ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Roopa Gururaj Column: ಗುರುಕೃಪೆಯಿಂದ ಊರನ್ನೇ ಸಮೃದ್ಧಿಗೊಳಿಸುವ ಶಿಷ್ಯ

ಗುರುಗಳ ಇನ್ನೊಬ್ಬ ಶಿಷ್ಯನಾದ ಶಂಕರ, ಆಶ್ರಮದ ಸುತ್ತಲಿರುವ ಜಾಗದ ಸ್ವಲ್ಪ ಭಾಗವನ್ನು ಹದ ಮಾಡಿ, ಕಡಲೇಕಾಯಿಗಳನ್ನು ಬಿತ್ತಿ, ಮಣ್ಣು-ಗೊಬ್ಬರ-ನೀರು ಹಾಕಿದ. ಕೆಲವೇ ತಿಂಗಳಲ್ಲಿ ಕಡಲೇಕಾಯಿ ಮೊಳೆತು ಸಸಿಯಾಯಿತು, ಕ್ರಮೇಣ ಗಿಡಗಳಾಗಿ ಗೋಣಿಚೀಲ ದಲ್ಲಿ ತುಂಬಿ ಇಡುವಷ್ಟು ಕಡಲೇ ಕಾಯಿಗಳ ಫಲ ಸಿಕ್ಕಿತು

ಗುರುಕೃಪೆಯಿಂದ ಊರನ್ನೇ ಸಮೃದ್ಧಿಗೊಳಿಸುವ ಶಿಷ್ಯ

ಒಂದೂರಲ್ಲಿ ಒಬ್ಬರು ಗುರುಗಳು, ಅವರ ಜತೆಗೆ ಭಾಸ್ಕರ ಮತ್ತು ಶಂಕರ ಎಂಬ ಇಬ್ಬರು ಶಿಷ್ಯರಿದ್ದರು. ದೇಶ ಸಂಚಾರಕ್ಕೆ ತೆರಳಲು ಯೋಜಿಸಿದ ಗುರುಗಳು ಆ ಯಾತ್ರೆಗೆ ಹೊರಡುವ ಮುನ್ನ ತಮ್ಮ ಶಿಷ್ಯರನ್ನು ಕರೆದು, “ಮಕ್ಕಳೇ, ನಾನು ಬರುವುದು 10-15 ವರ್ಷಗಳೇ ಆಗು ತ್ತವೆ. ನೀವಿಬ್ಬರೂ ಜತೆಗೇ ಇದ್ದು ಸಂತೋಷವಾಗಿರಿ" ಎಂದು ಆಶೀರ್ವದಿಸಿ, ಇಬ್ಬರಿಗೂ ಒಂದೊಂದು ಮುಷ್ಟಿ ಕಡಲೇಕಾಯಿಗಳನ್ನು ಕೊಟ್ಟು, “ಇದು ನಾನು ಕೊಡುವ ಪ್ರಸಾದ" ಎಂದರು. ಗುರುಗಳು ಹೊರಟ ಮೇಲೆ ಮನೆಯ ಒಂದು ಭಾಗದಲ್ಲಿ ಭಾಸ್ಕರ, ಮತ್ತೊಂದ ರಲ್ಲಿ ಶಂಕರ ತಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಂಡರು.

ಇದನ್ನೂ ಓದಿ: Roopa Gururaj Column: ಸೀತಾಮಾತೆಯ ಸಹೋದರ ಯಾರು ಗೊತ್ತೇ ?

ಕಡಲೇಕಾಯಿಗಳ ರೂಪದಲ್ಲಿ ತನಗೆ ಗುರುಗಳು ಕೊಟ್ಟ ಪ್ರಸಾದದಲ್ಲಿ ಭಗವಂತನೇ ಇದ್ದಾನೆ ಎಂದು ಪರಿಗಣಿಸಿದ ಭಾಸ್ಕರ ಅವನ್ನು ಒಂದು ರೇಷ್ಮೆ ವಸ್ತ್ರದಲ್ಲಿ ಸುತ್ತಿ, ಪುಟ್ಟ ಡಬ್ಬಿಯಲ್ಲಿ ಹಾಕಿ, ಅದನ್ನು ಮತ್ತೊಂದು ಸಂಪುಟದಲ್ಲಿಟ್ಟು ಮುಚ್ಚಳ ಹಾಕಿದನು.

ನಂತರ, ಒಂದು ಜಾಗದಲ್ಲಿ ಪುಟ್ಟ ಮಣೆಯೊಂದರ ಮೇಲೆ ಅದನ್ನು ಪ್ರತಿಷ್ಠಾಪಿಸಿದನು. ಪ್ರತಿದಿನ ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ, ಸಂಪುಟವನ್ನು ಇಟ್ಟ ಜಾಗದಲ್ಲಿ ಗುಡಿಸಿ-ಸಾರಿಸಿ-ರಂಗೋಲಿಯಿಟ್ಟು, ದೀಪ ಹಚ್ಚುತ್ತಿದ್ದ. ನಂತರ ಆ ಸಂಪುಟಕ್ಕೆ ಅರಿಶಿನ-ಕುಂಕುಮ, ಅಕ್ಷತೆ, ಹೂವು ಎಲ್ಲವನ್ನೂ ಸಮರ್ಪಿಸಿ, ಧೂಪ-ದೀಪವನ್ನು ಬೆಳಗಿ, ನೈವೇದ್ಯ ಮಾಡಿ ನಮಸ್ಕರಿಸಿ, ಅಲ್ಲೇ ಕುಳಿತು ಬಹಳ ಹೊತ್ತು ಧ್ಯಾನ ಮಾಡುತ್ತಿದ್ದ. ಆದರೆ, ಗುರುಗಳ ಇನ್ನೊಬ್ಬ ಶಿಷ್ಯನಾದ ಶಂಕರ, ಆಶ್ರಮದ ಸುತ್ತಲಿರುವ ಜಾಗದ ಸ್ವಲ್ಪ ಭಾಗವನ್ನು ಹದ ಮಾಡಿ, ಕಡಲೇಕಾಯಿಗಳನ್ನು ಬಿತ್ತಿ, ಮಣ್ಣು-ಗೊಬ್ಬರ-ನೀರು ಹಾಕಿದ. ಕೆಲವೇ ತಿಂಗಳಲ್ಲಿ ಕಡಲೇಕಾಯಿ ಮೊಳೆತು ಸಸಿಯಾಯಿತು, ಕ್ರಮೇಣ ಗಿಡಗಳಾಗಿ ಗೋಣಿಚೀಲ ದಲ್ಲಿ ತುಂಬಿ ಇಡುವಷ್ಟು ಕಡಲೇ ಕಾಯಿಗಳ ಫಲ ಸಿಕ್ಕಿತು.

ಕಾಡಿನಂತಿದ್ದ ಜಾಗ ಊರಾಯಿತು. ಬಂದವರಿಗೆಲ್ಲ ತಾನು ಬೆಳೆದ ಕಡಲೇಕಾಯಿಗಳನ್ನು ಬೇಕಾದಷ್ಟು ಹಂಚಿದ ಶಂಕರ. ಅವರೆಲ್ಲ ಅದನ್ನು ಬಿತ್ತಿ ಸಾಕಷ್ಟು ಬೆಳೆ ತೆಗೆದು, ಅದನ್ನು ಮಾರಿ ಬಂದ ಹಣದಿಂದ ಮತ್ತೆ ಬೇರೆ ಬೇರೆ ಬೆಳೆಗಳನ್ನು ಬೆಳೆದರು. ಈಗ ಊರು ಹೊಲ-ಗದ್ದೆ- ಮನೆ-ಜನಗಳಿಂದ ತುಂಬಿತು. ಎಲ್ಲೆಲ್ಲೂ ಹಸಿರು ತುಂಬಿ ಊರಿನಲ್ಲಿ ಪಶು-ಪಕ್ಷಿ ಗಳೂ ನೆಲೆ ಕಂಡುಕೊಂಡವು.

‘ಗುರುಗಳಿಗೆ ತಕ್ಕ ಶಿಷ್ಯ’ ಎಂದು ಶಂಕರನನ್ನು ಕೊಂಡಾಡಿದ ಊರಿನ ಜನರು, ಆತನ ಗುರುಗಳನ್ನೂ ಮನದಲ್ಲೇ ನೆನೆದು ನಮಿಸಿದರು. ಹೇಳಿದಂತೆ 15 ವರ್ಷಗಳಾದ ಮೇಲೆ ಊರಿಗೆ ಬಂದ ಗುರುಗಳು, ತಾವು ನೀಡಿದ್ದ ಮುಷ್ಟಿ ಕಡಲೇಕಾಯಿಯನ್ನು ತಮ್ಮಿಬ್ಬರು ಶಿಷ್ಯರು ಹೇಗೆ ಉಪಯೋಗಿಸಿದ್ದಾರೆ ಎಂಬುದನ್ನು ನೋಡಲು ಬಯಸಿದರು.

ಭಾಸ್ಕರನು ತಾನು ದೇವರ ಮುಂದೆ ಕಟ್ಟಿಟ್ಟಿದ್ದ ಕಡಲೇಕಾಯಿಗಳ ಗಂಟನ್ನು ಕಣ್ಣಿಗೊತ್ತಿ ಕೊಂಡು ಬಿಡಿಸಿ ತೋರಿಸಿದರೆ, ಅದರೊಳಗಿನ ಕಡಲೇಕಾಯಿ ಪುಡಿಪುಡಿಯಾಗಿ ಹುಳ ಹಿಡಿ ದಿತ್ತು. ಅದನ್ನು ಕಂಡ ಗುರುಗಳು, “ನಾನು ಆಶೀರ್ವದಿಸಿ ಕೊಟ್ಟ ಪ್ರಸಾದವನ್ನು ನೀನು ಕೆಡಿಸಿಬಿಟ್ಟೆ; ಕಡಲೇಕಾಯಿಯನ್ನು ಕಾಪಾಡಲು ಹೋಗಿ ನಿನ್ನ ಜೀವನವೇ ವ್ಯರ್ಥ ವಾಯಿತು" ಎಂದರು.

ಆದರೆ, ತಮ್ಮ ಎರಡನೇ ಶಿಷ್ಯ ಶಂಕರನು ತಾವು ನೀಡಿದ್ದ ಆ ಮುಷ್ಟಿ ಕಡಲೇಕಾಯಿ ಯನ್ನು ನೂರು ಪಟ್ಟಾಗಿಸಿ, ನೂರಾರು ಜನರಿಗೆ ಹಂಚಿ, ಅವರ ಜೀವನವನ್ನೂ ಹಸನ ಗೊಳಿಸಿದ್ದನ್ನು ಕಂಡ ಗುರುಗಳು, ಆತನ ಒಳ್ಳೆಯ ಆಲೋಚನೆಗೆ, ದೂರದೃಷ್ಟಿಗೆ ಅವನನ್ನು ಅಭಿನಂದಿಸಿದರು. ಮುಷ್ಟಿಯಷ್ಟು ಕೊಡುವ ಪ್ರಸಾದವನ್ನೇ ದೇವರೆಂದು ಭಾವಿಸಿ ಗುಡಿ ಕಟ್ಟಿ ಪೂಜೆ ಮಾಡಬಹುದು. ಇಲ್ಲದಿದ್ದರೆ ಅದೇ ಆಶೀರ್ವಾದದಿಂದ ಸ್ವಲ್ಪ ಶ್ರಮ ಪಟ್ಟು ತಾನೂ ಉದ್ಧಾರವಾಗಿ ಜತೆಯವರಿಗೂ ದಾರಿ ತೋರಬಹುದು.

ಅಧ್ಯಾತ್ಮ ಸಾಧನೆಯೆಂದರೆ, ಗುರುಗಳು ಕಲಿಸಿಕೊಟ್ಟಿದ್ದನ್ನೇ ವಿಸ್ತರಿಸುತ್ತಾ, ಎಲ್ಲೆಲ್ಲೂ ಬಿತ್ತಿ ಬೆಳೆ ಬೆಳೆದು, ಎಲ್ಲರಿಗೂ ಹಂಚಬೇಕು, ಇಡೀ ಜಗತ್ತೇ ಸ್ವಸ್ಥವಾಗಿರಬೇಕು. ಇದು ಅಧ್ಯಾತ್ಮದ ತತ್ವ. ಬದುಕಿನ ಕ್ಷಣಗಳೆಂಬ ಕಾಳುಗಳನ್ನು ಬಿತ್ತಿ ಬೆಳೆದು, ತಾನೂ ತಿಂದು ಇತರರಿಗೂ ಹಂಚಿ ಜೀವನವನ್ನು ಸಂತಸಮಯವಾಗಿ ಇಟ್ಟುಕೊಳ್ಳುವುದೇ ಅಧ್ಯಾತ್ಮ ಸಾಧನೆ. ನಮಗೆ ಸಿಕ್ಕ ಅವಕಾಶದಲ್ಲಿ, ನಾವೂ ಬೆಳೆದು ನಮ್ಮ ಸುತ್ತ ಇರುವವರೂ ಬೆಳೆಯುವಂತೆ ಮಾಡು ವುದೇ ನಿಜವಾದ ಜೀವನದ ಸಾರ್ಥಕತೆ.