Bengaluru Stampede: ಬೆಂಗಳೂರು ಕಾಲ್ತುಳಿತ ದುರಂತ; ಸಿಎಂ ಸಿದ್ದರಾಮಯ್ಯಗೆ ವರದಿ ಸಲ್ಲಿಸಿದ ನ್ಯಾ.ಡಿ.ಕುನ್ಹಾ
Bengaluru Stampede: ಆರ್.ಸಿ.ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಹನ್ನೊಂದು ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿದ್ದ ಏಕ ವ್ಯಕ್ತಿ ಆಯೋಗವು ಇಂದು ಎರಡು ಸಂಪುಟಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ.


ಬೆಂಗಳೂರು, ಜುಲೈ 11: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಮೈಕೆಲ್ ಡಿ. ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ಏಕವ್ಯಕ್ತಿ ಆಯೋಗವು ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಜುಲೈ 17 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಕುನ್ಹಾ ಅವರ ವರದಿಯನ್ನು ಮಂಡಿಸಿ, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಸಿಎಂ ಅವರು, ಆರ್.ಸಿ.ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ (Bengaluru Stampede) ಸಿಲುಕಿ ಹನ್ನೊಂದು ಜನ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿದ್ದ ಏಕ ವ್ಯಕ್ತಿ ಆಯೋಗವು ಇಂದು ಎರಡು ಸಂಪುಟಗಳಲ್ಲಿ ವರದಿಯಲ್ಲಿ ಸಲ್ಲಿಸಿದೆ.
ವರದಿಯಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟ ನಿರ್ಧಾರ ಮಾಡಲಿದೆ ಎಂದರು. ನಾನು ವರದಿಯನ್ನು ಪೂರ್ಣವಾಗಿ ಓದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರ ಅಮಾನತ್ತನ್ನು ಸಿಎಟಿಯವರು ವಿರೋಧಿಸಿ ಆದೇಶಿಸಿರುವ ಬಗ್ಗೆ ಆಯೋಗದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿ, ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಏನಿದು ಪ್ರಕರಣ?
ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಅದರಂತೆ, ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾ. ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚನೆ ಮಾಡಿತ್ತು. ಒಂದು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ, ನಿವೃತ್ತ ನ್ಯಾ. ಮೈಕೆಲ್ ಡಿ ಕುನ್ಹಾ ಅವರು ತನಿಖೆ ಪೂರ್ಣಗೊಳಿಸಿ ಸಿಎಂಗೆ ವರದಿಯನ್ನು ಸಲ್ಲಿಸಿದ್ದಾರೆ
ಘಟನೆಗೆ ಆರ್‌ಸಿಬಿ ಆತುರದ ನಿರ್ಧಾರಗಳು, ಕೆಎಸ್‌ಸಿಎ ನಿರ್ಲಕ್ಷ್ಯ ಹಾಗೂ ಪೊಲೀಸ್ ಭದ್ರತಾ ವೈಫಲ್ಯ ಕಾರಣ ಎಂದು ಆರೋಪಗಳು ಕೇಳಿಬಂದಿದ್ದವು. ಇದೀಗ ತನಿಖಾ ಆಯೋಗದ ವರದಿ ಸರ್ಕಾರದ ಕೈ ಸೇರಿದ್ದು, ಲೋಪ ಎಸಗಿದವರಿಗೆ ಕಾನೂನು ಸಂಕಷ್ಟ ಎದುರಾಗಲಿದೆ.