ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Zameer Ahmed: ಐದು ವರ್ಷವೂ ಸಿದ್ದರಾಮಯ್ಯನೇ ಸಿಎಂ: ಜಮೀರ್‌ ಅಹ್ಮದ್‌

Zameer Ahmed: ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ ಎಂದು ಬಿಜೆಪಿಗರು ಕಿರಿಕಿರಿ ಮಾಡುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಅವರು ಹೇಳಿದ್ದಾರೆ.

ಐದು ವರ್ಷವೂ ಸಿದ್ದರಾಮಯ್ಯನೇ ಸಿಎಂ: ಜಮೀರ್‌ ಅಹ್ಮದ್‌

Profile Prabhakara R Jan 26, 2025 6:41 PM

ಕೊಪ್ಪಳ: ರಾಜ್ಯದಲ್ಲಿ ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಈ ಬಗ್ಗೆ ಚರ್ಚೆಯೂ ಅಗತ್ಯ ಇಲ್ಲ.‌ ಅದರಂತೆ ಕೆಪಿಸಿಸಿ ಅಧ್ಯಕ್ಷರ ಕುರ್ಚಿಯೂ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗ್ಗೆ ಸತೀಶ ಜಾರಕಿಹೊಳಿ ಮಾತನಾಡಿರಬಹುದು. ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed) ಹೇಳಿದರು.‌

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಸ್ವಲ್ಪವೂ ಇಲ್ಲ. ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ ಎಂದು ಬಿಜೆಪಿಗರು ಕಿರಿಕಿರಿ ಮಾಡುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ ಎಂದರು.

ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ನಡುವಿನ ಜಗಳ ಬಿಜೆಪಿ ಆತಂತರಿಕ ವಿಚಾರ. ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಯಾರೂ ಆಹ್ವಾನಿಸಿಲ್ಲ. ಅಷ್ಟಕ್ಕೂ ಅವರು ಬರುವುದೂ ಇಲ್ಲ. ಇದೆಲ್ಲ ಅವರಿಬ್ಬರ ನಾಟಕ. ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳಲು, ಕಾಂಗ್ರೆಸ್‌ನಿಂದ ಆಹ್ವಾನ ಇದೆ ಎಂದು ಶ್ರೀರಾಮುಲು ಹೇಳಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದಿನ ಬಿಜೆಪಿ ಸರಕಾರ ರಾಜ್ಯದ ಬಡವರಿಗೆ ಒಂದೂ ಮನೆ ಕೊಟ್ಟಿಲ್ಲ. ಸ್ಲಂ ಬೋರ್ಡ್ ಮೂಲಕ ಕೇವಲ 1.30 ಲಕ್ಷ ರೂ. ಪ್ರೋತ್ಸಾಹ ಧನ ಕೊಡುತ್ತಾರೆ. ಜಿಎಸ್‌ಟಿ ಹೆಸರಿನಲ್ಲಿ ಆ ಎಲ್ಲ ಹಣ ವಾಪಸ್ ಪಡೆಯುತ್ತಾರೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಒಂದು ಮನೆ ಕೊಟ್ಟಿದ್ದರೂ ನಾನು ರಾಜೀನಾಮೆ ಕೊಡುತ್ತೇನೆ.

ಜಾತಿ ರಾಜಕಾರಣ ಮಾಡುವವರು ಯಾರೂ ಉದ್ಧಾರ ಆಗಲ್ಲ. ಜಾತಿ ರಾಜಕಾರಣ ಮಾಡುವವರಿಗೆ ಸದ್ಯಕ್ಕೆ ಒಳ್ಳೆಯದಾದರೂ, ಅವರ ಮಕ್ಕಳಾದರೂ ನರಳಿ ನರಳಿ ಸಾಯುತ್ತಾರೆ. ನಾನು ಅಲ್ಲ, ನನ್ನ ಇಬ್ಬರು ಮಕ್ಕಳು, ಮೊಮ್ಮಕ್ಕಳ ಮೇಲೆ ಆಣೆ ಇಟ್ಟು ಹೇಳುತ್ತೇನೆ. ನಾನು ಜಾತಿ ರಾಜಕಾರಣ ಮಾಡಲ್ಲ. ರಾಯರೆಡ್ಡಿ ಸಾಹೇಬರೆ, ನಿಮ್ಮ ನಿರೀಕ್ಷೆಯನ್ನು ನಾನು ಸುಳ್ಳು ಮಾಡಲ್ಲ. ನಿಮ್ಮ ಆಶಯದಂತೆ ನಡೆದುಕೊಳ್ಳುತ್ತೇನೆ. ನೀವು ಇಟ್ಟ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | N.R. Narayana Murthy: ದೇಶದ ಶೇ.60 ಜನರನ್ನು ಬಡತನ ಕಾಡುತ್ತಿದೆ: ಇನ್ಫೋಸಿಸ್ ನಾರಾಯಣ ಮೂರ್ತಿ

ಮೂರು ತಿಂಗಳೊಳಗೆ 1500 ಪಿಎಸ್‌ಐ ಹುದ್ದೆಗಳ ನೇಮಕಾತಿ: ಸಚಿವ ಪರಮೇಶ್ವರ್

Dr G Parameshwa

ತುಮಕೂರು: ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಅವೆಲ್ಲವನ್ನು ಹಂತಹಂತವಾಗಿ ನೇಮಕಾತಿ ಮಾಡಲಾಗುವುದು. ಮೂರು ತಿಂಗಳೊಳಗೆ 1500 ಪಿಎಸ್‌ಐ ಹುದ್ದೆಗಳ ನೇಮಕಾತಿ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಎಂಜಿನಿಯರಿಂಗ್ ಕಾಲೇಜು ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನ ಆಸುಪಾಸಿನಲ್ಲಿ ನಿರ್ಮಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ಕಡೆಗಳಲ್ಲಿ ಭೂಮಿ ಗುರುತಿಸಲಾಗಿದೆ. ವಸಂತ ನರಸಾಪುರ‌ ಹೊಂದಿಕೊಂಡತೆ ರಾಷ್ಟ್ರೀಯ ಹೆದ್ದಾರಿ 48 ಸಮೀಪ 3 ಸಾವಿರ ಭೂಮಿ ಹಾಗೂ ಶಿರಾ ತಾಲೂಕಿನ ಸಿ.ಬಿ.ದೇವಸ್ಥಾನ ಸಮೀಪ 4 ರಿಂದ 5 ಸಾವಿರ ಎಕರೆ ಭೂಮಿಯನ್ನು ನಕ್ಷೆ ಮೂಲಕ ಗುರುತಿಸಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು ಪಕ್ಷಾತೀತವಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗಿದೆ.‌ ಮೈಕ್ರೋಫೈನಾನ್ಸ್‌ಗಳಿಗೆ ಸಬಂಧಿಸಿದಂತೆ ಈಗಿರುವ ಕಾನೂನು ಬಲಪಡಿಸಲಾಗುವುದು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸುಗ್ರಿವಾಜ್ಞೆ ಮೂಲಕ ಕಾನೂನು ಜಾರಿಗೆ ತರಲಾಗುವುದು. ಸುಮೋಟೊ ಕೇಸ್ ತೆಗೆದುಕೊಳ್ಳಲು ಪೊಲೀಸರಿಗೆ ಅವಕಾಶವಿಲ್ಲ. ಇದಕ್ಕೆ ಅವಕಾಶ‌ ಕಲ್ಪಿಸಲಾಗುವುದು. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡಲು ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.

ಅನಧಿಕೃತ ಫೈನಾನ್ಸ್ ಹಾವಳಿಯನ್ನು ಮಟ್ಟ ಹಾಕಲಾಗುವುದು. ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ವರ್ಷ ಏಳು ಜನರು ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 14 ಪ್ರಕರಣ ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಕಾನೂನು‌ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.

ನಿಮ್ಮ ಅಭಿಮಾನಿಗಳಿಂದ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂಬ ಕೂಗು ಎದ್ದಿದೆ ಎಂಬುದರ ಕುರಿತು ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ತೆರೆ ಎಳೆದರು.