Sunday, 19th May 2024

ದ್ರಾಕ್ಷಾ ಮಾರ್ಕೆಟಿಂಗ್ ದ್ರಾಕ್ಷಾರಸ ಮಂಡಳಿ ಕಟ್ಟಡ ಶಂಕುಸ್ಥಾಪನೆಗೆ ಸಿಎಂ ಆಗಮನ: ಶಾಸಕ ಯತ್ನಾಳ

ವಿಜಯಪುರ : ದ್ರಾಕ್ಷಾ ಮಾರ್ಕೇಟಿಂಗ್ ಮತ್ತು ದ್ರಾಕ್ಷಾರಸ ಮಂಡಳಿ ಕಟ್ಟಡದ ಶಂಕುಸ್ಥಾಪನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ವಿಜಯಪುರ ನಗರದ ತೊರವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 141 ಎಕರೆ ಕಾಯ್ದಿರಿಸಿದ ಪ್ರದೇಶದಲ್ಲಿ ದ್ರಾಕ್ಷಾ ಮಾರ್ಕೆಟಿಂಗ್ ಹಾಗೂ ದ್ರಾಕ್ಷಾರಸ ಮಂಡಳಿ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಈಗಾಗಲೇ ಪ್ರಥಮ ಹಂತದಲ್ಲಿ 35 ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿದೆ. ಇದರಲ್ಲಿ 60 ಎಕರೆ ಪ್ರದೇಶದಲ್ಲಿ ದ್ರಾಕ್ಷಾ ಮಾರ್ಕೆಟಿಂಗ್ ಹಾಗೂ 30 ಎಕರೆ ಪ್ರದೇಶದಲ್ಲಿ ವೈನ್ ಟೂರಿಸಮ್, 20 ಎಕರೆ ಪ್ರದೇಶದಲ್ಲಿ ರಾಷ್ಟೀಯ ದ್ರಾಕ್ಷಾ ಸಂಶೋಧನೆ ಘಟಕ ಸ್ಥಾಪನೆಗೆ ನೀಲ ನಕ್ಷೆ ತಯಾರಾಗಿದ್ದು, ಇನ್ನುಳಿದ 31 ಎಕರೆ ಪ್ರದೇಶದಲ್ಲಿ ಇತರೆ ಕಚೇರಿ ಕಟ್ಟಡಗಳು, ಮಳಿಗೆಗಳು ಹಾಗು ಉದ್ಯಾನವನ, ರಸ್ತೆ ಕಾಮಗಾರಿಗಳಿಗೆ ಮೀಸಲಿರಿಸಲಾಗಿದೆ.

ಪೂರ್ವಭಾವಿ ಸಭೆ: ತಮ್ಮ ಮನವಿ ಮೇರೆಗೆ, ಈ ಮಹತ್ವದ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ವಿಜಯಪುರ ಜಿಲ್ಲೆಗೆ ಆಗಮಿಸಿ ಶಂಕುಸ್ಥಾಪನೆಯನ್ನು ನೆರವೇರಿಸಲಿ ದ್ದಾರೆ. ಈ ಕಾರ್ಯಕ್ರಮದ ತಯಾರಿಗಾಗಿ ಪೂರ್ವಭಾವಿ ಸಭೆಯನ್ನು ಬೆಂಗಳೂರಿ ನಲ್ಲಿ ಜುಲೈ 8ಕ್ಕೆ ನಿಗದಿಪಡಿಸಲಾಗಿದೆ.

ಮುಖ್ಯಮಂತ್ರಿಗಳ ಬೆಂಗಳೂರು ಗೃಹ ಕಚೇರಿ ಕೃಷ್ಣದಲ್ಲಿ ಜುಲೈ 08ರಂದು ಸಂಜೆ 4 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಮಹತ್ವದ ಈ ಇಲಾಖಾ ಸಮನ್ವಯ ಸಭೆಯಲ್ಲಿ ವಿವಿಧ ಇಲಾಖೆಗಳಾದ ತೋಟಗಾರಿಕೆ, ಪ್ರವಾಸೋದ್ಯಮ, ಅರಣ್ಯ, ಜಲಸಂಪನ್ಮೂಲ, ಸಣ್ಣ ನೀರಾವರಿ, ವಿದ್ಯುತ್ ಹಾಗು ಇತರೆ ಇಲಾಖೆಗಳ ಸಚಿವರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥ ಅಧಿಕಾರಿ ವರ್ಗದವರು ಆಗಮಿಸಲಿದ್ದಾರೆ. ಸಭೆಯಲ್ಲಿ, ದೇವರಹಿಪ್ಪರಗಿ ಶಾಸಕರು, ಎಂ.ಎಸ್.ಎಂ.ಇ ಮುಖ್ಯಸ್ಥರಾದ ಪಂಕಜ ಕುಮಾರ ಪಾಂಡೆ, ವಿಜಯಪುರ ನಗರದ ದ್ರಾಕ್ಷಾ ಬೆಳೆಗಾರರ ಸಂಘದ ಪ್ರಮುಖರು ಸಹ ಭಾಗವಹಿಸುವರು ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.

error: Content is protected !!