Sunday, 19th May 2024

ಬೆಸ್ಕಾಂ, ಜಲಮಂಡಳಿ ವಿರುದ್ಧ 13 ಎಫ್‌ಐಆರ್‌: ಬಿಬಿಎಂಪಿ ತೀರ್ಮಾನ

ಬೆಂಗಳೂರು: ಅನುಮತಿ ಪಡೆಯದೆ ನಗರದ ಹಲವು ಪ್ರದೇಶಗಳಲ್ಲಿ ರಸ್ತೆ ಅಗೆದ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬೆಸ್ಕಾಂ ವಿರುದ್ಧ ವಾರಾಂತ್ಯಕ್ಕೆ 13 ಎಫ್‌ಐಆರ್ ದಾಖಲಿಸಲು ಬಿಬಿಎಂಪಿ ತೀರ್ಮಾನಿಸಿದೆ.

ನಗರದ ಕಂಡ‌ ಕಂಡಲ್ಲಿ ಈ ಎರಡೂ ಇಲಾಖೆಗಳು ರಸ್ತೆಗಳನ್ನು ಅಗೆಯುತ್ತಿದ್ದು, ರಸ್ತೆಗಳಲ್ಲಿ ಗುಂಡಿ ನಿರ್ಮಾಣ ವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಬಿಬಿಎಂಪಿ, ಅನುಮತಿ ಇಲ್ಲದೇ ರಸ್ತೆ ಅಗೆದರೆ ಎಫ್‌ಐಆರ್ ದಾಖಲಿಸಲು ಮನವಿ ಮಾಡಿಕೊಂಡಿದೆ.

ಯಾರೇ ರಸ್ತೆ ಅಗೆದರೂ ಯುಟಿಲಿಟಿ ಸರ್ವೀಸ್ ಪ್ರೊವೈಡರ್ ಸಂಬಂಧಿತ ಸ್ಪಷ್ಟ ಮಾಹಿತಿ ಇರುವ ಬೋರ್ಡ್ ಹಾಕಬೇಕು ಎಂದು ಬಿಬಿಎಂಪಿ ಸೂಚಿಸಿದೆ. ಅದರೂ, ಇದರ ಪಾಲನೆಯಾಗುತ್ತಿಲ್ಲ. ಇನ್ನು ಇತ್ತೀಚೆಗೆ ರಸ್ತೆ ಗುಂಡಿಗೆ ಮಹಿಳೆ ಬಲಿಯಾದ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಮೂಲ ಸೌಕರ್ಯ ವಿಭಾಗದ ಮುಖ್ಯ ಅಭಿಯಂತ ರರು ಪತ್ರ ಬರೆದಿದ್ದರು. ಅಂಜನಾನಗರ ಮುಖ್ಯ ರಸ್ತೆಯಲ್ಲಿ ಜಲಮಂಡಳಿ ರಸ್ತೆ ಅಗೆದು ದುರಸ್ತಿ ಕಾರ್ಯ ಮಾಡಿರಲಿಲ್ಲ. ಆದರೆ, ಸಾರ್ವಜನಿಕವಾಗಿ ಪಾಲಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸ್ಥಳೀಯ ರಾಜರಾಜೇಶ್ವರಿ ನಗರ ಇಇಯನ್ನು ಅಮಾನತು ಮಾಡಲಾಗಿತ್ತು.

ನಗರದಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಅನುಮತಿ ಪಡೆಯದೇ ಬೇಕಾ ಬಿಟ್ಟಿಯಾಗಿ ರಸ್ತೆ ಅಗೆದು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇನ್ನು ಮುಂದೆ ಜಲಮಂಡಳಿ, ಬೆಸ್ಕಾಂ ರಸ್ತೆ ಅಗೆದು ಕೆಲಸ ಆರಂಭಿಸಲು ಬಿಬಿಎಂಪಿ ಅನುಮತಿ ಕಡ್ಡಾಯ. ಅಲ್ಲದೇ, ಕಾಮಗಾರಿ ಮುಗಿದ ಬಳಿಕ ಕೆಲಸ ಪೂರ್ಣವಾದ ಬಗ್ಗೆ ಪ್ರಮಾಣ ಪತ್ರವನ್ನು ಬಿಬಿಎಂಪಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ಅನುಮತಿ ಪಡೆಯದೆ ರಸ್ತೆ ಅಗೆದರೆ ಪೋಲಿಸ್ ಠಾಣೆಯಲ್ಲಿ ಬೆಸ್ಕಾಂ ಮತ್ತು ಜಲಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಎಂಜಿನಿಯರ್‌ಗಳಿಗೆ ಪಾಲಿಕೆ ಸೂಚಿಸಿದೆ.

error: Content is protected !!