ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Cancer Daycare Centres: 3 ವರ್ಷಗಳಲ್ಲಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕ್ಯಾನ್ಸರ್‌ ಡೇಕೇರ್‌ ಕೇಂದ್ರ; ಪ್ರಧಾನಿ ಮೋದಿ ಘೋಷಣೆ

ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲ ಜಿಲ್ಲೆಗಳಲ್ಲಿ ಕ್ಯಾನ್ಸರ್‌ ಡೇಕೇರ್‌ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಕ್ಯಾನ್ಸರ್‌ ಔಷಧ ದೊರೆಯಲಿದೆ ಎಂದೂ ಅವರು ಭರವಸೆ ನೀಡಿದರು.

ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕ್ಯಾನ್ಸರ್‌ ಡೇಕೇರ್‌ ಕೇಂದ್ರ: ಮೋದಿ

ನರೇಂದ್ರ ಮೋದಿ.

Profile Ramesh B Feb 23, 2025 8:16 PM

ಭೋಪಾಲ್‌: ʼʼಬಜೆಟ್‌ನಲ್ಲಿ ಘೋಷಿಸಿದಂತೆ ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲ ಜಿಲ್ಲೆಗಳಲ್ಲಿ ಕ್ಯಾನ್ಸರ್‌ ಡೇಕೇರ್‌ ಕೇಂದ್ರ (Cancer Daycare Centres)ಗಳನ್ನು ತೆರೆಯಲಾಗುವುದುʼʼ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು. ಮಧ್ಯ ಪ್ರದೇಶದ ಛತ್ತರ್‌ಪುರದಲ್ಲಿ ಅವರು ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಭಾನುವಾರ (ಫೆ. 23) ಅಡಿಪಾಯ ಹಾಕಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಕ್ಯಾನ್ಸರ್‌ ಔಷಧ ದೊರೆಯಲಿದೆ ಎಂದೂ ಅವರು ಭರವಸೆ ನೀಡಿದರು.

ಮೋದಿ ಹೇಳಿದ್ದೇನು?

ʼʼಈ ವರ್ಷದ ಬಜೆಟ್‌ನಲ್ಲಿ ಕ್ಯಾನ್ಸರ್‌ ವಿರುದ್ದ ಹೋರಾಡಲು ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ. ಜತೆಗೆ ಕ್ಯಾನ್ಸರ್‌ ಔಷಧಗಳನ್ನು ಅಗ್ಗವಾಗಿಸಲು ಪಣ ತೊಟ್ಟಿದ್ದೇವೆ. ಮುಂದಿನ 3 ವರ್ಷಗಳಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್‌ ಡೇಕೇರ್‌ ಕೇಂದ್ರ ಆರಂಭವಾಗಲಿದೆʼʼ ಎಂದು ಮೋದಿ ತಿಳಿಸಿದರು.



ಕುಂಭಮೇಳಕ್ಕೆ ಮೆಚ್ಚುಗೆ

ಇದೇ ವೇಳೆ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಮೆಚ್ಚುಗೆ ಸೂಚಿಸಿದರು. ಮಹಾ ಕುಂಭಮೇಳ ಯಶಸ್ವಿಯಾಗಲು ಕಾರಣಕರ್ತರಾದ 'ಸಫಾಯಿ ಕರ್ಮಿಗಳು' (ನೈರ್ಮಲ್ಯ ಕಾರ್ಮಿಕರು) ಮತ್ತು ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. "ಈ ಮಹಾ ಕುಂಭಮೇಳದಲ್ಲಿ ಸಾವಿರಾರು ವೈದ್ಯರು ಮತ್ತು ಸ್ವಯಂಸೇವಕರು ಸಮರ್ಪಣೆ ಮತ್ತು ಸೇವಾ ಮನೋಭಾವದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆʼʼ ಎಂದು ತಿಳಿಸಿದರು.

ಕುಂಭಮೇಳವನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ

ಈ ವೇಳೆ ಮೋದಿ ಅವರು ಕುಂಭಮೇಳವನ್ನು ಟೀಕಿಸುವವರ ವಿರುದ್ದ ವಾಗ್ದಾಳಿ ನಡೆಸಿದರು. ʼʼವಿದೇಶ ಶಕ್ತಿಗಳು ಭಾರತವನ್ನು ಸಾಮರ್ಥ್ಯವನ್ನು ಕುಗ್ಗಿಸಲು ಯತ್ನಿಸುತ್ತಿವೆ. ಅಲ್ಲದೆ ಇಲ್ಲಿರುವ ಗುಲಾಮ ಮನಸ್ಥಿತಿಯವರು ಧಾರ್ಮಿಕ ಸಂಪ್ರದಾಯವನ್ನು ಅವಹೇಳನ ಮಾಡುತ್ತಿದ್ದಾರೆʼʼ ಎಂದು ಅವರು ಹೇಳಿದರು. "ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಣಕಿಸುವ, ಅಪಹಾಸ್ಯ ಮಾಡುವ, ಜನರನ್ನು ವಿಭಜಿಸುವುದನ್ನೇ ಕಾಯಕ ಮಾಡಿಕೊಂಡಿರುವ ನಾಯಕರ ಗುಂಪೇ ಕಾಣ ಸಿಗುತ್ತದೆ. ಅನೇಕ ಬಾರಿ ವಿದೇಶಿ ಶಕ್ತಿಗಳು ಈ ಜನರನ್ನು ಬೆಂಬಲಿಸುವ ಮೂಲಕ ದೇಶ ಮತ್ತು ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತವೆ" ಎಂದು ಹೇಳಿದರು.



ʼʼಶತಮಾನಗಳಿಂದ ಹಿಂದೂ ಧರ್ಮವನ್ನು ದ್ವೇಷಿಸುವವರು ನಮ್ಮ ನಂಬಿಕೆಗಳು, ದೇವಾಲಯಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೆ ದಾಳಿ ಮಾಡಿದ್ದಾರೆ. ಅವರು ನಮ್ಮ ಧರ್ಮವನ್ನು ಗುರಿಯಾಗಿಸುತ್ತಾರೆ ಮತ್ತು ನಮ್ಮ ಏಕತೆಯನ್ನು ಮುರಿಯಲು ಯೋಜನೆ ರೂಪಿಸುತ್ತಾರೆ. ಇದರ ನಡುವೆ ಧೀರೇಂದ್ರ ಶಾಸ್ತ್ರಿ ಅವರು ದೀರ್ಘ ಕಾಲದಿಂದ ದೇಶದಲ್ಲಿ ಏಕತೆಯ ಮಂತ್ರದ ಪಠಿಸುತ್ತಿದ್ದಾರೆ. ಇದೀಗ ಕ್ಯಾನ್ಸರ್ ವಿರುದ್ಧ ಹೋರಾಡಲು ಸಂಸ್ಥೆಯನ್ನು ನಿರ್ಮಿಸುವ ಮೂಲಕ ಭರವಸೆ ಮೂಡಿಸುತ್ತಿದ್ದಾರೆʼʼ ಎಂದು ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: Maha Kumbh Mela: ಮಹಾ ಕುಂಭಮೇಳ ಮುಕ್ತಾಯಕ್ಕೆ ದಿನಗಣನೆ; 62 ಕೋಟಿ ಭಕ್ತರ ಭೇಟಿ

ಮೋದಿ ಅವರ ತಾಯಿಯ ಹೆಸರು

ಬಾಗೇಶ್ವರ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ವಾರ್ಡ್‌ಗೆ ಪ್ರಧಾನಿ ಅವರ ತಾಯಿ ಹೀರಾಬೆನ್ ಮೋದಿ ಅವರ ಹೆಸರಿಡಲಾಗುವುದು ಎಂದು ಧೀರೇಂದ್ರ ಶಾಸ್ತ್ರಿ ಘೋಷಿಸಿದರು. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು 2ರಿಂದ 3 ವರ್ಷಗಳಲ್ಲಿ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕ್ಯಾನ್ಸರ್ ರೋಗಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಗುರಿಯನ್ನು ಈ ಆಸ್ಪತ್ರೆ ಹೊಂದಿದೆ.