Kozhikode Horror: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ; 16 ವರ್ಷದ ಬಾಲಕ ಸಾವು
ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದ ಫೇರ್ ವೆಲ್ ಪಾರ್ಟಿ ವೇಳೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. 16 ವರ್ಷದ ಬಾಲಕ ಮೊಹಮ್ಮದ್ ಶಹಬಾಸ್ (16) ಅಸುನೀಗಿದ ದುರ್ದೈವಿ. ಜಿಲ್ಲೆಯ ಖಾಸಗಿ ಟ್ಯೂಷನ್ ಸೆಂಟರ್ ಬಳಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದ ವೇಳೆ ಈ ದುರ್ಘಟನೆ ನಡೆದಿದೆ.

ಮೃತಪಟ್ಟ ಬಾಲಕ ಮೊಹಮ್ಮದ್ ಶಹಬಾಸ್

ತಿರುವನಂತಪುರಂ: ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದ ಫೇರ್ ವೆಲ್ ಪಾರ್ಟಿಯೊಂದರ ವೇಳೆ ಕಾಣಿಸಿಕೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಣ್ಣ ಜಗಳ ದುರಂತ ತಿರುವು ಪಡೆದುಕೊಂಡು 16 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. 10ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಶಹಬಾಸ್ (16) ಅಸುನೀಗಿದ ದುರ್ದೈವಿ ಆಗಿದ್ದು, ಕೋಝಿಕ್ಕೋಡ್ ಜಿಲ್ಲೆಯ ಖಾಸಗಿ ಟ್ಯೂಷನ್ ಸೆಂಟರ್ ಬಳಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದ ವೇಳೆ ಆತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಏನಿದು ಘಟನೆ?
ತಾಮರಶ್ಸೇರಿಯಲ್ಲಿರುವ ಟ್ಯೂಷನ್ ಸೆಂಟರ್ ಈ ಒಂದು ಅವಘಡಕ್ಕೆ ಸಾಕ್ಷಿಯಾಗಿದೆ. ಫೆ. 23ರಂದು ಬೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಫೇರ್ ವೆಲ್ ಕಾರ್ಯಕ್ರಮ ವೇಳೆ ಎರಡು ವಿಭಿನ್ನ ಶಾಲೆಯ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿತ್ತು. ಟ್ಯೂಷನ್ ಕೇಂದ್ರದ ಶಿಕ್ಷಕರು, ಸಿಬ್ಬಂದಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ, ಸಮಾಧಾನಪಡಿಸಿದ್ದರು. ಆದರೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ದ್ವೇಷವಾಗಿ ತಿರುಗಿದ್ದು, ಅಷ್ಟಕ್ಕೆ ಸುಮ್ಮನಾಗದ ವಟ್ಟೋಲಿ ಎಂಜೆ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ತಾಮರಸ್ಸೇರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಫೆಬ್ರವರಿ 28ರಂದು ಮತ್ತೆ ಜಿದ್ದಾಜಿದ್ದಿಗೆ ಬಿದ್ದಿದ್ದರು. ಕೈ-ಕೈ ಮಿಲಾಯಿಸಿಕೊಂಡಿದ್ದರು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಎಂಜೆ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಶಹಬಾಸ್ಗೆ ಗಂಭೀರ ಗಾಯಗೊಂಡಿದ್ದ.
ತಕ್ಷಣವೇ ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಹಮ್ಮದ್ ಶಹಬಾಸ್ನನ್ನು ದಾಖಲಿಸಲಾಯಿತು. ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ (ಮಾ. 1) ಮುಂಜಾನೆ ಮುಹಮ್ಮದ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆ ವಿದ್ಯಾರ್ಥಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Astro Tips: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ಕೆಲಸ ಮಾಡಲೇಬೇಡಿ; ಆರ್ಥಿಕ ಸಂಕಷ್ಟ ಎದುರಾದೀತು...!
ಘಟನೆಯ ಕುರಿತು ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಕಳವಳ ವ್ಯಕ್ತಪಡಿಸಿದ್ದು, ಪ್ರಕರಣ ಕುರಿತು ಇಲಾಖಾ ತನಿಖೆಯನ್ನು ಪ್ರಾರಂಭಿಸುವಂತೆ ಶನಿವಾರ ಸಾಮಾನ್ಯ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ವಿಚಾರಣೆ ನಡೆಸಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡಿನಲ್ಲಿ ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ವಿದ್ಯಾರ್ಥಿಗಳಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತ್ತು. ಸಣ್ಣ ಜಗಳ ಒಂದು ಪ್ರಾಣವನ್ನೇ ಕಸಿದುಕೊಂಡಿತ್ತು. 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಸರವಣನ್ ಮತ್ತು ಕಂದಗುರು ನಡುವೆ ಶಾಲಾ ಬಸ್ಸಿನಲ್ಲಿ ಸೀಟಿನ ಕುರಿತು ಜಗಳ ನಡೆಸಿದ್ದರು. ಈ ಜಗಳ ವಿಕೋಪಕ್ಕೆ ತಿರುಗಿ ಸರವಣನ್ ಕಂದಗುರುವನ್ನು ತಳ್ಳಿದ ಪರಿಣಾಮ ಆತ ಬಿದ್ದು ತಲೆಗೆ ಪೆಟ್ಟು ಬಿದ್ದಿತ್ತು. ವೈದ್ಯಕೀಯ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೇ ಕಂದಗುರು ಸಾವನ್ನಪ್ಪಿದ್ದ.