Sunday, 19th May 2024

ನಿಮ್ಮ ನಿರ್ಲಕ್ಷ್ಯಕ್ಕೆ ಜನ ಬೀದಿಯಲ್ಲಿ ಬಿದ್ದು ಸಾಯಬೇಕೆ?: ಬಿಬಿಎಂಪಿಗೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ನ್ಯಾಯಾಲಯದ ಆದೇಶಗಳನ್ನು ಪಾಲಿಸದ ನೀವು ನೆಪಗಳನ್ನೇ ಹೇಳಿಕೊಂಡು ಬರುತ್ತಿದ್ದೀರಿ. ನಿಮ್ಮ ನಿರ್ಲಕ್ಷ್ಯಕ್ಕೆ ಜನ ಬೀದಿಯಲ್ಲಿ ಬಿದ್ದು ಸಾಯ ಬೇಕೆ? ನಗರದ ರಸ್ತೆಗಳೆಲ್ಲ ಗುಂಡಿಮಯವಾಗಿವೆ ಎಂದು ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉಚ್ಚ ನ್ಯಾಯಾಲಯವು ಪಾಲಿಕೆಯ ಮುಖ್ಯ ಎಂಜಿನಿಯರ್​​ನನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದೆ.

ನಗರದ ಗುಂಡಿಗಳನ್ನು ಮುಚ್ಚಲು ಪಾಲಿಕೆ ಹಾಗೂ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ 2015ರಲ್ಲಿ ಬೆಂಗಳೂರಿನ ವಿಜಯನ್ ಮೆನನ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಾಲಯದ ನಿರ್ದೇಶನದಂತೆ ಖುದ್ದು ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಎಂಜಿನಿಯರ್ ವಿ.ಎಸ್.ಪ್ರಹ್ಲಾದ್, ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರಣಗಳನ್ನು ನೀಡಲು ಮುಂದಾದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪೀಠವು, ಎ.ಸಿ ಕಚೇರಿಯಲ್ಲಿ ಕೂರುವ ನಿಮಗೆ ಜನರ ಕಷ್ಟ ಅರ್ಥವಾಗುವುದಿಲ್ಲ. ಬರೀ ಕಾರಣಗಳನ್ನು ಹೇಳುತ್ತೀರಿ. ಕಳೆದ ವಾರ ಮಹಿಳೆಯೊಬ್ಬರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಾವನ್ನಪ್ಪಿದ್ದಾರೆ. ಇದಕ್ಕಿಂತ ಹೀನಾಯ ಸ್ಥಿತಿ ಮತ್ತೇನಿದೆ? ನಿಮ್ಮನ್ನು ನ್ಯಾಯಾಂಗ ಆದೇಶದ ಮೂಲಕ ಇಂದೇ ಸೇವೆಯಿಂದ ಅಮಾನತು ಮಾಡಿ ಜೈಲಿಗೆ ಕಳುಹಿಸುತ್ತೇವೆ. ಇಲ್ಲವೇ ಸರಕಾರಕ್ಕೆ ನಿಮ್ಮನ್ನು ಅಮಾನತು ಮಾಡಲು ಹಾಗೂ ನಿಮ್ಮ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸುತ್ತೇವೆ ಎಂದು ಗಂಭೀರವಾಗಿ ಹೇಳಿತು.

ಈ ಸಂದರ್ಭ ಪಾಲಿಕೆ ಮುಖ್ಯ ಎಂಜಿನಿಯರ್ ವಿ.ಎಸ್. ಪ್ರಹ್ಲಾದ್, ಪೀಠಕ್ಕೆ ಕೈಮುಗಿದು ಕ್ರಮ ಜರುಗಿಸದಂತೆ ಕೋರಿದರು. ಸರಕಾರದ ಪರ ವಕೀಲ ವಿ. ಶ್ರೀನಿಧಿ ಕೂಡ ಕಠಿಣ ಕ್ರಮ ಜರುಗಿಸದಂತೆ ಹಲವು ಬಾರಿ ಮನವಿ ಮಾಡಿದರು. ಅಲ್ಲದೇ, ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಖುದ್ದಾಗಿ ಚರ್ಚಿಸಿ ಸಮಸ್ಯೆ ಸರಿ ಪಡಿಸಲು ಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಬಿಬಿಎಂಪಿ ರಸ್ತೆ ಗುಂಡಿ ರಿಪೇರಿ ಮಾಡಲಿಕ್ಕೇ ₹ 1 ಸಾವಿರ ಕೋಟಿ ಖರ್ಚು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯಾವ ಲೆಕ್ಕದಲ್ಲಿ ಎಂಬುದು ತಿಳಿಯುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅಷ್ಟೊಂದು ಹಣ ರಸ್ತೆ ರಿಪೇರಿ ಮಾಡಿಲಿ ಕ್ಕೋ ಅಥವಾ ನಿರ್ಮಾಣ ಮಾಡಲಿಕ್ಕೋ ಎಂದು ಅಚ್ಚರಿ ವ್ಯಕ್ತಪಡಿಸಿತು.

***

ಸರಕಾರದ ವಕೀಲರ ಮನವಿ ಪರಿಗಣಿಸಿದ ವಿಭಾಗೀಯ ಪೀಠವು, ನಿಮ್ಮ ಮಾತಿನ ಮೇಲೆ ಭರವಸೆ ಇಟ್ಟು 1 ವಾರ ಕಾಲಾವಕಾಶ ನೀಡುತ್ತೇವೆ. ಆದರೆ, ಮುಂದಿನ ವಿಚಾರಣೆ ವೇಳೆ ಕಾರಣಗಳನ್ನು ನೀಡಬಾರದು. ರಸ್ತೆ ಗುಂಡಿಗಳನ್ನು ಯಾರು, ಹೇಗೆ ಮುಚ್ಚುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅನುಸರಿಸಲಾಗುತ್ತಿದೆ ಎಂಬ ಕುರಿತು ಮಾಹಿತಿ ನೀಡಬೇಕು. ಹಾಗೆಯೇ, ಮುಂದಿನ ವಿಚಾರಣೆ ಸಂದರ್ಭದಲ್ಲಿಯೂ ಪಾಲಿಕೆ ಮುಖ್ಯ ಎಂಜಿನಿಯರ್ ಹಾಜರಿರಬೇಕು ಎಂದು ನಿರ್ದೇಶಿಸಿ, ವಿಚಾರಣೆ ಯನ್ನು ಫೆ.15ಕ್ಕೆ ಮುಂದೂಡಿತು.

ಕಳೆದ ವರ್ಷ ಡಿಸೆಂಬರ್ ಅಂತ್ಯದವರೆಗೂ ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಳವಾಗಿದ್ದು, 7 ಮಂದಿ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆ ದ್ವಿಗುಣವಾಗಿದೆ.

ಬೆಂಗಳೂರಿನ 8 ವಲಯದಲ್ಲಿ ಗುಂಡಿಗಳಿರುವ ರಸ್ತೆಗಳ ಸಂಖ್ಯೆ ಹೀಗಿದೆ.
ಪೂರ್ವ ವಲಯ-3,078.
ಪಶ್ಚಿಮ ವಲಯ- 2,295.
ದಕ್ಷಿಣ ವಲಯ- 931.
ಬೊಮ್ಮನಹಳ್ಳಿ ವಲಯ-1,025.
ದಾಸರಹಳ್ಳಿ ವಲಯ- 576.
ಮಹದೇವಪುರ ವಲಯ- 625.
ರಾಜರಾಜೇಶ್ವರಿ​ ನಗರ ವಲಯ- 2,792.
ಯಲಹಂಕ ವಲಯ- 363.

8 ವಲಯಗಳಲ್ಲಿ ಒಟ್ಟು 11,685 ಗುಂಡಿ ಬಿದ್ದ ರಸ್ತೆಗಳಿವೆ. ಈ ಪೈಕಿ 9,927 ಗುಂಡಿ ಬಿದ್ದ ರಸ್ತೆಗಳ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಉಳಿದ 1,758 ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

error: Content is protected !!