Thursday, 3rd October 2024

ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು: ಅಮೆಜಾನ್’ಗೆ ದಂಡ

ಧಾರವಾಡ : ವಿದ್ಯಾರ್ಥಿನಿಗೆ ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯ ತೇಜಸ್ವಿನಿ ಹುದ್ದಾರ ಅನ್ನುವ ವಿದ್ಯಾರ್ಥಿನಿ ತನ್ನ ವ್ಯಾಸಂಗಕ್ಕಾಗಿ ಅಮೆಜಾನ್ ಕಂಪನಿ ಮೂಲಕ ಪೇ ಲೇಟರ್ ವ್ಯವಸ್ಥೆ ಅಡಿ ರೂ.1,999 ಕಿಮ್ಮತ್ತಿನ ಟ್ಯಾಬ್ ಪೆನ್ ಖರೀದಿಸಿದ್ದರು.

ಪಾರ್ಸಲ್ ಬಂದು ಅದನ್ನು ತೆರೆದು ನೋಡಿದಾಗ ಅದರೊಳಗೆ ಉಪಯೋಗಿಸಿದ ಹಳೆಯ ಟ್ಯಾಬ್ ಪೆನ್‍ಇತ್ತು. ತಕ್ಷಣ ಆ ಸಂಗತಿಯನ್ನು ದೂರುದಾರರು ಅಮೆಜಾನ್ ಕಸ್ಟಮರ್ ಕೇರಗೆ ತಿಳಿಸಿದರು. ಎದುರುದಾರರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ದೂರುದಾರರು ಬೇರೊಂದು ಟ್ಯಾಬ್ ಪೆನ್ ಖರೀದಿಸಿ ತಮ್ಮ ವ್ಯಾಸಂಗ ಮುಂದುವರಿಸಿದರು.

ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಹೇಳಿ ಬೆಂಗಳೂರಿನ ಅಮೆಜಾನ್ ಹಾಗೂ ಅಪಾರಿಯೋರಿಟೇಲ್ ಪ್ರೈ.ಲಿ. ಅವರ ಮೇಲೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಫಿರ್ಯಾದಿ ದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದೂರು ಸಲ್ಲಿಸಿದ್ದರು.

ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು.ಸಿ ಹಿರೇಮಠ ಸದಸ್ಯರು, ಹಣಕೊಟ್ಟು ಹೊಸ ಸರಕನ್ನು ಖರೀದಿಸುವಾಗ ಮಾರುವವರು ಗ್ರಾಹಕರು ಕೇಳುವ ಒಳ್ಳೆ ಗುಣ ಮಟ್ಟದ ಹೊಸ ಸರಕನ್ನು ಕೊಡುವುದು ಮಾರಾಟಗಾರರ ಕರ್ತವ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ ಹೊಸ ಸರಕನ್ನು ಸರಬರಾಜು ಮಾಡುವ ಬದಲು ಉಪಯೋಗಿಸಿದ ಮತ್ತು ಹಳೆಯದಾದ ದೋಷಯುಕ್ತ ಸರಕನ್ನು ದೂರುದಾರಳಾದ ವಿದ್ಯಾರ್ಥಿನಿಗೆ ಸರಬರಾಜು ಮಾಡಿರುವುದರಿಂದ ಅವರ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ಮತ್ತು ಆ ತಪ್ಪಿಗೆ ಇಬ್ಬರು ಎದುರುದಾರರು ಹೊಣೆಗಾರರಾಗುತ್ತಾರೆ ಅಂತಾ ಅಭಿಪ್ರಾಯ ಪಟ್ಟು ಆಯೋಗ ತೀರ್ಪು ನೀಡಿದೆ.