ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಭಾರತೀಯ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ; ಟ್ರಂಪ್ ಮಾಸ್ಟರ್‌ ಪ್ಲ್ಯಾನ್‌!

ಅಮೆರಿಕದ ವಿಮೋಚನಾ ದಿನಾಚರಣೆಗಾಗಿ ಡೊನಾಲ್ಡ್‌ ಟ್ರಂಪ್(Donald Trump) ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೀವಿಟ್, ಸುಂಕಗಳ ಮೇಲೆ ಯಾವುದೇ ವಿನಾಯಿತಿ ಇರುವುದಿಲ್ಲ. ವ್ಯಾಪಾರದಲ್ಲಿ ಅಮೆರಿಕಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕಿದೆ ಎಂದು ಹೇಳಿದ್ದಾರೆ.

ಭಾರತೀಯ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ

Profile Vidhya Iravathur Apr 1, 2025 1:26 PM

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸರ್ಕಾರದಿಂದ ವಿಮೋಚನಾ ದಿನದ(Liberation Day) ಅಂಗವಾಗಿ ತೆರಿಗೆಗಳ ಮೇಲೆ ಯಾವುದೇ ವಿನಾಯಿತಿ ಇರುವುದಿಲ್ಲ. ಭಾರತಕ್ಕೆ ಶೇ. 100 ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಶೇ. 50 ರಷ್ಟು ತೆರಿಗೆಗಳನ್ನು ವಿಧಿಸುವುದಾಗಿ ಶ್ವೇತಭವನ ತಿಳಿಸಿದೆ. ಟ್ರಂಪ್ ಅವರ ವಿಮೋಚನಾ ದಿನದ ಯೋಜನೆಗಳ ಕುರಿತು ಸೋಮವಾರ ಮಾಹಿತಿ ನೀಡಿರುವ ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೀವಿಟ್, ಪರಸ್ಪರ ಸುಂಕಗಳ ಮೇಲೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ದೃಢಪಡಿಸಿದ್ದಾರೆ. ವಿದೇಶಗಳು ಅಮೆರಿಕನ್ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕಗಳ ಬಗ್ಗೆ ತಿಳಿಸಿರುವ ಅವರು, ವ್ಯಾಪಾರದಲ್ಲಿ ಅನ್ಯಾಯವಾಗುವುದನ್ನು ತಡೆಯಬೇಕು ಎಂದು ಹೇಳಿದರು.

ಏಪ್ರಿಲ್ 2 ಅನ್ನು ಅಮೆರಿಕದ "ವಿಮೋಚನಾ ದಿನ" ಎಂದು ಘೋಷಿಸಲಾಗಿದ್ದು, ಪ್ರತಿವರ್ಷ ಇದನ್ನು ಆಚರಿಸಲಾಗುತ್ತದೆ. ಈ ದಿನ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇತರೆ ರಾಷ್ಟ್ರಗಳಿಗೆ ವಿಧಿಸಲಾಗುವ ಸುಂಕಗಳ ಕುರಿತು ಮಹತ್ವದ ಘೋಷಣೆ ಹೊರಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಕ್ಯಾರೋಲಿನ್ ಲೀವಿಟ್ ಅವರು ಈ ಕುರಿತು ಮಾತನಾಡಿದ್ದಾರೆ. ವಿಮೋಚನಾ ದಿನದ ಮುಖ್ಯ ಗುರಿ ದೇಶ, ವಲಯ ಆಧಾರಿತ ಸುಂಕವಾಗಿದೆ. ಅಮೆರಿಕ ಅಧ್ಯಕ್ಷರು ಅವುಗಳನ್ನು ಕಾರ್ಯಗತಗೊಳಿಸಲು ಬದ್ಧರಾಗಿರುವುದಾಗಿ ಹೇಳಿದ್ದಾರೆ. ಇದು ಪರಸ್ಪರ ಸಂಬಂಧಗಳನ್ನು ಸುಧಾರಿಸುವ ಸಮಯ ಎಂದು ಲೀವಿಟ್ ಹೇಳಿದರು.

ಯುರೋಪಿಯನ್ ಒಕ್ಕೂಟ, ಭಾರತ, ಜಪಾನ್ ಮತ್ತು ಕೆನಡಾ ಭಾರಿ ಸುಂಕಗಳನ್ನು ವಿಧಿಸುತ್ತಿದೆ. ಅಮೆರಿಕದ ಹಾಲಿನ ಉತ್ಪನ್ನಗಳ ಮೇಲೆ ಯುರೋಪಿಯನ್ ಒಕ್ಕೂಟ ಶೇ. 50, ಅಮೆರಿಕನ್ ಅಕ್ಕಿಯ ಮೇಲೆ ಜಪಾನ್‌ ಶೇ. 700, ಅಮೆರಿಕನ್ ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ. 100ರಷ್ಟು ಸುಂಕವನ್ನು ವಿಧಿಸುತ್ತಿದೆ. ಅಮೆರಿಕನ್ ಬೆಣ್ಣೆ ಮತ್ತು ಚೀಸ್ ಮೇಲೆ ಕೆನಡಾ ಶೇ. 300 ರಷ್ಟು ಸುಂಕವನ್ನು ಹೇರಿದೆ. ಇದರಿಂದ ಅಮೆರಿಕ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಇಳಿಸುವುದೇ ಕಷ್ಟಕರವಾಗಿದೆ. ಹೀಗಾಗಿ ಕಳೆದ ಹಲವಾರು ದಶಕಗಳಲ್ಲಿ ಬಹಳಷ್ಟು ಅಮೆರಿಕನ್ನರನ್ನು ವ್ಯವಹಾರದಿಂದ ಮತ್ತು ಕೆಲಸದಿಂದ ಹೊರಗುಳಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಪ್ರತಿಯೊಂದು ದೇಶವು ತಮ್ಮ ಸ್ವಂತ ಆರ್ಥಿಕತೆಗೆ ಪ್ರಮುಖವಾದ ಕೈಗಾರಿಕಾ ವಲಯಗಳನ್ನು ರಕ್ಷಿಸಲು ಹೆಚ್ಚಾಗಿ ವಿದೇಶಿ ಆಮದುಗಳ ಮೇಲೆ ಭಾರೀ ಸುಂಕವನ್ನು ವಿಧಿಸುತ್ತವೆ. ಅಧ್ಯಕ್ಷ ಟ್ರಂಪ್ ಅವರು ವಿಧಿಸುತ್ತಿರುವ ಸುಂಕಗಳು ನಿರ್ದಿಷ್ಟ ಸರಕುಗಳ ಮೇಲೆ ಮಾತ್ರ. ಇದು ಇತರ ದೇಶಗಳ ಹೆಚ್ಚಿನ ಸುಂಕ ದರಗಳನ್ನು ಸರಿ ಹೊಂದಿಸಲು ಮತ್ತು ಅಮೆರಿದ ರಫ್ತು ಹೆಚ್ಚಳಕ್ಕೆ ಪೂರಕವಾಗುವಂತಹ ವಾತಾವರಣ ಸೃಷ್ಟಿಯ ಗುರಿಯನ್ನು ಹೊಂದಿವೆ. ಹೊಸ ಸುಂಕಗಳು ಅಮೆರಿಕದ ವ್ಯಾಪಾರ ವಲಯದಲ್ಲಿ ಮಹತ್ತರವಾದ ಬದಲಾವಣೆ ತರಲಿದೆ ಎಂದು ಲೀವಿಟ್ ಹೇಳಿದರು.

ವ್ಯಾಪಾರಕ್ಕೆ ಅಡ್ಡಿಯಾಗುವ ಅಂಶಗಳ ಪಟ್ಟಿ

ಈ ನಡುವೆ ಟ್ರಂಪ್ ಸರ್ಕಾರ ಸೋಮವಾರ ವಿದೇಶಿ ನೀತಿಗಳು ಮತ್ತು ನಿಯಮಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಅಲ್ಲದೇ ವಿದೇಶಿ ವ್ಯಾಪಾರ ಅಡೆತಡೆಗಳ ಕುರಿತು ಅಮೆರಿಕ ವ್ಯಾಪಾರ ಪ್ರತಿನಿಧಿ ಕಚೇರಿಯ ವಾರ್ಷಿಕ ರಾಷ್ಟ್ರೀಯ ವ್ಯಾಪಾರ ಅಂದಾಜು ವರದಿಯಲ್ಲಿ ವ್ಯಾಪಾರ ಪಾಲುದಾರ ದೇಶಗಳಿಗೆ ವಿಧಿಸಲಾಗುವ ಸುಂಕ ದರಗಳು ಮತ್ತು ಕಠಿಣ ಆಹಾರ ಸುರಕ್ಷತಾ ನಿಯಮ, ನವೀಕರಿಸಬಹುದಾದ ಇಂಧನ ಅವಶ್ಯಕತೆಗಳು ಮತ್ತು ಸಾರ್ವಜನಿಕ ಖರೀದಿ ನಿಯಮಗಳಿಗೆ ಇರುವ ತೆರಿಗೆ ಅಡೆತಡೆಗಳ ಕುರಿತು ಪಟ್ಟಿ ಮಾಡಲಾಗುತ್ತಿದೆ. ಇದು ಟ್ರಂಪ್ ಅವರ ಪರಸ್ಪರ ಸುಂಕ ಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿಯಲ್ಲಿ ಏನಿದೆ?

ವ್ಯಾಪಾರಕ್ಕೆ ಅಡ್ಡಿಯಾಗುವ ಹಲವಾರು ಅಂಶಗಳು ಈ ವರದಿಯಲ್ಲಿದೆ. ಮುಖ್ಯವಾಗಿ ತಳೀಯವಾಗಿ ಮಾರ್ಪಡಿಸಿದ ಬೆಳೆಗಳಿಗೆ ಯುರೋಪಿಯನ್‌ ಒಕ್ಕೂಟಗಳಿಂದ(EU) ಸಿಗಬೇಕಾದ ಅನುಮೋದನೆಗಳಲ್ಲಿನ ವಿಳಂಬ ಅಥವಾ ಕೆಲವು ರೀತಿಯ ಕೀಟನಾಶಕಗಳು, ಕೃಷಿ ಆಮದುಗಳ ಮೇಲಿನ ನಿಷೇಧಗಳು, ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿ ಕನಿಷ್ಠ ಪ್ರಮಾಣದ ಮರುಬಳಕೆಯ ವಿಷಯಕ್ಕಾಗಿ ಹೊಸ ಇಯು ಅವಶ್ಯಕತೆ ಸೇರಿದಂತೆ ಯುಎಸ್ ರಫ್ತಿಗೆ ನ್ಯಾಯಸಮ್ಮತವಲ್ಲದ ಅಡೆತಡೆಗಳ ಕುರಿತು ವಿವರಿಸಲಾಗಿದೆ.

ಈ ವರದಿಯು ವ್ಯಾಪಾರ ವಿವಾದಗಳ ದೀರ್ಘಕಾಲದ ಸಮಸ್ಯೆಗಳನ್ನು ಸಹ ತಿಳಿಸಿದೆ. ಉದಾಹರಣೆಗೆ ಕೆನಡಾದ "ಪೂರೈಕೆ ನಿರ್ವಹಣಾ" ವ್ಯವಸ್ಥೆಯು ತನ್ನ ಡೈರಿ, ಕೋಳಿ ಮತ್ತು ಮೊಟ್ಟೆ ಉದ್ಯಮಗಳ ಆಮದು ಕೋಟಾಗಳ ಮೇಲೆ ಉತ್ಪಾದನಾ ಮಿತಿಗಳನ್ನು ಮತ್ತು ಹೆಚ್ಚಿನ ಸುಂಕಗಳನ್ನು ಹೇರಿರುವುದು, ಇದರಿಂದ ಹೊರಗಿರುವ ಚೀಸ್ ಮೇಲಿನ ಸುಂಕಗಳು ಶೇ. 245 ಮತ್ತು ಬೆಣ್ಣೆಯ ಮೇಲಿನ ಶೇ. 298ರಷ್ಟು ಸುಂಕ ವಿಧಿಸಿರುವುದನ್ನು ವಿವರಿಸಲಾಗಿದೆ.

ದುಬಾರಿ ತೆರಿಗೆಯಿಂದಾಗಿ ಅರ್ಜೆಂಟೀನಾ, ಮೆಕ್ಸಿಕೊ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಕೆಲವು ಇತರ ದೇಶಗಳಿಗೆ ಯುಎಸ್ ಉತ್ಪನ್ನಗಳ ಆಮದು ಹೊರೆಯಾಗಿದೆ. ಕೆಲವು ಉತ್ಪನ್ನಗಳ ರಫ್ತುಗಳನ್ನು ಉತ್ತೇಜಿಸಲು ಚೀನಾ ವ್ಯಾಟ್ ರಿಯಾಯಿತಿಗಳನ್ನು ಬಳಸುವುದು ಒಂದು ರೀತಿಯ ಸಬ್ಸಿಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.