Kangana Ranaut: ಮತ್ತೊಮ್ಮೆ ಮಾಧವನ್‌ಗೆ ಜೋಡಿಯಾದ ಕಂಗನಾ; ಇದು ʼತನು ವೆಡ್ಸ್ ಮನು 3ʼ?
ʼತನು ವೆಡ್ಸ್ ಮನು' ಸರಣಿ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ ಆರ್.ಮಾಧವನ್ ಮತ್ತು ಕಂಗನಾ ರಾಣಾವತ್ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಈ ಹಿಟ್ ಜೋಡಿ ಮತ್ತೊಮ್ಮೆ ಒಂದಾಗುತ್ತಿರುವುದಕ್ಕೆ ಅವರ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಂಗನಾಗೆ ಈ ಚಿತ್ರದ ಮೂಲಕ ಗೆಲವು ಸಿಗಲಿದೆ ಎನ್ನುವ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.

ಕಂಗನಾ ರಾಣಾವತ್ ಮತ್ತು ಆರ್.ಮಾಧವನ್.

ಮುಂಬೈ: ಬಾಲಿವುಡ್‌ನ ಹಿಟ್ ಜೋಡಿಗಳಲ್ಲಿ ಒಂದಾದ ಆರ್.ಮಾಧವನ್ (R Madhavan) ಮತ್ತು ಕಂಗನಾ ರಾಣಾವತ್ (Kangana Ranaut) ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಈ ಹಿಂದೆ ಆನಂದ್ ಎಲ್. ರೈ (Aanand L. Rai) ನಿರ್ದೇಶನದ ʼತನು ವೆಡ್ಸ್ ಮನುʼ ಮತ್ತು ʼತನು ವೆಡ್ಸ್ ಮನು: ರಿಟರ್ನ್ಸ್ʼ ಚಿತ್ರಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಇವರು ಇದೀಗ 3ನೇ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕಂಗನಾ ಅಭಿನಯದ ʼತಲೈವಿʼಗೆ ಆ್ಯಕ್ಷನ್ ಕಟ್ ಹೇಳಿದ್ದ ವಿಜಯ್ (Vijay) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರೀಕರಣ ಆರಂಭವಾಗಿದೆ. ಈ ಬಗ್ಗೆ ಕಂಗನಾ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ʼತನು ವೆಡ್ಸ್ ಮನುʼ ಚಿತ್ರದ ಮುಂದುವರಿದ ಭಾಗವಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮಾಧವನ್ ಮತ್ತು ಕಂಗನಾ ಮತ್ತೊಮ್ಮೆ ಜತೆಯಾಗಿ ನಟಿಸುತ್ತಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ಬಾಲಿವುಡ್‌ನ ಈ ಚಿತ್ರ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 2023ರಲ್ಲಿಯೇ ಈ ಚಿತ್ರವನ್ನು ಕಂಗನಾ ಘೋಷಿಸಿದ್ದರು. 2 ವರ್ಷಗಳ ತರುವಾಯ ಚಿತ್ರತಂಡ ಅಖಾಡಕ್ಕೆ ಇಳಿದಿದೆ.
ʼತನು ವೆಡ್ಸ್ ಮನುʼ ಚಿತ್ರದ ಮುಂದುವರಿದ ಭಾಗವಲ್ಲ
ವಿಶೇಷ ಎಂದರೆ ಇದು ʼತನು ವೆಡ್ಸ್ ಮನುʼ ಸಿನಿಮಾದ ಮುಂದುವರಿದ ಭಾಗವಲ್ಲ. ಸದ್ಯ ಈ ಚಿತ್ರಕ್ಕೆ ಟೈಟಲ್ ಇನ್ನೂ ಅಂತಿಮವಾಗಿಲ್ಲ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡ ಸಿನಿಮಾ ಎನ್ನಲಾಗಿದೆ. ಮತ್ತೊಮ್ಮೆ ವಿಜಯ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಇದರಲ್ಲಿ ಮಾಧವನ್ ಮತ್ತು ಕಂಗನಾ ಇಬ್ಬರ ಪಾತ್ರವೂ ವಿಭಿನ್ನವಾಗಿರಲಿದೆಯಂತೆ. ಸದ್ಯ ಈ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇತ್ತೀಚೆಗೆ ಪ್ರತಕರ್ತರೊಬ್ಬರು ಕೇಳಿದ ʼತನು ವೆಡ್ಸ್ ಮನು 3ʼ ಚಿತ್ರ ಯಾವಾಗ ಆರಂಭ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಮಾಧವನ್ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದರು. ಈ ಕುರಿತಾದ ಯಾವುದೇ ಸ್ಕ್ರಿಪ್ಟ್ ತಮ್ಮ ಬಳಿ ಬಂದಿಲ್ಲ ಎಂದಿದ್ದರು. ʼʼಅನೇಕ ಪತ್ರಕರ್ತರು ಮತ್ತು ಅಭಿಮಾನಿಗಳು ʼತನು ವೆಡ್ಸ್ ಮನು 3ʼ ಚಿತ್ರದ ಬಗ್ಗೆ ಪ್ರಸ್ನಿಸುತ್ತಲೇ ಇದ್ದಾರೆ. ಆದರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಿರ್ದೇಶಕ ಆನಂದ್ ಎಲ್. ರೈ ಅಥವಾ ಚಿತ್ರಕ್ಕೆ ಸಂಬಂಧಪಟ್ಟ ಯಾರೂ ಈ ಬಗ್ಗೆ ನನ್ನನ್ನು ಸಂಪರ್ಕಿಸಿಲ್ಲ. ಬಹುಶಃ ನನ್ನ ಬದಲು ಬೇರೆ ನಾಯಕನ್ನು ಆಯ್ಕೆ ಮಾಡಿರಬಹುದುʼʼ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Emergency Collection: ಮತ್ತೊಮ್ಮೆ ಮುಗ್ಗರಿಸಿದ ಕಂಗನಾ ರಾಣಾವತ್: 'ಎಮರ್ಜೆನ್ಸಿ' ಸೋಲಿಗೆ ಕಾರಣವೇನು?
ಸೋಲಿನ ಸುಳಿಯಿಂದ ಕಂಗನಾ ಹೊರ ಬರ್ತಾರಾ?
ಸದ್ಯ ಕಂಗನಾ ತಮಗೆ ಎದುರಾದ ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಬಳಲಿದ್ದಾರೆ. ಇತ್ತೀಚೆಗೆ ತೆರೆಕಂಡ ʼಎಮರ್ಜೆನ್ಸಿʼ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಸದ್ದು ಮಾಡುತ್ತಿಲ್ಲ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜೀವನಾಧಾರಿತ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹೊತ್ತು ತೆರೆಗೆ ಬಂದಿತ್ತು. ಆದರೆ ಮತ್ತೊಮ್ಮೆ ಎಡವಿದೆ. ಇತ್ತೀಚಿನ ವರ್ಷಗಳಲ್ಲಿ ಕಂಗನಾ ಅಭಿನಯದ ಯಾವೊಂದು ಚಿತ್ರವೂ ಗೆದ್ದಿಲ್ಲ. ಹೀಗಾಗಿ ಈ ಹೊಸ ಚಿತ್ರದ ಮೇಲೆ ಅವರು ಭಾರಿ ಭರವಸೆಯನ್ನಿಟ್ಟಿದ್ದಾರೆ.