ರೋಹಿತ್ ಶರ್ಮಾ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ನಾಯಕ? ವರದಿ
Yashasvi Jaiswal Race in India's Test Captaincy: ರೋಹಿತ್ ಶರ್ಮಾ ಬಳಿಕ ಭಾರತ ಟೆಸ್ಟ್ ತಂಡಕ್ಕೆ ನಾಯಕ ಯಾರೆಂಬ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಕೆಲವರು ಜಸ್‌ಪ್ರೀತ್ ಬುಮ್ರಾ ನಾಯಕನಾಗಬಹುದೆಂದು ಹೇಳಿದರೆ, ಇನ್ನು ಕೆಲವರು ಶುಭಮನ್ ಗಿಲ್‌ಗೆ ನಾಯಕತ್ವ ನೀಡಬಹುದೆಂದು ಅಂದಾಜಿಸಲಾಗುತ್ತಿದೆ. ಇದರ ನಡುವೆ ಟೆಸ್ಟ್ ತಂಡದ ರೇಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಇದ್ದಾರೆಂದು ವರದಿಯಾಗಿದೆ.
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ (BGT 2024-25) ಟೆಸ್ಟ್ ಸರಣಿಯಲ್ಲಿ ಭಾರತ ತಂಡ 3-1 ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ರೋಹಿತ್ ಶರ್ಮಾ (Rohit Sharma) ಅವರ ಟೆಸ್ಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ಇದಕ್ಕೂ ಮುನ್ನ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 3-0 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು. ನಾಯಕತ್ವ ಅಲ್ಲದೆ, ರೋಹಿತ್ ಶರ್ಮ ಅವರು ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನದಲ್ಲಿಯೂ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ. ಇದರಿಂದಾಗಿ ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೇ ಸ್ವತಃ ಪ್ಲೇಯಿಂಗ್ XIನಿಂದ ಹೊರಗುಳಿದಿದ್ದರು. ಈ ಟೆಸ್ಟ್ ಸರಣಿಯ ಬಳಿಕ ಅವರು ನಿವೃತ್ತಿ ಬಗೆಗಿನ ವದಂತಿಗಳನ್ನು ತಳ್ಳಿ ಹಾಕಿದ್ದರು ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮುಂದುವರಿಯುವ ಆಶಾ ಭಾವನೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಇಂಗ್ಲೆಂಡ್ ಪ್ರವಾಸದ ಭಾರತ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಅವರ ಸ್ಥಾನದ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿನ ರೋಹಿತ್ ಶರ್ಮಾ ಅವರ ಪ್ರದರ್ಶನವನ್ನು ಇದು ಅಲಂಬಿಸಿದೆ. ಒಂದು ವೇಳೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಆಡಿದರೂ, ಮುಂದಿನ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ವರೆಗೂ ಹಿಟ್‌ಮ್ಯಾನ್ ತಂಡದಲ್ಲಿ ಉಳಿಯುವ ಬಗ್ಗೆ ಖಚಿತತೆ ಇಲ್ಲ.
IND vs ENG 1st ODI: ವಿರಾಟ್ ಕೊಹ್ಲಿ ಆಡದೆ ಇರಲು ಕಾರಣ ತಿಳಿಸಿದ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಅವರ ಅನುಪಸ್ಥತಿಯಲ್ಲಿ ಭಾರತ ಟೆಸ್ಟ್ ತಂಡವನ್ನು ಹಲವು ಬಾರಿ ಜಸ್‌ಪ್ರೀತ್ ಬುಮ್ರಾ ಯಶಸ್ವಿಯಾಗಿ ಮುನ್ನಡೆಸಿದ್ದರು. ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ಆದರೆ, ಫಿಟ್ನೆಸ್ ಹಾಗೂ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಬುಮ್ರಾ ಅವರನ್ನು ಎಲ್ಲಾ ಸರಣಿಗಳಲ್ಲಿ ಆಡಿಸಲು ಸಾಧ್ಯವಿಲ್ಲ. ಇನ್ನು ಶುಭಮನ್ ಗಿಲ್ ಕೂಡ ಟೆಸ್ಟ್ ನಾಯಕತ್ವದ ರೇಸ್‌ನಲ್ಲಿರುವ ಮತ್ತೊಬ್ಬ ಆಟಗಾರ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್ ಇತ್ತೀಚೆಗೆ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಇದೀಗ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಆರಂಭಿಕ ಯಶಸ್ವಿ ಜೈಸ್ವಾಲ್ ಕೂಡ ಟೆಸ್ಟ್ ನಾಯಕತ್ವದ ರೇಸ್‌ಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಪಂತ್‌ಗೆ ನಾಯಕತ್ವದ ಅನುಭವಿ ಇದ್ದರೆ, ಜೈಸ್ವಾಲ್‌ಗೆ ಯಾವುದೇ ಅನುಭವ ಇಲ್ಲ. ಆದರೂ ಯಶಸ್ವಿ ಜೈಸ್ವಾಲ್ ಅವರಲ್ಲಿ ನಾಯಕತ್ವದ ಗುಣಗಳನ್ನು ರೂಪಿಸಲು ಟೀಮ್ ಮ್ಯಾನೇಜ್‌ಮೆಂಟ್ ಬಯಸುತ್ತಿದೆ. ಏಕೆಂದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ? ಹೊಸ ನಾಯಕನ ಹುಡುಕಾಟದಲ್ಲಿ ಬಿಸಿಸಿಐ!
ಟೆಸ್ಟ್ ತಂಡದ ನಾಯಕತ್ವದ ರೇಸ್‌ನಲ್ಲಿ ಜೈಸ್ವಾಲ್
"ಟೆಸ್ಟ್ ಸರಣಿಗಳು ಅಥವಾ ಪೂರ್ಣ ಪ್ರಮಾಣದ ಟೆಸ್ಟ್ ಆವೃತ್ತಿಗೆ ಜಸ್‌ಪ್ರೀತ್ ಬುಮ್ರಾ ಲಭ್ಯರಾಗುವುದು ಅನುಮಾನ. ಆದ್ದರಿಂದ ಆಯ್ಕೆದಾರರು ಹೆಚ್ಚು ಸ್ಥಿರವಾದ ಆಯ್ಕೆಯನ್ನು ಬಯಸುತ್ತಿದೆ. ಶುಭಮನ್ ಗಿಲ್ ಅವರನ್ನು ಟೆಸ್ಟ್ ನಾಯಕತ್ವಕ್ಕೆ ನೋಡುತ್ತಿದೆ ಆದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿನ ಪ್ರದರ್ಶನ ಸರಾಸರಿಯಲ್ಲಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಟೆಸ್ಟ್ ನಾಯಕತ್ವಕ್ಕೆ ಮುಂಚೂಣಿಯಲ್ಲಿರುವ ಅಭ್ಯರ್ಥಿಯಾಗಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಯಶಸ್ವಿ ಜೈಸ್ವಾಲ್ ಅವರಂಥ ಆಟಗಾರನನ್ನು ಬಹುಶಃ ನಾಯಕತ್ವಕ್ಕೆ ಬೆಳೆಸಬಹುದು," ಎಂದು ಮೂಲಗಳು ಹೇಳಿರುವುದನ್ನು ಟೀಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರತ ಒಡಿಐ ತಂಡಕ್ಕೆ ಗಿಲ್ ನಾಯಕ?
ಭಾರತ ಏಕದಿನ ತಂಡದಲ್ಲಿ ಶುಭಮನ್ ಗಿಲ್ ತಮ್ಮ ಸ್ಥಾನವನ್ನು ಕಟ್ಟಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಒಡಿಐ ತಂಡದ ನಾಯಕತ್ವವನ್ನು ಶುಭಮನ್ ಗಿಲ್‌ಗೆ ಬಿಸಿಸಿಐ ನೀಡಿದರೂ ಅಚ್ಚರಿ ಇಲ್ಲ. ಆದರೆ, ಏಕದಿನ ತಂಡದ ರೇಸ್‌ನಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಶುಭಮನ್ ಗಿಲ್ ಸ್ಪರ್ಧೆ ಮಾಡಬಹುದು.