Chikkaballapur News: 1195 ದಿನಗಳ ದೇವನಹಳ್ಳಿ ಭೂ ಹೋರಾಟಕ್ಕೆ ಜು.15ರ ಸಭೆ ಇತಿಶ್ರೀ ಹಾಡುವುದೇ ?
ಮುಖ್ಯಮಂತ್ರಿ ಗಳು ಹತ್ತು ದಿನಗಳ ಕಾಲಾವಕಾಶ ಕೇಳಿ ಜುಲೈ ೧೫ರಂದು ಸೂಕ್ತ ತೀರ್ಮಾನ ಕೈ ಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದು ಸ್ವಾಗತಾರ್ಹ ವಾದರೂ ಸಭೆ ನಂತರವೂ ಕೆಲಸಚಿವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸರ್ಕಾರದ ಪ್ರಾಮಾಣಿಕತೆ ಬಗ್ಗೆ ಸಂಶಯ ಮೂಡಿಸಿದೆ. ಹಾಗಾಗಿ ಕಾಂಗ್ರೆಸ್ ವರಿಷ್ಟರು ಮಧ್ಯ ಪ್ರವೇಶಿಸಿ ರೈತ ಪರವಾದ ತೀರ್ಮಾನ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು

ಮುಖ್ಯಮಂತ್ರಿಗಳು ಮತ್ತು ರೈತರ ಚಿತ್ರ...


ಚಿಕ್ಕಬಳ್ಳಾಪುರ : ದೇವನಹಳ್ಳಿ ತಾಲೂಕು ಚೆನ್ನರಾಯಪಟ್ಟಣದ ಭೂ ಹೋರಾಟ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆಯುತ್ತಾ ಸಾಗಿರುವುದು ಒಂದೆಡೆ ಸಂತ್ರಸ್ಥ ರೈತರು, ಹೋರಾಟಗಾರರನ್ನು ಕೆರಳಿಸಿದ್ದರೆ, ಮತ್ತೊಂದೆಡೆ ಜು.15ರಂದು ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನ ಸರಕಾರದ ವರ್ಚಸ್ಸಿನ ಮೇಲೆ ನೇರ ಪರಿಣಾಮ ಬೀರುವುದು ಖಚಿತವಾಗಿದೆ.
ಇಷ್ಟಕ್ಕೂ ಚೆನ್ನರಾಯಪಟ್ಟಣ ರೈತರ ಭೂಮಿ ಹೋರಾಟ ಇಂದು ನಿನ್ನೆಯದಲ್ಲ, ಬರೋಬ್ಬರಿ ೧೧೯೫ ದಿನಗಳಿಂದ ಈ ಹೋರಾಟ ನಿರಂತರವಾಗಿ ಹಲವು ಮಜಲುಗಳಲ್ಲಿ ಸಾಗಿದೆ. ನಮ್ಮೂರ ಭೂಮಿ ನಮಗಿರಲಿ, ಯಾವುದೇ ಕಾರಣಕ್ಕೂ ಸರ್ಕಾರ ಭೂಮಿ ಕಸಿಯುವ ಕೆಲಸ ಮಾಡಬಾರದು ಎಂದು ಮೊರೆಯಿಡುತ್ತಿದ್ದಾರೆ. ದೇವನಹಳ್ಳಿ ತಾಲ್ಲೂಕು ಚೆನ್ನರಾಯಪಟ್ಟಣ ಹೋಬಳಿಯ ೧೩ ಗ್ರಾಮಗಳ ೧೭೭೭ ಎಕರೆ ಭೂಮಿಯನ್ನು ಕೆ.ಐ.ಎ.ಡಿ.ಬಿ.ಕೈಗಾರಿಕಾಭಿವೃದ್ದಿ ಹೆಸರಲ್ಲಿ ಸ್ವಾಧೀನಕ್ಕೆ ಪಡೆಯಲು ಅಧಿಸೂಚನೆ ಹೊರಡಿಸಿ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಇದಕ್ಕೆ ತಕ್ಕಂತೆ ಭಾರಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಾಳ ಹಾಕುತ್ತಿರುವುದು ರೈತರು ಮತ್ತು ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿದೆ.
ಕಳೆದ ಜುಲೈ ೪ ರಂದು ಚೆನ್ನರಾಯಪಟ್ಟಣ ಭೂ ಹೋರಾಟ ಸಮಿತಿಯ ಜೊತೆ ನಡೆಸಿದ ಸಂಧಾನ ಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಗಳು ಹತ್ತು ದಿನಗಳ ಕಾಲಾವಕಾಶ ಕೇಳಿ ಜುಲೈ ೧೫ರಂದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದು ಸ್ವಾಗತಾರ್ಹ ವಾದರೂ ಸಭೆ ನಂತರವೂ ಕೆಲಸಚಿವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸರ್ಕಾರದ ಪ್ರಾಮಾಣಿಕತೆ ಬಗ್ಗೆ ಸಂಶಯ ಮೂಡಿಸಿದೆ. ಹಾಗಾಗಿ ಕಾಂಗ್ರೆಸ್ ವರಿಷ್ಟರು ಮಧ್ಯ ಪ್ರವೇಶಿಸಿ ರೈತ ಪರವಾದ ತೀರ್ಮಾನ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಅವರು ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಚೆನ್ನರಾಯಪಟ್ಟಣ ಹೋಬಳಿಯ ೧೩ ಹಳ್ಳಿಗಳ ಭೂಮಿಯನ್ನು ಕೆ.ಐ.ಎ.ಡಿ.ಬಿ.ಗೆ ನೀಡುವ ವಿಚಾರವು ೨೦೧೩ರಲ್ಲಿ ಯುಪಿಎ ಸರಕಾರ ಜಾರಿಗೊಳಿಸಿದ್ದ ಕಾಯಿದೆಗೆ ವಿರುದ್ಧವಾಗಿದೆ. ರಾಜ್ಯದ ಭೂ ಸುಧಾರಣಾ ಕಾಯ್ದೆಗೆ ಹಿಂದಿನ ಬಿಜೆಪಿ ಸರಕಾರ ತಂದಿರುವ ಮಾರಕ ತಿದ್ದುಪಡಿ ಗಳನ್ನು ಸರಿಪಡಿಸಿ ರೈತಪರ ನೀತಿ ನಿಲುವುಗಳನ್ನು ರೂಪಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಈ ವಿಚಾರಗಳನ್ನು ತನ್ನ ಪ್ರಣಾಳಿಕೆಯಲ್ಲೂ ಕೂಡ ಘೋಷಿಸಿಕೊಂಡಿತ್ತು. ಆದರೆ ಅಧಿಕಾರಕ್ಕೆ ಬಂದು ೨ ವರ್ಷ ಕಳೆದರೂ ಯಾವ ತಿದ್ದುಪಡಿಯನ್ನೂ ಮಾಡದೆ ರೈತರ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎನ್ನುವ ಕೂಗು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಹೀಗಾಗಿ ಜುಲೈ ೧೫ ರ ಮಂಗಳವಾರ ಮುಖ್ಯಮಂತ್ರಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಈ ಹೋರಾಟದ ಅಳಿವು ಉಳಿವು ನಿಂತಿದೆ. ಈ ನಡುವೆ ಹೋರಾಟಕ್ಕೆ ಹಿನ್ನಡೆಯುಂಟು ಮಾಡುವ ರೀತಿಯಲ್ಲಿ ಶನಿವಾರ ರೈತರ ಒಂದು ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದು ಸಾರ್ವಜನಿಕವಲಯದಲ್ಲಿ ಅಷ್ಟೆ ಅಲ್ಲದೆ ಹೋರಾಟಗಾರರಲಲಿ ಕೂಡ ಆಕ್ರೋಶಕ್ಕೆ ಕಾರಣವಾಗಿದೆ.ದಿಢೀರೆಂದು ಹುಟ್ಟಿಕೊಂಡ ರೈತರ ತಂಡವೊAದು ನಾವು ಭೂಮಿ ಕೊಡಲು ಸಿದ್ಧ ಎಂದಿರುವುದು,ಸುಲಭವಾಗಿ ಮುಖ್ಯಮಂತ್ರಿಗಳನ್ನು ಅವರ ಕಚೇರಿಯಲ್ಲಿಯೇ ಭೇಟಿ ಮಾಡಿರುವುದು ಕೂಡ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಈ ನಡುವೆ ದೇವನಹಳ್ಳಿ ಹೋರಾಟಕ್ಕೆ ಕೈಜೋಡಿಸುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಹಿಂದಿನ ಬಿ.ಜೆ.ಪಿ. ಸರ್ಕಾರ ರೈತರಿಗೆ ಮಾಡಿದ ಗಾಯ ವಾಸಿಮಾಡುವುದಾಗಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಈಗ ದ್ರೋಹ ಮಾಡುತ್ತಿದ್ದಾರೆ. ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಹಿಂದಕ್ಕೆ ಕೊಡುವವರೆಗೆ ನಾವು ಹೋರಾಟದಿಂದ ವಿರಮಿಸುವುದಿಲ್ಲ. ಭೂಮಿ ವಶಪಡಿಸಿಕೊಳ್ಳದಂತೆ 1195 ದಿನಗಳಿಂದ ಸರ್ಕಾರವನ್ನು ಒತ್ತಾಯಿಸಿ ರೈತರು ಹೋರಾಟ ಮಾಡುತ್ತಿದ್ದರೆ, ಈ ಪೈಕಿ ಕೆಲವರನ್ನು ವಿಧಾನಸೌಧಕ್ಕೆ ಕರೆಯಿಸಿಕೊಂಡು ಪರಿಹಾರ ಕೇಳಿಸಿದ್ದಾರೆ ಇದು ಹೋರಾಟವನ್ನು ಒಡೆಯುವ ಪ್ರಯತ್ನವಲ್ಲವೇ? ಎಂದಿರುವ ಅವರು ನೀವು ಮಾಡುತ್ತಿರುವ ನಾಟಕ ನಮ್ಮ ಕಣ್ಣಿಗೆ ಕಾಣಿಸುತ್ತಿದೆ. ಈ ನಾಟಕವನ್ನು ಹೆಚ್ಚು ದಿನ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಚೆನ್ನರಾಯಪಟ್ಟಣ ಭೂ ಹೋರಾಟಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಟಗಳಲ್ಲಂತು ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜುಲೈ ೧೪ರಂದು ಗ್ರಾಮಸಂಕಲ್ಪ ಸಮಾವೇಶ ಏರ್ಪಡಿಸಿದ್ದು, ರಾಜ್ಯದ ಎಲ್ಲಾ ರೈತ ಸಂಘಟನೆಗಳು, ಬರಹಗಾರರು, ಸಾಹಿತಿಗಳು, ಕನ್ನಡಪರ ಹೋರಾಟ ಗಾರರು ಈ ಸಮಾವೇಶದಲ್ಲಿ ಭಾಗಿಯಾಗಿ ಹೋರಾಟವನ್ನು ಬೆಂಬಲಿಸಬೇಕೆAದು ಚೆನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.
ಒಟ್ಟಾರೆ ಚೆನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಮತ್ತು ಸರ್ಕಾರದ ನಡುವೆ ನಡೆದಿರುವ ಹಾವು ಏಣಿ ಆಟದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂದು ಹೇಳಲಾಗದಷ್ಟು ಈ ವಿಚಾರ ಕಗ್ಗಂಟಾಗಿದೆ.ಇದನ್ನೆಲ್ಲಾ ಅರ್ಥಮಾಡಿಕೊಂಡು ಮುಖ್ಯಮಂತ್ರಿಗಳು ನ್ಯಾಯೋಚಿತ ಮಾರ್ಗದಲ್ಲಿ ತೀರ್ಮಾನ ಕೈಗೊಂಡು ರೈತರಿಗೆ ನ್ಯಾಯಕೊಡಬೇಕಿದೆ. ಇಲ್ಲವಾದಲ್ಲಿ ಸರಕಾರದ ವರ್ಚಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ಅಲ್ಲಗಳೆಯಲಾಗದು ಎನ್ನುವುದು ಚಿಂತಕರ ಚಾವಡಿಯ ಮಾತಾಗಿದೆ.
*
ಕೆ.ಐ.ಎ.ಡಿ.ಬಿ. ವಶಪಡಿಸಿಕೊಳ್ಳುವ ಪ್ರತಿ ಎಕರೆ ಭೂಮಿಗೆ ೩.೫೦ ಕೋಟಿ ದರ ನಿಗದಿ ಪಡಿಸಬೇಕು. ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಉದ್ಯೋಗ ನೀಡಬೇಕು, ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು, ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ಹಳದಿ ವಲಯಗಳನ್ನಾಗಿ ಪರಿವರ್ತಿಸಬೇಕು ಎಂಬ ಷರತ್ತು ಹಾಕಿ ೪೪೯ ಎಕರೆ ಭೂಮಿಯನ್ನು ನೀಡಲು ಸಿದ್ಧವಿರುವು ದಾಗಿ ರೈತರ ಒಂದು ಗುಂಪು ಶನಿವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದು ಹೋರಾಟದಲ್ಲಿ ಬಿರುಕು ಮೂಡಿಸುವ ಭಾಗವಾಗಿದೆ ಎನ್ನಲಾಗುತ್ತಿದೆ.
*
ಚೆನ್ನರಾಯಪಟ್ಟಣ ಭೂಮಿ ಹೋರಾಟಕ್ಕೆ ಸಂಬAಧಪಟ್ಟAತೆ ಈ ರಾಜ್ಯದ ಮುಖ್ಯಮಂತ್ರಿಗಳು ೧೦ ದಿನಗಳ ಕಾಲಾವಕಾಶ ಕೇಳಿದಾಗಲೇ ಅನುಮಾನ ಬಂದಿತ್ತು ಯಾರ ಊಹೆಗೂ ನಿಲುಕದ ಇಂತಹ ಹೊಸದೊಂದು ಪಿತೂರಿ ನಡೆಯುತ್ತದೆಂದು, ದಿಢೀರ್ ಅಂತ ಹುಟ್ಟಿಕೊಂಡ ರೈತಸಂಘ, ಹೆಗಲ ಮೇಲೆ ಹಸಿರು ಟವೆಲ್ ಹಾಕಿಕೊಂಡು ಸುಲಭವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಸಾಧ್ಯವಾಗಿದ್ದು ನೋಡಿದರೆ ರಾಜ್ಯದ ಜನರನ್ನು ಮರಳು ಮಾಡಲು ಹೊರಟಿರುವ ಕುತಂತ್ರಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಆದರೂ ಕೆಲವರಿಗೆ ಸಿದ್ಧರಾಮಯ್ಯನವರ ಮಾತಿನ ಮೇಲೆ ಅಪಾರವಾದ ನಂಬಿಕೆ. ಜುಲೈ ೧೫ರ ಸಭೆಯವರೆಗೂ ಕಾದು ನೋಡಬೇಕಿದೆ.
-ಆರ್. ಆಂಜನೇಯರೆಡ್ಡಿ. ಶಾಶ್ವತ ನೀರಾವತಿ ಹೋರಾಟ ಸಮಿತಿ. ಚಿಕ್ಕಬಳ್ಳಾಪುರ