Dr D Paramesh Nayak: ಬಂಜಾರರ ಅಸ್ಮಿತೆಯ ಪ್ರತೀಕ: ಸಂತ ಶ್ರೀ ಸೇವಾಲಾಲ್
ಜನರಲ್ಲಿ ಮಡುಗಟ್ಟಿದ್ದ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನ ಮಾರ್ಗದಡೆಗೆ ಒಯ್ದ ಮಹಾನ್ ಸಾಧಕರಲ್ಲಿ ಲಂಬಾಣಿ ಸಮುದಾಯದ ಸಂತ ಶ್ರೀ ಸೇವಾಲಾಲ್ ಕೂಡ ಒಬ್ಬರು. ಇವರು ಒಬ್ಬ ದನಗಾಹಿ ಯಾಗಿ ತಮ್ಮ ಜೀವನಾನುಭವವನ್ನು ತತ್ವವನ್ನಾಗಿಸಿ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಸಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿರಿ ಎಂದು ಸಾರಿದರು.


ತನ್ನಿಮಿತ್ತ
ಡಾ.ಡಿ.ಪರಮೇಶ್ ನಾಯಕ್
(ಇಂದು 286ನೇ ಜಯಂತಿ)
ಜನರಲ್ಲಿ ಮಡುಗಟ್ಟಿದ್ದ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನ ಮಾರ್ಗದಡೆಗೆ ಒಯ್ದ ಮಹಾನ್ ಸಾಧಕರಲ್ಲಿ ಲಂಬಾಣಿ ಸಮುದಾಯದ ಸಂತ ಶ್ರೀ ಸೇವಾಲಾಲ್ ಕೂಡ ಒಬ್ಬರು. ಇವರು ಒಬ್ಬ ದನಗಾಹಿಯಾಗಿ ತಮ್ಮ ಜೀವನಾನುಭವವನ್ನು ತತ್ವವನ್ನಾಗಿಸಿ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಸಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿರಿ ಎಂದು ಸಾರಿದರು. ಬಂಜಾರ ಸಮುದಾಯದ ಶಕ್ತಿ ಮತ್ತು ಅಸ್ಮಿತೆಯ ಪ್ರತೀಕವಾದ ಸಂತ ಶ್ರೀ ಸೇವಾಲಾಲ್ ಅವರು 1739ರ ಫೆಬ್ರವರಿ 15ರಂದು ಭೀಮನಾಯ್ಕ ಮತ್ತು ಧರ್ಮಣಿಬಾಯಿ ದಂಪತಿಗೆ ಜನಿಸಿದರು. ಈ ಮಾಹಿತಿಯು ಬಂಜಾರರಲ್ಲಿ ದೊರಕುವ ಐತಿ ಹ್ಯ, ಜನಪದ, ಲಾವಣಿ, ಕಥೆಗಳನ್ನು ಅವಲಂಬಿಸಿದ್ದಾಗಿದೆ.
ಬಂಜಾರ ಸಮುದಾಯದ ದಾಖಲೆಗಳ ಪ್ರಕಾರ, ಇವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಂಜೀ ನಾಯಕ್ ತಾಂಡಾ (ಸೇವಾಗಢ) ಎಂಬ ಗ್ರಾಮದಲ್ಲಿ ಜನಿಸಿದರು.
ಇದನ್ನೂ ಓದಿ: Shishir Hegde Column: ವೃದ್ಧಾಪ್ಯದಲ್ಲಿ ಮನಸ್ಥಿತಿ ಹೇಗಿರುತ್ತದೆಂಬ ಪ್ರಯೋಗ
ಆದರೆ ಭಾರತೀಯ ಪತ್ರಿಕಾ ಸೂಚನಾ ಕಾರ್ಯಾಲಯದ ಪ್ರಕಾರ, ಇವರು ಕರ್ನಾಟಕದ ದಾವಣ ಗೆರೆ ಜಿಲ್ಲೆಯ ಸೂರಗೊಂಡನ ಕೊಪ್ಪದಲ್ಲಿ ಜನಿಸಿದರು. ಸೇವಾಲಾಲ್ ಅವರು 1806ರ ಡಿಸೆಂಬರ್ 4ರಂದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯ ರೂಹಿಘರ್‌ನಲ್ಲಿ ದೈವಾಧೀನರಾದರು. ವೃತ್ತಿಯಲ್ಲಿ ಪಶು ಸಂಗೋಪನೆ ಮಾಡುತ್ತಿದ್ದ ಸೇವಾಲಾಲ್ ಅವರು ಒಬ್ಬ ಅಹಿಂಸಾವಾದಿ, ದಾರ್ಶನಿಕ, ಸಂಗೀತಗಾರ, ಯೋಧ, ಸಮಾಜ ಸುಧಾರಕ, ವಿಚಾರವಾದಿ, ಪವಾಡಪುರುಷ ಮತ್ತು ಜಗದಂಬಾ ದೇವಿಯ ಭಕ್ತರು ಆಗಿದ್ದರು.
ಇವರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ವನ್ನು ಪಡೆದಿದ್ದಲ್ಲದೆ, ದೇವಿಯ ಆರಾಧಕರಾಗಿ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದರು. ಸೇವಾಲಾಲರು ಒಬ್ಬ ದನಗಾಹಿಯಾಗಿ ತಮ್ಮ ಜೀವನಾನುಭವವನ್ನು ತತ್ವವನ್ನಾಗಿಸಿ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಸಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿರಿ ಎಂದು ಸಾರಿದರು. ಶಿಕ್ಷಣದ ಮಹತ್ವವನ್ನು ಸಾರಿದ ಅವರು, ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿದೀಪವಾಗಿ ಎಂದು ಹೇಳಿದರು.
ಮುಂಬೈನ ಸ್ಮಿತ್ ಭಾವುಚಾ ಎಂಬಲ್ಲಿ ಪೋರ್ಚುಗೀಸರ ಹಡಗೊಂದು ಸಿಕ್ಕಿಹಾಕಿಕೊಂಡಾಗ ತಮ್ಮ ಜಾಣತನದಿಂದ ಅದನ್ನು ದಡ ಸೇರಿಸಿದ ಸೇವಾಲಾಲರಿಗೆ ಪೋರ್ಚುಗೀಸರು ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಆದ್ದರಿಂದಲೇ ಇವರನ್ನು ಜನರು ‘ಮೋತಿವಾಳೋ’ ಎಂದು ಕರೆಯು ತ್ತಿದ್ದರು. ತಮ್ಮ ತತ್ವಗಳ ಮೂಲಕ ಲೋಕಕ್ಕೆ ಮುಕ್ತಿಮಾರ್ಗವನ್ನು ತೋರಿಸಿದ ಸೇವಾಲಾಲರು, ಸರ್ವರನ್ನೂ ಒಳಗೊಂಡ ಸಮಸಮಾಜದ ನಿರ್ಮಾಣವಾಗುವುದಕ್ಕೆ ಮತ್ತು ಸರ್ವರಲ್ಲೂ ಸೋದರತೆಯ ಭಾವನೆಯು ಮೂಡುವುದಕ್ಕೆ ಪ್ರೇರೇಪಿಸಿದರು.
ಜನರ ಕಷ್ಟದ ನಿವಾರಣೆಗಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ಧರಾಗಿದ್ದ ಸೇವಾಲಾಲರಂಥ ಮಹಾನ್ ಸಂತರು ನಮ್ಮ ದೇಶದಲ್ಲಿ ಹುಟ್ಟಿದ್ದೇ ನಮ್ಮೆಲ್ಲರ ಪುಣ್ಯವೆನ್ನಬೇಕು.
ಜನರಲ್ಲಿ ಮಡುಗಟ್ಟಿದ್ದ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನ ಮಾರ್ಗದಡೆಗೆ ಒಯ್ದ ಮಹಾನ್ ಸಾಧಕರಲ್ಲಿ ಲಂಬಾಣಿ ಸಮುದಾಯದ ಸಂತ ಶ್ರೀ ಸೇವಾಲಾಲ್ ಕೂಡ ಒಬ್ಬರು. ಇವರು ತಮ್ಮ ಸಮುದಾಯದ ಅಸ್ಮಿತೆಯ ರಕ್ಷಣೆಗಾಗಿ ಹಲವು ಸಂಘರ್ಷಗಳನ್ನು ಕೂಡ ಮಾಡಿದ್ದಾರೆ. ಹುಲ್ಲನ್ನು ಕೊಯ್ಯಲು ಪರವಾನಗಿ ಕೇಳಿದ್ದಕ್ಕೆ ಷೇರಾಗಾಂವ್‌ನ ಬ್ರಿಟಿಷ್ ಅಧಿಕಾರಿಯೊಂದಿಗೆ, ದೆಹಲಿ ಪ್ರದೇಶದ ಕಾಬೂಲ್ ಫರಂಗಿಯವರೊಂದಿಗೆ, ಗರಷ್ಯಾ ಹೋರಿಯನ್ನು ಕದ್ದಿದ್ದಕ್ಕೆ ಬಿಲ್ಲ ಜನಾಂಗ ದೊಂದಿಗೆ ಅವರು ಸಂಘರ್ಷ ನಡೆಸಿದ್ದಿದೆ.
ಮಾತ್ರವಲ್ಲದೆ, ತಮ್ಮ ದನಗಳ ಹಿಂಡು ಹೈದರಾಬಾದ್‌ನ ಪಟೇಲರ ಹೊಲದಲ್ಲಿದ್ದ ಬೆಳೆಯನ್ನು ನಾಶಮಾಡಿದ್ದಕ್ಕಾಗಿ ಕುತಂತ್ರ ಬುದ್ಧಿಯಿಂದ ತಾಂಡಾದ ಜನರಿಗೆ ವಿಷ ಹಾಕಿ ಕೊಲ್ಲಲು ತಂತ್ರ ರೂಪಿಸಿದ ಹೈದರಾಬಾದ್‌ನ ನಿಜಾಮನ ಮೇಲೆ ನಡೆಸಿದ ಸಂಘರ್ಷ, ಸೇವಾಭಾಯರ ತಂಡವು ಹೈದರಾಬಾದಿನ ಪಾಳೇಗಾರ ಬಾಷಾನ ಸರಹದ್ದಿನಲ್ಲಿ ಬೀಡುಬಿಟ್ಟಿದ್ದಕ್ಕಾಗಿ ಅವನೊಂದಿಗೆ ಮಾಡಿದ ಸಂಘರ್ಷ- ಹೀಗೆ ತಮ್ಮ ಸಮಕಾಲೀನ ಸಮಾಜದ ಪ್ರಬಲ ಸಂಸ್ಕೃತಿಗಳ ಒತ್ತಡಗಳನ್ನು ಭೇದಿಸಲು ಸೇವಾಲಾಲರು ಕೈಗೊಂಡ ತೀರ್ಮಾನ, ತೋರಿದ ವರ್ತನೆ ಮತ್ತು ಧೈರ್ಯವು ಬಂಜಾರ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸಿದವು.
ಬಂಜಾರರಿಗೆ ಸೇವಾಲಾಲರು ನೀಡಿದ ಉಪದೇಶಗಳು ಒಂದೆರಡಲ್ಲ, ಆ ಸರಣಿ ಹೀಗಿದೆ ನೋಡಿ: “ಭಕ್ತಿಯ ಮಾರ್ಗವನ್ನು ಅನುಸರಿಸಿ; ಪ್ರಕೃತಿಯನ್ನು ಆರಾಧಿಸಿ ಮತ್ತು ಪ್ರಕೃತಿಯಿಂದ ಬೇರ್ಪಡ ಬೇಡಿ; ಪ್ರಾಣಿಗಳನ್ನು ರಕ್ಷಿಸಿ, ಅವನ್ನು ಕಟುಕರಿಗೆ ಮಾರಬೇಡಿ; ಅಹಿಂಸಾ ಧರ್ಮವನ್ನು ಪಾಲಿಸಿ, ಮಹಿಳೆಯರನ್ನು ಗೌರವಿಸಿ; ಹೆಣ್ಣುಮಕ್ಕಳನ್ನು ದೇವಿಯರಂತೆ ಕಾಣಬೇಕು; ನ್ಯಾಯವಂತರಾಗಿ ಬಾಳಿ, ಸುಳ್ಳನ್ನು ಹೇಳಬೇಡಿ, ಯಾರ ವಿರುದ್ಧವೂ ತಾರತಮ್ಯ ಮಾಡಬೇಡಿ, ಇತರರ ವಸ್ತುಗಳನ್ನು ಕದಿಯಬೇಡಿ; ಧರ್ಮದಿಂದಲೇ ವಿಶ್ವದ ಶಾಂತಿ; ಸಮುದಾಯದ ಭಾಷೆ (ಗೋರ್ ಬೋಲಿ) ಮತ್ತು ವೇಷಭೂಷಣಗಳನ್ನು ರಕ್ಷಿಸಿ; ಎಲ್ಲಾ ಹಿರಿಯರನ್ನು ಗೌರವಿಸಿ ಮತ್ತು ಎಲ್ಲಾ ಕಿರಿಯರನ್ನು ಪ್ರೀತಿಸಿ; ದುರಾಸೆ, ಕಾಮ ಮತ್ತು ಸ್ವ-ಆಸಕ್ತಿಯಿಂದ ದೂರವಿರಿ, ಪರೋಪಕಾರಿಗಳಾಗಿ ಬಾಳಿ; ದುರ್ಬಲರಿಗೆ ಮತ್ತು ನಿರ್ಗತಿಕರಿಗೆ ಸಹಾಯಮಾಡಿ; ಬಾಯಾರಿದವರಿಗೆ ನೀರು ಕೊಡಿ, ನೀರನ್ನು ಎಂದಿಗೂ ಮಾರಬೇಡಿ; ಅಜ್ಞಾನ, ಬಡತನ ಮತ್ತು ಮೂಢನಂಬಿಕೆಗಳಿಂದ ಮುಕ್ತಿ ಪಡೆಯಿರಿ; ವ್ಯಸನ ಮುಕ್ತರಾಗಿ, ಸತ್ಯದ ನಡೆ ಇರಲಿ, ತ್ಯಾಗಿಗಳಾಗಿ".
ನಂಬಿಕೆಗೆ ಹೆಸರುವಾಸಿಯಾಗಿರುವ ಬಂಜಾರರು ಸ್ವಾತಂತ್ರ್ಯಪೂರ್ವದಲ್ಲಿ ಕೂಡ ಒಂದು ಸಂಸ್ಥಾನ ದಿಂದ ಮತ್ತೊಂದು ಸಂಸ್ಥಾನಕ್ಕೆ ನಗ-ನಾಣ್ಯ-ದಾಸ್ತಾನುಗಳನ್ನು ನಂಬಿಕೆಯಿಂದ ಸಾಗಿಸುತ್ತಿದ್ದರು. ಬಂಜಾರರು ದೇಶದ ವಿವಿಧ ಭಾಗಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸು ವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಜಗತ್ತಿನ ಅನೇಕ ಬುಡಕಟ್ಟು ಗಳಲ್ಲಿ ಬಂಜಾರ/ಲಂಬಾಣಿ ಸಮುದಾಯವು ಒಂದಾಗಿದ್ದು ತನ್ನದೇ ಆದ ಅನನ್ಯತೆಯನ್ನು ಇದು ಹೊಂದಿದೆ.
ಭಾರತದಲ್ಲಿ 8 ಕೋಟಿಗಿಂತಲೂ ಹೆಚ್ಚು, ಕರ್ನಾಟಕದಲ್ಲಿ 40 ಲಕ್ಷಕ್ಕಿಂತಲೂ ಹೆಚ್ಚು ಬಂಜಾರರು ನೆಲೆಸಿದ್ದಾರೆ. ಇವರು ದೇಶದಲ್ಲಿ ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ತಾಂಡಾಗಳಲ್ಲಿ ಪ್ರತ್ಯೇಕ ವಾಗಿ ವಾಸವಾಗಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ಸಮುದಾಯದವರನ್ನು ವಿಭಿನ್ನ ಮೀಸಲಾತಿ ಪಟ್ಟಿಯಲ್ಲಿ ಗುರುತಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಇವರ ಸ್ಥಿತಿಯು ಕಷ್ಟದಾಯಕವೂ ಚಿಂತಾ ದಾಯಕವೂ ಆಗಿದೆ. ಭಾರತವು ಸ್ವತಂತ್ರಗೊಂಡು 75 ವರ್ಷ ಕಳೆದರೂ ಇವರನ್ನು ಸಾರ್ವತ್ರಿಕವಾಗಿ ಒಂದು ನಿಖರ ಮೀಸಲಾತಿ ಪಟ್ಟಿಯಲ್ಲಿ ಪರಿಗಣಿಸಿ ಮುಖ್ಯವಾಹಿನಿಗೆ ತರಲಾಗಿಲ್ಲ.
ಈ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಬಂಜಾರ ಸಮುದಾಯದವರ ನಿಖರ ಸಂಖ್ಯೆಗೆ ಸಂಬಂಧಿಸಿದ ದತ್ತಾಂಶ/ಮಾಹಿತಿ ಲಭ್ಯವಿಲ್ಲ. ಸರಕಾರವು ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ಬಂಜಾರ ಎಂಬುದು ಲಂಬಾಣಿ, ನಾಯ್ಕ, ಗೋರ್‌ಮಾಟಿ ಎಂದೆಲ್ಲಾ ಕರೆಯಲ್ಪಡುವ ಮತ್ತು ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಿ ಪ್ರಮುಖ ವಾಗಿ ನೆಲೆಸಿರುವ ಒಂದು ಬುಡಕಟ್ಟು ಸಮುದಾಯ. ರಾಜಸ್ಥಾನ ಮತ್ತು ಗುಜರಾತ್ ಮೂಲದ ಈ ಸಮುದಾಯದವರು ಪ್ರತ್ಯೇಕ ಲಂಬಾಣಿ ಭಾಷೆಯನ್ನು ಆಡುತ್ತಾರೆ.
ಬಂಜಾರ ಸಮುದಾಯವು ತನ್ನದೇ ಆದ ವಿಶಿಷ್ಟ ಸಾಂಪ್ರದಾಯಿಕ ವೇಷಭೂಷಣದಿಂದ ಭಾರತೀ ಯ ಸಮೃದ್ಧ ಕಲಾಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಇವರನ್ನು ‘ಜಿಪ್ಸಿ’ಗಳೆಂದು ಕರೆಯುತ್ತಿದ್ದರು. ಇವರನ್ನು ನಮ್ಮ ಸಂವಿಧಾನವು ‘ಅಧಿ ಸೂಚಿತ ಬುಡಕಟ್ಟು ಜನಾಂಗ’ವೆಂದು ಪರಿಗಣಿಸಿದ್ದರೆ, ಕರ್ನಾಟಕವು ಅನುಸೂಚಿತ ಜಾತಿಯ ಪಟ್ಟಿಯಲ್ಲಿ ಸೇರಿಸಿದೆ.
ಭಾರತ, ಚೀನಾ, ಬರ್ಮಾ, ಈಜಿಪ್ಟ್, ಗ್ರೀಸ್, ಇಟಲಿ, ಹಂಗರಿ, ಯುಗೋಸ್ಲಾವಿಯಾ, ಬಲ್ಗೇರಿಯಾ, ರುಮೇನಿಯಾ, ಲಂಡನ್ ಮತ್ತು ಜರ್ಮನಿ ಒಳಗೊಂಡಂತೆ 56ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬಂಜಾ ರರು ಹರಡಿಕೊಂಡಿದ್ದಾರೆ. ಪ್ರಾದೇಶಿಕ ಭಿನ್ನತೆಗನುಗುಣವಾಗಿ ಬಂಜಾರರನ್ನು ಬೇರೆ ಬೇರೆ ಹೆಸರು ಗಳಿಂದ ಕರೆಯುತ್ತಾರೆ. ವಿದೇಶಗಳಲ್ಲಿ ಜಿಪ್ಸಿ, ಸಿಂಧಿ, ರೊಮಾನೋಗಳೆಂದು, ಭಾರತದ ಒಡಿಶಾದಲ್ಲಿ ಲಂಬಾಣ, ರಾಜಸ್ಥಾನದಲ್ಲಿ ಬಂಜಾರ, ಲದೇಣಿಯಾ, ಗಮಳಿಯಾ, ಗಾವಲಿಯಾ, ಲಭಾಣರೆಂದೂ, ಗುಜರಾತ್ ನಲ್ಲಿ ಬಂಜಾರ, ಚಾರಣ, ಲವಣಿಯಾಗಳೆಂದೂ, ಕರ್ನಾಟಕದಲ್ಲಿ ಲಂಬಾಣಿ, ಲಮಾಣಿ, ಲಂಬಾಡಿ, ಬಂಜಾರರೆಂದೂ, ತಮಿಳುನಾಡಿನಲ್ಲಿ ಸುಕಾಲಿ, ಸುಗಾಲಿ, ಲಬಾಡಿ ಗಳೆಂದೂ, ಆಂಧ್ರ ಪ್ರದೇಶದಲ್ಲಿ ಸುಗಾಲಿ, ಸುಕಾಲಿ, ಲಂಬಾಡಗಳೆಂದೂ, ಉತ್ತರ ಪ್ರದೇಶದಲ್ಲಿ ಶಿರಕಿಬಂದ, ಶಿರಕಿ ಬಂಜಾರ, ಶಿರಕಿವಾಲಾಗಳೆಂದೂ ಕರೆಯುತ್ತಾರೆ.
ಭಾರತವನ್ನು ಬಿಟ್ಟರೆ ಬಂಜಾರರು ಹೆಚ್ಚು ವಾಸಿಸುತ್ತಿರುವುದು ಯುಗೋಸ್ಲಾವಿಯಾದಲ್ಲಿ. ದಾದಾ ಮೋಲಾನ ಕಾಲಕ್ಕೆ ಮೂಲ ಬಂಜಾರರು ದೊಂಬರಾಟವನ್ನು ಆಡುತ್ತಿದ್ದರು. ಎರಡನೆಯ ತಲೆ ಮಾರಿನ ವೇಳೆಗೆ (ಮೋಲಾನ ಮಕ್ಕಳ ಕಾಲಕ್ಕೆ) ಇವರು ವರ್ತಕರಾಗಿದ್ದರು. ಹೀಗಾಗಿ ಇವರಿಗೆ ಲಮಾಣಿ ಎಂಬ ಹೆಸರು ಜತೆಗೆ ಬಂದಿರಬಹುದು. ಇವರ ಮೂಲಸ್ಥಳ ರಾಜಸ್ಥಾನ, ಇಲ್ಲಿ ಲೂಣಿನದಿ ಪ್ರಸಿದ್ಧವಾಗಿದೆ.
ರಾಜಸ್ಥಾನಿ ಭಾಷೆಯಲ್ಲಿ ಲೂಣಿ/ಲೂಣ್ ಎಂದರೆ ಲವಣ (ಉಪ್ಪು) ಎಂದರ್ಥ. ಲೂಣಿ ಎಂದರೆ ಬಂಜಾರರಲ್ಲಿ ‘ಬೆಣ್ಣೆ’ ಎಂಬ ಅರ್ಥವೂ ಬರುತ್ತದೆ. ಲೂಣಿನದಿಯಲ್ಲಿ ಲವಣ ಸಾಕಷ್ಟು ಸಿಗುತ್ತಿದ್ದು ದರಿಂದ ಅದನ್ನು ಬಂಜಾರರು ಬೇರೆಡೆಗೆ ಹೊತ್ತೊಯ್ದು ಮಾರುತ್ತಿದ್ದರು. ಹೀಗೆ ಲವಣವನ್ನು ಮಾರುತ್ತಿದ್ದ ಇವರಿಗೆ ಲವಣರು, ಲಮಾಣರು, ಮಾಣಿಗರು, ಲಂಬಾಣಿಗರು ಇತ್ಯಾದಿ ಹೆಸರುಗಳಿಂದ ಕರೆಯುತ್ತಿದ್ದರು ಎನ್ನಲಾಗುತ್ತದೆ.
ಎತ್ತುಗಳ ಮೇಲೆ ವಸ್ತುಗಳನ್ನು ಹೇರಿಕೊಂಡು ವ್ಯಾಪಾರ ಮಾಡುವ ಸಂಪ್ರದಾಯ ಬಂಜಾರರಲ್ಲಿ ಪ್ರಾರಂಭವಾಯಿತು. ಹೀಗಾಗಿ ಇವರನ್ನು ‘ಲದೇಣಿಯಾ’ ಎಂದು ಕರೆದರು. ಲದೇಣಿಯಾ ಎಂದರೆ ‘ಭಾರಹೇರು’ (ಭಾರಹೇರಿಕೊಂಡು ಸಂಚರಿಸುವವರು) ಎಂದರ್ಥ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಬಂಜಾರರನ್ನು ಲದೇಣಿಯಾ ಎಂಬ ಹೆಸರಿನಿಂದ ಕರೆಯುತ್ತಾರೆ. ಹೀಗೆ ವಾಸಿಸುವ ಸ್ಥಳ, ಸನ್ನಿವೇಶ, ಕೆಲಸ ಇತ್ಯಾದಿಗಳ ಕಾರಣದಿಂದಾಗಿ ಬಂಜಾರರಿಗೆ ಬೇರೆ ಬೇರೆ ಹೆಸರು ಬಂದಿರಬಹುದು.
(ಲೇಖಕರು ಪರಿಸರ ತಜ್ಞರು ಮತ್ತು ಪ್ರಾಧ್ಯಾಪಕರು)