ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

EPFO: ಪಿಎಫ್‌ ಹಣ ಹಿಂಪಡೆಯುವ ನಿಯಮಗಳಲ್ಲಿ ಭಾರಿ ಬದಲಾವಣೆ; ಇದು ನೀವು ತಿಳಿದಿರಲೇಬೇಕಾದ ಮಾಹಿತಿ

EPFO: ಏಪ್ರಿಲ್‌ 1ರಿಂದ ಹೊಸ ಆರ್ಥಿಕ ವರ್ಷಪ್ರಾರಂಭವಾಗಿದ್ದು, EPFO ತನ್ನ ವಿಥ್‌ಡ್ರಾ ನೀತಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಅದರಲ್ಲಿಯೂ ಅಡ್ವಾನ್ಸ್ ಕ್ಲೈಮ್‌ನ ಆಟೋ ಸೆಟಲ್ಮೆಂಟ್ (ASAC) ಮಿತಿಯನ್ನು ‌ಈಗಿರುವ ರೂ. 1 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಪಿಎಫ್ ಖಾತೆಯಲ್ಲಿರುವ ಹಣ ಹಿಂಪಡೆಯಲು ಇಂದಿನಿಂದ ಹೊಸ ನಿಯಮ...!

Profile Sushmitha Jain Apr 1, 2025 4:13 PM

ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಸುಮಾರು 7.5 ಕೋಟಿ ಸದಸ್ಯರನ್ನು ಹೊಂದಿದೆ. ಉತ್ತಮ ಭವಿಷ್ಯಕ್ಕಾಗಿ ಮತ್ತು ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ನೀವು ಪ್ರತಿ ತಿಂಗಳು ಕೂಡಿಡುವ ಈ ಸಣ್ಣ ಮೊತ್ತ ದೊಡ್ಡ ಮಟ್ಟದ ಸಹಾಯ ಮಾಡುತ್ತದೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ಕಟ್ಟಲು, ಸೈಟ್‌ ಖರೀದಿಸಲು, ವೈದ್ಯಕೀಯ ಚಿಕಿತ್ಸೆ ಪಡೆಯಲು ಹೀಗೆ ಹಲವಾರು ಕಾರಣಗಳಿಗೆ ನೀವು ಪಿಎಫ್‌ ಹಣ(PF)ವನ್ನು ವಿಥ್‌ಡ್ರಾ ಮಾಡಬಹುದು. ಏಪ್ರಿಲ್‌ 1ರಿಂದ ಹೊಸ ಆರ್ಥಿಕ ವರ್ಷ(New Financial Year) ಪ್ರಾರಂಭವಾಗಿದ್ದು, EPFO ತನ್ನ ವಿಥ್‌ಡ್ರಾ ನೀತಿಗಳಲ್ಲಿ ಕೆಲವು ಬದಲಾವಣೆ( EPFO Claim Settlement Changes)ಗಳನ್ನು ಮಾಡಿದೆ. ಅದರಲ್ಲಿಯೂ ಅಡ್ವಾನ್ಸ್ ಕ್ಲೈಮ್‌ನ ಆಟೋ ಸೆಟಲ್ಮೆಂಟ್ (ASAC) ಮಿತಿಯನ್ನು ‌ಈಗಿರುವ ರೂ. 1 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಮಾರ್ಚ್ 28ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (CBT) ಕಾರ್ಯಕಾರಿ ಸಮಿತಿಯ 113ನೇ ಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಈ ನಿರ್ಧಾರವನ್ನು ಅನುಮೋದಿಸಿದ್ದಾರೆ.

5 ಲಕ್ಷ ರೂ.ವರೆಗೆ ಹಣ ಪಡೆಯಬಹುದು:

ಸಿಬಿಟಿ ಶಿಫಾರಸನ್ನು ಅನುಮೋದಿಸಿದ ನಂತರ, ಇಪಿಎಫ್‌ಒ ಸದಸ್ಯರು ASACಮೂಲಕ 5 ಲಕ್ಷ ರೂ.ವರೆಗೆ ಹಿಂಪಡೆಯಲು ಸಾಧ್ಯವಾಗುತ್ತದೆ. ಅನಾರೋಗ್ಯ ಸಂಬಂಧಿತ ಕ್ಲೈಮ್‌ಗಳ ಮಿತಿಯನ್ನು ಮೇ 2024ರಲ್ಲಿ 50,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಹೆಚ್ಚುವರಿಯಾಗಿ, ಶಿಕ್ಷಣ, ಮದುವೆ ಮತ್ತು ವಸತಿಗಾಗಿ ಕ್ಲೈಮ್‌ಗಳನ್ನೂ ಇದರೊಂದಿಗೆ ಸೇರಿಸಲು ಇಪಿಎಫ್‌ಒ ಆಟೋ ಮೋಡ್ ಸೆಟಲ್‌ಮೆಂಟ್‌ ಅನ್ನು ವಿಸ್ತರಿಸಿದೆ.

ಈ ಸುದ್ದಿಯನ್ನು ಓದಿ: EPF Withdrawal: ಪಿಎಫ್ ಹಣ ಹಿಂಪಡೆಯಲು ಬರಲಿದೆ ATM ಕಾರ್ಡ್‌; ಬ್ಯಾಂಕ್‌ನಂತೆ ಕಾರ್ಯ ನಿರ್ವಹಿಸಲಿದೆ EPFO

ಅಟೋ ಕ್ಲೈಮ್ ಪ್ರಕ್ರಿಯೆ ಎಂದರೇನು?

ಸ್ವಯಂಚಾಲಿತ(ಅಟೋಮೇಟೆಡ್‌) ಕ್ಲೈಮ್ ಪ್ರಕ್ರಿಯೆಯು ಶೇ.95 ರಷ್ಟು ಕ್ಲೈಮ್‌ಗಳನ್ನು ಮೂರು ದಿನಗಳಲ್ಲಿ ಪರಿಹರಿಸುತ್ತದೆ. ಮಾರ್ಚ್ 6, 2025ರ ಹೊತ್ತಿಗೆ, ಇಪಿಎಫ್‌ಒ 2.16 ಕೋಟಿಯ ಆಟೋ-ಕ್ಲೈಮ್ ಸೆಟಲ್‌ಮೆಂಟ್‌ಗಳನ್ನು ಸಾಧಿಸಿದೆ. ಅಂದ ಹಾಗೆ, ಇದು ಐತಿಹಾಸಿಕ ಮೈಲಿಗಲ್ಲಾಗಿದ್ದು, 2023-24ರ ಹಣಕಾಸು ವರ್ಷದಲ್ಲಿ ಕೇವಲ 89.52 ಲಕ್ಷ ರೂ. ಸೆಟಲ್‌ಮೆಂಟ್‌ ಮಾಡಲಾಗಿತ್ತು. ಇದರೊಂದಿಗೆ, ಅರ್ಜಿಗಳನ್ನು ತಿರಸ್ಕರಿಸುವ ದರವು ಶೇಕಡಾ 50 ರಿಂದ 30ಕ್ಕೆ ಇಳಿಕೆಯಾಗಿದೆ.

UPIನಿಂದ ಹಣ ವಿಥ್‌ಡ್ರಾ ಮಾಡಲು ಸಾಧ್ಯ:

ಪಿಎಫ್‌ ಹಣವನ್ನು ಸುಲಭವಾಗಿ ವಿಥ್‌ಡ್ರಾ ಮಾಡಲು EPFO ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ​​ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಹಣ ಪಡೆಯುವ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಸದ್ಯಕ್ಕೆ ಈ ಯೋಜನೆ ಜಾರಿಯಲ್ಲಿ ಇಲ್ಲವಾದರೂ, ಈ ವರ್ಷದ ಮೇ ಅಥವಾ ಜೂನ್ ಅಂತ್ಯದ ವೇಳೆಗೆ UPI ಮತ್ತು ATM ಮೂಲಕ ಸದಸ್ಯರು PF ಹಣ ಪಡೆಯಲು ಅವಕಾಶ ನೀಡುವ NPCI ಶಿಫಾರಸನ್ನು ಕಾರ್ಮಿಕ ಸಚಿವಾಲಯ ಅನುಮೋದಿಸಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಸುಮಿತಾ ದಾವ್ರಾ ಘೋಷಿಸಿದ್ದಾರೆ.

ಒಂದು ವೇಳೆ ಈ ಕ್ರಮ ಜಾರಿಯಾದಲ್ಲಿ, ಜನರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ವಾರಗಟ್ಟಲೆ ಹಣ ಪಡೆಯಲು ಕಾಯಬೇಕಾದ ಪರಿಸ್ಥಿತಿ ತಪ್ಪುವ ಸಾಧ್ಯತೆಯಿದೆ. ಈ ಕ್ರಮವು ಬ್ಯಾಂಕ್‌ಗಳ ಸಾಮಾನ್ಯ ಭವಿಷ್ಯ ನಿಧಿಗೂ (GPF) ಅನ್ವಯವಾಗಲಿದ್ದು, ಲಕ್ಷಾಂತರ ಜನರಿಗೆ ಪ್ರಯೋಜನಕಾರಿಯಾಗಲಿದೆ.