CM Siddaramaiah: ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಬೀದಿಗಿಳಿದು ಹೋರಾಟ: ಸಿಎಂ ಸಿದ್ದರಾಮಯ್ಯ
ರಾಜ್ಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲನ್ನು ಇನ್ನಷ್ಟು ಕಡಿತಗೊಳಿಸಲು ಕೇಂದ್ರದ ಎನ್‌ಡಿಎ ಸರ್ಕಾರ ಮಾಡುತ್ತಿರುವ ಪ್ರಯತ್ನ ಕರ್ನಾಟಕ ವಿರೋಧಿ ಮಾತ್ರವಲ್ಲ, ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾರುವ ಸಂವಿಧಾನಕ್ಕೆ ಕೂಡಾ ವಿರುದ್ಧವಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಗಳ ತೆರಿಗೆ ಹಂಚಿಕೆಯನ್ನು (Tax distribution) ಶೇ 41ರಿಂದ ಶೇ 40ಕ್ಕೆ ಕಡಿತಗೊಳಿಸಲು ಎನ್‌ಡಿಎ ಸರ್ಕಾರ (NDA Government) ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಮನವಿ-ಮಾತುಕತೆ ಮೂಲಕ ಪರಿಹರಿಸಲು ನಡೆಸುತ್ತಿರುವ ಪ್ರಯತ್ನ ವಿಫಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲನ್ನು ಇನ್ನಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಕರ್ನಾಟಕ ವಿರೋಧಿ ಮಾತ್ರವಲ್ಲ, ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾರುವ ಸಂವಿಧಾನಕ್ಕೆ ಕೂಡಾ ವಿರುದ್ಧವಾಗಿದೆ. ರಾಜ್ಯದ ತೆರಿಗೆ ಪಾಲನ್ನು ಶೇಕಡಾ 41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ಗಮನಿಸುತ್ತಾ ಬಂದರೆ ನಿರಂತರವಾಗಿ ರಾಜ್ಯಗಳ ಸಂವಿಧಾನಬದ್ಧ ಅಧಿಕಾರಗಳನ್ನು ಮೊಟಕುಗೊಳಿಸುತ್ತಾ ಅವುಗಳನ್ನು ದುರ್ಬಲಗೊಳಿಸುತ್ತಾ ಬಂದಿರುವುದನ್ನು ಕಾಣಬಹುದು. ರಾಜ್ಯಗಳು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುವ ತೆರಿಗೆಯಲ್ಲಿ ನ್ಯಾಯಬದ್ಧ ಪಾಲು ರಾಜ್ಯಗಳಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಹಣಕಾಸು ಆಯೋಗ ರಾಜ್ಯಗಳ ಹಕ್ಕುಗಳನ್ನು ದಮನಿಸಲು ಹೊರಟ ಕೇಂದ್ರ ಸರ್ಕಾರದ ಕೈಗಳ ಆಯುಧವಾಗಿರುವುದು ದುರಂತವೇ ಸರಿ. ರಾಜ್ಯಗಳು ಕೇಂದ್ರ ಸರ್ಕಾರದ ಮರ್ಜಿ ಕಾಯುವಂತಹ ಪರವಾಲಂಬಿ ಸ್ಥಿತಿಗೆ ನೂಕುವುದು ಈ ಹುನ್ನಾರದ ದುರುದ್ದೇಶವಾಗಿರುವಂತೆ ಕಾಣುತ್ತಿದೆ. ಇದನ್ನ ಸಹಿಸಲು ಸಾಧ್ಯ ಇಲ್ಲ ಎಂದು ಕಿಡಿಕಾರಿದ್ದಾರೆ.
ಅಧಿಕಾರದ ವಿಕೇಂದ್ರೀಕರಣ ಪ್ರಜಾಪ್ರಭುತ್ವ, ಅಧಿಕಾರದ ಕೇಂದ್ರಿಕರಣ ಸರ್ವಾಧಿಕಾರ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಎಂಟು ದಶಕಗಳು ಪೂರ್ಣಗೊಳ್ಳುತ್ತಿರುವ ಇಂದಿನ ಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ವಿಕಾಸಗೊಳಿಸಿ ಅಧಿಕಾರದ ವಿಕೇಂದ್ರಿಕರಣ ಮಾಡಬೇಕಾದ ಕಾಲದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿರುವುದು ವಿಷಾದನೀಯ.
ಪ್ರತಿ ವರ್ಷ ಕನ್ನಡಿಗರಿಂದ ಸಂಗ್ರಹಿಸಲಾದ ಅಂದಾಜು ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ. ಅದರಲ್ಲಿ ರಾಜ್ಯಕ್ಕೆ ವಾಪಸು ಬರುವುದು ರೂಪಾಯಿಗೆ 15 ಪೈಸೆ ಮಾತ್ರ. ಹದಿನೈದನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇಕಡಾ 4.713ರಿಂದ ಶೇಕಡಾ 3.64ಕ್ಕೆ ಇಳಿಸಿದ್ದ ಕಾರಣದಿಂದಾಗಿ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ 68,775 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ.
15ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದರೂ ಇಲ್ಲಿಯ ವರೆಗೆ ಆಯೋಗವೇ ಶಿಫಾರಸು ಮಾಡಿರುವ ವಿಶೇಷ ಅನುದಾನ ರೂ.5495 ಕೋಟಿ ಮತ್ತು ರಾಜ್ಯ ಕೇಂದ್ರಿತ ರೂ.6000 ಕೋಟಿ ಮೊತ್ತದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ.
2021-22, 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ 1,311 ಕೋಟಿ ರೂ. ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ₹775 ಕೋಟಿ ರೂ. ಕಡಿಮೆ ಅನುದಾನ ನೀಡಲಾಗಿದೆ. 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ, ಆರೋಗ್ಯ ಅನುದಾನದಲ್ಲಿ ರೂ.826 ಕೋಟಿ, ಎಸ್ ಡಿ ಆರ್ ಎಫ್ ಅಡಿಯಲ್ಲಿ ರೂ.340 ಕೋಟಿ ಹಣವನ್ನು ಕಡಿತ ಮಾಡಲಾಗಿದೆ. ಈ ಒಟ್ಟು ಬಾಕಿ ರೂ.3,300 ಕೋಟಿ ರೂಪಾಯಿ ಮತ್ತು 2024-25 ಮತ್ತು 2025-26ರ ಅವಧಿಯಲ್ಲಿ ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು.
ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಲಾಗುತ್ತಿಲ್ಲ. ಸೆಸ್ ಮತ್ತು ಸರ್ಚಾರ್ಜ್ ಅನ್ನು ತೆರಿಗೆ ನಿಧಿಯಿಂದ ಹೊರಗಿಟ್ಟಿರುವ ಕಾರಣ 2017-18ರಿಂದ 2024-25ರ ಅವಧಿಯಲ್ಲಿ ಕರ್ನಾಟಕ 53,359 ಕೋಟಿ ರೂಪಾಯಿ ಕಳೆದುಕೊಂಡಿದೆ. 2010-11ರಲ್ಲಿ ಒಟ್ಟು ತೆರಿಗೆಯ ಶೇಕಡಾ 8.1ರಷ್ಟಿದ್ದ ಸೆಸ್ ಮತ್ತು ಸರ್ಚಾರ್ಜ್ ನ ಪ್ರಮಾಣ 2024-25ರಲ್ಲಿ ಶೇಕಡಾ 14ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಬರುವ ತೆರಿಗೆ ಪಾಲಿನಲ್ಲಿ ಕಡಿತ ಉಂಟಾಗಿದೆ. ಇದರ ಜೊತೆಯಲ್ಲಿ ಕೇಂದ್ರದ ಸಹಾಯ ಧನ ಕೂಡಾ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಸೆಸ್ ಮತ್ತು ಸರ್ಚಾರ್ಜ್ ಅನ್ನು ರದ್ದುಗೊಳಿಸಬೇಕು ಇಲ್ಲವೆ ಅದನ್ನು ಒಟ್ಟು ತೆರಿಗೆಯ ನಿಧಿಗೆ ಸೇರಿಸಿ ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು.
ಅನುದಾನ ಬಿಡುಗಡೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ ಸಲ್ಲದು: ಕೇಂದ್ರಕ್ಕೆ ರಾಜ್ಯ ಸರ್ಕಾರ
ಜಿಎಸ್ ಟಿ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ಜಿಎಸ್ ಟಿ ಪರಿಹಾರ ಸೆಸ್ ಜಾರಿಗೊಳಿಸಲಾಗಿತ್ತು. 2022ರ ಜುಲೈ ತಿಂಗಳಲ್ಲಿಯೇ ಪರಿಹಾರ ನೀಡುವುದನ್ನು ನಿಲ್ಲಿಸಿದರೂ 2026ರ ವರೆಗೆ ಸೆಸ್ ಸಂಗ್ರಹವನ್ನು ಮುಂದುವರಿಸಲಾಗಿದೆ. ಈ ಸೆಸ್ ಬದಲಿಗೆ ಹೆಚ್ಚುವರಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ ಜಿಎಸ್ ಟಿ) ಸಂಗ್ರಹಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಬೇಕು.
1985ರಿಂದ ಸೇವಾ ತೆರಿಗೆಯನ್ನು ಪರಿಷ್ಕರಿಸಿಲ್ಲ, ಈ ದೀರ್ಘಾವಧಿಯಲ್ಲಿ ನಡೆದಿರುವ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸೇವಾ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು. ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ರಾಜ್ಯಕ್ಕೆ ನೀಡಬೇಕು. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ತೆರಿಗೆಯೇತರ ಆದಾಯವನ್ನು ಕೂಡಾ ತೆರಿಗೆ ನಿಧಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಂತಹ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ನಮ್ಮ ಸರ್ಕಾರಕ್ಕೆ ಹೇಗಾದರೂ ಮಾಡಿ ಅಪಖ್ಯಾತಿ ತರಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದಂತಿದೆ. ಇದಕ್ಕಾಗಿ ದುರುದ್ದೇಶದಿಂದ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲು ಮತ್ತಿತರ ಅನುದಾನ ನೀಡದೆ ರಾಜ್ಯದ ಖಜಾನೆಯನ್ನು ಬರಿದು ಮಾಡಲು ಹೊರಟಿದೆ. ಇಂತಹ ದಮನಕಾರಿ ನೀತಿಗಳನ್ನು ಎದುರಿಸುವ ಶಕ್ತಿ ಮತ್ತು ಧೈರ್ಯ ರಾಜ್ಯ ಸರ್ಕಾರಕ್ಕಿದೆ. ಈ ಅನ್ಯಾಯವನ್ನು ರಾಜ್ಯದ ಜನತೆಯೂ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ನಂಬಿದ್ದೇನೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪರಿಹರಿಸಲು ಮನವಿ-ಮಾತುಕತೆ ಮೂಲಕ ನಡೆಸುತ್ತಾ ಬಂದ ಪ್ರಯತ್ನ ವಿಫಲವಾದಲ್ಲಿ ಬೀದಿಗಿಳಿದು ಜನರ ಜೊತೆ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಸಿದ್ದಾರೆ.