗುರುತು ಹಾಕುತ್ತಾ ನೋಯುವುದು ಬೇರೆ.
ನಾವು ಬೆಳೆದಿರುವುದು, ಕಲಿತಿರುವುದು ಹಾಗೇ ಅಲ್ಲವೇ? ಬದುಕಲ್ಲಿ ಮುಂದುವರಿಯ ಬೇಕೆಂದರೆ ನಮ್ಮ ಕಲಿಕೆಯ ಪ್ರಕಾರ ಬಾಳಲೇಬೇಕು. ಇಂದಿನ ನಮ್ಮ ಸಮಸ್ಯೆಗಳು, ಹಿನ್ನಡೆಗಳು ನಾಳಿನ ಆಯ್ಕೆಯ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಇವತ್ತು ನಾವು ಬೇಯಲೇಬೇಕು. ಹೀಗೆ ಗೆರೆ ಹಾಕಿಯೇ ಜಗತ್ತು
ನಮ್ಮನ್ನು ಬೆಳೆಸುತ್ತಿರುವುದು. ಈ ಎಲ್ಲಾ ಕೊನೆಗಳಾಚೆ, ಸಮಯದ ಆಚೆ, ರೂಪದಾಚೆಗೂ ಬದುಕಿದೆ. ಅಲ್ಲಿ ನಮ್ಮನ್ನು ನಾವು ಕಂಡುಕೊಳ್ಳಬೇಕಿದೆ. ಆದರೆ ಬದುಕೆಂದ ರೇನು? ಎನ್ನುವ ಪ್ರಶ್ನೆಗೆ ಲೈಟ್ ಕಂಬದಲ್ಲಿ ಹಾಯ್ದ ವೈರುಗಳತ್ತ ತೋರಿಸಿಬಹುದೇನೋ? ಬಿಡಿಸಿದಷ್ಟೂ ಕಗ್ಗಂಟಾಗುವ ಗೋಜಲದು. ಅರ್ಥವನ್ನು, ಅರ್ಥೈಸುವ ಪ್ರಯತ್ನವನ್ನು ಮರೆತು ಜಸ್ಟ್ ಬದುಕೋಣ.
ಆಗ ಗೊತ್ತಿಲ್ಲದೆ ಬದುಕಿನ ಅರ್ಥ ಧ್ವನಿಸುತ್ತಾ ಹೋಗುತ್ತದೆ. ಇದೊಂದು ಪೂರ್ಣತೆಯನ್ನು ತುಂಬುವ ಭಾವ. ಇಲ್ಲಿ ಪದಗಳು ಬೇಕಿರುವುದಿಲ್ಲ, ಮೌನವೇ ಮಾತಾಗುತ್ತದೆ. ಬದುಕಿನ ನಿಗೂಢತೆಯನ್ನು ಜೀವಿಸಬೇಕಷ್ಟೇ, ಭೇದಿಸಲು ಹೊರಡಬಾರದು. ನಿಗೂಢತೆ ಹಾಗೆಂದರೇನು? ಅದಕ್ಕೆ ಉತ್ತರ ನಮ್ಮೆಲ್ಲರಿಗೂ ಗೊತ್ತಿದೆ, ಆದರೆ ಅದೇನೆಂದು ವಿವರಿಸಲು ಆಗುವುದಿಲ್ಲ. ಇದೊಂದು ಅದ್ಭುತ ಸಂಗತಿ. ಗೊತ್ತಿಲ್ಲದ ಊರಿನಲ್ಲಿ ಹೆಚ್ಚು ಯೋಚಿಸದೆ ಖುಷಿಯಾಗಿ
ನಡೆಯುವುದು ಅಷ್ಟೇ. ಆಗಲೇ ನಮ್ಮ ಮತ್ತು ಬದುಕಿನ ನಡುವೆ ಒಂದು ಬೆಸುಗೆ ತೆರೆದುಕೊಳ್ಳುತ್ತದೆ. ತೆರೆದುಕೊಳ್ಳುವುದು ಇದೊಂಥರ ಕೊನೆಯಿಲ್ಲದ ಅವ್ಯಕ್ತ ಅನುಭವ. ಅದಕ್ಕೇ ಹೇಳಿದ್ದು ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ಕೊನೆಯಿಲ್ಲ.
ಯೋಚಿಸುವುದನ್ನು ನಿಲ್ಲಿಸೋಣ, ಬದುಕನ್ನು ಜಸ್ಟ್ ಜೀವಿಸೋಣ! ಬದುಕುವುದೆಂದರೆ ಅದನ್ನು ಜೀವಿಸುವುದೆಂದರ್ಥ. ಅದೊಂದು ವಸ್ತುವಲ್ಲ, ಬದಲಿಗೆ ಪ್ರಕ್ರಿಯೆ. ಅಲ್ಲೊಂದು ಜೀವಂತಿಕೆ ಇರಬೇಕು. ಬದುಕುವುದಕ್ಕೆ ಜೀವಕಳೆ ಇರಬೇಕು, ಹರಿವಿರಬೇಕು. ಬದುಕಿನ ಅರ್ಥವನ್ನು ಯಾವುದೋ
ಸಿದ್ಧಾಂತ, ಅಧ್ಯಾತ್ಮ, ಧರ್ಮಶಾಸಗಳಲ್ಲಿ ಹುಡುಕುವುದಲ್ಲ. ಆಗ ಬದುಕು ಮತ್ತು ಅದರ ಅರ್ಥ ಎರಡನ್ನು ಕಳೆದುಕೊಂಡು ಬಿಡುತ್ತೇವೆ. ಬದುಕು ನಮಗಾಗಿ ಎಲ್ಲೋ ಕಾಯುತ್ತಿರುವುದಲ್ಲ, ಅದು ನಮ್ಮೊಳಗೆ ಸಂಭ್ರಮಿಸುತ್ತಿರುವುದು.
ಅದು ಭವಿಷ್ಯದ ಗುರಿಯಲ್ಲ, ಅದರತ್ತ ನಾವು ಹೋಗಿ ತಲುಪುವುದಕ್ಕೆ. ಅದು ಇಲ್ಲೇ ನಮ್ಮಲ್ಲೇ, ನಮ್ಮೊಳಗೆ ಇರುವ ಈ ಕ್ಷಣವದು. ನಾವು ಏನೇ ಆಗಿರ ಬಹುದು, ಆದರೆ ಬದುಕಿನ ಅರ್ಥವನ್ನು ಇನ್ನೆಲ್ಲೋ ಹುಡುಕಲು ಹೊರಡುತ್ತೇವೆ. ಶತಮಾನಗಳಿಂದಲೂ ಮನುಷ್ಯ ಮಾಡುತ್ತಾ ಬಂದಿರುವುದು
ಇದನ್ನೇ. ಇವತ್ತು ನಮಗೆಲ್ಲ ಪರಿಕಲ್ಪನೆಗಳು ಮತ್ತು ವಿವರಣೆಗಳಷ್ಟೇ ಮುಖ್ಯವಾಗಿವೆ. ನಿಜವನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದೇವೆ. ನಮ್ಮ ನಡುವೆಯೇ ಇರುವುದು ನಮಗೆ ಬೇಡವಾಗಿದೆ. ಬೇಡದ ತರ್ಕಗಳು, ವಿವರಣೆಗಳತ್ತ ನಾವು ನೋಡುವುದು ಹೆಚ್ಚಾಗಿದೆ. ತರ್ಕವೆಂದಾಗ ಎಲ್ಲೋ ಕೇಳಿದ
ಕಥೆಯೊಂದು ಇಲ್ಲಿ ನೆನಪಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಒಬ್ಬ ಯಶಸ್ವಿ ವ್ಯಕ್ತಿಗೆ ತಾನಾರು? ತನ್ನ ಗುರುತೇನು? ಬದುಕೆಂದರೇನು? ಹೀಗೆ ಅನೇಕ ಮಾನಸಿಕ ಬಿಕ್ಕಟ್ಟುಗಳು ತಲೆದೋರುತ್ತವೆ. ಮಾನಸಿಕ ತಜ್ಞರನ್ನು ಭೇಟಿಯಾಗುತ್ತಾನೆ, ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ.
ಆತನಿಗೆ ಬದುಕಿನ ಅರ್ಥವನ್ನು ವಿವರಿಸುವ ಯಾರೊಬ್ಬರೂ ಸಿಗುವುದಿಲ್ಲ. ಮುಖ್ಯವಾಗಿ ಅವನಿಗೆ ಬದುಕಿನ ಅರ್ಥವನ್ನು ತಿಳಿದುಕೊಳ್ಳಬೇಕಿರುತ್ತದೆ. ಹೀಗಿರಬೇಕಾದರೆ ಬಹಳ ಆದರಣೀಯ, ವಿವೇಕಯುತ ಗುರುವೊಬ್ಬ ಹಿಮಾಲಯದ ತಪ್ಪಲಿನ ರಹಸ್ಯವಾದ ಸ್ಥಳದಲ್ಲಿ ಇರುವುದಾಗಿಯೂ, ಆತನನ್ನು ತಲುಪಬೇಕಾದರೆ ದುರ್ಗಮ ಹಾದಿಯನ್ನು ಸಾಗಬೇಕೆಂದೂ, ಆ ಗುರುವೊಬ್ಬ ಮಾತ್ರ ಬದುಕೆಂದರೇನು? ಅದರ ಅರ್ಥವೇನು? ಬದುಕಲ್ಲಿ ತನ್ನ ಗುರುತೇನು? ಹೀಗೆ ತನ್ನಲ್ಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಅವಮಿಗೆ ಸಾಧ್ಯವೆನ್ನುವುದೂ ತಿಳಿದು ಬರುತ್ತದೆ. ತನ್ನೆಲ್ಲ ಆಸ್ತಿಗಳನ್ನು ಮಾರಿ ಹಿಮಾ ಲಯದತ್ತ ಮುಖ ಮಾಡುತ್ತಾನೆ.
ಗುರುವನ್ನು ಹುಡುಕಲು ಹಿಮಾಲಯದ ತಪ್ಪಲಿನ ಹಳ್ಳಿಗಳಲ್ಲಿ ಎಂಟು ವರ್ಷಗಳ ಕಾಲ ಅಲೆದಾಡುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಕುರಿಗಾಹಿ ಯೊಬ್ಬ ಗುರು ವಾಸಿಸುವ ಜಾಗ ಯಾವುದೆಂದು ಹೇಳಿ ಅಲ್ಲಿಗೆ ಸಾಗುವ ಮಾರ್ಗವನ್ನು ತೋರಿಸಿ ಕೊಡುತ್ತಾನೆ. ಅಲ್ಲಿಂದ ಗುರುವನ್ನು ಹುಡುಕುತ್ತಾ ಸಾಗುವುದು ಮತ್ತೆ ಒಂದು ವರ್ಷ ಹಿಡಿಯುತ್ತದೆ. ಕೊನೆಗೂ ಗುರುವನ್ನು ತಲುಪಲು ಅವನಿಗೆ ಸಾಧ್ಯವಾಗುತ್ತದೆ. ಗುರುವನ್ನು ಕಾಣಲು ಆ ಯಶಸ್ವಿ ವ್ಯಕ್ತಿ
ತನ್ನೆಲ್ಲ ಆಸ್ತಿ-ಅಂತಸ್ತುಗಳನ್ನು ತೊರೆದು ಬಂದಿರುವನೆಂದು ಗೊತ್ತಾಗಿ ಗುರು ಖಂಡಿತವಾಗಿಯೂ ಆತನಿಗೆ ಸಹಾಯ ಮಾಡಲು ಸಿದ್ಧನಾಗುತ್ತಾನೆ.
‘ನನ್ನಿಂದ ನಿನಗೆ ಏನಾಗಬೇಕು ಮಗು?’ ಎಂದು ಗುರು ಕೇಳುತ್ತಾನೆ. ‘ಬದುಕಿನ ಅರ್ಥವೇನು ಎನ್ನುವುದನ್ನು ತಿಳಿದುಕೊಳ್ಳಬೇಕು’ ಎನ್ನುತ್ತಾನೆ ಯಶಸ್ವಿ ವ್ಯಕ್ತಿ. ಇದನ್ನು ಕೇಳಿಸಿಕೊಂಡ ಗುರು ಸ್ವಲ್ಪವೂ ಹಿಂಜರಿಕೆ ಇಲ್ಲದೆ, ‘ಬದುಕು, ಹಾಗೆಂದರೆ ಕೊನೆ ಇರದ ಹರಿವ ನದಿ’ ಎಂದು ಉತರಿಸುತ್ತಾನೆ. ಗುರುವಿನ ಉತ್ತರ ದಿಂದ ಗಾಬರಿ ಮತ್ತು ಅಚ್ಚರಿಗೊಳ್ಳುವ ವ್ಯಕ್ತಿ, ‘ನಿನ್ನನ್ನು ಹುಡುಕುತ್ತಾ ಇಷ್ಟು ವರ್ಷ, ಇಷ್ಟು ದೂರ ಬಂದಿರಬೇಕಾದರೆ, ಬದುಕೆಂದರೆ ಕೊನೆ ಇರದ ಹರಿಯುವ ನದಿ ಎನ್ನುತ್ತೀಯಲ್ಲ?’ ಎಂದು ಕೂಗಾಡುತ್ತಾನೆ. ಇದರಿಂದ ಕುಪಿತಕೊಂಡ ಗುರು, ‘ಹಾಗಾದರೆ ನಿನ್ನ ಪ್ರಕಾರ ನನ್ನ ಉತ್ತರ ತಪ್ಪು
ಎನ್ನುವುದೇ ನಿನ್ನ ಭಾವವೇ?’ ಎಂದು ಕೇಳುತ್ತಾನೆ.
ಕಥೆಯ ತಾತ್ಪರ್ಯವಿಷ್ಟೇ- ಇದೇ ಬದುಕು ಎಂದು ವಿವರಿಸಲು ಯಾರಿಗೂ ಸಾಧ್ಯವಿಲ್ಲ. ಇದು ನಮ್ಮ ಬದುಕು, ಹಾಗಾಗಿ ಅದಕ್ಕೆ ಅರ್ಥ ತುಂಬುವವರು ನಾವೇ ಆಗಿರಬೇಕು. ಹಿಮಾಲಯ ಪರ್ವತ ಬದುಕಿನ ಅರ್ಥವನ್ನು ತುಂಬಲು ನಮಗೆ ಸಹಾಯ ಮಾಡುವುದಿಲ್ಲ. ನಮ್ಮ ಹೊರತಾಗಿ ಬೇರಾರೂ ಇದರ ಸಹಾಯಕ್ಕೆ ಬರುವುದಿಲ್ಲ. ಬದುಕು ನಮ್ಮದಾಗಿರುವುದರಿಂದ ಅದು ನಮ್ಮ ಪ್ರವೇಶಕ್ಕಷ್ಟೇ ಸೀಮಿತವಾಗಿರುತ್ತದೆ. ಅದರೊಳಗೆ ಜೀವಿಸುವುದಷ್ಟೇ
ನಮಗೆ ಗೋಚರಿಸುವ ರಹಸ್ಯವಾಗಿರುತ್ತದೆ.
ಬದುಕಿನ ಕುರಿತಾದ ಕೆಲವೊಂದು ಚತುರ ವಿವರಣೆಗಳಿವೆ. ಅವು ಬದುಕಿನ ಕುರಿತಾಗಿ ವಿವರಿಸುವುದಿಲ್ಲ, ಬದಲಾಗಿ ನಮ್ಮ ಖಾಲಿ ಮನಸ್ಸಿನೊಳಗೆ ಬೇಡದ
ವಿವರಣೆಗಳನ್ನು ತುರುಕುತ್ತವೆ. ಬದುಕು ಹಾಗೆಂದರೇನು? ಎನ್ನುವ ಅರಿವನ್ನು ಮೂಡಿಸುವುದಿಲ್ಲ. ಮನಸ್ಸಿಗೆ ಮತ್ತು ಮಿದುಳಿಗೆ ಸೋತು ಸತ್ತ ಜ್ಞಾನ ವನ್ನು ಹೆಚ್ಚು ಹೆಚ್ಚು ತುಂಬುತ್ತಾ ಹೋದರೆ ನಾವು ಮಂಕಾಗುತ್ತೇವೆ, ಸಂವೇದನೆ ಕಳೆದುಕೊಳ್ಳುತ್ತೇವೆ. ಜ್ಞಾನವನ್ನು ಎಂದಿಗೂ ಹೊರೆಯಾಗಿಸಿಕೊಳ್ಳ ಬಾರದು. ಏಕೆಂದರೆ ಅದು ನಮ್ಮ ಅಹಂ ಅನ್ನು ಬಲಪಡಿಸುತ್ತದೆ. ಗಟ್ಟಿಗೊಂಡ ಅಹಂ ಬದುಕಿನ ಪಯಣಕ್ಕೆ ಬೆಳಕಾಗುವುದಿಲ್ಲ. ಬದುಕು ಅದಾಗಲೇ ನಿಮ್ಮೊಳಗೆ ಚಿಮ್ಮುತ್ತಿರುವ ಬುಗ್ಗೆ. ಅದನ್ನು ಅದರೊಳಗೆ ಹುಡುಕಬೇಕು. ಹೊರಗೆಲ್ಲೋ ದೇವಾಲಯಗಳಲ್ಲಲ್ಲ. ಬದುಕಿನ ಕಳಶವೂ ನೀವೇ. ಹಾಗಾಗಿ ಬದುಕಿನ ಬಗ್ಗೆ ನೀವು ಮೊದಲು ನೆನಪಿಡಬೇಕಾದ ವಿಷಯವಿಷ್ಟೇ.
ನಿಮ್ಮ ಹೊರತಾಗಿ ಅದನ್ನು ಎಲ್ಲೋ ಯಾರಿಂದಲೂ ಹುಡುಕುವುದಲ್ಲ; ಬದುಕಿಗೆ ಅರ್ಥವನ್ನು ಯಾರಿಂದಲೂ ಹಾಗೆ ತುಂಬಲಾಗುವುದಿಲ್ಲ. ಯೋಚಿಸಿ ನೋಡಿ, ಪ್ರಪಂಚದ ಯಾವ ಮಹಾನ್ ಗುರುವೇ ಆಗಲಿ ಬದುಕಿನ ಬಗ್ಗೆ ಸ್ಪಷ್ಟ ವ್ಯಾಖ್ಯಾನವನ್ನು ಇದುವರೆಗೂ ನೀಡಿಲ್ಲ. ಬದಲಿಗೆ, ಬದುಕಿನ ಅರ್ಥದ ಹುಡುಕಾಟದ ಕುರಿತು ಪುನಃ ನಮ್ಮ ಬೆನ್ನಿಗೆ ಅಂಟಿಸಿ ಹೋಗಿದ್ದಾರೆ. ನಮ್ಮದೇ ರೀತಿಯಲ್ಲಿ ನಮ್ಮದೇ ಪಥದಲ್ಲಿ ಹುಡುಕುತ್ತಾ ಬದುಕಿಗೆ ಅರ್ಥ
ತುಂಬೋಣವಷ್ಟೇ. ಎನ್ನೇನುತ್ತೀರಿ?