ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Modi Govt: ವಿದೇಶಿ ಹಿಡಿತದಲ್ಲಿದ್ದ 202 ಟನ್ ನಿಕ್ಷೇಪ ಮರಳಿ ಪಡೆದ ಮೋದಿ ಸರ್ಕಾರ: ಏನಿದು ಚಿನ್ನ ನಿಕ್ಷೇಪದ ವಾಪಸಾತಿಯ ರಹಸ್ಯ?

Modi Govt: ಇಂಗ್ಲೆಂಡ್ ದ್ರವ್ಯತೆ ಕೊರತೆಯತ್ತ ಸಾಗುತ್ತಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ ಪ್ರಧಾನಿ ಮೋದಿ ಸರ್ಕಾರ ಅಷ್ಟೇ ಸೂಕ್ಷ್ಮತೆ ಮತ್ತು ಜಾಣ್ಮೆ ಪ್ರದರ್ಶಿಸಿ ಈ ಎರಡರಲ್ಲೂ ಇದ್ದ ತನ್ನ ಚಿನ್ನದ ನಿಕ್ಷೇಪಗಳನ್ನು ಮರಳಿ ಪಡೆಯುವಲ್ಲಿ ನಾಜೂಕು ಕಾರ್ಯಾಚರಣೆ ನಡೆಸಿ ಮಾಸ್ಟರ್‌ ಸ್ಟ್ರೋಕ್ ಕೊಟ್ಟಿದೆ. ಕೇಂದ್ರ ಸರ್ಕಾರದೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಐತಿಹಾಸಿಕ ಕ್ರಮದಿಂದಾಗಿ ಅಂತೂ ಭಾರತದ 202 ಟನ್ ಚಿನ್ನದ ನಿಕ್ಷೇಪ ಸಮೃದ್ಧಿಯ ಸಂಕೇತವೇ ಎನ್ನುವಂತೆ ಮನೆಗೆ ಮರಳಿದೆ. ಈ ಕುರಿತ ವಿವರ ಇಲ್ಲಿದೆ.

ವಿದೇಶದಲ್ಲಿದ್ದ 202 ಟನ್ ಚಿನ್ನ ನಿಕ್ಷೇಪ ವಾಪಸಾತಿಯ ರಹಸ್ಯವೇನು?

Profile Siddalinga Swamy Feb 24, 2025 6:10 PM

ಬೆಂಗಳೂರು: ಚಿನ್ನದ ಬಳಕೆಯಲ್ಲಿ ಜಾಗತಿಕ ನಾಯಕ ಸ್ಥಾನ ಗಿಟ್ಟಿಸಿಕೊಂಡ ಭಾರತ ಈಗ ಚಿನ್ನದ ನಿಕ್ಷೇಪದಲ್ಲೂ ಅಗ್ರ ಸ್ಥಾನ ಪಡೆದುಕೊಂಡಿದೆ. ವಿಶ್ವದಲ್ಲಿ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದಿದೆ. ಮಾತ್ರವಲ್ಲ, ವಿದೇಶಗಳಲ್ಲಿ ಇದ್ದ ತನ್ನ ನಿಕ್ಷೇಪಗಳನ್ನು ಮರಳಿ ಪಡೆಯುವ ಮೂಲಕ ಸುವರ್ಣಾಕ್ಷರ ಬರೆದಿದೆ. ಭಾರತದ ಪಾಲಿಗೆ ಲಕ್ಷಾಂತರ ಭಾರತೀಯರ ಸಮೃದ್ಧಿಯ ಸಂಕೇತ ಮತ್ತು ದೇಶದ ಆರ್ಥಿಕ ಭದ್ರತೆಗೆ ಅಡಿಪಾಯವೇ ಆಗಿದೆ ಚಿನ್ನ. ಅಂತೆಯೇ ಭಾರತ ಈಗ 854.73. ಟನ್ ನಷ್ಟು ಚಿನ್ನದ ನಿಕ್ಷೇಪ ಹೊಂದಿದೆ. 510.5 ಟನ್‌ ಚಿನ್ನವನ್ನು ದೇಶೀಯವಾಗಿಯೇ ಸಂಗ್ರಹಿಸಿಕೊಂಡಿದೆ. ಚಿನ್ನ ಸಂಗ್ರಹದಲ್ಲಿ ಜಾಗತಿಕ ಪೈಪೋಟಿವೊಡ್ಡುತ್ತಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಸೆಟ್ಲಮೆಂಟ್ (BIS) ನಿಂದ ಒಟ್ಟು 202 ಟನ್ ಚಿನ್ನ ನಿಕ್ಷೇಪವನ್ನು ಮರಳಿ ಪಡೆದು ಆರ್ಥಿಕ ಸುಭದ್ರತೆ ಸಾಧಿಸುವ ಜತೆಗೆ ನಮ್ಮದು ʼಆತ್ಮನಿರ್ಭರʼ ಭಾರತ ಎಂಬುದನ್ನು ಸಾರಿ ಹೇಳುತ್ತಿದೆ ಪ್ರಧಾನಿ ನರೇಂದ್ರ ಮೋದಿ (Modi Govt) ನೇತೃತ್ವದ ಎನ್‌ಡಿಎ ಸರ್ಕಾರ.

ಮಾಸ್ಟರ್ ಸ್ಟ್ರೋಕ್ ಕೊಟ್ಟ ಭಾರತ

ಲಂಡನ್ ದ್ರವ್ಯತೆ ಕೊರತೆಯತ್ತ ಸಾಗುತ್ತಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ ಪ್ರಧಾನಿ ಮೋದಿ ಸರ್ಕಾರ ಅಷ್ಟೇ ಸೂಕ್ಷ್ಮತೆ ಮತ್ತು ಜಾಣ್ಮೆ ಪ್ರದರ್ಶಿಸಿ ಈ ಎರಡರಲ್ಲೂ ಇದ್ದ ತನ್ನ ಚಿನ್ನದ ನಿಕ್ಷೇಪಗಳನ್ನು ಮರಳಿ ಪಡೆಯುವಲ್ಲಿ ನಾಜೂಕು ಕಾರ್ಯಾಚರಣೆ ನಡೆಸಿ ಮಾಸ್ಟರ್‌ ಸ್ಟ್ರೋಕ್ ಕೊಟ್ಟಿದೆ. ಕೇಂದ್ರ ಸರ್ಕಾರದೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಐತಿಹಾಸಿಕ ಕ್ರಮದಿಂದಾಗಿ ಅಂತೂ ಭಾರತದ 202 ಚಿನ್ನದ ನಿಕ್ಷೇಪ ಸಮೃದ್ಧಿಯ ಸಂಕೇತವೇ ಎನ್ನುವಂತೆ ಮನೆಗೆ ಮರಳಿದೆ.

ಭಾರತ ತನ್ನ ಸ್ವರ್ಣ ಸಂಪತ್ತನ್ನು ಭದ್ರಪಡಿಸಿಕೊಳ್ಳುವ ಜತೆಗೆ ಆರ್ಥಿಕ ಸ್ವಾಯತ್ತತೆ ಸಾಧಿಸುವಲ್ಲಿ ಜಗತ್ತಿನೆದುರು ಸೂಪರ್ ಪವರ್ ಪ್ರದರ್ಶಿಸಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆರ್ಥಿಕ ಶಕ್ತಿಯ ಕೇಂದ್ರವಾಗಿ ಭಾರತ ತನ್ನದೇ ಆದ ನಿಯಮಗಳ ಮೇಲೆ ತನ್ನ ಚಿನ್ನವನ್ನು ಮರಳಿ ತರುತ್ತಿದೆ ಎಂದು ಶ್ಲಾಘಿಸುತ್ತಿದ್ದಾರೆ ಹೆಸರಾಂತ ಅರ್ಥಶಾಸ್ತ್ರಜ್ಞರು ಮತ್ತು ರಾಜತಾಂತ್ರಿಕರು.

ಲಂಡನ್‌ನಂತಹ ಪಾಶ್ಚಿಮಾತ್ಯ ಹಣಕಾಸು ಕೇಂದ್ರವು ಚಿನ್ನದ ಕೊರತೆ ಎದುರಿಸುತ್ತಿರುವಾಗ ಭಾರತ ತನ್ನ ಗಡಿಯೊಳಗೇ ತನ್ನ ಸಂಪತ್ತನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಂಡು ದೃಢವಾಗಿ ನಿಂತಿದೆ. ಈ ಮೂಲಕ ಜಾಗತಿಕ ಆರ್ಥಿಕ ವಲಯದಲ್ಲಿ ಭಾರತ ಪ್ರಾಬಲ್ಯ ಮೆರೆದಿದೆ.

1990-91ರ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿತ್ತು. ವಿದೇಶಿ ವಿನಿಮಯ ತೀವ್ರವಾಗಿ ಕ್ಷೀಣಿಸಿತ್ತು. ದೇಶದ ಆರ್ಥಿಕತೆ ಚೇತರಿಕೆಗೆ ಯಾವುದೇ ಯೋಜನೆ ಸರ್ಕಾರದ ಮುಂದಿರಲಿಲ್ಲ. ಹಾಗಾಗಿ ಸಾಲಕ್ಕೆ ಮೇಲಾಧಾರವಾಗಿ ಭಾರತದ 47 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ ಪಡೆದುಕೊಂಡಿತ್ತು. ಸಾಲ ಮರುಪಾವತಿ ನಂತರವೂ ಭಾರತದ ಹೆಚ್ಚಿನ ಪ್ರಮಾಣದ ಚಿನ್ನ ವ್ಯಾಪಾರ ವಹಿವಾಟು ಅನುಕೂಲತೆ ಮತ್ತು ಠೇವಣಿಗಳ ಮೇಲಿನ ಆದಾಯಕ್ಕಾಗಿ ವಿದೇಶದಲ್ಲಿಯೇ ಉಳಿದಿತ್ತು. ಒಂದು ಕಾಲದಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿದ್ದ ಲಂಡನ್‌ ಅಲ್ಲೇ ದ್ರವ್ಯತೆ ಕರಗುತ್ತಿರುವುದನ್ನು ಗ್ರಹಿಸಿದ ಮೋದಿ ಸರ್ಕಾರ, ತಕ್ಷಣವೇ ವಿದೇಶಗಳಲ್ಲಿದ್ದ ತನ್ನ ಚಿನ್ನದ ನಿಕ್ಷೇಪವನ್ನು ಮರಳಿ ಪಡೆಯಲು ರಣತಂತ್ರ ರೂಪಿಸಿ ಮಾಸ್ಟರ್ ಸ್ಟ್ರೋಕ್ ಕೊಟ್ಟೇ ಬಿಟ್ಟಿತು.

ಭವಿಷ್ಯದಲ್ಲಿ ಭಾರತದ್ದು ಬಲಿಷ್ಠ ಆರ್ಥಿಕತೆ

ಕಾಲ ಬದಲಾಗಿದೆ. ಭಾರತದ್ದು ಇನ್ನು, ಸಂಕಷ್ಟದಲ್ಲಿರುವ ಆರ್ಥಿಕತೆಯಲ್ಲ. ಇದೀಗ ಬಲವಾದ ವಿದೇಶೀ ವಿನಿಮಯ ಮೀಸಲು ಹೊಂದಿರುವ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ತನ್ನ ಆರ್ಥಿಕ ಮಾನದಂಡ ಚಿನ್ನದ ನಿಕ್ಷೇಪವನ್ನು ಮರಳಿ ಪಡೆದುಕೊಂಡಿದೆ. ಒಂದೇ ವರ್ಷದಲ್ಲಿ 200 ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಮರಳಿ ತರುವ ಆರ್‌ಬಿಐ ನಿರ್ಧಾರ, ಜಾಗತಿಕವಾಗಿ ಭಾರತದ ಆರ್ಥಿಕತೆಯನ್ನು ಸ್ಥಿರಗೊಳಿಸಿದೆ.

ರಷ್ಯಾ-ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಯುಎಸ್ ಮತ್ತು ಯುರೋಪಿಯನ್ ಆರ್ಥಿಕತೆಯ ಅನಿಶ್ಚಿತತೆಯ ಮಧ್ಯೆಯೂ ಭಾರತದ ಸ್ವರ್ಗಾಸ್ತಿ ಎನ್ನುವಂತಿದ್ದ ಸ್ವರ್ಣ ಮತ್ತು ಆರ್ಥಿಕತೆಯನ್ನು ಸುಭದ್ರವಾಗಿ ಸಂರಕ್ಷಿಸಿಕೊಂಡಿದೆ. ದೇಶೀಯ ಖಜಾನೆಗಳಲ್ಲಿ ತನ್ನ ಚಿನ್ನವನ್ನು ಭದ್ರಪಡಿಸಿಕೊಂಡಿದೆ ಎನ್‌ಡಿಎ ಸರ್ಕಾರ.

ಇತ್ತ, ಆರ್‌ಬಿಐ ಕರೆನ್ಸಿಯನ್ನು ಸ್ಥಿರಗೊಳಿಸಲು, ಹಣದುಬ್ಬರ ನಿಗ್ರಹ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ಜಾಗತಿಕ ವೇದಿಕೆಯಲ್ಲಿ ರೂಪಾಯಿ ಮೌಲ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿ ಭಾರತಕ್ಕೆ ವಿತ್ತೀಯ ಸಾರ್ವಭೌಮತ್ವವನ್ನೇ ಒದಗಿಸುತ್ತದೆ.

ವಿಶ್ವದ 20 ರಾಷ್ಟ್ರಗಳಲ್ಲಿ ಹೆಚ್ಚು ಚಿನ್ನದ ನಿಕ್ಷೇಪ

ವಿಶ್ವ ಚಿನ್ನ ಮಂಡಳಿಯ ಇತ್ತೀಚಿನ ವರದಿಯಂತೆ ಜಗತ್ತಿನ 20 ರಾಷ್ಟ್ರಗಳು ಮಾತ್ರ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿದ ಖ್ಯಾತಿ ಪಡೆದಿವೆ. ಅಮೇರಿಕಾ ಸಂಯುಕ್ತ ಸಂಸ್ಥಾನ ಮೊದಲಿದ್ದರೆ, ಕೊನೆಯ 20ನೇ ಕ್ರಮಾಂಕದಲ್ಲಿದೆ ಇಂಡೋನೇಷ್ಯಾ. ಈ ಮಧ್ಯೆ ಭಾರತ, ವಿದೇಶದಲ್ಲಿನ ತನ್ನ ನಿಕ್ಷೇಪ ಹಿಂಪಡೆದು ಈಗ 8ರಿಂದ 7ನೇ ರ‍್ಯಾಂಕಿಂಗ್‌ಗೆ ಜಿಗಿದಿದೆ.

ಇದು ಭಾರತದ ಸ್ವರ್ಣಯುಗ

ವಿಶ್ವ ಚಿನ್ನದ ಮಂಡಳಿ ಪ್ರಕಾರ ಭಾರತ ಸದ್ಯ 854.73 ಟನ್ ಚಿನ್ನದ ನಿಕ್ಷೇಪ ಹೊಂದಿದ್ದು, ಇದರ ಮೌಲ್ಯ $72.179 ಬಿಲಿಯನ್ (7217.90 ಕೋಟಿ ಡಾಲರ್) ಮೀರಿದೆ. ಇದು ತನ್ನ ಒಟ್ಟು ಮೀಸಲು ನಿಕ್ಷೇಪದ ಶೇ.10.13 ರಷ್ಟಿದೆ.

ಈ ಸುದ್ದಿಯನ್ನೂ ಓದಿ | Cancer Daycare Centres: 3 ವರ್ಷಗಳಲ್ಲಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕ್ಯಾನ್ಸರ್‌ ಡೇಕೇರ್‌ ಕೇಂದ್ರ; ಪ್ರಧಾನಿ ಮೋದಿ ಘೋಷಣೆ

ಭಾರತ ಇತ್ತೀಚಿನ ವರ್ಷಗಳಲ್ಲಿ ತನ್ನ ಚಿನ್ನದ ನಿಕ್ಷೇಪಗಳನ್ನು ವೃದ್ಧಿಸಿಕೊಳ್ಳುತ್ತ ಬಂದಿದ್ದು, ಇದು ಆರ್ಥಿಕ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದರ ಸೂಚಕವಾಗಿದೆ. ಚಿನ್ನದ ಬಳಕೆಯಲ್ಲಿ ಜಾಗತಿಕ ನಾಯಕನಾಗಿಯೂ ಬೆಳೆಯುತ್ತಿರುವ ಆರ್ಥಿಕತೆಗೆ ವಿತ್ತೀಯ ಸ್ಥಿರತೆಯನ್ನು ಖಚಿತಪಡಿಸುತ್ತಿದ್ದು, ಇದು ಭಾರತದ ಪಾಲಿಗೆ ಸ್ವರ್ಣ-ಸುವರ್ಣ ಯುಗವೇ ಸರಿ.