Chhaava Movie: 'ಛಾವಾ' ಚಿತ್ರಕ್ಕೆ ನೆಟ್ಟಿಗರು ಫಿದಾ; ಪೋಸ್ಟರ್‌ಗೆ ಕ್ಷೀರಾಭಿಷೇಕ
ಅಭಿಮಾನಿಗಳಲ್ಲಿ ʼಛಾವಾʼ ಸಿನಿಮಾ ಕ್ರೇಜ್ ಹೆಚ್ಚಾಗುತ್ತಿದೆ. ಕೆಲವು ಅಭಿಮಾನಿಗಳು ʼಛಾವಾʼ ಸಿನಿಮಾದ ಪೋಸ್ಟರ್‌ಗೆ ಹಾಲಾಭಿಷೇಕ ಮಾಡಿದರೆ ಇನ್ನು ಅಭಿಮಾನಿಯೊಬ್ಬರು ಕುದುರೆ ಏರಿ ಸಂಭಾಜಿ ಗೆಟಪ್‌ನಲ್ಲಿ ಸಿನೆಮಾ ಥಿಯೇಟರ್‌ಗೆ ಆಗಮಿಸಿದ್ದಾರೆ. ಸದ್ಯ ಬಾಕ್ಸ್ ಆಪೀಸ್‌ನಲ್ಲಿ ಚಿತ್ರದ ಅಬ್ಬರ ಮುಂದುವರಿದಿದೆ.


ನವದೆಹಲಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ ಛಾವಾ (Chhaava) ಸಿನಿಮಾ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಮರಾಠ ಚಕ್ರವರ್ತಿ ಶಿವಾಜಿ ಪುತ್ರ ಸಂಭಾಜಿ ಮಹಾರಾಜನ ಜೀವನಧಾರಿತ, ಐತಿಹಾಸಿಕ ಕಥೆಯ ಹಿನ್ನೆಲೆ ಹೊಂದಿರುವ ಈ ಸಿನಿಮಾಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ʼಛಾವಾʼ ಚಿತ್ರದ ಬಗ್ಗೆ ಇತ್ತೀಚೆಗಷ್ಟೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಾಜಿ ಕಾಲದ ಮರಾಠ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ, ಸಂಭಾಜಿ ಮಹಾರಾಜರ ಪರಾಕ್ರಮ ಎಲ್ಲವನ್ನು ತೆರೆ ಮೇಲೆ ತೋರಿಸಲಾಗಿದ್ದು, ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ʼಛಾವಾʼ ಸಿನಿಮಾ ಕ್ರೇಜ್ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕೆಲವು ಫ್ಯಾನ್ಸ್ ʼಛಾವಾʼ ಸಿನಿಮಾದ ಪೋಸ್ಟರ್‌ಗೆ ಹಾಲಾಭಿಷೇಕ ಮಾಡಿದರೆ, ಅಭಿಮಾನಿಯೊಬ್ಬರು ಕುದುರೆ ಏರಿ ಸಂಭಾಜಿ ಗೆಟಪ್‌ನಲ್ಲಿ ಸಿನೆಮಾ ಥಿಯೇಟರ್‌ಗೆ ಬಂದಿದ್ದಾರೆ.
ಮರಾಠ ದೊರೆ ಸಂಭಾಜಿ ಪರಾಕ್ರಮವನ್ನು ಕಣ್ಣಾರೆ ಕಂಡ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ವೀಕ್ಷಿಸಲು ಆಗಮಿಸಿದ ಅನೇಕರು ಮರಾಠ ದೊರೆಗೆ ಗೌರವ ಸೂಚಿಸಲು ತಮ್ಮ ಚಪ್ಪಲಿಯನ್ನು ಕಳಚಿದ್ದರು. ಈ ಸಂಗತಿ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಅದೇ ರೀತಿ ಸಿನಿಮಾ ಥಿಯೇಟರ್‌ನಲ್ಲಿ ನಿಲ್ಲಿಸಿದ್ದ ʼಛಾವಾʼ ಪೋಸ್ಟರ್‌ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇವೆಲ್ಲಕ್ಕೂ ಭಿನ್ನ ಎಂಬಂತೆ ಅಭಿಮಾನಿಯೊಬ್ಬರು ನಾಗ್ಪುರದ ಚಿತ್ರ ಮಂದಿರಕ್ಕೆ ಭೇಟಿ ನೀಡಿದ್ದು, ಆತನ ಲುಕ್ ಕಂಡು ಸಿನಿಮಾ ಥಿಯೇಟರ್‌ನಲ್ಲಿದ್ದವರು ಒಂದುಕ್ಷಣ ಶಾಕ್ ಆಗಿಬಿಟ್ಟಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜನಂತೆ ಗೆಟಪ್ ಹಾಕಿ ಕುದುರೆ ಏರಿ ಅವರು ಥಿಯೇಟರ್‌ಗೆ ಬಂದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಿನಿಮಾ ತೆರೆಕಂಡ ಮೊದಲ ದಿನವೇ 33 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು. ಈ ಮೂಲಕ ಈ ವರ್ಷದಂದು ತೆರೆ ಕಂಡ ಚಿತ್ರಗಳಲ್ಲಿ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮರಾಠ ಸಾಮ್ರಾಜ್ಯದ ಧೀಮಂತ ನಾಯಕನ ಪಾತ್ರಕ್ಕೆ ವಿಕ್ಕಿ ಕೌಶಲ್ ಜೀವ ತುಂಬಿದ್ದು, ಸಂಭಾಜಿ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಇನ್ನುಳಿದಂತೆ ಅಶುತೋಷ್ ರಾಣಾ, ಅಕ್ಷಯ್ ಖನ್ನಾ, ದಿವ್ಯಾದತ್ತಾ, ಡಯಾನಾ ಪೆಂಟಿ, ಬಾಲಾಜಿ ಮನೋಹರ್ ಮತ್ತಿತರರು ಪ್ರಮುಖ ಪಾತ್ರಗಲಲ್ಲಿ ನಟಿಸಿದ್ದಾರೆ.