Viral News: ಕ್ಯಾಬ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ; ಚಾಲಕನ ಕೆಲಸಕ್ಕೆ ತಲೆದೂಗಿದ ನೆಟ್ಟಿಗರು
ಮಾನವೀಯತೆಗೆ ಹಲವಾರು ಮುಖಗಳಿವೆ ಮತ್ತು ಅದು ನಮ್ಮೆಲ್ಲರಲ್ಲೂ ಇರುತ್ತದೆ. ಸೂಕ್ತ ಸಂದರ್ಭಗಳಲ್ಲಿ ನಮ್ಮಲ್ಲಿರುವ ಮಾನವೀಯ ಮುಖ ಅನಾವರಣಗೊಳ್ಳುತ್ತದೆ ಎನ್ನುವ ಮಾತಿದೆ. ಅಂತಹ ಒಂದು ಮಾನವೀಯ ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಆ ಸುದ್ದಿಯ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಚಂಡೀಗಢ: ನಮ್ಮ ಸಮಾಜದಲ್ಲಿ ಮಾನವೀಯತೆ (Humanity) ಸತ್ತಿಲ್ಲ ಎಂಬ ವಿಚಾರವನ್ನು ಸಾಬಿತುಪಡಿಸುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇಂತಹ ಘಟನೆಗಳಿಂದ ಮಾನವೀಯತೆ ಎಂಬುದು ನಮ್ಮೊಳಗೆ ಅಂತರ್ಗತವಾಗಿರುವ ವಿಚಾರ ಮತ್ತು ಅದು ಬೆಳಕಿಗೆ ಬರಲು ಒಂದು ಘಟನೆಯ ಕಿಡಿ ಸಾಕಾಗುತ್ತದೆ ಎಂಬುದು ಸಹ ಆಗಾಗ್ಗೆ ಸಾಬೀತಾಗುತ್ತಿರುತ್ತದೆ. ಅಂತಹ ಒಂದು ಘಟನೆಯಲ್ಲಿ ಡ್ರೈವರ್ (Cab Driver) ಒಬ್ಬರು ತಮ್ಮ ಕ್ಯಾಬ್‌ನಲ್ಲಿ ಹೆರಿಗೆಗೆಂದು ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಯೊಬ್ಬರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೆರಿಗೆ ನೋವು ಜೋರಾದಾಗ ಆಕೆಗೆ ಕ್ಯಾಬಿನಲ್ಲೇ ಸುರಕ್ಷಿತವಾಗಿ ಹೆರಿಗೆಯಾಗುವಂತೆ ಮಾಡಿದ ಅಪರೂಪದ ಘಟನೆಯೊಂದು ಗುರುಗ್ರಾಮದಿಂದ ವರದಿಯಾಗಿದೆ. ಈ ಘಟನೆಯ ಸುದ್ದಿ ಇದೀಗ ಎಲ್ಲೆಡೆ ವೈರಲ್ (Viral News) ಆಗುತ್ತಿದ್ದು, ಕ್ಯಾಬ್ ಚಾಲಕನ ಮಾನವೀಯತೆಗೆ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.
ಈ ಅಪರೂಪದ ಮಾನವೀಯ ಘಟನೆಯನ್ನು ರೆಡ್ ಇಟ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತನ್ನ ಮನೆಯಲ್ಲಿನ ಅಡುಗೆ ಕೆಲಸದವರ ಪತ್ನಿ ತುಂಬು ಗರ್ಭಿಣಿಯಾಗಿದ್ದ ಕಾರಣ, ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ಉದ್ದೇಶದಿಂದ ರೋಹನ್ ಮೆಹ್ರಾ ಎಂಬವರು ರ‍್ಯಾಪಿಡೋ ಕ್ಯಾಬ್ ಬುಕ್ ಮಾಡಿದ್ದರು. ಆಸ್ಪತ್ರೆಗೆ 12 ಕಿ.ಮೀ. ಇರುವಂತೆ ಆ ಮಹಿಳೆಗೆ ಕ್ಯಾಬ್‌ನಲ್ಲೇ ಹೆರಿಗೆ ನೋವು ಜೋರಾಗಿದೆ. ಕೂಡಲೇ ವಿಕಾಸ್ ಹೆಸರಿನ ಕ್ಯಾಬ್ ಚಾಲಕ ಆ ಮಹಿಳೆಗೆ ಕಾರಿನಲ್ಲೇ ಸುರಕ್ಷಿತವಾಗಿ ಹೆರಿಗೆಯಾಗಲು ಅಗತ್ಯ ಆರೋಗ್ಯ ಪಾಲನಾ ನೆರವನ್ನು ಒದಗಿಸಿದ್ದಾನೆ. ಇದರಿಂದಾಗಿ ಆ ಮಹಿಳೆ ಕ್ಯಾಬ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಬಳಿಕ ಕ್ಯಾಬ್ ಚಾಲಕ ವಿಕಾಸ್ ಆ ಮಹಿಳೆ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವಿಕಾಸ್ ತನ್ನ ಸೇವೆಗೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಪಡೆದುಕೊಳ್ಳದೇ, ಈ ಟ್ರಿಪ್‌ಗೆ ನಿಗದಿಯಾಗಿದ್ದ 186 ರೂ. ಮಾತ್ರವೇ ಪಡೆದುಕೊಳ್ಳುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ, ಕ್ಯಾಬ್ ಬುಕ್ ಮಾಡಿದ್ದ ರೋಹನ್ ಮೆಹ್ರಾ ಅವರು ರೆಡ್ ಇಟ್ ನಲ್ಲಿ ಪೋಸ್ಟ್ ಮಾಡಿದ ಬಳಿಕ ಈ ಸುದ್ದಿ ಸೋಶಿಯಲ್ ಮೀಡಿಯಾದ ಗಮನವನ್ನು ಸೆಳೆದಿದೆ. ಅವರ ಪೋಸ್ಟ್ ನ ಪೂರ್ಣಪಾಠ ಇಲ್ಲಿದೆ:
ಇದನ್ನೂ ಓದಿ: Viral News: ಮಹಿಳಾ IAS ಅಧಿಕಾರಿಯ ಫೇಸ್‌ಬುಕ್ ಪೋಸ್ಟ್‌ಗೆ ಕಾಮೆಂಟ್ ಮಾಡಿದವರ ಮೇಲೆ ಬಿತ್ತು ಕೇಸ್

‘ನನ್ನ ಮನೆಯ ಅಡುಗೆಯ ಕೆಲಸದಾತನ ಪತ್ನಿ ತುಂಬು ಗರ್ಭಿಣಿಯಾಗಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲೆಂದು ನಾನಿಂದು ರ‍್ಯಾಪಿಡೋ ಕ್ಯಾಬೊಂದನ್ನು ಬುಕ್ ಮಾಡಿದ್ದೆ. ಇದರ ಚಾಲಕ ತಾನೊಬ್ಬ ರಿಯಲ್ ಹಿರೋ ಎಂಬುದನ್ನು ಇಂದಿನ ಘಟನೆಯ ಮೂಲಕ ಸಾಬೀತುಪಡಿಸಿದ್ದಾನೆ. ಏನಾಯಿತೆಂದರೆ ಗರ್ಭಿಣಿಯನ್ನು ಹೊತ್ತ ಕ್ಯಾಬ್ ಆಸ್ಪತ್ರೆಗೆ ಸಾಗುತ್ತಿದ್ದಂತೆ, ಆಸ್ಪತ್ರೆಗೆ ಇನ್ನೂ 12 ಕಿ.ಮೀ. ಇರುವಂತೆ ಆಕೆಗೆ ಹೆರಿಗೆ ನೋವು ಜೋರಾಗಿದೆ. ಬಳಿಕ ಆಕೆ ಕಾರಿನಲ್ಲೇ ಮಗುವಿಗೆ ಜನ್ಮ ನೀಡುವ ಪರಿಸ್ಥಿತಿ ಉಂಟಾಗಿದೆ. ಮಹಿಳೆಗೆ ಕಾರಿನಲ್ಲೇ ಸುರಕ್ಷಿತವಾಗಿ ಹೆರಿಗೆಯಾಗುವಂತೆ ಚಾಲಕ ಸಹಕರಿಸಿದ್ದಾನೆ ಮತ್ತು ಬಳಿಕ ಬಾಣಂತಿಯನ್ನು ಮತ್ತು ನವಜಾತ ಶಿಸುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲಿಸಿದ್ದಾನೆ. ಇಷ್ಟೆಲ್ಲ ಮಾಡಿಯೂ, ವಿಕಾಸ್ ತನ್ನ ಹೆಚ್ಚುವರಿ ಕೆಲಸಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣವನ್ನು ಕೇಳಿಲ್ಲ. ತನ್ನ ಬಾಡಿಗೆ ಮೊತ್ತವನ್ನು ಮಾತ್ರ ಪಡೆದುಕೊಂಡಿದ್ದಾನೆ. ಆದರೆ ಈ ಚಾಲಕನಲ್ಲಿದ್ದ ಮಾನವೀಯತೆಗೆ ಎಷ್ಟು ಹಣ ನೀಡಿದರು ಕಡಿಮೆಯೇ’ ಎಂದು ರೋಹನ್ ಬರೆದುಕೊಂಡಿದ್ದಾರೆ.
ಇದೀಗ ವಿಕಾಸ್ ಅವರ ಮಾನವೀಯ ಕಾರ್ಯಕ್ಕಾಗಿ ಅವರನ್ನು ಗೌರವಿಸಲು ರೋಹನ್ ನಿರ್ಧರಿಸಿದ್ದಾರೆ. ಆದರೆ ಕ್ಯಾಬ್ ನಂಬರ್ ಹೊರತಾಗಿಸಿ ರೋಹನ್ ಬಳಿ ವಿಕಾಸ್ ಅವರ ಬೇರೆ ಯಾವುದೇ ವಿವರಗಳಿಲ್ಲ. ಹಾಗಾಗಿ ಅವರೀಗ ರ‍್ಯಾಪಿಡೋ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಉದ್ಯೋಗಿಯ ವಿವರಗಳನ್ನು ಒದಗಿಸಿಕೊಡುವಂತೆ ವಿನಂತಿಸಿಕೊಂಡಿದ್ದಾರೆ.
ಕ್ಯಾಬ್ ಚಾಲಕ ವಿಕಾಸ್ ಅವರ ಈ ಮಾನವೀಯ ಕಾರ್ಯಕ್ಕೆ ಇದೀಗ ಸರ್ವತ್ರ ಪ್ರಶಂಸೆ ವ್ಯಕ್ತವಾಗಿದೆ. ‘ಇದೊಂದು ಪರಿಪೂರ್ಣ ಕಾರ್ಯ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ‘ಇಂತಹ ವಿಕಾಸ (ಅಭಿವೃದ್ಧಿ) ನಮಗೆ ಅಗತ್ಯವಿದೆ’ ಎಂದು ಹೇಳಿದ್ದಾರೆ.