ಐಸ್‌ಕ್ರೀಂ ಪ್ರಿಯರಿಗೆ ಎಚ್ಚರಿಕೆಯ ಕರೆಗಂಟೆ; ಬಿಸಿಲ ಬೇಗೆಗೆ ಹಾಯೆನಿಸುವ ಐಸ್‌ಕ್ರೀಂನಲ್ಲಿ ಡಿಟರ್ಜೆಂಟ್ ಪತ್ತೆ
ಐಸ್‌ಕ್ರೀಂಗಳಲ್ಲಿ ಕೆನೆ ಬಣ್ಣದ ವಿನ್ಯಾಸ ರಚಿಸಲು ಡಿಟರ್ಜೆಂಟ್ ಪೌಡರ್ ಬಳಸಿರುವುದು ಕಂಡು ಬಂದಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ 97 ಅಂರಿಗಳಿಗೆ ನೋಟಿಸ್ ನೀಡಲಾಗಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಕಳಪೆ ಗುಣಮಟ್ಟದ ಉತ್ಪನ್ನ ಬಳಸಿ ಐಸ್‌ಕ್ರೀಂ (Ice Cream) ಮತ್ತು ತಂಪು ಪಾನೀಯ (Cool Driks) ತಯಾರಿಸುತ್ತಿರುವ ಆರೋಪದ ಮೇಲೆ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಐಸ್‌ಕ್ರೀಂಗಳಲ್ಲಿ ಕೆನೆ ಬಣ್ಣದ ವಿನ್ಯಾಸ ರಚಿಸಲು ಡಿಟರ್ಜೆಂಟ್ ಪೌಡರ್ ಬಳಸಿರುವುದು ಕಂಡು ಬಂದಿದೆ ಎನ್ನಲಾಗಿದೆ. ಅಲ್ಲದೆ ಕೂಲ್ ಡ್ರಿಂಕ್‌ಗಳಲ್ಲಿ ಮೂಳೆಗಳನ್ನು ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲ ಬಳಕೆ ಕಂಡು ಬಂದಿದೆ. ಈ ಸಂಬಂಧ 97 ಅಂರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಸಿಲ ಬೇಗೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಜನರು ಐಸ್‌ಕ್ರೀಂ, ಕೂಲ್ ಡ್ರಿಂಕ್ಸ್ ಮೊರೆ ಹೋಗುತ್ತಿದ್ದಾರೆ. ಆದರೆ ಇದೀಗ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಇವನ್ನು ತಯಾರಿಸುತ್ತಿರುವ ವಿಚಾರ ಬೆಳಕಿಗೆ ಬಂದಿರುವುದು ಕಳವಳ ಹುಟ್ಟು ಹಾಕಿದೆ. ಐಸ್‌ಕ್ರೀಂನಲ್ಲಿ ರಾಸಾಯನಿಕ ಕಲರ್ ಬಳಸಿರುವುದು ಪತ್ತೆಯಾದ ಕಾರಣ ಎಚ್ಚೆತ್ತುಕೊಂಡ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ವಿವಿಧ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನಿಸಿದ್ದಾರೆ. ಜತೆಗೆ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದಾರೆ. ರಾಸಾಯನಿಕಗಳ ಬಳಕೆ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್!
ಬೆಂಗಳೂರಿನ ತಿನಿಸುಪ್ರಿಯರು ಬೆಚ್ಚಿಬೀಳುವಂತ ಸುದ್ದಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ನೀಡಿದ್ದರು. ಬೆಂಗಳೂರಿನ ಹಲವಾರು ಹೋಟೆಲ್‌ಗಳು, ಈಟರಿಗಳಲ್ಲಿ ನೀಡಲಾಗುತ್ತಿರುವ ಇಡ್ಲಿಗಳಲ್ಲೂ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿದ್ದವು. ಈ ಹಿಂದೆ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಹಾಗೂ ಪಾನಿಪುರಿಗಳ ಪರಿಶೀಲನೆಯನ್ನೂ ಹೀಗೇ ನಡೆಸಿ ಅವುಗಳಲ್ಲಿ ಕ್ಯಾನ್ಸರ್‌ಕಾರಕ ವಿಷವಿರುವ ಆಘಾತಕಾರಿ ವಿಷಯವನ್ನು ಇಲಾಖೆ ಬಹಿರಂಗಪಡಿಸಿತ್ತು.
ಇಡ್ಲಿಯನ್ನು ಬೇಯಿಸಲು ಬಳಸಲಾಗುವ ಸ್ಟೀಮರ್‌ಗಳಲ್ಲಿ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದ್ದು, ಈ ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಹೊಮ್ಮುತ್ತಿವೆ. ಹೀಗಾಗಿ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವ ಆಹಾರ ಮಳಿಗೆಗಳ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ಸುಮಾರು 254 ತಿನಿಸುಗಳ ತಪಾಸಣೆ ನಡೆಸಲಾಗಿದ್ದು, 24 ತಿನಿಸು ಮಳಿಗೆಗಳಿಗೆ ನೋಟಿಸ್ ನೀಡಲಾಗಿತ್ತು.
ಗೋಬಿ ಮಂಚೂರಿ, ಪಾನಿಪುರಿ, ಇಡ್ಲಿ ಬಳಿಕ ಐಸ್‌ಕ್ರೀಂ ಸರದಿ
ರಾಸಾಯನಿಕ, ಕೃತಕ ಬಣ್ಣಗಳನ್ನು ಬಳಸುವ ಕಾರಣ ಗೋಬಿ ಮಂಚೂರಿ, ಪಾನಿಪುರಿ ಹಾಗೂ ಇನ್ನಿತರ ಫಾಸ್ಟ್ ಫುಡ್ ಐಟಂಗಳು ಅವುಗಳನ್ನು ಸೇವಿಸುವವರಲ್ಲಿ ಕ್ಯಾನ್ಸರ್ ಉಂಟು ಮಾಡಬಲ್ಲವು ಎಂದು ಈ ಹಿಂದೆ ಆಹಾರ ಇಲಾಖೆ ಅವುಗಳ ವಿರುದ್ಧ ಕ್ರಮ ಕೈಗೊಂಡಿತ್ತು. ರಾಸಾಯನಿಕ, ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿತ್ತು. ಅದಾದ ಬಳಿಕ ಅನೇಕರ ನೆಚ್ಚಿನ ಆಹಾರ ಇಡ್ಲಿಯ ಬಗ್ಗೆಯೂ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು. ಇದೀಗ ಐಸ್‌ಕ್ರೀಂ ಸರದಿ.