World Autism Day: ವಿಶ್ವ ಆಟಿಸಂ ಜಾಗೃತಿ ದಿನ: ಬೇಕಿದೆ ಸ್ವೀಕೃತಿಯ ಮನಸ್ಸು
ಬೇರೆಲ್ಲ ದೇಶಗಳಂತೆ ಭಾರತದಲ್ಲೂ ಆಟಿಸಂ ರೋಗದ ಪ್ರಮಾಣ ಹೆಚ್ಚುತ್ತಿದೆ. 2021ರಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಜನಿಸುವ 68 ಮಕ್ಕಳಲ್ಲಿ ಒಬ್ಬರಲ್ಲಿ ಆಟಿಸಂ ಪತ್ತೆಯಾಗುತ್ತಿದೆ. ಇದರಲ್ಲೂ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು, 3:1ರ ಅನುಪಾತವನ್ನು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 2 ವಿಶ್ವ ಆಟಿಸಂ ಜಾಗೃತಿ ದಿನ ಆಚರಿಸಲಾಗುತ್ತದೆ.

Autism

ನವದೆಹಲಿ: ಆಟಿಸಂ (Autism) ಅಥವಾ ಸ್ವಲೀನತೆಯ ಬಗ್ಗೆ ಇಂದಿಗೂ ಬಹಳಷ್ಟು ತಪ್ಪು ಕಲ್ಪನೆಗಳು ಸಮಾಜದಲ್ಲಿವೆ. ಆರಂಭದಲ್ಲಿ ಅದನ್ನೊಂದು ರೋಗವೆಂದು ತಿಳಿಯಲಾಗಿತ್ತು. ಆದರೀಗ ಅದನ್ನೊಂದು ಸಮಸ್ಯೆ ಎಂಬುದನ್ನು ಬಹಳಷ್ಟು ಮಂದಿ ಅರಿತಿದ್ದಾರೆ. ಬಾಲ್ಯದಲ್ಲೇ ಇದನ್ನು ಗುರುತಿಸಿ, ಸರಿಯಾದ ಚಿಕಿತ್ಸೆ, ತರಬೇತಿಗಳನ್ನು ನೀಡುವುದು ಅಗತ್ಯ. ಅವರಲ್ಲಿರುವ ಸಾಧ್ಯತೆಗಳನ್ನು ಗುರುತಿಸಿ, ಅದಕ್ಕೆ ಪೂರಕವಾದ ತರಬೇತಿಯನ್ನು ನೀಡುವುದು ಮಹತ್ವದ್ದು. ಹಾಗಾಗಿ ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎಪ್ರಿಲ್ ತಿಂಗಳ ಎರಡನೇ ದಿನವನ್ನು ವಿಶ್ವ ಆಟಿಸಂ (World Autism Awareness Day) ಜಾಗೃತಿ ದಿನ ಎಂದು ಗುರುತಿಸಲಾಗಿದೆ.
ಬೇರೆಲ್ಲ ದೇಶಗಳಂತೆ ಭಾರತದಲ್ಲೂ ಆಟಿಸಂ ಸಮಸ್ಯೆಯ ಪ್ರಮಾಣ ಹೆಚ್ಚುತ್ತಿದೆ. 2021ರಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಜನಿಸುವ 68 ಮಕ್ಕಳಲ್ಲಿ ಒಬ್ಬರಲ್ಲಿ ಆಟಿಸಂ ಪತ್ತೆಯಾಗುತ್ತಿದೆ. ಇದರಲ್ಲೂ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು, 3:1ರ ಅನುಪಾತವನ್ನು ತಜ್ಞರು ಹೇಳುತ್ತಿದ್ದಾರೆ. ಆಟಿಸಂ ಇರುವ ಮಕ್ಕಳನ್ನು ಎಲ್ಲರಂತೆ ಸಮಾಜ ನೋಡುವುದಿಲ್ಲ. ಈ ಮಕ್ಕಳನ್ನು ಕೆಲವೊಮ್ಮೆ ಕುಟುಂಬದವರೂ ಕಡೆಗಣಿಸುತ್ತಾರೆ. ಆದರೆ ಅಂಥ ಮಕ್ಕಳಲ್ಲೂ ಸಾಮರ್ಥ್ಯವಿದೆ. ಅದನ್ನು ಗುರುತಿಸಿ ತರಬೇತಿ ನೀಡಿದರೆ, ಅವರಿಗೂ ಬದುಕಿದೆ ಎಂಬುದನ್ನು ಅರಿತಾಗ, ಆಟಿಸಂ ಇರುವವರನ್ನು ಸ್ವೀಕರಿಸುವ ಮನೋಭಾವ ಹೆಚ್ಚಲಿದೆ.
ಕಾರಣಗಳೇನು?
ಹೆಚ್ಚಿನ ಬಾರಿ ವಂಶವಾಹಿಗಳ ದೋಷದಿಂದಲೇ ಇದು ಬರುತ್ತದೆ. ಅದಲ್ಲದೆ ಗರ್ಭಾವಸ್ಥೆಯಲ್ಲಿ ತೆಗೆದುಕೊಂಡ ಕೆಲವು ಔಷಧಿಗಳು ಅಥವಾ ಆರೋಗ್ಯ ಸಮಸ್ಯೆಗಳು, ವೈರಲ್ ಸೋಂಕುಗಳು, ಕೆಲವು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು, ಹೆಚ್ಚುತ್ತಿರುವ ಮಾಲಿನ್ಯ, ಅಪರಿಮಿತ ಒತ್ತಡದಂಥ ಕಾರಣಗಳು- ಇಂಥವುಗಳೆಲ್ಲ ಆಟಿಸಂ ಸಮಸ್ಯೆಗೆ ಮೂಲ ಆಗಬಹುದು.
ಲಕ್ಷಣಗಳೇನು?
ಆಟಿಸಂ ಲಕ್ಷಣಗಳು ಹೆಚ್ಚಾಗಿ ಎಳೆಯ ಮಗುವಿನಲ್ಲೇ ಕಾಣಿಸಿಕೊಳ್ಳುತ್ತವೆ. ಹೊರ ಪ್ರಪಂಚದೊಂದಿಗೆ ಹೆಚ್ಚು ಸಂವಹನ ನಡೆಸದೆ, ತಮ್ಮಷ್ಟಕ್ಕೇ ತಾವು ಅವರದ್ದೇ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಈ ಮಕ್ಕಳಲ್ಲಿ ಸ್ವಲೀನತೆಯ ಲಕ್ಷಣಗಳು ಒಂದೆರಡು ವರ್ಷಗಳಲ್ಲಂತೂ ಸ್ಪಷ್ಟವಾಗಿ ಗೋಚರಿಸುತ್ತವೆ. ಎಲ್ಲ ಮಕ್ಕಳಂತೆ ಇಲ್ಲದ ಈ ಮಕ್ಕಳ ಕಲಿಕೆ, ಸಂವಹನ, ವರ್ತನೆ, ನಡವಳಿಕೆಗಳೆಲ್ಲ ಭಿನ್ನವಾಗಿಯೇ ಇರುತ್ತವೆ. ಸ್ವಲೀನತೆ ಹಾಗೂ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವುದು ಈ ರೋಗದ ಗೋಚರಿಸುವಂಥ ಲಕ್ಷಣಗಳು. ಇದನ್ನು ಸಂಪೂರ್ಣ ಗುಣಪಡಿಸಲಾಗದಿದ್ದರೂ ಬೇಗನೇ ಇದಕ್ಕೆ ಚಿಕಿತ್ಸೆ, ತರಬೇತಿ ಆರಂಭಿಸಿದಲ್ಲಿ, ಮಕ್ಕಳಲ್ಲಿ ಹೆಚ್ಚಿನ ಮಾನಸಿಕ ಬೆಳವಣಿಗೆಯನ್ನು ಸಾಧಿಸಬಹುದು. ಇಂಥ ಲಕ್ಷಣಗಳು ಮಕ್ಕಳಲ್ಲಿ ಕಂಡರೆ ಹೆತ್ತವರೇನು ಮಾಡಬೇಕು, ಸಮಾಜ ಹೇಗೆ ಸ್ವೀಕರಿಸಬೇಕು ಮುಂತಾದ ಎಲ್ಲವೂ ಈ ಅರಿವಿನ ಪರಿಧಿಗೆ ಬರಬೇಕಿದೆ.
ಇಂಥವೆಲ್ಲ ಕಾರಣಗಳಿಂದಾಗಿ, 2007ರ ನವೆಂಬರ್ 1ರಂದು ಈ ಕುರಿತು ಘೋಷಣೆಯನ್ನು ವಿಶ್ವಸಂಸ್ಥೆ ಹೊರಡಿಸಿದ್ದು, ರೋಗದ ಕುರಿತಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿಶ್ವ ಆಟಿಸಂ ಜಾಗೃತಿ ದಿನ ಆಚರಣೆಯಲ್ಲಿದೆ. ಈ ಸಮಸ್ಯೆಯಿಂದ ನರಳುತ್ತಿರುವವರನ್ನು ಮುಖ್ಯವಾಹಿನಿಗೆ ತರುವಂಥ ಕೆಲಸಗಳು ನಡೆಯಬೇಕಿದೆ. ಜತೆಗೆ ಈ ಮಕ್ಕಳನ್ನು ಕರುಣೆಯ ಬದಲಿಗೆ ಸ್ವೀಕೃತಿಯ ಮನೋಭಾವದಿಂದ ಕಾಣುವುದು ಈ ಹೊತ್ತಿನ ಅಗತ್ಯವಾಗಿದೆ.
ಇದನ್ನು ಓದಿ: Health Tips: ವೇಗವಾಗಿ ಆಹಾರ ತಿನ್ನುತ್ತೀರಾ..?ಈ ಗಂಭೀರ ಆರೋಗ್ಯ ಸಮಸ್ಯೆ ಕಾಡಬಹುದು!
ಹಕ್ಕುಗಳೇನು?
ಉಳಿದೆಲ್ಲರಂತೆ ಅವರೂ ಈ ಸಮಾಜದ ಭಾಗ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಆವಶ್ಯಕತೆ ಮತ್ತು ಹಕ್ಕು- ಈ ಎರಡೂ ಆಟಿಸಂ ಉಳ್ಳವರಿಗಿದೆ. ಕುಟುಂಬದ ಪರಿಧಿಯಿಂದಾಚೆ ಸ್ವತಂತ್ರವಾಗಿ ಉಳಿದೆಲ್ಲರಂತೆ ಬದುಕುವುದು ಅವರಿಗೆ ಸಾಧ್ಯವಾಗದಿದ್ದರೂ, ಸ್ವಲೀನತೆಯೊಂದಿಗೆ ಸ್ವಾವಲಂಬನೆಯನ್ನು ಸಾಧ್ಯವಾದಷ್ಟೂ ಸಾಧಿಸುವುದಕ್ಕೆ ಅವರ ಹಕ್ಕುಗಳು ಅವರಿಗೆ ದೊರೆಯಬೇಕು. ಆಟಿಸಂ ಇರುವವರನ್ನು ಕೇವಲ ಸವಾಲು ಮತ್ತು ಸಮಸ್ಯೆ ಎಂದಷ್ಟೇ ನೋಡುವುದಲ್ಲ, ವಿಶ್ವವನ್ನು ಭಿನ್ನವಾಗಿಯೇ ಗುರುತಿಸುತ್ತಾರೆ ಅಂಥವರು. ಹಾಗಾಗಿಯೇ ಅವರಲ್ಲೂ ಉಳಿದವರಿಗಿಂತ ಬೇರೆಯಾದ ಸಾಧ್ಯತೆಗಳು ಇರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.