Val Kilmer: ಹಾಲಿವುಡ್ ಸೂಪರ್‌ಸ್ಟಾರ್ ವಾಲ್ ಕಿಲ್ಮರ್ ಇನ್ನಿಲ್ಲ
Hollywood Actor Val Kilmer Dies: ಸೂಪರ್‌ಸ್ಟಾರ್ ವಾಲ್ ಕಿಲ್ಮರ್(Hollywood Actor Val Kilmer Dies) ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಬ್ಯಾಟ್‌ಮ್ಯಾನ್ ಫಾರೆವರ್ ಮತ್ತು ಟಾಪ್ ಗನ್ ನಂತಹ ಚಲನಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ಅಪಾರ ಮೆಚ್ಚುಗೆಗೆ ಕಾರಣವಾಗಿದ್ದವು


ನವದೆಹಲಿ: ಹಾಲಿವುಡ್‌ನಲ್ಲಿ ತಮ್ಮ ನಟನೆಯಿಂದ ಅಚ್ಚಳಿಯದ ಛಾಪು ಮೂಡಿಸಿದ್ದ ಸೂಪರ್‌ಸ್ಟಾರ್ ವಾಲ್ ಕಿಲ್ಮರ್(Hollywood Actor Val Kilmer Dies) ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಬ್ಯಾಟ್‌ಮ್ಯಾನ್ ಫಾರೆವರ್ ಮತ್ತು ಟಾಪ್ ಗನ್ ನಂತಹ ಚಲನಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ಅಪಾರ ಮೆಚ್ಚುಗೆಗೆ ಕಾರಣವಾಗಿದ್ದವು. 1986ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದ್ದ ಹಿಟ್ ಸಿನಿಮಾ ಟಾಪ್ ಗನ್ ನಲ್ಲಿ ಟಾಮ್ ಕ್ರೂಸ್ ಜೊತೆಗೆ ನೇವಿ ವಿಮಾನ ಚಾಲಕ ಟಾಮ್ ಐಸ್‌ಮ್ಯಾನ್ ಕಜಾನ್ಸ್ಕಿ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದ ವಾಲ್, ಲಾಸ್ ಏಂಜಲೀಸ್‌ನಲ್ಲಿ ನ್ಯುಮೋನಿಯಾದಿಂದ ನಿಧನರಾದರು ಎಂದು ಅವರ ಮಗಳು ಮರ್ಸಿಡಿಸ್ ಕಿಲ್ಮರ್ ದಿ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.
2014ರಲ್ಲಿ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಜುಲೈ 2021ರಲ್ಲಿ ಕೇನ್ಸ್‌ನಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಅವರ ಜೀವನದ ಕುರಿತಾದ "ವಾಲ್" ಎಂಬ ಸಾಕ್ಷ್ಯಚಿತ್ರದಲ್ಲಿ, ಅವರು ಉಸಿರಾಡಲು ಕೃತಕ ಕೊಳವೆಯ ಅಗತ್ಯವಿದೆ ಎಂದು ವಿವರಿಸಲಾಗಿತ್ತು. ವಾಲ್ ಕಿಲ್ಮರ್‌ಗೆ ಗಂಟಲು ಕ್ಯಾನ್ಸರ್ ಇದ್ದಿದ್ದು ನಿಜ, ಆದರೆ ಅವರು ನಂತರ ಅದರಿಂದ ಚೇತರಿಸಿಕೊಂಡಿದ್ದರು ಎಂದು ಅವರ ಮಗಳು ಹೇಳಿದ್ದರು.
1988ರಲ್ಲಿ ಬಿಡುಗಡೆಯಾಗಿದ್ದ ಮಕ್ಕಳ ಫ್ಯಾಂಟಸಿ ಚಿತ್ರ ʼವಿಲ್ಲೋʼದಲ್ಲಿ ವಾಲ್ ಕಿಲ್ಮರ್ ನಟಿಸುವ ವೇಳೆ ಅವರಿಗೆ ನಟಿ ಜೋನ್ ವ್ಯಾಲಿ ಅವರ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ ಬಳಿಕ ಇಬ್ಬರೂ ವಿವಾಹವಾಗಿದ್ದರು. ನಂತರ ಈ ದಂಪತಿ ವಿಚ್ಚೇದನವನ್ನೂ ಪಡೆದುಕೊಂಡಿತ್ತು. ವಾಲ್ ತಮ್ಮ ಕೊನೆಯ ಹಲವು ವರ್ಷಗಳನ್ನು ಸಾಂಟಾ ಫೆ ಬಳಿಯ ಒಂದು ಜಮೀನಿನಲ್ಲಿ ಕಳೆದಿದ್ದಾರೆ. ಅವರು ಮಕ್ಕಳಾದ ಮರ್ಸಿಡಿಸ್ ಮತ್ತು ಜ್ಯಾಕ್ ಅವರನ್ನು ಅಗಲಿದ್ದಾರೆ.
ವಾಲ್ ಕಿಲ್ಮರ್ ಸಿನಿಮಾಗಳು:
ವಾಲ್ ಅವರು ಬ್ಯಾಟ್‌ಮ್ಯಾನ್ ಫಾರೆವರ್‌ನಲ್ಲಿ ಬ್ರೂಸ್ ವೇಯ್ನ್ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಜನಪ್ರಿಯರಾಗಿದ್ದರು , ಆಲಿವರ್ ಸ್ಟೋನ್ ನಿರ್ದೇಶನದ ದಿ ಡೋರ್ಸ್‌ನಲ್ಲಿ ಜಿಮ್ ಮಾರಿಸನ್ ಆಗಿದ್ದ ವಾಲ್, 1980 ರ ದಶಕದ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಆ ದಶಕದ ಅತ್ಯಂತ ಜನಪ್ರಿಯ ನಟ ಎಂಬ ಖ್ಯಾತಿಗೆ ವಾಲ್ ಒಳಗಾಗಿದ್ದರು.
ಈ ಸುದ್ದಿಯನ್ನೂ ಓದಿ: Thomas Burleigh Kurishingal: ಹಾಲಿವುಡ್ ಚಿತ್ರದಲ್ಲಿಯೂ ಅಭಿನಯಿಸಿದ್ದ ಮಲಯಾಳಂ ನಟ ಥಾಮಸ್ ಬರ್ಲೀ ಕುರಿಶಿಂಗಲ್ ವಿಧಿವಶ
ನಂತರದ ವರ್ಷಗಳಲ್ಲಿ, ಅವರು ಟಾಪ್ ಗನ್, ರಿಯಲ್ ಜೀನಿಯಸ್, ಟೂಂಬ್‌ಸ್ಟೋನ್, ಹೀಟ್ ಮತ್ತು ದಿ ಸೇಂಟ್‌ನಂತಹ ಸಿನಿಮಾಗಳಲ್ಲಿ ನಟಿಸುವ ಮೂಲಕ ಹಾಲಿವುಡ್‌ನಲ್ಲಿ ತಮ್ಮ ವಿಶೇಷ ಸ್ಥಾನವನ್ನು ಸ್ಥಾಪಿಸಿಕೊಂಡಿದ್ದರು. ಅವರು 2021ರ ಟಾಪ್ ಗನ್: ಮಾವೆರಿಕ್ ಸಿನಿಮಾದಲ್ಲಿ, ತಮ್‌ಮ ಹಿಂದ ಸಿನಿಮಾದ ಹಿಟ್ ಪಾತ್ರದಲ್ಲಿ ಮತ್ತೆ ನಟಿಸಿದ್ದರು. ಆದರೆ, ಗಂಟಲು ಕ್ಯಾನ್ಸರ್‌ನಿಂದಾಗಿ ಅವರಿಂದ ಮುಂದೆ ಮಾತನಾಡಲು ಸಾಧ್ಯವಾಗಲೇ ಇಲ್ಲ.
ಜೋಯಲ್ ಶುಮಾಕರ್ ನಿರ್ದೇಶನದ 1995ರ ಬ್ಯಾಟ್‌ಮ್ಯಾನ್ ಫಾರೆವರ್ ಚಿತ್ರದಲ್ಲಿನ ನಟನೆಯು ಮಿಶ್ರ ವಿಮರ್ಶೆಗಳನ್ನು ಪಡೆದಿತ್ತು. ಹೀಗಾಗಿ ಬ್ಯಾಟ್‌ಮ್ಯಾನ್ & ರಾಬಿನ್ ಸಿನಿಮಾ ನಿರ್ಮಿಸುವಾಗ ಅವರ ಪಾತ್ರವನ್ನು ಜಾರ್ಜ್ ಕ್ಲೂನಿ ನಿಭಾಯಿಸಿದರು. ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ವಾಲ್ ಚಾಟ್ಸ್‌ವರ್ತ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಹಾಲಿವುಡ್ ಫ್ರೊಫೆಷನಲ್ ಸ್ಕೂಲ್ ಮತ್ತು ಜುಲಿಯಾರ್ಡ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ʼಒನ್ ಟೂ ಮೆನಿʼ ಎಂಬ ಟಿವಿ ಸೀರಿಯಲ್‌ನಲ್ಲಿ ಅವರು ಮೊದಲ ಬಾರಿಗೆ ನಟಿಸಿದ್ದರು. ಇದರಲ್ಲಿ ಖ್ಯಾತ ಕಲಾವಿದರಾದ ಮಿಚೆಲ್ ಫೈಫರ್ ಕೂಡಾ ಭಾಗಿಯಾಗಿದ್ದರು. ʼಐ ಆಮ್ ಯುವರ್ ಹಕಲ್‌ಬೆರಿʼ ಎಂಬ ಶೀರ್ಷಿಕೆಯ ಅವರ ಆತ್ಮಚರಿತ್ರೆಯು 2020ರಲ್ಲಿ ಪ್ರಕಟವಾಗಿತ್ತು