Line of Control: ಗಡಿ ನಿಯಂತ್ರಣ ರೇಖೆ ಉಲ್ಲಂಘನೆ- ಪಾಕ್‌ಗೆ ಭಾರತೀಯ ಸೇನೆಯಿಂದ ತಕ್ಕ ಶಾಸ್ತಿ
Line of Control: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಪಡೆಗಳಿಂದ ಬಲವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಭಾರತೀಯ ಸೇನೆಯ ನಿರಂತರ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.


ಪೂಂಚ್: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಪೂಂಚ್‌ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು(Line of Control) ದಾಟಿ ಬಂದ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ಈ ವೇಳೆ 4- 5 ನುಸುಳುಕೋರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಏಪ್ರಿಲ್ 1ರಂದು ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕಿಸ್ತಾನ ಸೇನೆಯ ಒಳನುಸುಳುವಿಕೆಯಿಂದಾಗಿ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಗಣಿ ಸ್ಫೋಟ ಸಂಭವಿಸಿದೆ ಎಂದು ಜಮ್ಮುವಿನ ಸಾರ್ವಜನಿಕ ಸಂಪರ್ಕ ರಕ್ಷಣಾ ಅಧಿಕಾರಿಯು ಅಧಿಕೃತ ಹೇಳಿಕೆ ನೀಡಿದ್ದಾರೆ. ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳ ನುಸುಳಲು ಪ್ರಯತ್ನಿಸಿದೆ. ಇದನ್ನು ಭಾರತೀಯ ಸೇನೆ ತಡೆದು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯೊಳಗೆ ನುಸುಳಿ ಮಂಗಳವಾರ ಉಭಯ ರಾಷ್ಟ್ರಗಳ ನಡುವಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ದಾಳಿ ನಡೆಸಿ 4- 5 ನುಸುಳುಕೋರರನ್ನು ಕೊಂದಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಫೆಬ್ರವರಿ ಆರಂಭದಲ್ಲಿ ಕೃಷ್ಣ ಘಾಟಿ ವಲಯದಲ್ಲಿ ಇದೇ ರೀತಿಯ ಗುಂಡಿನ ದಾಳಿ ನಡೆದಿತ್ತು. ಮಂಗಳವಾರ ದಿನವಿಡೀ ಗುಂಡಿನ ದಾಳಿ ನಿರಂತರವಾಗಿ ಮುಂದುವರೆದಿದ್ದು, ಭಾರತೀಯ ಸೇನೆಯು ಕೃಷ್ಣ ಘಾಟಿ ಪ್ರದೇಶದಲ್ಲಿ ಸಂಪೂರ್ಣವಾಗಿ ನಿಯೋಜಿಸಲ್ಪಟ್ಟಿದೆ ಎಂದು ಸೇನೆ ತಿಳಿಸಿದೆ.
ಏಪ್ರಿಲ್ 1 ರಂದು ಮಧ್ಯಾಹ್ನ 1.35 ರ ಸುಮಾರಿಗೆ ಕೃಷ್ಣ ಘಾಟಿ ಸೆಕ್ಟರ್‌ನ ನಂಗಿ ಟೆಕ್ರಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಕೃಷ್ಣ ಘಾಟಿ ಎಂಬುದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ತಹಸಿಲ್‌ನಿಂದ 30 ಕಿ.ಮೀ. ದೂರದಲ್ಲಿರುವ ಗುಡ್ಡಗಾಡು ಅರಣ್ಯ ಪ್ರದೇಶವಾಗಿದೆ. ಮೊದಲಿಗೆ ಕೃಷ್ಣ ಘಾಟಿ ವಲಯದಲ್ಲಿ ಗಣಿ ಸ್ಫೋಟ ಸಂಭವಿಸಿತ್ತು. ಇದರ ಅನಂತರ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ ಮತ್ತು ಕದನ ವಿರಾಮ ಉಲ್ಲಂಘನೆಯಾಗಿದೆ. ಇದಕ್ಕೆ ಭಾರತೀಯ ಪಡೆಗಳು ಸರಿಯಾದ ತಿರುಗೇಟು ನೀಡಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಲ್ಲಿ ದಕ್ಷಿಣ ಪಿರ್ ಪಂಜಾಲ್ ಪ್ರದೇಶದ ಎಲ್‌ಒಸಿಯ ಉದ್ದಕ್ಕೂ ಗುಂಡಿನ ದಾಳಿ ಘಟನೆಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಇರುವುದರಿಂದ ಈ ಘಟನೆಗಳನ್ನು ಸ್ಥಳೀಯ ಮಟ್ಟದಲ್ಲಿ ತ್ವರಿತ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲಾಗುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Waqf Bill: ವಕ್ಫ್ ವಿಧೇಯಕ: ತಿದ್ದುಪಡಿಗಳೇನು? ಏಕೆ? ಹೇಗೆ?
ಸೇನಾ ಮೂಲಗಳ ಪ್ರಕಾರ, ಪಾಕಿಸ್ತಾನಿ ಪಡೆ ಮತ್ತು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ವಲಯದಲ್ಲಿ ಹಲವಾರು ಬಾರಿ ಒಳನುಸುಳುವಿಕೆ ಪ್ರಯತ್ನಗಳನ್ನು ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಪಾಕಿಸ್ತಾನಿ ಪಡೆಗಳು ಎಲ್‌ಒಸಿ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯನ್ನು ನಡೆಸಿದ್ದರು. ಸ್ಫೋಟಕಗಳನ್ನು ಸ್ಫೋಟಿಸಿದವು. ಇದಕ್ಕೆ ಬಲವಾದ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡಿದೆ.
2021ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎಲ್‌ಒಸಿ ಉದ್ದಕ್ಕೂ ಕದನ ವಿರಾಮ ಒಪ್ಪಂದವನ್ನು ಮರುಸ್ಥಾಪಿಸಿದ ಬಳಿಕ ಸುಮಾರು ನಾಲ್ಕು ವರ್ಷಗಳ ಅನಂತರ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ನಡುವೆ ಮಾಡಿಕೊಂಡ ಒಪ್ಪಂದವು ಎಲ್‌ಒಸಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆದರೂ ಇತ್ತೀಚೆಗೆ ದಕ್ಷಿಣ ಪಿರ್ ಪಂಜಾಲ್ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆಗಳ ಹೆಚ್ಚಳ ಆತಂಕವನ್ನು ಉಂಟು ಮಾಡಿದೆ.