Donald Trump: 300 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ರದ್ದು; ಟ್ರಂಪ್ ಸರ್ಕಾರದಿಂದ ಮಹ್ವದ ನಿರ್ಧಾರ
ಡೊನಾಲ್ಡ್ ಟ್ರಂಪ್ ಆಡಳಿತವು ಇತ್ತೀಚೆಗೆ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ವೀಸಾಗಳನ್ನು ರದ್ದುಗೊಳಿಸಿದ್ದು, ಅಮೆರಿಕದಲ್ಲಿ ವಾಸಿಸುವ ಹಲವಾರು ಭಾರತೀಯ ಮತ್ತು ಇತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ.ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಹಮಾಸ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ವೀಸಾ ರದ್ದಾಗಿದೆ.


ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ (Donald Trump) ಆಡಳಿತವು ಇತ್ತೀಚೆಗೆ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ವೀಸಾಗಳನ್ನು ರದ್ದುಗೊಳಿಸಿದ್ದು, ಅಮೆರಿಕದಲ್ಲಿ ವಾಸಿಸುವ ಹಲವಾರು ಭಾರತೀಯ ಮತ್ತು ಇತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಹೆಚ್ಚಿನ ವಿದ್ಯಾರ್ಥಿಗಳನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ. ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ವೀಸಾ ರದ್ದಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈಗ ಇದು ಪ್ರತಿಭಟನೆಗಳಲ್ಲಿ ದೈಹಿಕವಾಗಿ ಭಾಗವಹಿಸಿದವರನ್ನು ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ "ರಾಷ್ಟ್ರವಿರೋಧಿ" ಪೋಸ್ಟ್‌ಗಳನ್ನು ಇಷ್ಟಪಡುವ, ಹಂಚಿಕೊಂಡ ಅಥವಾ ಕಾಮೆಂಟ್ ಮಾಡುವ ವಿದ್ಯಾರ್ಥಿಗಳನ್ನು ಸಹ ಸೇರಿಸಿಕೊಳ್ಳಲು ವಿಸ್ತರಿಸಿದೆ. ರಾಷ್ಟ್ರೀಯ ಭದ್ರತೆಯ ಬಗ್ಗೆ ತಮ್ಮ ಕಠಿಣ ನಿಲುವಿಗೆ ಹೆಸರುವಾಸಿಯಾದ ಮಾರ್ಕೊ ರುಬಿಯೊ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಪ್ಯಾಲಸ್ತೀನ್ ಪರ ಪ್ರತಿಭಟನೆ ಇದು ರಾಷ್ಟ್ರೀಯ ಭದ್ರತೆಗೆ ಆತಂಕ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳ ವೀಸಾ ರದ್ಧತಿಗೆ ನಿಖರ ಕಾರಣವೇನೆಂದು ಅವರು ತಿಳಿಸಿಲ್ಲ.
ಇತ್ತಿಚೆಗೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಟರ್ಕಿಶ್ ವಿದ್ಯಾರ್ಥಿನಿ ರುಮೈಸಾ ಓಜ್‌ಟರ್ಕ್ ಅವರನ್ನು ಬಂಧಿಸಲಾಗಿತ್ತು. ಫುಲ್‌ಬ್ರೈಟ್ ತಜ್ಞೆ ಹಾಗೂ ಮಕ್ಕಳ ಅಧ್ಯಯನ ಮತ್ತು ಮಾನವ ಅಭಿವೃದ್ಧಿಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿ ರುಮೈಸಾ ಓಜ್‌ಟರ್ಕ್ ಅವರನ್ನು ಮಂಗಳವಾರ ಸಂಜೆ ಮ್ಯಾಸಚೂಸೆಟ್ಸ್‌ನ ಸೋಮರ್‌ವಿಲ್ಲೆಯಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾಲಯದ ಹೊರಗೆ ಪೊಲೀಸರು ಬಂಧಿಸಿದ್ದರು. ಇಸ್ರೇಲ್‌ಗೆ ಸಂಬಂಧಿಸಿದ ಕಂಪನಿಗಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ವಿಶ್ವವಿದ್ಯಾನಿಲಯದ ನಿರಾಕರಣೆ ಮತ್ತು ಪ್ಯಾಲೆಸ್ಟೀನಿಯನ್ ಹಕ್ಕುಗಳ ಬಗ್ಗೆ ಅದರ ನಿಲುವನ್ನು ಟೀಕಿಸಿ ದಿ ಟಫ್ಟ್ಸ್ ಡೈಲಿಯಲ್ಲಿ ಅಭಿಪ್ರಾಯ ಲೇಖನವನ್ನು ಸಹ-ಲೇಖಕಿಯಾಗಿ ಬರೆದ ಒಂದು ವರ್ಷದ ನಂತರ ಅವರ ಬಂಧನವಾಗಿದೆ.
ಈ ಸುದ್ದಿಯನ್ನೂ ಓದಿ: Ranjani Srinivasan: ಹಿಂಸೆ, ಭಯೋತ್ಪಾದನೆಯನ್ನು ಪ್ರತಿಪಾದಿಸಿದ ಕಾರಣಕ್ಕೆ US ವೀಸಾ ಕಳೆದುಕೊಂಡ ಭಾರತೀಯ ವಿದ್ವಾಂಸೆ ರಂಜನಿ ಶ್ರೀನಿವಾಸನ್ ಯಾರು? ಏನಿವರ ಹಿನ್ನೆಲೆ?
300 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ F-1 ವೀಸಾಗಳನ್ನು ರದ್ದುಗೊಳಿಸಿದ ವಿದೇಶಾಂಗ ಇಲಾಖೆಯ ಕ್ರಮವು ಭಾರತೀಯ ವಿದ್ಯಾರ್ಥಿಗಳಲ್ಲಿಯೂ ಕಳವಳವನ್ನು ಉಂಟು ಮಾಡಿದೆ. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸ್ ಎಂಬಾಕೆಯನ್ನು ಗಡಿಪಾರು ಮಾಡಲಾಗಿತ್ತು. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿಯಾಗಿರುವ ಶ್ರೀನಿವಾಸನ್ ಅವರಿಗೆ ಮಾರ್ಚ್ 5 ರಂದು ಚೆನ್ನೈನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಕಚೇರಿಯಿಂದ ಮೊದಲ ಇಮೇಲ್ ಬಂದಿದ್ದು, ಅವರ ವಿದ್ಯಾರ್ಥಿ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು.