Wednesday, 6th November 2024

ಸ್ತ್ರೀ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ರುಕ್ಮಿಣಿಕುಮಾರಿ !

ಇದೇ ಅಂತರಂಗ ಸುದ್ದಿ

vbhat@me.com

ರುಕ್ಮಿಣಿ ಕುಮಾರಿ ಅಂದು ಪರೀಕ್ಷೆ ಬರೆಯದಿದ್ದರೆ ಯಾರೂ ಏನೂ ಹೇಳುತ್ತಿರಲಿಲ್ಲ. ಪರೀಕ್ಷೆ ಬರೆಯದಿರಲು ಅವಳಿಗೆ ಬಲವಾದ ಕಾರಣ ಸಿಕ್ಕಿತ್ತು. ಆದರೆ ಅವಳು ಅದನ್ನೇ ಪರೀಕ್ಷೆ ಬರೆಯಲು ಬಲವಾದ ಕಾರಣವಾಗಿ ಪರಿವರ್ತಿಸಿಕೊಂಡಳು. ಇಂದು ರುಕ್ಮಿಣಿ ಕುಮಾರಿ ‘ಸ್ತ್ರೀ ಶಿಕ್ಷಣ’ಕ್ಕೆ ಹೊಸ ಭಾಷ್ಯ ಬರೆದಿದ್ದಾಳೆ. ದೇಶದ ಅಸಂಖ್ಯ ಹೆಣ್ಣುಮಕ್ಕಳಿಗೆ ಆದರ್ಶವಾಗಿzಳೆ. ಮಗುವನ್ನು ಹೆತ್ತು, ಪರೀಕ್ಷೆ ಬರೆಯಲು ಸಿದ್ಧವಾಗುವವರೆಗಿನ ಆ ನಾಲ್ಕು ತಾಸುಗಳ ಆಕೆಯ ಮಾನಸಿಕ ಮತ್ತು ದೈಹಿಕ ಸ್ಥಿತಿ ಹೇಗಿದ್ದಿರಬಹುದು?

ಸುಮಾರು ಹದಿನೈದು ದಿನಗಳ ಹಿಂದೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದ ಒಂದು ಪ್ರಸಂಗ ಎಂಥವರ ಮನಸ್ಸನ್ನಾದರೂ ತಟ್ಟದೇ ಇರದು.  ಇಪ್ಪತ್ತೆರಡು ವರ್ಷ ವಯಸ್ಸಿನ ರುಕ್ಮಿಣಿಕುಮಾರಿ ಗಣಿತ ಪರೀಕ್ಷೆ ಬರೆಯಲೆಂದು ಪರೀಕ್ಷಾ ಕೊಠಡಿ ತಲುಪಿದ್ದಳು. ಆಕೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ದಲಿತ ವಿದ್ಯಾರ್ಥಿನಿ. ಪರೀಕ್ಷಾ ಕೊಠಡಿಯ ವರಾಂಡದಲ್ಲಿ ಸೇರಿದ್ದ ಎಲ್ಲರೂ ಆಕೆಯನ್ನೇ ಗಮನಿಸು ತ್ತಿದ್ದರು. ಅದಕ್ಕೂ ಕಾರಣವಿತ್ತು. ಆಕೆ ಆಗಲೇ ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದಳು.

ಯಾವುದೇ ಕ್ಷಣದಲ್ಲಿ ಪ್ರಸವ ವೇದನೆ ಕಾಣಿಸಿಕೊಳ್ಳಬಹುದು ಎಂಬುದು ರುಕ್ಮಿಣಿಗೂ ಗೊತ್ತಿತ್ತು. ಪರೀಕ್ಷಾಧಿಕಾರಿಗಳಿಗೂ ಆಕೆ ಈ ಬಗ್ಗೆ ಮೊದಲೇ ತಿಳಿಸಿದ್ದಳು ಮತ್ತು ಪರೀಕ್ಷಾ ಕೇಂದ್ರದ ಸೂಕ್ತ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಮರುದಿನ ವಿಜ್ಞಾನದ ಪರೀಕ್ಷೆ ಇತ್ತು. ಆದರೆ ಗಣಿತ ಪರೀಕ್ಷೆಯನ್ನು ಮುಗಿಸಿ ಮನೆಗೆ ತೆರಳಿದ ನಂತರ ರಾತ್ರಿ ಆಕೆಗೆ ಪ್ರಸವವೇದನೆ ಉಲ್ಬಣಿಸಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಕೆಯ ಸ್ಥಿತಿಯನ್ನು ಗಮನಿಸಿದ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳು ವಂತೆ ಹೇಳಿದರು. ಈ ಮಧ್ಯೆ ಆಕೆಗೆ ಪರೀಕ್ಷೆಗೆ ಹಾಜರಾಗಲು ಪರೀಕ್ಷಾಧಿಕಾರಿಗಳು ವಿಶೇಷ ಅನುಮತಿ ನೀಡಿದರು.

ಮರುದಿನ ಬೆಳಗ್ಗೆ ರುಕ್ಮಿಣಿಕುಮಾರಿಗೆ ನಾರ್ಮಲ್ ಡೆಲಿವರಿ ಆಯಿತು. ಆಕೆ ಆರೋಗ್ಯವಂತ ಮಗುವಿಗೆ ಜನ್ಮವಿತ್ತಳು. ಹೆರಿಗೆಯಾದ ಮೂರು ಗಂಟೆಯ ನಂತರ ಆಕೆ ಪರೀಕ್ಷೆಯತ್ತ ಗಮನ ಹರಿಸಿದಳು. ಏಕೆಂದರೆ ಆಕೆಗೆ ಪರೀಕ್ಷೆಯಲ್ಲಿ ಪಾಸ್ ಆಗಿ, ಉತ್ತಮ ನೌಕರಿ ಗಿಟ್ಟಿಸಬೇಕೆಂಬ ಮಹದಾಸೆ ಇತ್ತು. ‘ಈಗ ತಾನೇ ಹುಟ್ಟಿದ ಮಗುವಿನ ಬಗ್ಗೆ ಗಮನಹರಿಸುವುದನ್ನು ಬಿಟ್ಟು, ಪರೀಕ್ಷೆ ಕಡೆ ಗಮನಹರಿಸುತ್ತಿದ್ದೀಯಲ್ಲ? ತಾಯಿಯಾದವಳು ಮಗುವಿನ
ಬಗ್ಗೆ ಗಮನ ನೀಡಬೇಕು. ಪರೀಕ್ಷೆಯನ್ನು ಯಾವತ್ತು ಬೇಕಾದರೂ ಬರೆಯಬಹುದು. ಮಗುವನ್ನು ಹೆತ್ತು ಇನ್ನೂ ಮೂರು ಗಂಟೆ ಆಗಿಲ್ಲ, ನೀನು ಬಹಳ ದಣಿದಿದ್ದೀಯಾ.

ಹಸಿಯಾದ ದೇಹ ಸುಧಾರಿಸಿಕೊಳ್ಳಲು ಕನಿಷ್ಠ ಹತ್ತು ಗಂಟೆಯಾದರೂ ಬೇಕು. ಇಂಥ ಸ್ಥಿತಿಯಲ್ಲಿ ಪರೀಕ್ಷೆ ಬರೆಯುವುದು ಸುರಕ್ಷಿತವಲ್ಲ’ ಎಂದು ಪಾಲಕರು ಮತ್ತು ವೈದ್ಯರು ಹೇಳಿದರು. ಆದರೆ ರುಕ್ಮಿಣಿಕುಮಾರಿ ಅವರ ಸಲಹೆಯಯನ್ನು ಲೆಕ್ಕಿಸಲಿಲ್ಲ. ಏನೇ ಆದರೂ ಪರೀಕ್ಷೆ ಬರೆಯುತ್ತೇನೆ ಎಂದು ಹಠ ಹಿಡಿದಳು. ಬೇರೆ ದಾರಿ ಕಾಣದೇ ಅವರೆಲ್ಲ ಮೌನ ಸಮ್ಮತಿ ನೀಡಿದರು. ಸ್ಥಳೀಯ ವೈದ್ಯರು ಅಂಬ್ಯುಲೆ ವ್ಯವಸ್ಥೆ ಮಾಡಿದರು. ನಿನ್ನೆ ರುಕ್ಮಿಣಿಕುಮಾರಿ ತುಂಬು ಬಸುರಿ. ಇಂದು ಆಕೆ ಒಂದು ಮಗುವಿನ ತಾಯಿ! ಪರೀಕ್ಷಾ ಕೊಠಡಿಯಲ್ಲಿದ್ದವರೆಲ್ಲ ದಂಗಾಗಿ ಹೋದರು. ಎಲ್ಲರ ಬಾಯಲ್ಲೂ ಅವಳ ಬಗ್ಗೆಯೇ ಪ್ರಶಂಸೆಯ ಮಾತುಗಳು. ಆಕೆಯ ಬಗ್ಗೆ ಶ್ಲಾಘನೆಯ ಮಹಾಪೂರ. ಅಂಥ ಸಂಕಷ್ಟದ ಸನ್ನಿವೇಶದಲ್ಲೂ ಆಕೆ ಶಿಕ್ಷಣಕ್ಕೆ ಕೊಟ್ಟ ಮಹತ್ವದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು.

ರುಕ್ಮಿಣಿಕುಮಾರಿ ಅಂದು ಪರೀಕ್ಷೆ ಬರೆಯದಿದ್ದರೆ ಯಾರೂ ಏನೂ ಹೇಳುತ್ತಿರಲಿಲ್ಲ. ಪರೀಕ್ಷೆ ಬರೆಯದಿರಲು ಅವಳಿಗೆ ಬಲವಾದ ಕಾರಣ ಸಿಕ್ಕಿತ್ತು. ಆದರೆ ಅವಳು ಅದನ್ನೇ ಪರೀಕ್ಷೆ ಬರೆಯಲು ಬಲವಾದ ಕಾರಣವಾಗಿ ಪರಿವರ್ತಿಸಿಕೊಂಡಳು. ಇಂದು ರುಕ್ಮಿಣಿಕುಮಾರಿ ‘ಸ್ತ್ರೀ ಶಿಕ್ಷಣ’ಕ್ಕೆ ಹೊಸ ಭಾಷ್ಯ
ಬರೆದಿದ್ದಾಳೆ. ದೇಶದ ಅಸಂಖ್ಯ ಹೆಣ್ಣುಮಕ್ಕಳಿಗೆ ಆದರ್ಶವಾಗಿದ್ದಾಳೆ. ಮಗುವನ್ನು ಹೆತ್ತು, ಪರೀಕ್ಷೆ ಬರೆಯಲು ಸಿದ್ಧವಾಗುವವರೆಗಿನ ಆ ನಾಲ್ಕು ತಾಸು ಗಳ ಆಕೆಯ ಮಾನಸಿಕ ಮತ್ತು ದೈಹಿಕ ಸ್ಥಿತಿ ಹೇಗಿದ್ದಿರಬಹುದು? ಒಂದು ಕ್ಷಣ ಯೋಚಿಸಲೂ ಧೈರ್ಯ ಬರುತ್ತಿಲ್ಲ. ಆ ಹೆಣ್ಣುಮಗಳ ಪರಿಶ್ರಮ, ಛಲ, ಹಠ, ಜೀವನಪ್ರೀತಿ ಎಲ್ಲರಿಗೂ ಚೇತೋಹಾರಿ.

ಅಮ್ಮ : ಮೂರು ಪ್ರಸಂಗಗಳು
ಕತೆಗಾರ್ತಿ ಗೀತಾ ಬಿ.ಯು. ಅವರ ಇತ್ತೀಚೀನಾ ಕೃತಿ ‘ಅಮ್ಮನ ನೆನಪು ಸದಾ…’ ಓದುತ್ತಿದ್ದೆ. ತಮ್ಮ ಅಮ್ಮನ ಬಗ್ಗೆ ಗೀತಾ ಸುಂದರವಾದ ನೆನಪು ಗಳನ್ನು ಕಟ್ಟಿಕೊಟ್ಟಿದ್ದಾರೆ. ಎಲ್ಲರ ಬದುಕಿನಲ್ಲೂ ಅಮ್ಮ ಶಾಶ್ವತವಾಗಿ ನೆಲೆಸಿರುತ್ತಾಳೆ. ಅಮ್ಮನ ಬಗ್ಗೆ ಹೇಳಲು ಹತ್ತಾರು ಕತೆ-ಪ್ರಸಂಗ ಗಳಿರುತ್ತವೆ. ಅಮ್ಮ ಯಾವತ್ತೂ ಮುಗಿಯದ, ಬತ್ತದ ಭಾವ ಗಂಗೆ. ಈ ಕೃತಿಯಲ್ಲಿ ಗೀತಾ ಅವರು, ಅಮ್ಮ ಎಂಬ ಮಹಾನದಿಯ ಕೆಲವು ಭಾವ-ಬಿಂದುಗಳನ್ನು ಬೊಗಸೆಯಲ್ಲಿ ಎತ್ತಿಕೊಟ್ಟಿದ್ದಾರೆ.

ಪುಸ್ತಕ ಆರಂಭಿಸಿದ್ದೊಂದೇ ಗೊತ್ತು, ಕೊನೆಯಲ್ಲಿ ನಿಂತಾಗ ಇಷ್ಟು ಬೇಗ ಮುಗಿಯಿತಾ ಎಂಬ ಭಾವ. ಕೊನೆಯಲ್ಲಿ ಅಚ್ಚಳಿಯದೇ ಉಳಿಯುವ ಪಾತ್ರ ಅಮ್ಮ! ಈ ಪುಸ್ತಕದಲ್ಲಿನ ಮೂರು ಪ್ರಸಂಗಗಳನ್ನು ಅವರದೇ ಮಾತಿನಲ್ಲಿ ಹೇಳುವುದಾದರೆ.. ’’FB is asking what’s on your mind…. I say…. ಅಮ್ಮ !

‘ಹತ್ತಿ ತಂದುಕೊಡು ಹೂಬತ್ತಿ ಮಾಡಿಕೊಡ್ತೀನಿ’ ಅನ್ನೋರು. ಸಂಜೆ ಹೋದಾಗ ಬಿಡಿಸಿಟ್ಟ ಹತ್ತಿ ತುಂಬಿದ ಬುಟ್ಟಿ ಅದರೊಳಗೆ ಒಂದು ಕಡೆ ಹೊಸೆದ ಹೂಬತ್ತಿ ಪುಟ್ಟ ಬಟ್ಟಲಲ್ಲಿ ಹಾಲನ್ನು ಇಟ್ಟುಕೊಂಡು ಟಿ.ವಿ.ನೋಡುತ್ತಾ ಸೋ- ಮೇಲೆ ಕೂತಿರುತ್ತಿದ್ದ ಅಮ್ಮ.

ಅವರು ಹೊಸೆದ ಹೂಬತ್ತಿಗಳು ಅವರ ಮಕ್ಕಳ ಮನೆಗಳಲ್ಲಿ ಅಷ್ಟೇ ಅಲ್ಲ, ಅವೆಷ್ಟೋ ಮನೆಗಳಲ್ಲಿ ದೇವರ ಮುಂದೆ ದೀಪ ಬೆಳಗಿಸಿವೆ. ಕೇಳಿದವರಿಗೆ ಹೂಬತ್ತಿ ಕೊಟ್ಟು ಕಳಿಸಿದ್ದಾರೆ ಅಮ್ಮ.

ಎರಡನೇ ಪ್ರಸಂಗ : ನನ್ನ ಅಜ್ಜಿ (ಅಮ್ಮನ ಅಮ್ಮ)ಸಿಟಿ ಬಸ್ಸಿನಲ್ಲಿ ಜಯನಗರದಲ್ಲಿ ಇದ್ದ ನಮ್ಮ ಮನೆಗೆ, ಚಾಮರಾಜಪೇಟೆಯಿಂದ ಬರುತ್ತಿದ್ದರು.

ಕಣ್ಣಿಗೆ ಪೊರೆ ಬಂದು ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದರೂ ಒಬ್ಬರೇ ಬರುತ್ತಿದ್ದರು. ‘ಬಸ್ ನಂಬರ್ ಕಾಣಿಸುವುದಿಲ್ಲವ ಅಜ್ಜಿ. ನೀವು ತಪ್ಪು ಬಸ್ ಹತ್ತಿಬಿಟ್ಟರೆ.’ ಎಂಬ ನಮ್ಮ ಪ್ರಶ್ನೆಗೆ ನಗುತ್ತಿದ್ದರು ಅಜ್ಜಿ. ‘ಕಣ್ಣು ಕುರುಡಾದರೆ ಬಾಯಿ ಕುರುಡೇ? ಅಲ್ಲಿ ಇರುವ ಯಾರನ್ನಾದರೂ ಕೇಳಿದರೆ ಯಾವ ನಂಬರ್ ಬಸ್ಸು ಅಂತ ಹೇಳುತ್ತಾರೆ. ಹತ್ತಿದ, ಬಂದ ಅಷ್ಟೇ. ಮಾತನಾಡಲು ಶುಲ್ಕ ಕೊಡಬೇಕೇ?’ ಎನ್ನುತ್ತಿದ್ದರು. ನನ್ನ ಅಮ್ಮ ಇದ್ದದ್ದು ಹಾಗೆಯೇ…
ಅವರ ಅಮ್ಮನ ಹಾಗೆ… ‘ಹಿಂಜರಿಕೆ’ ಎಂಬ ಪದ ಅವರ ಪದಕೋಶದಲ್ಲಿಯೇ ಇರಲಿಲ್ಲ.

ಮೂರನೇ ಪ್ರಸಂಗ : ಮೂರು ವರ್ಷದ ಕೆಳಗಿನ ಮಾತು. ಅಮ್ಮನಿಗೆ ಹಲ್ಲುನೋವು, ಡೆಂಟಿ ಬಳಿ ಹೋಗಿದ್ವಿ. ಎರಡು ಹಲ್ಲುಗಳಿಗೆ ಕ್ಯಾಪ್ ಹಾಕಬೇಕು ಅಂದರು ಡಾಕ್ಟರು. ಮೂರು ರೇಂಜಿನದು ಇದೆ ಎಂದರು ಡಾಕ್ಟರು. ಹತ್ತೋ, ಹನ್ನೆರಡೋ, ಹದಿನೈದು ಸಾವಿರದ್ದೇ ಕ್ಯಾಪು… ಬೆಸ್ಟು ಚೆನ್ನಾಗಿದೆ
ವರ್ಷಗಟ್ಟಲೆ ಬಾಳಿಕೆ ಬರುತ್ತೆ ಅಂದರು ಅವರು.

ಅಮ್ಮ ನಕ್ಕಿದ್ದರು. ‘ನಂಗೆ ಈಗ ಎಂಬತ್ತು ವರ್ಷ. ನಾನೇ ಎಷ್ಟು ವರ್ಷ ಇರ್ತಿನೋ ಏನೋ? ಹಲ್ಲಿನ ಕ್ಯಾಪಿನ ಬಾಳಿಕೆ ಬಗ್ಗೆ ಏನು ಮಾತು ಆಡೋದು? ಕಮ್ಮಿ ಬೆಲೆಯದು ಹಾಕಿ ಸಾಕು’ ಎಂದು ನಗುತ್ತಲೇ ಹೇಳಿದ್ದರು. ಅದಾದ ಮೇಲೆ ಎರಡು ವರ್ಷ ಇದ್ದರು ಅಮ್ಮ ಅಷ್ಟೇ. ಕೊಂಚ ಹಲ್ಲು ನೋಯುತ್ತಿದೆ. ಅಮ್ಮನ ಮಾತುಗಳು ಕಿವಿಯಲ್ಲಿ ಮೊರೆಯುತ್ತಿದೆ.

ಅಮ್ಮ ಎಂಬ ದೊಡ್ಡ ನೆನಪು
ಗೀತಾ ಅವರು ಅಮ್ಮನ ಬಗ್ಗೆ ಬರೆದಿದ್ದನ್ನು ಓದಿ ಮುಗಿಸಿದ ಬಳಿಕ, ಮೊನ್ನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಖರೀದಿಸಿದ ಪುಸ್ತಕ ಎತ್ತಿಕೊಂಡೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಷೆಲ್ ಒಬಾಮ ಬರೆದ The Light We Carry : Overcoming in Uncertain Times ಎಂಬ ಪುಸ್ತಕದ ಮಧ್ಯಭಾಗವನ್ನು ತೆರೆದಾಗ, ಅಲ್ಲೂ ಅಮ್ಮನ ಬಗ್ಗೆ ಬರೆದ ಸಾಲುಗಳೇ ಕಾಣಬೇಕಾ? ಅಮೆರಿಕದ ಅಧ್ಯಕ್ಷನ ಮಡದಿ ಯಾದರೇನು, ಮಿಚೆಲ್ ಒಬಾಮ ಅವರಿಗೆ ವೈಟ್ ಹೌಸ್ ದಿನಗಳಲ್ಲಿ ಏಕಾಂಗಿತನ ವಿಪರೀತವಾಗಿ ಕಾಡುತ್ತಿತ್ತು.

ಅಮೆರಿಕ ಅಧ್ಯಕ್ಷನ ಪತ್ನಿ ಎಂಬ ಕಾರಣಕ್ಕೆ ಎಲ್ಲರ ಗಮನ ಅವರ ಮೇಲೆ ನೆಟ್ಟಿರುತ್ತಿದ್ದುದರಿಂದ, ಅವರು ಮತ್ತಷ್ಟು ಉದ್ವೇಗಕ್ಕೆ ಒಳಗಾಗುತ್ತಿದ್ದರು. ಇಂಥ ಸಂದರ್ಭದಲ್ಲಿ ಅವರ ನೆರವಿಗೆ ಬರುತ್ತಿದ್ದವರು ಅವರ ತಾಯಿ. ‘ನನ್ನ ಅಮ್ಮ ನನ್ನ ಪಾಲಿಗೆ ಬುದ್ಧ, ನಗುವ ಬುದ್ಧ. ಅವಳಿದ್ದರೆ ನನಗೆ ನೂರು ಆನೆ ಬಲ’ ಎಂದು ಮಿಚೆಲ್ ಹೇಳುತ್ತಾರೆ. ಅಧ್ಯಕ್ಷನ ಮಡದಿ ಎಂದ ಮೇಲೆ, ದಿನವಿಡೀ ಹತ್ತಾರು ಕಾರ್ಯಕ್ರಮ, ಗಣ್ಯರ ಭೇಟಿ, ಸಮಾರಂಭ, ಭೋಜನಕೂಟ, ಪ್ರವಾಸ… ಇಂಥ ಸಂದರ್ಭಗಳನ್ನು ನಿಭಾಯಿಸುವುದು ಸಾಮಾನ್ಯವಲ್ಲ. ಗಂಡನಿಗೆ ನೆರವಾಗುವುದು ಎಷ್ಟು ಮುಖ್ಯವೋ, ಬೆಳೆಯುವ ಹೆಣ್ಣು ಮಕ್ಕಳಿಗೆ ತಾಯಿಯಾಗುವುದೂ ಅಷ್ಟೇ ಮುಖ್ಯ. ಒಬಾಮ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ಹದಿಹರೆಯದ ಆ ಮಕ್ಕಳನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಆಗ ನೆರವಿಗೆ ಬಂದವರು ಅವರ ತಾಯಿ.

ಮಿಷೆಲ್ ತಮ್ಮ ತಾಯಿಯ ಬಗ್ಗೆ ಹೀಗೆ ಬರೆಯುತ್ತಾರೆ – ‘ನನಗೆ ನನ್ನ ತಾಯಿ ಬಲು ದೊಡ್ಡ ಶಕ್ತಿ. ಏನೇ ಸವಾಲು ಎದುರಾದರೂ, ನನ್ನ ಮುಂದೆ ಯಾವ ಆಯ್ಕೆಗಳು ಇಲ್ಲದಿದ್ದರೂ, ಅಮ್ಮನನ್ನು ನೆನಪಿಸಿಕೊಂಡರೆ, ಹೊಸ ಹಾದಿ ತೆರೆದುಕೊಳ್ಳುತ್ತದೆ. ಆಕೆ ಬುದ್ಧ ಸದೃಶ. ಸದಾ ನಗು, ಶಾಂತ
ಸ್ವಭಾವ. ಯಾರು ಏನೇ ಹೇಳಿದರೂ ಸಂಪೂರ್ಣ ಕೇಳುವ ಸಂಯಮ. ಮಕ್ಕಳ ಬಗ್ಗೆ ಯಾವಾಗಲೂ ಉತ್ತಮವಾದದ್ದನ್ನು ಊಹಿಸುವುದು ಮುಖ್ಯ ಎಂದು ಅವಳು ನನಗೆ ಹೇಳುತ್ತಿದ್ದಳು.

ಬೆಳೆಯುವ ಮಕ್ಕಳಿಗೆ ಸ್ಪೂನ್ ಫೀಡ್ ಮಾಡಬಾರದು. ಅವರಿಗೆ ನಾವು ಸೂಚನಾ ಫಲಕ (signboard) ಗಳಾದರೆ ಸಾಕು. ಅವರೇ ತಮ್ಮ ಬದುಕಿನ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಹೇಳುತ್ತಿದ್ದರು. ‘ಮಿಚೆಲ, ನಾನು ನಿನಗೆ ಎಂದಾದರೂ ಹಾಗೆ ಮಾಡು, ಹೀಗೆ ಮಾಡು ಎಂದು ಹೇಳುತ್ತಿದ್ದಾನಾ? ಇಲ್ಲವಲ್ಲ. ನೀನು ನಿನ್ನ ಬದುಕನ್ನು ಹೇಗೆ ರೂಪಿಸಿಕೊಂಡೆ ಎಂಬುದು ನಿನಗೆ ಗೊತ್ತಿದೆ.

ನೀನು ನಿನ್ನ ಮಕ್ಕಳ ಬಗ್ಗೆಯೂ ಹಾಗೇಕೆ ನಡೆದುಕೊಳ್ಳಬಾರದು? ನಿನ್ನ ಮಕ್ಕಳು ನಂಬಿಕೆಯನ್ನು ಗಳಿಸುವುದಕ್ಕಿಂತ, ನೀನೇ ಮಕ್ಕಳಿಗೆ ನಂಬಿಕೆ ಯನ್ನು ಕೊಡಬೇಕು’ ಎಂದು ಹೇಳುತ್ತಿದ್ದಳು. ‘ಶ್ವೇತಭವನದಲ್ಲಿ ಇದ್ದಷ್ಟು ವರ್ಷ, ನನಗೆ ಸ್ಥಳದ ರಿಯಾಲಿಟಿ ಚೆಕ್‌ಗಳನ್ನು ನೀಡಲು ನನ್ನ ಅಮ್ಮ ಇದ್ದರು. ಅವಳು ನನ್ನ ಮಕ್ಕಳಾದ ಸಶಾ ಮತ್ತು ಮಾಲಿಯಾಳ ಹದಿಹರೆಯವನ್ನು ಸುಪ್ತಮನಸ್ಸಿನ ಕಣ್ಣುಗಳ ಮೂಲಕ ನನಗೆ ತೋರಿಸಿ ಕೊಡುತ್ತಿದ್ದಳು.

ನಮ್ಮ ಬದುಕಿನಲ್ಲಿ ಏನಾಗುತ್ತಿದೆಯೋ ಅದು ವೈಫಲ್ಯವಲ್ಲ, ಆದರೆ ಬೆಳವಣಿಗೆಗೆ ಸೂಕ್ತವಾದದ್ದು ಎಂದು ಹೇಳುತ್ತಿದ್ದಳು. ಇಂದು ಕೆಟ್ಟದಾಯಿತು ಅಂತ ಬೇಸರಿಸಿಕೊಳ್ಳುತ್ತೇವೆ. ಆದರೆ ಇಂದು ಕೆಟ್ಟದಾಗಿ ತೋರಿದ್ದು ಹಲವು ದಿನಗಳ ನಂತರ ಹಾಗೆ ಆಗಿದ್ದೇ ಒಳ್ಳೆಯದಾಯ್ತು ಅಂದುಕೊಳ್ಳುತ್ತೇವೆ’ ಎಂದು ಅಮ್ಮ ಹೇಳುತ್ತಿದ್ದಳು.

‘ನಿನ್ನ ಮಕ್ಕಳು ಚೆನ್ನಾಗಿದ್ದಾರೆ. ಅವರು ಒಳ್ಳೆಯ ಮಕ್ಕಳು ಎಂದು ನೀನೂ ಅಂದುಕೋ. ಅವರು ಜೀವನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು ತ್ತಿದ್ದಾರೆ. ಒಬ್ಬ ತಾಯಿಯಾಗಿ ಮಾಡುವ ಬಹು ದೊಡ್ಡ ಜವಾಬ್ದಾರಿಯೆಂದರೆ, ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವರ ಎಣಿಕೆಯಂತೆ ಬೆಳೆಯಲು ಬಿಡುವುದು’ ಎಂದು ಅಮ್ಮ ಹೇಳುತ್ತಿದ್ದಳು. ಕೊನೆಯಲ್ಲಿ, ‘ನನ್ನ ಬದುಕಿನ ಬಹು ದೊಡ್ಡ ನೆನಪು ಅಂದ್ರೆ ಅಮ್ಮ’ ಎಂದು ಮಿಚೆಲ್ ಒಬಾಮ ಬರೆಯುತ್ತಾರೆ.

ಅವರಾ, ಇವರಾ!
ಹಿಂದಿ ಚಿತ್ರರಂಗದ ಖ್ಯಾತ ಕವಿ, ಸಾಹಿತಿ ಮತ್ತು ಗೀತ ರಚನೆಕಾರರಾದ ಗುಲ್ಜಾರ್ ಮತ್ತು ಜಾವೇದ್ ಅಖ್ತರ್ ಅವರ ವಿಷಯದಲ್ಲಿ ಬಹಳ ಜನ ಅವರಿಬ್ಬರನ್ನು ತಪ್ಪಾಗಿ ಭಾವಿಸುತ್ತಾರಂತೆ. ಈ ಬಗ್ಗೆ ಕೆಲ ದಿನಗಳ ಹಿಂದೆ, ಫೇಸ್‌ಬುಕ್ ನ, ವಾಟ್ಸಾಪ್‌ನ ಬಂದ ಸಂದೇಶವೊಂದನ್ನು ನಾನು
ಓದಿದ್ದೆ. ‘ಅವರನ್ನು ಇವರು, ಇವರನ್ನು ಅವರು’ ಎಂದು ತಪ್ಪಾಗಿ ಭಾವಿಸಿ ಬೇಸ್ತು ಬಿದ್ದ ಪ್ರಸಂಗಗಳು ಒಂದೆರಡಲ್ಲ. ಈ ಪ್ರಸಂಗಗಳನ್ನು ಅವರಿಬ್ಬರೂ ಹಲವು ವೇದಿಕೆಗಳಲ್ಲಿ ಹೇಳಿದ್ದಿದೆ. ಕೆಲ ದಿನಗಳ ಹಿಂದೆ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಗುಲ್ಜಾರ್ ಮತ್ತು ಅಖ್ತರ್ ಆ ಪ್ರಸಂಗವನ್ನು ಹಂಚಿಕೊಂಡು ನಕ್ಕಿದ್ದರು.

ಒಮ್ಮೆ ಗುಲ್ಜಾರ್ ಅಮೆರಿಕ ಪ್ರವಾಸದಲ್ಲಿದ್ದರು. ಭಾರತೀಯ ಮೂಲದ ಹುಡುಗಿಯೊಬ್ಬಳು ’’Oh My God … I can’t believe… ನನ್ನ ಆರಾಧ್ಯ ದೈವದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದೇನೆ ಎನ್ನುವುದನ್ನು ಹೇಗೆ ನಂಬಲಿ? My God…ನನಗೆ ನನ್ನ ಹೆಸರೇ ಮರೆತು ಹೋಗ್ತಿದೆ.. Thank you…ಎನ್ನುತ್ತ ಗುಲ್ಜಾರ್ ಹತ್ತಿರ ನಿಂತಳಂತೆ. ಅವಳ ಹಣೆಯಲ್ಲಿ ಬೆವರಿನ ಸಾಲುಗಳು. ತನ್ನ ಜೀವನದಲ್ಲಿ ತನ್ನ ಆರಾಧ್ಯ ದೈವವನ್ನು ಭೇಟಿಯಾದ ಸುಂದರಕ್ಷಣಗಳಿಂದ ಆಕೆ ಭಾವಪರವಶಳಾಗಿದ್ದಳು.

ಆ ಸುಂದರ ತರುಣಿಯ ಹೊಗಳಿಕೆಗೆ, ಗುಲ್ಜಾರ್‌ಗೆ ಒಳಗೊಳಗೇ ಖುಷಿ. ಅವಳು ಸೆಲಿ ತೆಗೆದುಕೊಂಡು, Thank you Javed Sahaab ಅಂದ ಳಂತೆ. ಆಕೆಯ ಮಾತು ಕೇಳಿ ಗುಲ್ಜಾರ್ ಪೆಚ್ಚು. ಆ ಬಡ್ಡಿಮಗ ಜಾವೇದ್ ಎಷ್ಟು ಚಂದ ಬರೀತಾನೆ.. ಆದ್ರೆ ಈ ಲೆವಲ್ಲಿಗೆ ನನಗೆ ಅವಮಾನ ಆಗೋ ಹಾಗೆ ಬರೀಬೇಕಾ ಅಂದುಕೊಂಡರಂತೆ ಗುಲ್ಜಾರ್.

ಒಮ್ಮೆ ಜಾವೇದ್ ಅಖ್ತರ್ ವಿಮಾನ ನಿಲ್ದಾಣದಲ್ಲಿ ಸ್ನೇಹಿತರಿಗಾಗಿ ಕಾಯುತ್ತಿದ್ದರಂತೆ. ಅವರನ್ನು ಗುರುತಿಸಿದ ಅಭಿಮಾನಿಯೊಬ್ಬ, ‘ನಮಸ್ತೇ ಗುಲ್ಜಾರ್ ಸಾಬ.. ಯಾರಿಗೋಸ್ಕರ ಕಾಯ್ತಿದೀರಿ? ಎಂದು ಕೇಳಿದನಂತೆ. ತಮಾಷೆಯ ಮೂಡಲ್ಲಿದ್ದ ಜಾವೇದ್, ‘ನಾನು ಜಾವೇದ್ ಅವರಿಗಾಗಿ ಕಾಯುತ್ತಿದ್ದೇನೆ’ ಎಂದರಂತೆ. ಆ ಅಭಿಮಾನಿಗೆ ಆಶ್ಚರ್ಯ! ಗುಲ್ಜಾರ್, ಜಾವೇದ್‌ಗೆ ಕಾಯುವುದಾ? ಎಂಬ ಯೋಚನೆಗೆ ಬಿದ್ದ. ಜಾವೇದ್ ಮುಂದುವರಿದು, ‘ಜಾವೇದ್ ಯಾವಾಗ ವಿಮಾನದಲ್ಲಿ ಬಂದರೂ, ಅವರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗುವುದು ನಾನೇ’ ಎಂದು ಕಿಚಾಯಿಸಿದರಂತೆ… ಆ
ಅಭಿಮಾನಿಗೆ ಇರುಸು ಮುರುಸು!

‘ಏನು?! ನೀವು ಸ್ವತಃ ಇಷ್ಟು ದೊಡ್ಡ ಕವಿ ಗುಲ್ಜಾರ್ ಆಗಿ, ಆ ಜಾವೇದ್ ಅಖ್ತರ್‌ಗೋಸ್ಕರ ವಿಮಾನ ನಿಲ್ದಾಣದಲ್ಲಿ ಕಾಯುವುದಾ? ಎಂದು ಗೊಣಗುತ್ತ ಮುಂದೆ ಹೋದನಂತೆ. ‘ನನ್ನ ಮರ್ಯಾದೆಯನ್ನು ಸಪಾಟಾಗಿ ತೆಗೆದನಲ್ಲ ಆ ಗುಲ್ಜಾರ್’ ಅಂದುಕೊಂಡು, ಜಾವೇದ್ ಬಿದ್ದು ಬಿದ್ದು ನಕ್ಕರಂತೆ. ನನಗೂ ಇವರಿಬ್ಬರ ಬಗ್ಗೆ ಈ ರೀತಿಯ ಗೊಂದಲ ಆಗಿದ್ದಿದೆ. ಈ ಪ್ರಸಂಗವನ್ನು ಓದಿದ ಬಳಿಕ, ಹೀಗೆ ಬೇಸ್ತು ಬಿದ್ದವನು ನಾನೊಬ್ಬನೇ ಅಲ್ಲವಲ್ಲ ಎಂದು ಸಮಾಧಾನವಾಯಿತು.