Roopa Gururaj Column: ಜಮದಗ್ನಿಯ ಕೋಪಕ್ಕೆ ಕೊಡಲಿ ಬೀಸಿದ ಪರಶುರಾಮ
ಮಹಾಮುನಿ ಜಮದಗ್ನಿ ಹಾಗೂ ರೇಣುಕಾದೇವಿಯ ಮಗ ಪರಶುರಾಮ. ಆತ ಚಿಕ್ಕವನಾಗಿದ್ದಾಗಲೇ ಆಧ್ಯಾತ್ಮಿಕ ಹಾಗೂ ಶಸ್ತ್ರವಿದ್ಯೆಗಳಲ್ಲಿ ನಿಪುಣತೆಯನ್ನು ಹೊಂದಿದವನು. ಅವನು ಭಗವಾನ್ ಶ್ರೀವಿಷ್ಣು ವಿನ ಆರನೇ ಅವತಾರವೆನ್ನುವರು

ಅಂಕಣಗಾರ್ತಿ ರೂಪಾ ಗುರುರಾಜ್

ಒಂದೊಳ್ಳೆ ಮಾತು
ರೂಪಾ ಗುರುರಾಜ್
ಮಹಾಮುನಿ ಜಮದಗ್ನಿ ಹಾಗೂ ರೇಣುಕಾದೇವಿಯ ಮಗ ಪರಶುರಾಮ. ಆತ ಚಿಕ್ಕವನಾಗಿದ್ದಾಗಲೇ ಆಧ್ಯಾತ್ಮಿಕ ಹಾಗೂ ಶಸ್ತ್ರವಿದ್ಯೆಗಳಲ್ಲಿ ನಿಪುಣತೆಯನ್ನು ಹೊಂದಿದವನು. ಅವನು ಭಗವಾನ್ ಶ್ರೀವಿಷ್ಣುವಿನ ಆರನೇ ಅವತಾರವೆನ್ನುವರು.
ಅವನ ತಾಯಿ ರೇಣುಕಾ ಮಹಾ ಪತಿವ್ರತೆ. ಪ್ರತಿದಿನ ಆಕೆ ಆಶ್ರಮದ ಹತ್ತಿರದಲ್ಲಿದ್ದ ನದಿಗೆ ಸ್ನಾನಕ್ಕೆ ಹೋಗುತ್ತಿದ್ದಳು. ಅವಳು ಎಷ್ಟು ಪವಿತ್ರಳೆಂದರೆ, ಅವಳ ಪಾತಿವ್ರತ್ಯದ ಪವಾಡದಿಂದ, ಮರಳಿನಿಂದ ಮಡಿಕೆ ಮಾಡಿ, ಅದರಿಂದ ಮನೆಗೆ ನೀರನ್ನು ತುಂಬಿಸಿಕೊಂಡು ಹೋಗುತ್ತಿದ್ದಳು. ಒಂದು ದಿನ ಅವಳು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ಆಕಾಶದಲ್ಲಿ ಚಿತ್ರರಥ ಎಂಬ ಗಂಧರ್ವ ಹಾದು ಹೋಗುತ್ತಿದ್ದ.
ಇದನ್ನೂ ಓದಿ: Roopa Gururaj Column: ಗುರು ತೋರಿದ ಬೆಳಕು
ಅವನ ಪ್ರತಿಬಿಂಬವನ್ನು ಅವಳು ನೀರಿನಲ್ಲಿ ನೋಡಿ, ಯಾರೀ ಪುರುಷ? ಎಷ್ಟು ಸುಂದರವಾಗಿ ದ್ದಾನೆ ಎಂದು ಮನಸ್ಸಿನಲ್ಲಿ ಅಂದುಕೊಂಡಳು. ಯಾರೇ ಆದರೂ, ಮನಸ್ಸಿನಲ್ಲಿ ಅಂದು ಕೊಳ್ಳುವ ವಿಚಾರವಾಗಿದ್ದರೂ, ಅದೇ ಅವಳ ಪವಿತ್ರತೆಗೆ ಕಳಂಕವಾಗಿ ಬಿಟ್ಟಿತು. ಅಂದು ಅವಳು ಮರಳಿನಿಂದ ಮಡಿಕೆ ಮಾಡಲಾಗಲಿಲ್ಲ.
ಬಹಳ ಸಮಯವಾಗುತ್ತಾ ಬಂದಿತು. ತನ್ನ ಪತಿ ಕಾಯುತ್ತಿರುತ್ತಾರೆ, ಇಂದು ನಾನು ನೀರನ್ನು ತರಲಾಗಲಿಲ್ಲವೆಂದು ಚಿಂತಿಸುತ್ತಾ, ಬರಿಗೈಯಲ್ಲಿ ಬರುತ್ತಿರುವುದನ್ನು, ದೂರದಿಂದಲೇ ಗಮನಿಸಿದ ಅವಳ ಪತಿ ಜಮದಗ್ನಿ, ತನ್ನ ಜ್ಞಾನಶಕ್ತಿಯಿಂದ ಅಲ್ಲಿ ಏನು ನಡೆಯಿತು ಎಂದು ತಿಳಿದು ಬಹಳ ವಾಗಿ ಕುಪಿತನಾದ.ಅಲ್ಲೇ ನಿಲ್ಲು , ನನ್ನ ಬಳಿ ಬರಬೇಡ.. ನಿನ್ನ ಮನಸ್ಸು ಅನ್ಯ ಪುರುಷನಲ್ಲಿ ಒಂದು ಕ್ಷಣ ಆವರಿಸಿತು ಎಂದು ಜೋರಾಗಿ ಗದರಿದ. ಆ ಸಮಯದಲ್ಲಿ ಪರಶುರಾಮ ಆಶ್ರಮದಲ್ಲಿ ಇರಲಿಲ್ಲ.
ಉಳಿದ ನಾಲ್ಕು ಮಕ್ಕಳು ತಮ್ಮ ತಂದೆಯ ಕೋಪವನ್ನು ನೋಡಿ ಭಯದಿಂದ ತತ್ತರಿಸಿ ಹೋದರು. ಜಮದಗ್ನಿ ತನ್ನ ಮಕ್ಕಳನ್ನು ಕರೆದು, ಇವಳಿಗೆ ಸರಿಯಾದ ಶಿಕ್ಷೆ ಕೊಡಬೇಕು, ಯಾರಾದರೂ ಇವಳ ತಲೆಯನ್ನು ಕತ್ತರಿಸಿ ಹಾಕಿ ಎಂದು ಆe ಮಾಡಿದ. ತಮ್ಮ ತಾಯಿಯನ್ನು ಕೊಲ್ಲಲು ಅವರಾರಿಗೂ ಮನಸ್ಸಾಗಲಿಲ್ಲ, ಎಲ್ಲರೂ ನಿರಾಕರಿಸಿಬಿಟ್ಟರು. ಆ ಸಮಯಕ್ಕೆ ಸರಿಯಾಗಿ ಪರಶುರಾಮ ಅಲ್ಲಿಗೆ ಬಂದ.
ರಾಮ, ಬಾ ಇಲ್ಲಿ, ಪತಿವ್ರತೆಯ ವ್ರತಭಂಗ ಮಾಡಿರುವ ಈ ನಿನ್ನ ತಾಯಿಯನ್ನೂ, ನನ್ನ ಆಜ್ಞೆ ಯನ್ನು ವಿರೋಧಿಸಿದ ನಿನ್ನ ಸಹೋದರರನ್ನು ಕೊಲ್ಲು ಎಂದು ಆಜ್ಞೆ ಮಾಡಿದ. ತಂದೆಯ ಆeಯನ್ನು, ಪಾಲಿಸಲು ಒಪ್ಪಿಕೊಂಡು, ಎಲ್ಲರ ತಲೆಯನ್ನು ಕತ್ತರಿಸಿಯೇ ಬಿಟ್ಟ ಪರಶುರಾಮ. ಪರಶುರಾಮ, ನಿನ್ನ ನಿಷ್ಠೆಯನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ, ನಿನಗೆ ಬೇಕಾದ ವರವನ್ನು ಬೇಡಿಕೊ ಮಗನೇ ಎಂದು ಹೇಳಿದ ಜಮದಗ್ನಿ ಮುನಿ.
ತಂದೆಯೇ, ನನಗೆ ನನ್ನ ತಾಯಿ, ನನ್ನ ಸಹೋದರರೇ ನನಗೆ ಸರ್ವಸ್ವ, ಅವರಿಗೆ ಪ್ರಾಣ ಬರುವಂತೆ ಮಾಡಿ ಎಂದು ಬೇಡಿಕೊಂಡ ಪರಶುರಾಮ. ಅಷ್ಟು ಹೊತ್ತಿಗೆ ಕೋಪ ತಣ್ಣಗಾಗಿದ್ದ ಜಮದಗ್ನಿ ಹಾಗೆಯೇ ಆಗಲಿ ಎಂದು, ತನ್ನ ತಪೋಬಲದಿಂದ ಅವರನ್ನೆಲ್ಲಾ ಪುನಃ ಬದುಕಿ ಬರುವಂತೆ ಮಾಡಿದ. ಪರಶುರಾಮ ಅಲ್ಲಿಗೆ ನಿಲ್ಲಲಿಲ್ಲ ತನ್ನ ಮೇಲೆ ಸಂಪ್ರೀತನಾದ ತಂದೆಯ ಬಳಿ ತಂದೆ ನನಗೆ ಇನ್ನೊಂದು ವರ ಬೇಕು ಎಂದು ಕೇಳಿದ.
ಅವನು ಕೇಳಿದ ಏನನ್ನು ನಿರಾಕರಿಸುವ ಸ್ಥಿತಿಯಲ್ಲಿ ಮಹಾಮುನಿ ಇರಲಿಲ್ಲ ಆಗಲಿ ಹೇಳು ಎಂದಾಗ, ನಿಮಗೆ ಇಷ್ಟು ಕೋಪ ಒಳ್ಳೆಯದಲ್ಲ, ನೀವು ಕೋಪವನ್ನು ಬಿಡಬೇಕೆಂದು ತಂದೆಯನ್ನು ಬೇಡಿಕೊಂಡ. ಪರಶುರಾಮನ ಮನದ ಇಂಗಿತ ಜಮದಗ್ನಿಗೆ ಅರ್ಥವಾಯಿತು, ಪರಶುರಾಮ ಏನನ್ನು ತನಗಾಗಿ ಕೇಳಿರಲಿಲ್ಲ ಅವನ ಬಗ್ಗೆ ಹೆಮ್ಮೆಯೂ ಅನಿಸಿತು, ಹಾಗೆಯೇ ಆಗಲಿ ಎಂದು ಅಂದಿನಿಂದ ತನ್ನ ಕೋಪವನ್ನು ತೊರೆದ.
ಒಂದೊಮ್ಮೆ ಜೀವನದಲ್ಲಿ ಇಂಥ ಪರಿಸ್ಥಿತಿಗಳು ಬರುತ್ತವೆ. ಆ ಕ್ಷಣಕ್ಕೆ ಸೋತು, ಎರಡು ಹೆಜ್ಜೆ ಹಿಂದಿಟ್ಟು, ನಂತರ ನಿಧಾನವಾಗಿ ಮುಂದಡಿ ಇಡಬೇಕು. ಸೋತು ಗೆದ್ದಾಗ, ತಾಳ್ಮೆ ವಹಿಸಿದಾಗ ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು.