#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Rajendra Bhat Column: ಗಣ ತಂತ್ರ - ಪ್ರಜಾತಂತ್ರ: ಇಂದಿನ ದಿನವು ಸ್ವಾತಂತ್ರ್ಯದ ಹಬ್ಬದಷ್ಟೇ ಪವಿತ್ರವಾಗಿದೆ

ಜನವರಿ 26 ಭಾರತಕ್ಕೆ ಅತ್ಯಂತ ಪವಿತ್ರವಾದ ದಿನ. ಏಕೆಂದರೆ ಆಗಸ್ಟ್ 15,1947ರಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದಾಗ ನಮಗೆ ಪೂರ್ಣ ಪ್ರಮಾಣದ ಸ್ವರಾಜ್ಯವು ಸಿಕ್ಕಿರಲಿಲ್ಲ. ಭಾರತವು ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ಪಡೆದದ್ದು ಖಂಡಿತವಾಗಿಯೂ ಜನವರಿ 26,1950ರಂದು ಎಂದು ಹೇಳಬಹುದು!

Rajendra Bhat Column: ಗಣ ತಂತ್ರ - ಪ್ರಜಾತಂತ್ರ: ಇಂದಿನ ದಿನವು ಸ್ವಾತಂತ್ರ್ಯದ ಹಬ್ಬದಷ್ಟೇ ಪವಿತ್ರವಾಗಿದೆ

Republic Day

Profile Rakshita Karkera Jan 26, 2025 9:02 AM
  • ರಾಜೇಂದ್ರ ಭಟ್‌

ಎಲ್ಲಾ ರಾಷ್ಟ್ರಾಭಿಮಾನಿಗಳಿಗೆ ಗಣರಾಜ್ಯ ಉತ್ಸವದ ಹಾರ್ದಿಕ ಶುಭಾಶಯಗಳು.

ಜನವರಿ 26 ಭಾರತಕ್ಕೆ ಅತ್ಯಂತ ಪವಿತ್ರವಾದ ದಿನ. ಏಕೆಂದರೆ ಆಗಸ್ಟ್ 15,1947ರಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದಾಗ ನಮಗೆ ಪೂರ್ಣ ಪ್ರಮಾಣದ ಸ್ವರಾಜ್ಯವು ಸಿಕ್ಕಿರಲಿಲ್ಲ. ನಮಗೆ ಕೇವಲ ರಾಜಕೀಯ ಸ್ವಾತಂತ್ರ್ಯವು ಮಾತ್ರ ದೊರೆತಿತ್ತು. ಆಗ ನಮ್ಮ ದೇಶ ಭಾರತವನ್ನು 'ಡೊಮಿನಿಯನ್ ರಿಪಬ್ಲಿಕ್' ಎಂದು ಮಾತ್ರ ಕರೆಯಲಾಗುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯು ಭಾರತದಿಂದ ಪೂರ್ಣವಾಗಿ ನಿರ್ಗಮಿಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸಂವಿಧಾನದ ರಚನೆ ಆಗಿರಲಿಲ್ಲ. ಆ ಅರ್ಥದಲ್ಲಿ ಭಾರತವು ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ಪಡೆದದ್ದು ಖಂಡಿತವಾಗಿಯೂ ಜನವರಿ 26,1950ರಂದು ಎಂದು ಹೇಳಬಹುದು!

ಸಂವಿಧಾನದ ರಚನೆ ಸುಲಭದ ಕೆಲಸ ಆಗಿರಲಿಲ್ಲ.

ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ರಚನಾ ಸಮಿತಿಯಲ್ಲಿ ಪ್ರಮುಖ ಕೆಲಸ ಮಾಡಿದ ಬೆನೆಗಲ್ ನರಸಿಂಗರಾಯರು ನಮ್ಮ ಕರಾವಳಿ ಕರ್ನಾಟಕದವರು ಮತ್ತು ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಓದಿದವರು(ಅವರ ಬಗ್ಗೆ ಇನ್ನೊಮ್ಮೆ ಬರೆಯುವೆ). ಇತರ ಸದಸ್ಯರು ಕೆ.ಎಂ. ಮುನಿಷಿ, ಗೋಪಾಲ ಸ್ವಾಮಿ ಅಯ್ಯಂಗಾರ್, ಅಲಾಡಿ ಕೃಷ್ಣ ಅಯ್ಯರ್, ಸಯ್ಯದ್ ಮೊಹಮ್ಮದ್ ಸಾದುಲ್ಲ, ಮಾಧವ ರಾವ್ ಮೊದಲಾದವರು. ಎಲ್ಲರೂ ಶ್ರೇಷ್ಠ ಕಾನೂನಿನ ವಿದ್ವಾಂಸರೇ ಆಗಿದ್ದವರು. ಈ ಸದಸ್ಯರು 2 ವರ್ಷ, 11 ತಿಂಗಳು, 18 ದಿನಗಳ ಕಾಲ ಅಹರ್ನಿಶಿಯಾಗಿ ದುಡಿದು ಸಿದ್ಧಪಡಿಸಿದ ಸಂವಿಧಾನವು ನಮ್ಮದು! ಜಗತ್ತಿನ ಎಲ್ಲಾ ರಾಷ್ಟ್ರಗಳ ಸಾರ ಸರ್ವಸ್ವವನ್ನೂ ಹೀರಿ ರಚನೆಯಾದ ಸಂವಿಧಾನವು ನಮ್ಮದು! ಜಗತ್ತಿನ ಅತೀ ದೊಡ್ಡದಾದ ಮತ್ತು ವಿಸ್ತಾರವಾದ ಸಂವಿಧಾನವು ನಮ್ಮದು!

ನಮ್ಮ ಮೂಲ ಸಂವಿಧಾನವು ಕೈ ಬರಹದಲ್ಲಿಯೇ ಇದೆ!

ನಮ್ಮ ಸಂವಿಧಾನವನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಎರಡು ಪ್ರತ್ಯೇಕವಾದ ಆವೃತ್ತಿಗಳಲ್ಲಿ ಕೈ ಬರಹದಲ್ಲಿ ಬರೆಯಲಾಗಿದೆ. ಅದನ್ನು ಇನ್ನೂ ಪ್ರಿಂಟ್ ಮಾಡಿಲ್ಲ. ಅದನ್ನು ಸುಂದರ ಕೈ ಬರಹದಲ್ಲಿ ಬರೆದು ಮುಗಿಸಿದವರು ಪ್ರೇಮ್ ಬಿಹಾರಿ ನರೇನ್ ರೈಜ್ದಾ ಎಂಬವರು! ಇಂಗ್ಲಿಷ್ ಆವೃತ್ತಿಯಲ್ಲಿ 1,17,369 ಶಬ್ದಗಳು ಇವೆ! ಅದನ್ನು ಇಟಾಲಿಕ್ ಶೈಲಿಯಲ್ಲಿ ಪ್ರೇಮ್ ಬಿಹಾರಿ ಬರೆದು ಮುಗಿಸಿದರು ಅಂದರೆ ಅವರ ತಾಳ್ಮೆ ಮತ್ತು ಬದ್ದತೆಗಳು ಎಷ್ಟಿರಬೇಡ? ನಮ್ಮ ಸಂವಿಧಾನದ ಮೂಲ ಪ್ರತಿಗಳನ್ನು ಈಗಲೂ ದೆಹಲಿಯ ವೈಭವದ ಪಾರ್ಲಿಮೆಂಟ್ ಭವನದಲ್ಲಿ ಹೀಲಿಯಂ ತುಂಬಿದ ಪಾತ್ರೆಯಲ್ಲಿ ಸಂಗ್ರಹ ಮಾಡಿ ಇಡಲಾಗಿದೆ. ಅದರಲ್ಲಿ ಕೋಲ್ಕತ್ತಾದ ಶಾಂತಿ ನಿಕೇತನ ಶಾಲೆಯ ಕಲಾವಿದ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳು ತುಂಬಾ ಅದ್ಭುತವಾಗಿವೆ.

448 ವಿಧಿಗಳು, 22 ಭಾಗಗಳು, 12 ದೀರ್ಘ ಶೆಡ್ಯೂಲಗಳು....

ಇಷ್ಟೆಲ್ಲಾ ಇರುವ ವಿಶಾಲ ಆಶಯದ ಸಂವಿಧಾನವು ನಮ್ಮದು! ನಮ್ಮ ಸಂವಿಧಾನವು ಜಾರಿ ಆಗುವ ಮೊದಲೇ ಅದರಲ್ಲಿ 2000ರಷ್ಟು ತಿದ್ದುಪಡಿಗಳನ್ನು ಮಾಡಲಾಗಿತ್ತು. ಅಂತಿಮ ಕರಡು ಸಿದ್ಧ ಆದದ್ದು 26 ನವಂಬರ್ 1949ರಂದು. 24 ಜನವರಿ 1950ರಂದು ಅದಕ್ಕೆ ಆಗಿನ ಕಾಲದ 284 ಶಾಸಕಾಂಗ ಸದಸ್ಯರು ಸಹಿ ಮಾಡಿದ್ದರು. 26 ಜನವರಿ 1950ರಂದು ನಮ್ಮ ಪವಿತ್ರ ಸಂವಿಧಾನಕ್ಕೆ ರಾಷ್ಟ್ರವು ಅಂಗೀಕಾರ ನೀಡಿತು. ಅಂದೇ ಭಾರತದ ರಾಷ್ಟ್ರೀಯ ಲಾಂಛನವನ್ನು ಅಂಗೀಕಾರ ಮಾಡಲಾಯಿತು. ಈ ಐತಿಹಾಸಿಕ ಘಟನೆಗೆ ಇಂದು ಎಪ್ಪತ್ತು ಮತ್ತು ಆರು ವರ್ಷಗಳು ಸಂದವು.

ಸಂವಿಧಾನದ ಉದಾತ್ತ ಮೂಲ ಆಶಯಗಳು.

ನಮ್ಮ ದೇಶದ ಸಂವಿಧಾನವು ಅತ್ಯಂತ ಪವಿತ್ರವಾದದ್ದು. ಅದು ತನ್ನ ದೇಶದ ನಾಗರಿಕರಿಗೆ LIBERTY (ಸ್ವಾತಂತ್ರ್ಯ), JUSTICE ( ನ್ಯಾಯ) ಮತ್ತು EQUALITY (ಸಮಾನತೆ) ಎಂಬ ಮೂರು ಅದ್ಭುತವಾದ ಮೂಲ ತತ್ವಗಳನ್ನು ನೀಡಿದೆ. ಸಹೋದರತೆ, ಗೌರವ, ಐಕ್ಯತೆ, ಅಖಂಡತೆ ಮೊದಲಾದ ಉತ್ತಮ ಅಂಶಗಳನ್ನು ಪ್ರೋಮೊಟ್ ಮಾಡುತ್ತಿದೆ. ಆದರೆ ಮುಂದೆ ಅಧಿಕಾರಕ್ಕೆ ಬಂದ ಅನೇಕ ಸರಕಾರಗಳು ತಮ್ಮ ಸ್ವಾರ್ಥ ಸಾಧನೆಗೆ ಬೇಕಾಗಿ ಮತ್ತು ತುಷ್ಟೀಕರಣ ನೀತಿಯಿಂದ ಅದೇ ಸಂವಿಧಾನಕ್ಕೆ ಇದುವರೆಗೆ 115 ತಿದ್ದುಪಡಿಗಳನ್ನು ಮಾಡಿದವು! ಇದರಿಂದ ದೇಶದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು ಎರಡೂ ಆಗಿವೆ. ಇವುಗಳ ಹಿನ್ನೆಲೆಯಲ್ಲಿ 1953ರ ಹೊತ್ತಿಗೆ ಸ್ವತಃ ಸಂವಿಧಾನದ ಶಿಲ್ಪಿ ಆಗಿದ್ದ ಅಂಬೇಡ್ಕರ್ ಅವರು 'ನನ್ನ ಸಂವಿಧಾನವನ್ನು ನಾನೇ ಸುಟ್ಟು ಹಾಕುವೆ' ಎಂದು ಗುಡುಗಿದ್ದು ಕೂಡ ಇದೆ!

ಭಾರತ ಈಗ ಡೆಮಾಕ್ರೆಟಿಕ್ ರಿಪಬ್ಲಿಕ್!

ಇಂದು ಜಗತ್ತಿನ ಅತೀ ದೊಡ್ಡ ಡೆಮಾಕ್ರಟಿಕ್ ರಾಷ್ಟ್ರ ಅದು ಭಾರತ. ಹಾಗೆಯೇ ಜಗತ್ತಿನ ಅತ್ಯಂತ ಬೃಹತ್ ಸಂವಿಧಾನ ಅದೂ ನಮ್ಮದೇ! ಏನಿದ್ದರೂ ಡೊಮಿನಿಯನ್ ರಿಪಬ್ಲಿಕ್ ಆಗಿದ್ದ ಭಾರತವನ್ನು 'ಡೆಮಾಕ್ರಟಿಕ್ ರಿಪಬ್ಲಿಕ್' ಆಗಿ ಪರಿವರ್ತನೆ ಮಾಡಿದ ನಮ್ಮ ಸಂವಿಧಾನಕ್ಕೆ ನಾವು ತಲೆಬಾಗೋಣ. ಹಾಗೆಯೇ ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಮಿತಿಗೆ ನಮ್ಮ ಧನ್ಯವಾದ ಸಲ್ಲಿಸೋಣ. ಅಲ್ವಾ?

ಜೈ ಹಿಂದ್.