Lawyer Jagadish: ರಾಜ್ಯದ ಲೈಸೆನ್ಸ್ ಇಲ್ಲದ ಗನ್ ಬಳಕೆ, ʼಲಾಯರ್ʼ ಜಗದೀಶ್ ಮತ್ತು ಗನ್‌ಮ್ಯಾನ್ ಬಂಧನ
ಶುಕ್ರವಾರ ನಡೆದ ಗಲಾಟೆಯಲ್ಲಿ ಅವರ ಗನ್‌ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಸಂಬಂಧ ತೇಜಸ್ ಎಂಬವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಜಗದೀಶ್

ಬೆಂಗಳೂರು: ಪ್ರಚೋದನಕಾರಿಯಾಗಿ ಮಾತನಾಡುತ್ತ ಹಲ್ಲೆ ಮಾಡಿಸಿಕೊಳ್ಳುತ್ತಿರುವ ಬಿಗ್ ಬಾಸ್ (Bigg Boss) ಖ್ಯಾತಿಯ ಜಗದೀಶ್ (Lawer Jagadish) ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಲೈಸೆನ್ಸ್ ಇಲ್ಲದ ಗನ್ ಬಳಸಿದ್ದಕ್ಕಾಗಿ ಜಗದೀಶ್ ಹಾಗೂ ಅವರ ಗನ್‌ಮ್ಯಾನ್ (Gunman) ಇಬ್ಬರನ್ನೂ ಬಂಧಿಸಿ ಕೇಸು ಹಾಕಲಾಗಿದೆ.
ʼಲಾಯರ್ʼ ಜಗದೀಶ್ ಮತ್ತು ಅವರ ಗನ್ ಮ್ಯಾನ್ನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ನಡೆದ ಗಲಾಟೆಯಲ್ಲಿ ಅವರ ಗನ್‌ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಸಂಬಂಧ ತೇಜಸ್ ಎಂಬವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್ ಜಗದೀಶ್ರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದು, ಕರ್ನಾಟಕದಲ್ಲಿ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ದೂರುದಾರನ ಮೇಲೂ ಹಲ್ಲೆ ಮಾಡಿರುವ ಆರೋಪ ಇದೆ.
ಇತ್ತೀಚೆಗೆ ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಕಿರಿಕ್ ಆಗಿತ್ತು. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಇದೇ ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಿದ್ದನ್ನು ಜಗದೀಶ್ ಪ್ರಶ್ನೆ ಮಾಡಿದ್ದರು. ಆಗ ಜಗದೀಶ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಈ ಘಟನೆ ಸಂಬಂಧ ಪ್ರತಿಕ್ರಿಯಿಸುವಾಗ ಅವರು ದರ್ಶನ್ ಅಭಿಮಾನಿಗಳನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದರು. ‘ಈ ಕೆಲಸ ಮಾಡಿದ್ದು ದರ್ಶನ್ ಅಭಿಮಾನಿಗಳಂತೆ. ನನ್ನ ಬಳಿ ಬರುವಾಗ ವಿಮೆ ಮಾಡಿಸಿಕೊಂಡು ಬನ್ನಿ’ ಎಂದಿದ್ದರು.
ಈ ಬೆನ್ನಲ್ಲೇ ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಆಗಿದೆ. ಕೆಲವರು ಕೋಲು ದೊಣ್ಣೆ ತೆಗೆದುಕೊಂಡು ಬಂದು ಜಗದೀಶ್ ಅವರ ಕಾರನ್ನು ಹುಡಿ ಮಾಡಿದ್ದಾರೆ. ಜಗದೀಶ್ ಅವರ ಮೂಗು ಬಾಯಿಗಳಲ್ಲಿ ರಕ್ತ ಬರುವಂತೆ ಹೊಡೆಯಲಾಗಿತ್ತು. ಈ ವೇಳೆ ಜಗದೀಶ್ ಅವರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Student Death: ಲೋ ಬಿಪಿಯಿಂದ 7ನೇ ತರಗತಿ ವಿದ್ಯಾರ್ಥಿ ಸಾವು