Sunday, 19th May 2024

ಸುರಕ್ಷಿತ ಪಾಲಿಯೂರಿಥೇನ್‌ ಕಾಂಡಮ್‌

ಹಿಂದಿರುಗಿ ನೋಡಿದಾಗ

ಯೂರೋಪಿನ ದೇಶಗಳಲ್ಲಿ ಕಾಂಡಮ್ ಒಮ್ಮೆಲೆ ಜನಪ್ರಿಯವಾಗಲಿಲ್ಲ. ಕಾಂಡಮ್‌ನನ್ನು ವೈದ್ಯಕೀಯ ಹಾಗೂ ನೈತಿಕತೆಯ ಹಿನ್ನೆಲೆಯಲ್ಲಿ ವಿರೋಧಿಸುವ ಸಾಕಷ್ಟು ಜನರು ಅಲ್ಲಲ್ಲಿ ಕಂಡುಬರಲಾರಂಭಿಸಿದರು. ಜಾನ್ ಕ್ಯಾಂಪ್ಬೆಲ್ (೧೬೮೦-೧೭೪೩) ಬ್ರಿಟಿಷ್ ಸೇನೆಯಲ್ಲಿ ಹಿರಿಯ ದಂಡನಾಯಕನಾಗಿದ್ದ. ಈತನು ೧೭೦೮ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಕಾಂಡಮ್‌ಗಳನ್ನು ಅಧಿಕೃತವಾಗಿ ನಿಷೇಧಿಸಬೇಕೆಂದು ವಾದ ಮಾಡಿದ. ಆದರೆ ಪಾರ್ಲಿಮೆಂಟ್ ಈತನ ವಾದವನ್ನು ಮನ್ನಿಸಲಿಲ್ಲ.

ಡೇನಿಯಲ್ ಟರ್ನರ್ (೧೬೬೭-೧೭೪೦) ಎಂಬ ಲಂಡನ್ ವೈದ್ಯ ಹಾಗೂ ಚರ್ಮರೋಗ ತಜ್ಞನು ಕಾಂಡಮ್‌ನ್ನು ಏಕೆ ಬಳಸಬಾರದು ಎಂದು ತರ್ಕಬದ್ಧವಾಗಿ ತನ್ನ ವಾದವನ್ನು ೧೭೧೭ರಲ್ಲಿ ಮಂಡಿಸಿದ. ಕಾಂಡಮ್‌ ನನ್ನು ಸರಿಯಾದ ವಿಧಾನ ದಲ್ಲಿ ಬಳಸಬೇಕು. ತಪ್ಪು ತಪ್ಪಾಗಿ ಬಳಸಿದಲ್ಲಿ ಅದು ಸಿಫಿಲಿಸ್ ನಂತಹ ಲೈಂಗಿಕ ರೋಗಗಳ ವಿರುದ್ಧ ರಕ್ಷಣೆಯನ್ನು ಕೊಡುತ್ತಿರಲಿಲ್ಲ. ಶೇ.೧೩ಕ್ಕೂ ಹೆಚ್ಚು ವೈಫಲ್ಯವಾಗುತ್ತಿತ್ತು. ಕಾಂಡಮ್ ಹುಸಿ ಧೈರ್ಯವನ್ನು ಕೊಡುತ್ತದೆ ಎಂದ. ಯಾರ ಯಾರ ಜತೆಯಲ್ಲಿ ಲೈಂಗಿಕ ಸಂಪರ್ಕವು ನಿಷಿದ್ಧವಾಗಿದೆಯೋ, ಅಂತಹವರ ಜತೆಯಲ್ಲಿ ಸಂಗ ಬೆಳೆಸಲು ಪ್ರೇರೇಪಿಸುತ್ತದೆ ಎಂದ. ಕಾಂಡಮ್ ಬಳಸಿದಾಗ ಸ್ಪರ್ಶ ಜ್ಞಾನವು ಮಂದವಾಗುತ್ತದೆ.

ಹಾಗಾಗಿ ಅನೇಕ ಜನರು ಕೊನೆಯ ಘಳಿಗೆಯಲ್ಲಿ ಕಾಂಡಮ್‌ನನ್ನು ಬೇಕಾಬಿಟ್ಟಿಯಾಗಿ ಬಳಸುವುದನ್ನು ತೋರಿಸಿ, ಕಾಂಡಮ್‌ನನ್ನು ನಿಷೇಧಿಸಬೇಕೆಂದು ವಾದಿಸಿದ. ಜೀನ್ ಆಸ್ಟ್ರಕ್ (೧೬೮೪- ೧೭೬೬) ಎಂಬ ಫ್ರೆಂಚ್ ವೈದ್ಯನೂ (ಈತ ಸಿಫಿಲಿಸ್ ಬಗ್ಗೆ ಒಂದು ಗ್ರಂಥವನ್ನು ಬರೆದವನು) ಸಹ ಟರ್ನರ್ ಮಂಡಿಸಿದ ವಾದವನ್ನು ಪುರಸ್ಕರಿಸಿ, ಕಾಂಡಮ್ ಬಳಸುವುದನ್ನು ನಿಲ್ಲಿಸಬೇಕೆಂದ. ಇನ್ನು ಚರ್ಚ್ ಅಂತು ಸಂತಾನ ನಿಯಂತ್ರಣವು ಒಂದು ಪಾಪದ ಕೆಲಸ ಎಂದು ಪ್ರಚಾರ ಮಾಡುತ್ತಲೇ ಇತ್ತು.

೧೮ನೆಯ ಶತಮಾನದಲ್ಲಿ ಕಾಂಡಮ್‌ಗಳ ವಿರುದ್ಧ ಎದ್ದಿದ್ದ ಧ್ವನಿಗಳು ಅಡಗಿಹೋದವು. ಕಾಂಡಮ್ ಬಳಕೆಯು ಅಪಾರ
ಪ್ರಮಾಣದಲ್ಲಿ ಹೆಚ್ಚಾಯಿತು. ಈಗ ವಿವಿಧ ಗಾತ್ರದ, ವಿವಿಧ ನಮೂನೆಯ ಕಾಂಡಮ್‌ಗಳು ದೊರೆಯಲಾರಂಭಿಸಿದವು.
ರಾಸಾಯನಿಕಗಳಲ್ಲಿ ಸಂಸ್ಕರಿಸಿದ ಲಿನನ್ ಕಾಂಡಮ್ ಹಾಗೂ ಸ್ಕಿನ್ ಅಂದರೆ ಪ್ರಾಣಿಗಳ ಕರುಳು ಅಥವಾ ಮೂತ್ರಾಶಯ
ದಿಂದ ರಚಿಸಿದ ಕಾಂಡಮ್‌ಗಳು ದೊರೆಯುತ್ತಿದ್ದವು. ಈ ಸ್ಕಿನ್ ಮೊದಲು ಒರಟಾಗಿರುತ್ತಿತ್ತು.

ಹಾಗಾಗಿ ಅವುಗಳನ್ನು ಗಂಧಕ ಮತ್ತು ಸೋಡಿಯಂ ಹೈಡ್ರಾಕ್ಸೈಡುಗಳನ್ನು ಬಳಸಿ ಸಂಸ್ಕರಿಸಲಾರಂಭಿಸಿದರು. ಅವು ಮೃದು ಹಾಗೂ ನಯವಾಗುತ್ತಿದ್ದವು. ಕಾಂಡಮ್‌ಗಳು ವೇಶ್ಯಾವಾಟಿಕೆ, ಪಬ್, ಕ್ಲಬ್, ಕ್ಷೌರಿಕರ ಅಂಗಡಿ, ಔಷಧಗಳ ಅಂಗಡಿ, ನಾಟಕ
ಗೃಹಗಳಲ್ಲಿ ಮುಕ್ತವಾಗಿ ದೊರೆಯಲಾರಂಭಿಸಿದವು. ಜಿಯಾಕೋಮೋ ಗಿರೋಲಾಮೊ ಕ್ಯಾಸನೋವ (೧೭೨೫-೧೭೯೮)
ಬರೆದಿರುವ ಆತ್ಮಚರಿತ್ರೆಯಲ್ಲಿ ಕಾಂಡಮ್‌ಗಳ ಪರೀಕ್ಷಾ ವಿಧಾನದ ವಿವರವು ದೊರೆಯುತ್ತದೆ. ಮಕ್ಕಳು ಬಲೂನನ್ನು
ಊದುವಂತೆ, ಕಾಂಡಮ್‌ನನ್ನು ಊದಿ, ಅದರಲ್ಲಿ ಯಾವುದೇ ರಂಧ್ರಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರಂತೆ.

ಆನಂತರವಷ್ಟೇ ಅವನ್ನು ಬಳಸುತ್ತಿದ್ದರು. ೧೮ನೆಯ ಶತಮಾನದವರೆಗೆ ಕಾಂಡಮ್‌ಗಳು ಶ್ರೀಮಂತರು ಹಾಗೂ ಮಧ್ಯಮ ವರ್ಗದವರೆ ಕೈಗಳಿಗೆ ಮಾತ್ರ ಎಟುಕುತ್ತಿದ್ದವು. ೧೯ನೆಯ ಶತಮಾನದಲ್ಲಿ ಆರಂಭದಲ್ಲಿ ಕಾಂಡಮ್‌ಗಳು ಬಡವರಿಗೂ ದೊರೆಯಲಾರಂಭಿಸಿದವು. ಮಿತಿಯಿಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕಾಂಡಮ್‌ಗಳನ್ನು ಬಳಸಬೇಕು ಎನ್ನುವ ಚಳವಳಿ ಆರಂಭವಾಯಿತು. ಇಂಗ್ಲೆಂಡಿನಲ್ಲಿ ಜೆರೇಮಿ ಬೆಂಥಮ್ (೧೭೪೮-೧೮೩೨) ಮತ್ತು ರಿಚರ್ಡ್ ಕಾರ್ಲೈಲ್
(೧೭೯೦-೧೮೪೩) ಹಾಗೂ ಅಮೆರಿಕದಲ್ಲಿ ರಾಬರ್ಟ್ ಡೇಲ್ ಓವೆನ್ (೧೮೦೧-೧೮೭೭) ಹಾಗೂ ಚಾರ್ಲ್ಸ್ ಕ್ನೊಲ್ಟನ್
(೧೮೦೦-೧೮೫೦) ಸಂತಾನ ನಿಯಂತ್ರಣ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದವರಲ್ಲಿ ಆದ್ಯರು.

ಕಾಂಡಮ್‌ಗಳನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ಹಾಗೂ ಲೈಂಗಿಕತೆಯ ಬಗ್ಗೆ ಬರಹಗಳು ಹಾಗೂ ಉಪನ್ಯಾಸಗಳ ಮೂಲಕ ಪ್ರಚಾರವು ಆರಂಭವಾಯಿತು. ಪ್ರಚಾರದ ಕೊನೆಯಲ್ಲಿ ಕಾಂಡಮ್‌ಗಳ ಮಾರಾಟವನ್ನು ಮಾಡುತ್ತಿದ್ದರು. ಅಮೆರಿಕ ಪ್ರಥಮ ಮಹಿಳಾ ವೈದ್ಯೆ ಎಲಿಜ಼ಬೆಥ್ ಬ್ಲಾಕ್ವೆಲ್ (೧೮೨೧-೧೯೧೦) ಕಾಂಡಮ್‌ಗಳ ಪ್ರಚಾರವನ್ನು ಪ್ರತಿಭಟಿಸಿದಳು. ಭಾಷಣಗಳ ಮೂಲಕ ಗರ್ಭಪಾತವನ್ನು ಹಾಗೂ ವೇಶ್ಯಾವಾಟಿಕೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದಳು.

೧೮೪೦ರಲ್ಲಿ ಬ್ರಿಟನ್ ದೇಶದ ಹಾಗೂ ೧೮೬೧ರ ವೇಳಿಗೆ ಅಮೆರಿಕದ ಪತ್ರಿಕೆಗಳಲ್ಲಿ ಕಾಂಡಮ್‌ಗಳ ಬಗ್ಗೆ ಜಾಹೀರಾತುಗಳು ಮೊದಲ ಬಾರಿಗೆ ಪ್ರಕಟವಾಗಲಾರಂಭಿಸಿದವು. ರಬ್ಬರ್ ವಲ್ಕನೀಕರಣವನ್ನು (ರಬ್ಬರನ್ನು ಗಂಧಕದೊಡನೆ ಸಂಸ್ಕರಿಸಿ ಸಮರ್ಪಕವಾಗಿ ಬಳಸುವ ವಿಧಾನ) ಯಾರು ಆರಂಭಿಸಿದರೆಂಬ ಬಗ್ಗೆ ಸ್ವಲ್ಪ ಗೊಂದಲವಿದೆ. ಅಮೆರಿಕದ ಚಾರ್ಲ್ಸ್ ಗುಡ್ ಇಯರ್ (೧೮೦೦-೧೮೬೦) ವಲ್ಕನೀಕರಣವನ್ನು ೧೮೩೯ರಲ್ಲಿ ರೂಪಿಸಿ, ೧೮೪೪ರಲ್ಲಿ ಅದರ ಏಕಸ್ವಾಮ್ಯವನ್ನು (ಪೇಟೆಂಟ್) ಪಡೆದ ಎನ್ನಲಾಗಿದೆ.

ಇನ್ನು ಕೆಲವರು ಅಮೆರಿಕದ ಥಾಮಸ್ ಹ್ಯಾನ್ಕಾಕ್ (೧೭೮೬-೧೮೬೫) ೧೮೪೩ ರಲ್ಲಿಯೇ ರಬ್ಬರ್ ವಲ್ಕನೀಕರಣ ವಿಧಾನವನ್ನು ಕಂಡುಕೊಂಡ  ಎಂದು ವಾದಿಸುವುದುಂಟು. ವಾಸ್ತವವು ಏನೇ ಇರಲಿ, ೧೮೫೫ ರ ವೇಳೆಗೆ ಮೊದಲ ರಬ್ಬರ್ ಕಾಂಡಮ್ ಮಾರುಕಟ್ಟೆಗೆ ಬಂದಿತು. ಅಮೆರಿಕ ಮತ್ತು ಯೂರೋಪ್ ಖಂಡದ ದೇಶಗಳಲ್ಲಿ ರಬ್ಬರ್ ಕಾಂಡಮ್ ದೊರೆಯ ಲಾರಂಭಿಸಿತು. ಅದುವರೆಗೂ ದೊರೆಯುತ್ತಿದ್ದ ಕಾಂಡಮ್‌ಗಳನ್ನು ಒಂದು ಸಲ ಮಾತ್ರ ಬಳಸಬಹುದಾಗಿತ್ತು. ಆದರೆ ರಬ್ಬರ್ ಕಾಂಡಮ್ ಗಳನ್ನು ಸ್ವಚ್ಛಗೊಳಿಸಿ ಮತ್ತೆ ಮತ್ತೆ ಮರುಬಳಸಬಹುದಾಗಿತ್ತು.

ಹಾಗಾಗಿ ಗ್ರಾಹಕರು ರಬ್ಬರ್ ಕಾಂಡಮ್‌ಗಳನ್ನು ಹೆಚ್ಚು ಬಳಸಲಾರಂಭಿಸಿದರು. ಆರಂಭದಲ್ಲಿ ಶಿಶ್ನಾಗ್ರ ರಬ್ಬರ್ ಕಾಂಡಮ್‌ಗಳು ದೊರೆಯುತ್ತಿದ್ದವು. ಕ್ರಮೇಣ ಇಡೀ ಶಿಶ್ನವನ್ನು ಆವರಿಸುವ ಕಾಂಡಮ್‌ಗಳು ಜನಪ್ರಿಯವಾಗಲಾರಂಭಿಸಿದವು.
ಮಾರ್ಗರೆಟ್ ಹಿಗ್ಗಿನ್ಸ್ ಸ್ಯಾಂಗರ್ (೧೮೭೯-೧೯೬೬) ಅಮೆರಿಕದ ಜನನ ನಿಯಂತ್ರಣ ಪ್ರತಿಪಾದಕಿ, ಲೈಂಗಿಕ ವಿಜ್ಞಾನದ
ಶಿಕ್ಷಕಿ, ಬರಹಗಾರ್ತಿ ಹಾಗೂ ದಾದಿಯಾಗಿದ್ದಳು.

ಜನನ ನಿಯಂತ್ರಣ ಅಥವಾ ಬರ್ಥ್ ಕಂಟ್ರೋಲ್ ಎಂಬ ಪದಪುಂಜವನ್ನು ಈಕೆಯೇ ಮೊದಲ ಬಾರಿಗೆ ಜನಪ್ರಿಯಗೊಳಿಸಿ ದಳು. ಅಮೆರಿಕದ ಮೊದಲ ಬರ್ಥ್ ಕಂಟ್ರೋಲ್ ಕ್ಲಿನಿಕ್ ಅನ್ನು ಆರಂಭಿಸಿದಳು. ಇಂದು ಅಮೆರಿಕದಲ್ಲಿ ಪ್ರಖ್ಯಾತವಾಗಿರುವ
ಅಮೆರಿಕದ ಯೋಜಿತ ಪಿತೃತ್ವ ಒಕ್ಕೂಟವನ್ನು (ಪ್ಲಾನ್ಡ್ ಪೇರೆಂಟ್‌ಹುಡ್ ಫೆಡರೇಶನ್ ಆಫ್ ಅಮೆರಿಕ) ಸ್ಥಾಪಿಸಿದಳು.
ಈಕೆಯ ಬರಹ ಮತ್ತು ಭಾಷಣಗಳನ್ನು ಅಮೆರಿಕವು ನಿರ್ಬಂಧಿಸಿತು.

ತನ್ನ ಬಂಧನದ ಭೀತಿಯು ಎದುರಾದಾಗ ಆಕೆಯು ಇಂಗ್ಲೆಂಡ್ ದೇಶಕ್ಕೆ ಹೋಗಬೇಕಾಯಿತು. ಅಮೆರಿಕದಲ್ಲಿ ಸ್ಯಾಂಗರ್ ನಡೆಸಿದ ಪ್ರಯತ್ನವು ನಿಧಾನವಾಗಿ ಫಲವನ್ನು ನೀಡಿತು. ಕ್ರಮೇಣ ಜನನ ನಿಯಂತ್ರಣ ಚಳುವಳಿಯು ಅಮೇರಿಕದಲ್ಲಿ ಹರಡಿತು. ಸ್ಯಾಂಗರ್ ನಡೆಸಿದ ಕೆಲಸಗಳಿಗೆ ಅಮೆರಿಕವು ಇಂದಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದೆ. ೧೯೨೦ರ ವೇಳೆಗೆ ಅಮೆರಿಕದ ಯುನೈಟೆಡ್ ಸ್ಟೇಟ್ ರಬ್ಬರ್ ಕಂಪನಿಯ ಉಪಾಧ್ಯಕ್ಷರಾಗಿದ್ದ ಅರ್ನಸ್ಟ್ ಹಾಪ್ಕಿನ್ಸನ್ ಲ್ಯಾಟೆಕ್ಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ. ರಬ್ಬರ್ ಕಾಂಡಮ್‌ಗಳಿಗಿಂತ ಲ್ಯಾಟೆಕ್ಸ್ ಕಾಂಡಮ್‌ಗಳ ತಯಾರಿಕೆಯು ಸುಲಭವಾಗಿತ್ತು. ರಬ್ಬರ್ ಕಾಂಡಮ್‌ಗಳ ತಯಾರಿಕೆಯಲ್ಲಿ ಅಗ್ನಿಅವಘಡಗಳು ಸಂಭವಿಸುವ ಸಾಧ್ಯತೆಯಿತ್ತು.

ಲ್ಯಾಟೆಕ್ಸ್ ಕಾಂಡಮ್‌ಗಳನ್ನು ಸುರಕ್ಷಿತವಾಗಿ ತಯಾರಿಸಬಹುದಾಗಿತ್ತು. ಬಳಕೆದಾರರು ಲ್ಯಾಟೆಕ್ಸ್ ಕಾಂಡಮ್‌ಗಳನ್ನು ಹೆಚ್ಚು ಇಷ್ಟ ಪಟ್ಟರು. ಅವು ರಬ್ಬರ್ ಕಾಂಡಮ್‌ಗಳಿಗಿಂತ ತೆಳುವಾಗಿದ್ದವು ಹಾಗೂ ದೃಢವಾಗಿದ್ದವು. ರಬ್ಬರ್ ಕಾಂಡಮ್‌ಗಳನ್ನು ಹೆಚ್ಚೆಂದರೆ ಮೂರು ತಿಂಗಳವರೆಗೆ ಮಾತ್ರ ರಕ್ಷಿಸಿಡಬಹುದಾಗಿತ್ತು. ಆದರೆ ಲ್ಯಾಟೆಕ್ಸ್ ಕಾಂಡಮ್ಮುಗಳನ್ನು ಐದು ವರ್ಷಗಳ ವರೆಗೆ ಅಂಗಡಿಗಳಲ್ಲಿಟ್ಟು ಮಾರಾಟ ಮಾಡಬಹುದಾಗಿದ್ದ ಕಾರಣ ಲ್ಯಾಟೆಕ್ಸ್ ಕಾಂಡಮ್‌ಗಳು ಜನಪ್ರಿಯವಾದವು.

೧೯೩೨ರ ವೇಳೆಗೆ ಲಂಡನ್ ರಬ್ಬರ್ ಕಂಪನಿಯು ಡ್ಯೂರೆಕ್ಸ್ ಹೆಸರಿನಲ್ಲಿ ಕಾಂಡಮ್‌ಗಳನ್ನು ಮಾರಾಟ ಮಾಡಲಾ ರಂಭಿಸಿತು. ೧೯೩೨ರವರೆಗೆ ಅರೆ ಕುಶಲಿಗಳು ತಮ್ಮ ಕೈಗಳಿಂದಲೇ ಕಾಂಡಮ್‌ಗಳನ್ನು ತಯಾರಿಸುತ್ತಿದ್ದರು. -ಡ್ ಕಿಲಿಯನ್
ಸ್ವಯಂಚಾಲಿತ ಯಂತ್ರಗಳ ಮೂಲಕ ಕಾಂಡಮ್‌ಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದ. ಇದರಿಂದ ಕಾಂಡಮ್‌ಗಳ ಒಟ್ಟಾರೆ ಬೆಲೆಯು ಗಣನೀಯವಾಗಿ ಇಳಿಯಿತು.

ಹಾಗಾಗಿ ರಬ್ಬರ್ ಕಾಂಡಮ್‌ಗಳು ಮಾರುಕಟ್ಟೆಯಿಂದ ಮಾಯವಾದವು. ಸ್ಕಿನ್ ಕಾಂಡಮ್ ಗಳನ್ನು ಕೆಲವೇ ಕೆಲವು ಶ್ರೀಮಂತರು ಮಾತ್ರ ಬಳಸುತ್ತಿದ್ದರು. ೧೯೩೦ರ ವೇಳೆಗೆ, ಅಮೆರಿಕವು ತನ್ನ ಸೈನಿಕರಿಗೆ ಕಾಂಡಮ್ ಗಳನ್ನು ಉಚಿತವಾಗಿ ಹಂಚಲಾರಂಭಿಸಿತು. ಇದರಿಂದ ಅಮೆರಿಕದ ಸೈನಿಕರಲ್ಲಿ ಲೈಂಗಿಕ ರೋಗಗಳು ಗಣನೀಯವಾಗಿ ಕಡಿಮೆಯಾದವು. ಕ್ರೈಸ್ತರಲ್ಲಿ ಹಲವು ಪಂಗಡಗಳಿವೆ. ಮೊದಲನೆಯದು ರೋಮನ್ ಕ್ಯಾಥೋಲಿಕ್. ಎರಡನೆಯದು ಈಸ್ಟರ್ನ್ ಆರ್ಥೋಡಾಕ್ಸ್ ಚರ್ಚ್ ಹಾಗೂ ಮೂರನೆಯದು ಆಂಗ್ಲಿಕನ್ ಕಮ್ಯುನಿಯನ್.

ಈ ಆಂಗ್ಲಿಕನ್ ಕಮ್ಯುನಿಯನ್ ಕ್ರೈಸ್ತ ಪಂಗಡವು ೧೦ ವರ್ಷಗಳಿಗೊಮ್ಮೆ ಎಲ್ಲ ಬಿಷಪ್ಪುಗಳ ಲ್ಯಾಮ್ಬೆತ್ ಸಮಾವೇಶವನ್ನು ನಡೆಸುತ್ತದೆ. ೧೯೩೦ರ ದಶಕದಲ್ಲಿ ನಡೆದ ಸಮಾವೇಶವು ಜನಸಾಮಾನ್ಯರು ದಂಪತಿಗಳು ಜನನ ನಿಯಂತ್ರಣಕ್ಕಾಗಿ ಕಾಂಡಮ್‌ಗಳನ್ನು ಬಳಸಬಹುದೆಂದು ತನ್ನ ಒಪ್ಪಿಗೆಯನ್ನು ನೀಡಿತು. ೧೯೩೧ರಲ್ಲಿ ಅಮೆರಿಕದ ಚರ್ಚುಗಳ ಒಕ್ಕೂಟವು (ಫೆಡರಲ್ ಕೌನ್ಸಿಲ್ ಆಫ್ ಚರ್ಚಸ್) ಕಾಂಡಮ್ ಗಳ ಬಳಕೆಗೆ ಒಪ್ಪಿಗೆಯನ್ನು ನೀಡಿತು. ಆದರೆ ರೋಮನ್ ಕ್ಯಾಥೋಲಿಕ್ ಚರ್ಚ್ ಮಾತ್ರ ತನ್ನ ನಿಲುವನ್ನು ಸಡಿಲಿಸಲಿಲ್ಲ.

ಇಂದಿಗೂ ಸಹ ತನ್ನ ನಿಲುವನ್ನು ಬದಲಿಸಿಲ್ಲ. ೧೯೩೮ರ ವೇಳೆಗೆ ಅಮೆರಿಕಾದ್ಯಂತ ೩೦೦ ಜನನ ನಿಯಂತ್ರಣ ಕ್ಲಿನಿಕ್ ಆರಂಭವಾದವು. ಅಮೆರಿಕದ ಎಲ್ಲ ಬಡ ಮಹಿಳೆಯರು ಜನನ ನಿಯಂತ್ರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉಚಿತವಾಗಿ ಪಡೆಯಲಾರಂಭಿಸಿದರು. ಈ ಕ್ಲಿನಿಕ್ ಗಳಲ್ಲಿ ಕಾಂಡಮ್‌ಗಳ ವಿತರಣೆಯನ್ನು ಉಚಿತವಾಗಿ ಮಾಡಿದರು. ೧೯೪೦ರ ವೇಳೆಗೆ ಇಡೀ ಅಮೆರಿಕದಲ್ಲಿ ಲೈಂಗಿಕ ರೋಗಗಳು ಗಣನೀಯವಾಗಿ ಕಡಿಮೆಯಾದವು. ೧೯೫೭ರಲ್ಲಿ ಡ್ಯೂರೆಕ್ಸ್ ಸಂಸ್ಥೆಯು ಮೊದಲ ಬಾರಿಗೆ ಪೂರ್ವ ತೈಲ ಲೇಪಿತ ಕಾಂಡಮ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.

೧೯೬೦ರ ವೇಳೆಗೆ ಸಂತಾನ ನಿಯಂತ್ರಣ ಗುಳಿಗೆಗಳು ಮಾರುಕಟ್ಟೆಗೆ ಬಂದವು. ಹಾಗಾಗಿ ಜನಪ್ರಿಯತೆಯಲ್ಲಿ ಮತ್ತು
ಬಳಕೆಯಲ್ಲಿ ಕಾಂಡಮ್‌ಗಳು ಎರಡನೆಯ ಸ್ಥಾನಕ್ಕಿಳಿದವು. ಜುಲೈ ೩, ೧೯೮೧ರಲ್ಲಿ ಏಡ್ಸ್ ಕಾಯಿಲೆಯ ಅನಾವರಣ
ವಾಯಿತು. ೧೯೮೨ರಲ್ಲಿ ಏಡ್ಸ್ ಕಾಯಿಲೆಯು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ ಎನ್ನುವುದು ಖಚಿತವಾಯಿತು. ೧೯೮೫ರ ನಂತರ ಕಾಂಡಮ್ ಜಾಹೀರಾತುಗಳು ಪತ್ರಿಕೆಗಳಲ್ಲಿ ಬರಲಾರಂಭಿಸಿದವು.

೧೯೯೦ರ ದಶಕದಲ್ಲಿ ಟೆಲಿವಿಷನ್‌ನಲ್ಲಿ ಮೊದಲ ಬಾರಿಗೆ ಕಾಂಡಮ್ ಜಾಹೀರಾತುಗಳು ಕಾಣಿಸಿಕೊಳ್ಳಲಾರಂಭಿಸಿದವು. ೧೯೯೧ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಕಾಂಡೋಮೇನಿಯ ಎಂಬ ಕೇವಲ ಕಾಂಡಮ್ ಗಳನ್ನು ಮಾರಾಟ ಮಾಡುವ ಅಂಗಡಿಯು ಆರಂಭವಾಯಿತು. ೧೯೯೫ರ ವೇಳೆಗೆ ಕಾಂಡೋಮೇನಿಯ ಆನ್-ಲೈನ್ ಕಾಂಡಮ್ ವಿತರಣೆಯನ್ನು ಆರಂಭಿಸಿತು. ೧೯೯೦ರಲ್ಲಿ ಡ್ಯೂರೆಕ್ಸ್ ಅದುವರೆಗು ಜನಪ್ರಿಯವಾಗಿದ್ದ ಲ್ಯಾಟೆಕ್ಸ್ ಕಾಂಡಮ್‌ಗಳ ಜತೆಯಲ್ಲಿ ಮೊದಲ ಬಾರಿಗೆ
ಪಾಲಿಯೂರಿಥೇನ್ ಕಾಂಡಮ್‌ನ್ನು ಅವಂತಿ ಎನ್ನುವ ಹೆಸರಿನಲ್ಲಿ ಬಿಡುಗಡೆ ಮಾಡಿತು.

ಈಗ ಏಡ್ಸ್ ಹಾವಳಿಯು ಕಡಿಮೆಯಾಗಿದೆ. ಆದರೂ ಸಹ ಕಾಂಡಮ್‌ಗಳು ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ೨೦೨೨ರಲ್ಲಿ ಒನ್ ಮತ್ತು ಮೈ ಒನ್ ಎಂಬ ಹೆಸರಿನ ಕಾಂಡಮ್‌ಗಳನ್ನು ಗುದಮೈಥುನಕ್ಕೆ ಇದು ಸುರಕ್ಷಿತ ಹಾಗೂ ಪರಿಣಾಮಕಾರಿ ಎನ್ನುವ ಹೆಸರಿನಲ್ಲಿ ಅಮೆರಿಕದ ಎಫ್ಡಿಎ ಮಾರಾಟಕ್ಕೆ ಅನುಮತಿಯನ್ನು ನೀಡಿದೆ. ಮುಂದಿನ ದಿನಗಳಲ್ಲಿ
ಕಾಂಡಮ್ ಬಳಸುವವರ ಪ್ರಮಾಣವು ಏರಲಿದೆ ಎಂದು ನಿರೀಕ್ಷಿಸಲಾಗಿದೆ.

error: Content is protected !!