Wednesday, 11th December 2024

ವಿದ್ಯಾರ್ಥಿಗಳೇ, ಭಯ ಆತಂಕ ಬೇಡ; ನಂಬಿಕೆ, ವಿಶ್ವಾಸ ಇರಲಿ !

ಶ್ವೇತಪತ್ರ

shwethabc@gmail.com

ಅಮೆರಿಕದ ಕವಯಿತ್ರಿ ಮಾಯಾ ಏಂಜಲೋ ಹೇಳಿರುವ ಮಾತೊಂದಿದೆ- ನೀವು ಮಾಡದ ಹೊರತು ಯಾವುದೂ ಸಾಧ್ಯ ವಾಗುವುದಿಲ್ಲ. ಆಕೆಯ ಈ ಮಾತು ಸತ್ಯ. ಪರೀಕ್ಷೆ ಯಾವುದೇ ಇರಲಿ ಎದುರಿಸಲು ಬೇಕಿರುವ ಮುಖ್ಯ ಸಾಧನ ಮಂತ್ರವೂ
ಇದು ಹೌದು! ಪ್ರಿಯ ವಿದ್ಯಾರ್ಥಿಗಳೇ, ಎಡೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ವಭಾವಿ ಪರೀಕ್ಷೆಗಳು ಶುರುವಾಗಿವೆ.

ಮುಖ್ಯ ಪರೀಕ್ಷೆಗಳನ್ನು ಎದುರಿಸಲು ಮೂರು- ನಾಲ್ಕು ತಿಂಗಳ ಸಮಯವಷ್ಟೇ ಬಾಕಿ ಇದೆ. ಇತ್ತೀಚಿನ ದಿನದಲ್ಲಿ ನಮ್ಮ ಕಾಲೇಜಿ ನಲ್ಲಿ ಆಪ್ತಸಲಹೆಗಾಗಿ ಬರುವ ವಿದ್ಯಾರ್ಥಿನಿಯರ ಸಂಖ್ಯೆ ಜಾಸ್ತಿಯಾಗುತ್ತಿದೆ. ಬರುವ ಎಲ್ಲ ವಿದ್ಯಾರ್ಥಿನಿಯರಲ್ಲೂ ಪರೀಕ್ಷೆಯ ಕುರಿತಾದ ಅಸಹಜ ಭಯ, ಆತಂಕ ಕಾಡುತ್ತಿದೆ. ಮನಸ್ಸು ಸಹಜವಾಗಿ ಒತ್ತಡಕ್ಕೆ ಒಳಗಾಗುತ್ತಿದೆ. ನಂಬಿಕೆ ಆತ್ಮ ವಿಶ್ವಾಸದ ಜತೆ ತಯಾರಿ ಈ ಹೊತ್ತು ನಮ್ಮ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಿರುವ ಸಾಧನಗಳು.

ಪರೀಕ್ಷೆ ಎದುರಿಸಲು ಯಾವುದೇ ಮ್ಯಾಜಿಕಲ್ ಮಾತ್ರೆಗಳು, ಸುಲಭ ದಾರಿಗಳು ಇಲ್ಲ. ತಯಾರಿ, ತಯಾರಿ, ತಯಾರಿಯ ಹೊರತು ಮತ್ಯಾವುದೇ ಆಯ್ಕೆ ನಿಮ್ಮೆದುರಿಗಿಲ್ಲ. ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ ವೆಲ್ಟ ಅವರು ಅದ್ಭುತ ಮಾತೊಂದನ್ನು ಹೇಳಿದ್ದಾರೆ – Believe you can and you are half way there (ನಾನು ಇದನ್ನು ಮಾಡಲು ಖಂಡಿತ ಸಾಧ್ಯ ಈ ನಂಬಿಕೆ ನಿಮ್ಮದಾಗಲಿ, ಅಲ್ಲಿಗೆ ನೀವು ನಿಮ್ಮ ಸವಾಲಿನ ದಾರಿಯನ್ನು ಅರ್ಧದಷ್ಟು ಕ್ರಮಿಸಿದಂತೆ) ರೂಸ್‌ವೆಲ್ಟನ ಈ ಮಾತು ಮಹತ್ವದ್ದು, ಪ್ರಮುಖ ವಾದದ್ದು. ಏಕೆಂದರೆ ನಮ್ಮ ನಂಬಿಕೆಯೇ ನಮ್ಮ ಅಸಾಧ್ಯಗಳನ್ನು ಸಾಧ್ಯವಾಗಿಸುವುದು.

ಗ್ರೀಕ್ ತತ್ವಜ್ಞಾನಿ ಸಾಕ್ರೇಟಿಸ್ ಹೇಳಿದ ಕಥೆಯೊಂದಿದೆ. ಒಮ್ಮೆ ಒಬ್ಬ ಯುವಕ ವಿವೇಕವನ್ನು ಅರಸುತ್ತ ಸಾಕ್ರೇಟಿಸ್‌ನ ಬಳಿ ಬಂದ. ಸಾಕ್ರೇಟಿಸ್ ಯುವಕನನ್ನು ಹತ್ತಿರದ ಒಂದು ಸರೋವರದ ಬಳಿ ಕರೆತಂದು ಅವನ ತಲೆಯನ್ನು ಸರೋವರದ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ. ಯುವಕ ಉಸಿರಾಡಲು ಕಷ್ಟಪಡುತ್ತ ಮೇಲೆ ಬರಲು ಪ್ರಯತ್ನಿಸುತ್ತಾನೆ. ಅವನು ಹಾಗೆ ಮಾಡಿದಷ್ಟೂ ಸಾಕ್ರೇಟಿಸ್‌ನ ಹಿಡಿತ ಮತ್ತಷ್ಟು ಬಲವಾಗುತ್ತದೆ. ಸ್ವಲ್ಪ ಸಮಯದ ನಂತರ ನೀರಿನಿಂದ ಹೊರಬರುವ ಯುವಕ, ಸಾಕ್ರೇಟಿಸ್‌ ನನ್ನು ಕುರಿತು ತನ್ನನ್ನು ನೀರಿನಲ್ಲಿ ಮುಳುಗಿಸಿದ್ದು ಏಕೆ ಎಂದು ಕೇಳುತ್ತಾನೆ? ಇದಕ್ಕೆ ಪ್ರತಿಯಾಗಿ ಸಾಕ್ರೇಟಿಸ್, ‘ನೀರಿನಲ್ಲಿ
ಮುಳುಗಿದ್ದಾಗ ನಿನಗೆ ಅಗತ್ಯವಾಗಿ ಬೇಕೆನಿಸಿದ್ದು ಏನು’ ಎಂದು ಕೇಳುತ್ತಾನೆ? ಯುವಕ ಉಸಿರಾಡಲು ಗಾಳಿ ಎಂದು ಉತ್ತರಿಸು ತ್ತಾನೆ.

ಇದಕ್ಕೆ ಪ್ರತಿಕ್ರಿಯಿಸುತ್ತ ಸಾಕ್ರೇಟಿಸ್ ‘ವಿವೇಕವನ್ನು ಅರಸುವುದೆಂದರೆ ಗಾಳಿಯನ್ನು ಅರಸಿದಂತೆ. ಪ್ರತಿಕ್ಷಣ ಕ್ಷಣವೂ ಅದಕ್ಕೆ ತೆರೆದುಕೊಂಡಾಗ ಮಾತ್ರ ಅದು ನಮ್ಮದಾಗುತ್ತದೆ’ ಎಂದು ವಿವರಿಸುತ್ತಾನೆ. ನಿಮ್ಮ ಓದಿನ ಹಾದಿಯಲ್ಲಿ ತಯಾರಿ ಅತ್ಯುತ್ತಮವಾ
ಗಿದ್ದರೆ, ಗುರಿ ಮುಟ್ಟಲು ಸಾಧ್ಯ. ಪ್ರತಿದಿನವೂ ನಮ್ಮನ್ನು ನಾವು ಇನ್ನೂ ಉತ್ತಮಗೊಳಿಸಿಕೊಳ್ಳುವುದಿದೆಯಲ್ಲ, ಅದು ಯಶಸ್ಸಿನ ದಾರಿಯ ಮೊದಲ ಮೆಟ್ಟಿಲು. ಒಬ್ಬ ವಿದ್ಯಾರ್ಥಿ ಯಾಗಿ ನಿಮಗೆ ಬೇಕಾದ ಎಲ್ಲ ಅನುಕೂಲವೂ ನಿಮ್ಮಲ್ಲಿದೆ.

ನಿಮಗೆ ನೀವೇ ಕಾರಣ ಕೊಟ್ಟುಕೊಳ್ಳುವುದನ್ನು ನಿಲ್ಲಿಸಿ. ಆಂಧ್ರಪ್ರದೇಶದ ಹುಡುಗ ಶ್ರೀಕಾಂತ ಬೊಳ್ಳ. ಈ ಹುಡುಗನ ಜೀವನ ಗಾಥೆ ನಮಗೆ ಸೂರ್ತಿಯಾಗಬೇಕು. ಶ್ರೀಕಾಂತ ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದವ. ಹುಟ್ಟುವಾಗಲೇ ಕಣ್ಣುಗಳಿರದ ಈ ಹುಡುಗ ಹಳ್ಳಿಯ ಎಲ್ಲರ ತಾತ್ಸಾರಕ್ಕೆ ಒಳಗಾಗುತ್ತಾನೆ. ಸಾಲದ್ದಕ್ಕೆ ಆತನನ್ನು ಉಸಿರುಗಟ್ಟಿಸಿ ಸಾಯಿಸಿ ಬಿಡುವಂತೆ ಆತನ ತಂದೆ-ತಾಯಿಗೆ ಊರಿನ ಜನರು ಉಪದೇಶವನ್ನು ನೀಡುತ್ತಾರೆ. ಆತನ ಅನಕ್ಷರಸ್ಥ ತಂದೆ-ತಾಯಿಯಂದಿರು
ಆತನನ್ನು ಬಹಳ ಪ್ರೀತಿ ಮತ್ತು ಆತ್ಮೀಯತೆಯಿಂದ ಬೆಳೆಸುತ್ತಾರೆ. ಶ್ರೀಕಾಂತ ಕುರುಡನೆಂಬ ಕಾರಣಕ್ಕೆ ಶಾಲೆಯಲ್ಲಿ ಆತನಿಗೆ ಕಡೆಯ ಬೆಂಚ್ ಮೀಸಲಾಗಿರುತ್ತದೆ. ಮಾತ್ರವಲ್ಲ, ಮಿಕ್ಕ ಹುಡುಗರ ಜತೆ ಆಟವಾಡಲು ಅವಕಾಶವಿರುವುದಿಲ್ಲ.

ಕಷ್ಟಪಟ್ಟು ಈತನನ್ನು ಅವನ ತಂದೆ ಹೈದರಾಬಾದಿನ ವಿಶೇಷ ಮಕ್ಕಳ ಶಾಲೆಗೆ ಸೇರಿಸುತ್ತಾರೆ. ಆ ಶಾಲೆಯಲ್ಲಿ ಶ್ರೀಕಾಂತ ಚೆಸ್ ಹಾಗೂ ಕ್ರಿಕೆಟ್ ಆಟಗಳಲ್ಲಿ ವಿಶೇಷ ನೈಪುಣ್ಯ ಪಡೆದು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಲೀಡ್ ಇಂಡಿಯಾ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಅವಕಾಶವನ್ನು ದೊರಕಿಸಿಕೊಳ್ಳುತ್ತಾನೆ. ಶೇ.೯೦ರಷ್ಟು ಅಂಕಗಳೊಂದಿಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣನಾಗುವ ಶ್ರೀಕಾಂತನಿಗೆ ವಿಜ್ಞಾನ ವಿಭಾಗಕ್ಕೆ ಸೇರುವ ಆಕಾಂಕ್ಷೆ. ಆದರೆ, ಈತ ದೃಷ್ಟಿ ಹೀನ ಎಂಬ ಕಾರಣಕ್ಕೆ ಕಾಲೇಜುಗಳು ಈತನನ್ನು
ವಿಜ್ಞಾನ ವಿಭಾಗಕ್ಕೆ ಸೇರಿಸಿಕೊಳ್ಳಲು ಒಪ್ಪುವುದಿಲ್ಲ.

ಇದನ್ನು ಪ್ರಶ್ನಿಸಿ ಕಾನೂನಾತ್ಮಕ ಹೋರಾಟ ಮಾಡುವ ಶ್ರೀಕಾಂತ ಕಡೆಗೆ ಸರಕಾರದ ಆದೇಶವಾದ At his own risk ನೊಂದಿಗೆ ಕಾಲೇಜಿಗೆ ಅನುಮತಿ ಪಡೆದು ಪಿಯುಸಿಯಲ್ಲಿ ಶೇ.೯೮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಾನೆ. ಮುಂದೆ ಅಮೆರಿಕದ ಪ್ರತಿಷ್ಠಿತ ಮೆಸ್ಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಮೊದಲ ದೃಷ್ಟಿಹೀನ ಅಂತಾರಾಷ್ಟ್ರೀಯ ವಿದ್ಯಾರ್ಥಿಯಾಗಿ ಅವಕಾಶ ಪಡೆದು ಎಂಜಿನಿಯರಿಂಗ್ ಪದವಿಯನ್ನು ಅಭ್ಯಸಿಸುತ್ತಾನೆ.

ಅಮೆರಿಕದ ದೈತ್ಯ ಕಂಪನಿಯ ಕೆಲಸವನ್ನು ತಿರಸ್ಕರಿಸಿ ಭಾರತಕ್ಕೆ ಮರಳುವ ಶ್ರೀಕಾಂತ ತನ್ನದೇ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಸಂಸ್ಥೆ ಕಟ್ಟುತ್ತಾನೆ. ಆ ಸಂಸ್ಥೆಯಲ್ಲಿ ಶೇ.೭೦ ಮಂದಿ ವಿಕಲಚೇತನರಿಗೆ ಅವಕಾಶ ದೊರಕಿಸಿಕೊಡುತ್ತಾನೆ. ಇಂದು ಆತನ ಕಂಪನಿ ಯ ವಾರ್ಷಿಕ ಆದಾಯ ೫೦೦ ದಶಲಕ್ಷ ಕೋಟಿ. ಶ್ರೀಕಾಂತ ಬೊಳ್ಳನಿಗಿರುವ ಅಂಗವೈಕಲ್ಯ ನಮಗಿಲ್ಲ. ಎಲ್ಲವೂ ಚೆನ್ನಾಗಿರುವ ನಮಗಿರುವುದು ಸೋಮಾರಿತನ, ಆಲಸ್ಯ, ಅಯ್ಯೋ ಓದಿದರಾಯ್ತು ಬಿಡು ಎನ್ನುವ ಉಡಾಫೆಯ ಮನಃಸ್ಥಿತಿ. ಇಲ್ಲವೇ ಮೊಬೈಲ್‌ ಗೆ ಅಂಟಿಕೊಂಡು ಕೂತು ಬಿಡುವ ಜಾಡ್ಯ.

ನಮ್ಮ ಮನಸ್ಸು ಯಾವುದನ್ನು ಒಳಗೊಳ್ಳುತ್ತದೆಯೋ, ನಂಬುತ್ತದೆಯೋ ಅದು ವರ್ತನೆಯ ಮೂಲಕ ನಮ್ಮದಾಗುತ್ತದೆ. ಈಗ ನೀವೇ ಯೋಚಿಸಿ ಶ್ರೀಕಾಂತನ ಆತ್ಮಸ್ಥೈರ್ಯ, ವಿಶ್ವಾಸ, ಭರವಸೆ ನಿಮ್ಮದಾಗಬೇಕು. ಹಾಗಿದ್ದರೆ ತಯಾರಿ ಶುರು ಮಾಡಿಕೊಳ್ಳಿ. ಮಧ್ಯೆಮಧ್ಯೆ ಅಯ್ಯೋ ಎಷ್ಟು ಓದಿ ದರೂ ಏನೂ ನೆನಪಾಗುತ್ತಿಲ್ಲ-ಹೀಗೆಲ್ಲ ಅನಿಸುವುದು ಸಹಜ. ಏಕೆಂದರೆ ಎಷ್ಟೋ ವಿದ್ಯಾರ್ಥಿ ಗಳು ಪರೀಕ್ಷೆಯ ಸಮಯದಲ್ಲಿ ಏಕಾಏಕಿ ಓದಬೇಕಾದಾಗ ಮರೆತು ಹೋದಂತೆ ಭಾಸವಾಗುವುದು, ಒತ್ತಡಕ್ಕೊಳಗಾಗು ವುದು ಸಹಜ. ಪ್ರಾಚೀನ ಭಾರತದಲ್ಲಿ ಗುರುಗಳು ತಮ್ಮ ಶಿಷ್ಯಂದಿರಿಗೆ ಸಂಕಲ್ಪ ಮಾಡಿಸುತ್ತಿದ್ದರು. ದೇಹ-ಮನಸ್ಸು-ಆತ್ಮ ಎಲ್ಲವೂ ಓದಿನಲ್ಲಿ ತಲ್ಲೀನವಾಗಬೇಕೆಂದು ಈ ಸಂಕಲ್ಪ, ಇಂದು ನಿಮಗೆ ನೀವೇ ಮಾಡಿಕೊಳ್ಳಿ. ದೇವರ ಮೊರೆ ಹೋಗುವುದು ನಿಮ್ಮ ತಯಾರಿಗೆ ಪರ್ಯಾಯ ಮಾರ್ಗ ವಲ್ಲ.

ನಿಮ್ಮಲ್ಲಿ ಎಲ್ಲರೂ ಶೇ.೯೦ರಷ್ಟು ಅಂಕಗಳನ್ನು, ಶೇ.೮೫ರಷ್ಟು ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ. ಆದರೆ, ವ್ಯಕ್ತಿಗತವಾಗಿ ನಿಮ್ಮೆಲ್ಲರಲ್ಲೂ ನಿಮ್ಮದೇ ಆದ ಶಕ್ತಿ ಸಾಮರ್ಥ್ಯಗಳಿರುತ್ತವೆ. ಅವುಗಳಿಗೆ ಅನುಗುಣವಾಗಿ ನಿಮ್ಮ ನಿಮ್ಮ ತಯಾರಿ ಇರಲಿ. ಶಾಲಾ-ಕಾಲೇಜಿನ ಎಲ್ಲ ಪರೀಕ್ಷೆಗಳಿಗೂ ತಪ್ಪದೇ ಹಾಜರಾಗಿ. ಇದು ನಿಮ್ಮಲ್ಲಿನ ಭಯವನ್ನು ನೀವೇ ಎದುರಿಸಲು ಜತೆಗೆ ಪರೀಕ್ಷೆಯ ಸಮಯ ನಿರ್ವಹಣೆಗೆ ಸಹಕಾರಿಯಾಗುತ್ತದೆ.

ಆಲ್ಬರ್ಟ್ ಐನ್‌ಸ್ಟಿನ್ ಹೇಳುವಂತೆ- ಮಾಡಿದ್ದನ್ನು ಮತ್ತೆ ಮತ್ತೆ ಮಾಡುವ, ಆದರೆ ಪ್ರತಿ ಬಾರಿಯೂ ಬೇರೆಯದೇ ಫಲಿತಾಂಶ ವನ್ನು ನಿರೀಕ್ಷಿಸುವ ಎಂಬ ತತ್ವ ಅನುಸರಿಸಬೇಕು. ಇದನ್ನೇ ನಮ್ಮ ಓದಿಗೆ ಸ್ವಲ್ಪ ಭಿನ್ನವಾಗಿ ಬಳಸಿಕೊಳ್ಳಬಹುದು. ತಪ್ಪು ತಪ್ಪಾಗಿ ಓದುವುದನ್ನು ಅಥವಾ ಓದುವಾಗ ನಾವು ಮಾಡುವ ತಪ್ಪುಗಳನ್ನು ಸರಿಪಡಿಸಿ ಓದಿಕೊಳ್ಳುತ್ತ, ಓದಿದ್ದನ್ನು ಬರೆದು ಮತ್ತೆ ಮತ್ತೆ ತಯಾರಿಗೊಳಿಸಿಕೊಳ್ಳಬೇಕು. ನಮ್ಮಲ್ಲಿ ಅನೇಕ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಷ್ಟಪಟ್ಟು ಓದಿ ಎಂದು ಹೇಳುತ್ತಿರುವುದನ್ನು ಕೇಳಿದ್ದೇವೆ. ಕಷ್ಟಪಟ್ಟಲ್ಲ, ಇಷ್ಟಪಟ್ಟು ಓದುವ ಕಲೆ ನಮಗೆ ಕರಗತವಾಗಬೇಕು.

ಜೋ ಗಿರಾಡ್ ಬಗ್ಗೆ ನೀವು ಕೇಳಿದ್ದೀರಾ? ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರಕಾರ ಆತ ಪ್ರಪಂಚದ ಅತ್ಯುತ್ತಮ ಸೇಲ್ಸ್‌ ಮನ್. ಗಿರಾಡ್ ಹೇಳುವ ಯಶಸ್ಸಿನ ಒಂದು ಸೂತ್ರವೇನು ಗೊತ್ತೆ? ಯಶಸ್ಸಿಗೆ ಯಾವುದೇ ಎಲಿವೇಟರ್ (ಲಿಫ್ಟ್) ಇಲ್ಲ. ನೀವು ಮೆಟ್ಟಿಲುಗಳನ್ನು ಹತ್ತಲೇ ಬೇಕು; ಅದೂ ಒಂದಾದ ಮೇಲೆ ಇನ್ನೊಂದರಂತೆ. ವಿದ್ಯಾರ್ಥಿಗಳಾಗಿ ನಾವು ಅಷ್ಟೇ ಕಾರಣಗಳನ್ನು ಹುಡುಕುವುದನ್ನು ಬಿಟ್ಟು ತಯಾರಿಯತ್ತ ಮುಖ ಮಾಡಬೇಕಷ್ಟೆ. ಜಪಾನೀಯರಲ್ಲಿ ಕೈಜನ್ ಎನ್ನುವ ಪರಿಕಲ್ಪನೆ ಇದೆ. ಕೈಜನ್ ಎಂದರೆ ಉತ್ತಮಕ್ಕಾಗಿ ಬದಲಾಯಿಸು ಎಂದರ್ಥ.

ನಾವು ಅಷ್ಟೇ ಉತ್ತಮಗೊಳ್ಳುವುದಕ್ಕೆ ಸ್ವಲ್ಪ ಬದಲಾಯಿಸಿಕೊಳ್ಳಬೇಕು. ನಿರಂತರ ಪ್ರಯತ್ನ ನಮ್ಮಲ್ಲಿ ಪ್ರಗತಿದಾಯಕ ಬದಲಾ ವಣೆ ತಂದು ಕೊಡುತ್ತದೆ. ಯಶಸ್ಸು ಎಂಬುದು ಪ್ರತಿದಿನದ ಪುಟ್ಟ ಪ್ರಯತ್ನವೇ ಆಗಿರುತ್ತದೆ. ಪರೀಕ್ಷೆಗಳು ಸಮೀಪಿ ಸುತ್ತಿದ್ದ ಹಾಗೆ ನೀವು ಮುಖ್ಯವಾಗಿ ಮಾಡಬೇಕಾದ ಕೆಲಸವೆಂದರೆ ನಿಮ್ಮದೇ ಒಂದು ಟೈಮ್ ಟೇಬಲ್ ಅನ್ನು ರಚಿಸಿಕೊಳ್ಳುವುದು. ರಚಿಸಿಕೊಂಡರಷ್ಟೆ ಸಾಲದು, ಅದನ್ನು ತಪ್ಪದೇ ನಿರ್ವಹಿಸಬೇಕು.

ಪ್ರತಿಯೊಬ್ಬ ವಿದ್ಯಾರ್ಥಿಗೂ ಓದುವ ಬರೆಯುವ ಅರ್ಥ ಮಾಡಿಕೊಳ್ಳುವ ತನ್ನದೇ ಆದ ಶೈಲಿ ಇರುತ್ತದೆ. ನಿಮ್ಮನ್ನು ನೀವು ಬೇರೆಯವರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ. ನಿಮಗೆ ಏನಾಗುತ್ತದೆಯೋ ಎಷ್ಟಾಗುತ್ತದೆಯೋ ಅದಕ್ಕೆ ಅನುಗುಣವಾಗಿ ತಯಾರಿ ನಡೆಸಿ. ಓದಬೇಕು ಎನ್ನುವ ವಿಚಾರ ಬಂದಾಗ ಸದಾ ನಾವು ಮುಂದೂಡುತ್ತಲೇ ಬರುತ್ತೇವೆ. ಅಯ್ಯೋ ನಾಳೆಯಿಂದ
ಓದೋಣ, ಮುಂದಿನ ಸೋಮವಾರದಿಂದ ಓದೋಣ, ಈ ಕ್ಲಾಸ್ ಟೆಸ್ಟ್ ಮುಗಿಯಲಿ, ಆಮೇಲೆ ಓದೋಣ.

ಓದುವುದಕ್ಕೆ ನಿಮ್ಮ ಮನಸ್ಸನ್ನು ನೀವು ತಯಾರುಗೊಳಿಸಿಕೊಳ್ಳಬೇಕು. ಇಂದಿನದನ್ನು ನಾಳೆಗೆ, ನಾಳೆಯದ್ದನ್ನು ನಾಡಿದ್ದಿಗೆ ನೀವು ತಳ್ಳಿದರೆ ಒಂದೇ ಪುಟ ಓದಬೇಕಾದದ್ದರ ಜಾಗದಲ್ಲಿ ದೊಡ್ಡದಾದ ಪುಸ್ತಕಗಳ ರಾಶಿಯನ್ನು ಓದುವ ಅನಿವಾರ್ಯ ಎದುರಾಗಿಬಿಡುತ್ತದೆ ಎಚ್ಚರ..! ಪರೀಕ್ಷೆಗೆ ಮುಖ್ಯವಾಗಿ ಬೇಕಾದದ್ದು ತಯಾರಿ. ಈ ತಯಾರಿ ನಿಮ್ಮಲ್ಲಿ ಜ್ಞಾನವನ್ನು, ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಇಲ್ಲಿ ಪೋಷಕರು ತಮ್ಮ ಮಕ್ಕಳ ಅಪೂರ್ಣತೆಗಳನ್ನು, ಕೊರತೆಗಳನ್ನು ಒಪ್ಪಿಕೊಳ್ಳಬೇಕು. ಸಾಧ್ಯವಾಗಿಸುವ ಗುರಿಗಳನ್ನಷ್ಟೇ ಅವರು ತಮ್ಮ ಮಕ್ಕಳಿಗೆ ಮನಗಾಣಿಸಬೇಕು. ಅತಿಯಾದ ನಿರೀಕ್ಷೆಗಳನ್ನು ಮಕ್ಕಳಿಂದ ಅಪೇಕ್ಷಿಸುವುದು ತಪ್ಪು. ಈ ತೆರನಾದ ಮಕ್ಕಳಿಂದ ಅಪೇಕ್ಷಿಸುವ ನಿರೀಕ್ಷೆಗಳೇ ಮುಂದೆ ವ್ಯತಿರಿಕ್ತ ಪರಿಣಾಮ ತಂದೊಡ್ಡುತ್ತವೆ. ಎಲ್ಲ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ತೆಗೆಯಲು ಸಾಧ್ಯವಿಲ್ಲ. ಅಂತೆಯೇ ಎಲ್ಲರೂ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲೂ ಸಾಧ್ಯವಿಲ್ಲ. ಎಲ್ಲ ಸಂದರ್ಭ ಗಳಲ್ಲೂ ಮನಸ್ಸಿನ ಶಾಂತತೆಯನ್ನು ಕಾಪಾಡಿಕೊ ಳ್ಳುವುದು ಪರೀಕ್ಷೆಯ ಸಮಯದಲ್ಲಿ ಮುಖ್ಯವಾಗಿ ಬೇಕಿರುವ ಅಂಶ. ಒತ್ತಡ ನಿಮ್ಮ ಕಲಿಕೆಯನ್ನು ಕೊಲ್ಲುತ್ತದೆ.

ಹಾಗಾಗಿ ಪ್ರತಿದಿನದ ತಯಾರಿಯ ಮೂಲಕ ಅಭ್ಯಾಸದ ಮೂಲಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ನಿಮ್ಮೊಳಗೆ ಲವಲ ವಿಕೆಯನ್ನು ತುಂಬಿಕೊಳ್ಳಲು, ನೀವೇ ಉಪಾಯಗಳನ್ನು ಹುಡುಕಿ. ಬದುಕು ಒಡ್ಡುವ ಪರೀಕ್ಷೆಗಳೆದುರು ನಿಮ್ಮ ಶಾಲಾ-ಕಾಲೇಜಿನ ಪರೀಕ್ಷೆಗಳು ಅತಿ ಸುಲಭದವು. ಅವುಗಳ ಯಶಸ್ಸಿಗೆ ನೀವು ಮನಸ್ಸು ಮಾಡಬೇಕಷ್ಟೆ.

Read E-Paper click here