Tunnel Collapses: ತೆಲಂಗಾಣ ಸುರಂಗ ಕುಸಿತ; ಕಾರ್ಮಿಕರ ರಕ್ಷಣೆಗೆ ರ್‍ಯಾಟ್ ಮೈನರ್ಸ್ ತಂಡ ಎಂಟ್ರಿ
ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿಯಲ್ಲಿ ಕನಿಷ್ಠ ಎಂಟು ಮಂದಿ ಕಾರ್ಮಿಕರು ಸಿಲುಕಿದ್ದಾರೆ. 2023 ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಬೆಂಡ್-ಬಾರ್ಕೋಟ್ ಸುರಂಗದಲ್ಲಿ ಸಿಲುಕಿದ್ದ ನಿರ್ಮಾಣ ಕಾರ್ಮಿಕರನ್ನು ರಕ್ಷಿಸಿದ ರ್‍ಯಾಟ್ ಮೈನರ್ಸ್ ತಂಡವು ಈಗ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದೆ.

ತೆಲಂಗಾಣದಲ್ಲಿ ಸುರಂಗ ಕುಸಿತ

ಹೈದರಾಬಾದ್ : ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು (Tunnel Collapses) ಬಿದ್ದ ಪರಿಣಾಮ ಅವಶೇಷಗಳಡಿಯಲ್ಲಿ ಕನಿಷ್ಠ ಎಂಟು ಮಂದಿ ಕಾರ್ಮಿಕರು ಸಿಲುಕಿದ್ದಾರೆ. ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದ ಒಳಗೆ ಸೋರಿಕೆಯನ್ನು ಸರಿಪಡಿಸಲು ಕಾರ್ಮಿಕರು ತೆರಳಿದ್ದಾಗ, ಸುರಂಗದ ಒಂದು ಭಾಗ ಕುಸಿದಿದೆ. ಈ ವೇಳೆ ಮೂವರು ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಿಕರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಸ್ಥಳಕ್ಕೆ ಕಾರ್ಯಾಚರಣೆಗೆ ರ್‍ಯಾಟ್ ಮೈನರ್ಸ್ ಆಗಮಿಸಿದ್ದಾರೆ.
2023 ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಬೆಂಡ್-ಬಾರ್ಕೋಟ್ ಸುರಂಗದಲ್ಲಿ ಸಿಲುಕಿದ್ದ ನಿರ್ಮಾಣ ಕಾರ್ಮಿಕರನ್ನು ರಕ್ಷಿಸಿದ ರ್‍ಯಾಟ್ ಮೈನರ್ಸ್ ತಂಡವು ಈಗ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದೆ ಎಂದು ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣ ರಾವ್ ಹೇಳಿದ್ದಾರೆ. ನವೆಂಬರ್ 12, 2023 ರಂದು, ಸಿಲ್ಕ್ಯಾರಾ ಸುರಂಗದ ಒಂದು ಭಾಗವು ಕುಸಿದು 41 ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸಿಲುಕಿದ್ದರು. 17 ದಿನಗಳ ನಿರಂತರ ಕಾರ್ಯಾಚರಣೆಯ ನಂತರ ಕಾರ್ಮಿಕರನ್ನು ರಕ್ಷಿಸಲಾಗಿತ್ತು.
ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ತಲುಪಿಲು ಸಾಕಷ್ಟು ವಿಘ್ನಗಳು ಎದುರಾಗಿದ್ದವು. ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದ ನಂತರ, ಅಧಿಕಾರಿಗಳು ಅಂತಿಮ 10 ಮೀಟರ್ ಅವಶೇಷಗಳನ್ನು ತೆರವುಗೊಳಿಸಲು ಹಸ್ತಚಾಲಿತ ಯಂತ್ರಗಳನ್ನು ಬಳಸಲಾಗಿತ್ತು. ನಂತರ ಒಳಗೆ ಇದ್ದವರನ್ನು ರಕ್ಷಣೆ ಮಾಡಲಾಗಿತ್ತು.
ಸೋಮವಾರ ಘಟನಾ ಸ್ಥಳಕ್ಕೆ ಆಗಮಿಸಿದ ನೌಕಾಪಡೆ ತಂಡಗಳು ಇನ್ನೂ ಸುರಂಗದೊಳಗೆ ಪ್ರವೇಶಿಸಿಲ್ಲ. ಅಲ್ಲದೇ ಐಐಟಿ ಚೆನ್ನೈನ ತಂಡವು ಕ್ಯಾಮೆರಾಗಳು ಮತ್ತು ಗಣಿ ಪತ್ತೆ ಮಾಡುವ ರೋಬೋಟ್ ತಂದು ಕಾರ್ಯಾಚರಣೆಗೆ ಸೇರಿಕೊಂಡಿದೆ. ಐಐಟಿ ಚೆನ್ನೈನ ಮೂವರು ಮತ್ತು ಎಲ್ & ಟಿಯ ಮೂವರು ತಜ್ಞರನ್ನು ಒಳಗೊಂಡ ಆರು ಸದಸ್ಯರ ತಂಡ ಉಪಕರಣಗಳ ಮೂಲಕ ನೇರ ದೃಶ್ಯಗಳನ್ನು ಸೆರೆಹಿಡಿಯಲಿವೆ. ಕ್ಯಾಮೆರಾಗಳು ದುರಂತದ ಸ್ಥಳ ತಲುಪಲು ವಿಫಲವಾದರೆ, ಲ್ಯಾಪ್‌ಟಾಪ್‌ಗೆ ಸಂಪರ್ಕಗೊಂಡಿರುವ ರೋಬೋಟ್ ನಿಯೋಜಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Tunnel Collapses: ತೆಲಂಗಾಣ ಸುರಂಗ ಕುಸಿತ; ನೀರು, ಕೆಸರು, ಕುಸಿದ ಅವಶೇಷಗಳೇ ಕಾರ್ಯಾಚರಣೆಗೆ ದೊಡ್ಡ ಸವಾಲು
ನಾನೇ ಸ್ವತಃ ಸುರಂಗದ ಕೊನೆಯವರೆಗೂ ಹೋಗಿದ್ದೆ. ಅದು ದುರಂತದ ಸ್ಥಳದಿಂದ ಕೇವಲ 50 ಮೀಟರ್ ಕಡಿಮೆ ಇತ್ತು. ಅಲ್ಲಿ ಫೋಟೋಗಳನ್ನು ತೆಗೆದುಕೊಂಡಾಗ ಸುರಂಗದ ಕೊನೆ ಭಾಗ ಕಾಣಿಸುತ್ತಿತ್ತು. 9 ಮೀಟರ್ ವ್ಯಾಸದ ಸುರಂಗ, 30 ಅಡಿ ಉದ್ದ ಹೊಂದಿದ್ದು, 20 ಅಡಿಗಳವರೆಗೂ ಮಣ್ಣಿನ ರಾಶಿ ಬಿದ್ದಿದೆ. ನಾವು ಕಾರ್ಮಿಕರ ಹೆಸರನ್ನು ಕೂಗಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ಅವರು ಬದುಕುಳಿದಿರುವ ಸಾಧ್ಯತೆ ಇದ್ದಂತಿಲ್ಲ ಎಂದು ಸಚಿವ ಜೂಪಲ್ಲಿ ಕೃಷ್ಣ ರಾವ್ ಹೇಳಿದ್ದಾರೆ.