ATM Charges: ಎಟಿಎಂ ಇಂಟರ್‌ಚೇಂಜ್ ಶುಲ್ಕ ಹೆಚ್ಚಳ: ಬ್ಯಾಂಕ್‌ಗಳಿಗೆ ಏನು ಲಾಭ ?
ಬ್ಯಾಂಕ್‌ಗಳು ಎಟಿಎಂ ಇಂಟರ್‌ಚೇಂಜ್ ಶುಲ್ಕಗಳು ಇತ್ತೀಚಿಗೆ ಹೆಚ್ಚಿವೆ. ಇದರಿಂದ ಮೇ 1ರಿಂದ ಎಟಿಎಂಗಳಲ್ಲಿನ ವಹಿವಾಟುಗಳು ದುಬಾರಿಯಾಗಲಿವೆ. ಇದು ಹೆಚ್ಚಿನ ನೆಟ್‌ವರ್ಕ್‌ಗಳನ್ನು ಹೊಂದಿರುವ ದೊಡ್ಡ ಬ್ಯಾಂಕ್‌ಗಳಿಗೆ ಪ್ರಯೋಜನಕಾರಿಯಾದರೂ ಸಣ್ಣ ಬ್ಯಾಂಕ್‌ಗಳಿಗೆ ಹೊರೆಯಾಗಿವೆ. ಯಾಕೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಎಟಿಎಂ.

ಹೊಸದಿಲ್ಲಿ: ಡಿಜಿಟಲ್ ವಹಿವಾಟುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದರೂ ಎಟಿಎಂ (ATM) ಬಳಕೆ ಕಡಿಮೆಯಾಗಿಲ್ಲ. ಸಾಕಷ್ಟು ಮಂದಿ ಇಂದಿಗೂ ನಗದು ಪಡೆಯಲು ಎಟಿಎಂ ಅನ್ನೇ ಅವಲಂಬಿಸಿದ್ದಾರೆ. ಹೀಗೆ ನಾವು ಎಟಿಎಂ ಮೂಲಕ ಪಡೆಯುವ ನಗದು ಹಣಕ್ಕೆ ಬ್ಯಾಂಕ್‌ಗಳು ನಿರ್ದಿಷ್ಟ ಶುಲ್ಕವನ್ನು ವಿಧಿಸುತ್ತವೆ. ನಮ್ಮ ಬ್ಯಾಂಕ್ ಅಲ್ಲದೆ ಇತರ ಎಟಿಎಂ ಬಳಸಿದರೂ ಅದಕ್ಕೆ ಶುಲ್ಕವಿದೆ. ಈ ಶುಲ್ಕದಿಂದ ಬ್ಯಾಂಕ್‌ಗಳು ಯಾವ ರೀತಿ ಹಣಗಳಿಸುತ್ತವೆ ಗೊತ್ತೆ? ಇಲ್ಲಿದೆ ಕುತೂಹಲಕಾರಿ ಸಂಗತಿ.
ಬ್ಯಾಂಕ್‌ಗಳ ಎಟಿಎಂ ಇಂಟರ್‌ಚೇಂಜ್ ಶುಲ್ಕಗಳು ಇತ್ತೀಚಿಗೆ ಹೆಚ್ಚಿವೆ. ಇದರಿಂದ ಮೇ 1ರಿಂದ ಎಟಿಎಂಗಳಲ್ಲಿನ ವಹಿವಾಟುಗಳು ದುಬಾರಿಯಾಗಲಿವೆ. ಇದು ಹೆಚ್ಚಿನ ನೆಟ್‌ವರ್ಕ್‌ಗಳನ್ನು ಹೊಂದಿರುವ ದೊಡ್ಡ ಬ್ಯಾಂಕ್‌ಗಳಿಗೆ ಪ್ರಯೋಜನಕಾರಿಯಾದರೂ ಸಣ್ಣ ಬ್ಯಾಂಕ್‌ಗಳಿಗೆ ಹೊರೆಯಾಗಲಾರಂಭಿಸಿದೆ.
ಏನಿದು ಇಂಟರ್‌ಚೇಂಜ್ ಶುಲ್ಕ ?
ಎಟಿಎಂ ಸೇವೆಗಳನ್ನು ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವನ್ನು ಇಂಟರ್‌ಚೇಂಜ್ ಶುಲ್ಕ ಎಂದು ಕರೆಯಲಾಗುತ್ತದೆ. ಇದು ಎಟಿಎಂ ನಿರ್ವಹಣಾ ಬ್ಯಾಂಕ್‌ಗೆ ಮೂಲಸೌಕರ್ಯ, ನಿರ್ವಹಣೆ ಮತ್ತು ಭದ್ರತೆ ವೆಚ್ಚಗಳನ್ನು ಹೊಂದಿಸಲು ನೀಡುವ ಶುಲ್ಕವಾಗಿದೆ.
ಇಂಟರ್‌ಚೇಂಜ್ ಶುಲ್ಕದಲ್ಲಿ ಹೆಚ್ಚಳ ಎಷ್ಟು ?
ನಗದು ಹಿಂಪಡೆಯುವಿಕೆ ಸೇರಿದಂತೆ ಎಟಿಎಂನಲ್ಲಿ ನಡೆಸಬಹುದಾದ ಹಣಕಾಸು ವಹಿವಾಟುಗಳಿಗೆ ವಿಧಿಸಲಾಗುವ ಇಂಟರ್‌ಚೇಂಜ್ ಶುಲ್ಕದಲ್ಲಿ ಇತ್ತೀಚೆಗೆ 2 ರೂ.ಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ಇಂಟರ್‌ಚೇಂಜ್ ಶುಲ್ಕ 17 ರೂ.ಗಳಿಂದ 19 ರೂ. ಗಳಿಗೆ ಏರಿಕೆಯಾಗಿದೆ. ಬ್ಯಾಲೆನ್ಸ್ ವಿಚಾರಣೆ ಸೇರಿದಂತೆ ಹಣಕಾಸೇತರ ವಹಿವಾಟುಗಳಿಗೆ 1 ರೂ. ಹೆಚ್ಚಳ, ಉಚಿತ ಮಾಸಿಕ ಬಳಕೆ ಮೀರಿದ ಎಟಿಎಂ ಬಳಕೆಗೆ ಶುಲ್ಕವನ್ನು 6 ರೂ. ಗಳಿಂದ 7 ರೂ. ಗಳಿಗೆ ಹೆಚ್ಚಿಸಲಾಗಿದೆ.
ಶುಲ್ಕ ಹೆಚ್ಚಳ ಯಾಕಾಗಿ ?
ಹೆಚ್ಚಿನ ನಗದು ನಿರ್ವಹಣೆ ವೆಚ್ಚಗಳು, ಕಟ್ಟುನಿಟ್ಟಾದ ನಿಯಮಗಳ ಪಾಲನೆಗಾಗಿ ಅನುಸರಿಸಬೇಕಾದ ಅಗತ್ಯ ಕ್ರಮಗಳಿಗಾಗಿ ಶುಲ್ಕ ಹೆಚ್ಚಳ ಅಗತ್ಯವಾಗಿತ್ತು. ವಹಿವಾಟಿನ ಪ್ರಮಾಣ ಕಡಿಮೆ ಇರುವ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಟಿಎಂ ಪ್ರವೇಶವನ್ನು ವಿಸ್ತರಿಸುವಾಗ ಬ್ಯಾಂಕುಗಳು ಹೆಚ್ಚಿನ ವೆಚ್ಚಗಳನ್ನು ಸರಿದೂಗಿಸಬೇಕಿದೆ. ಹಣದುಬ್ಬರ, ತಂತ್ರಜ್ಞಾನದ ನವೀಕರಣ ವೆಚ್ಚಗಳು ಹೆಚ್ಚಾಗಿದ್ದು, ಲಾಭವನ್ನು ಕಾಪಾಡಿಕೊಳ್ಳಲು ಮತ್ತು ನಿರಂತರ ಎಟಿಎಂ ಸೌಲಭ್ಯವನ್ನು ಒದಗಿಸಲು ಬ್ಯಾಂಕುಗಳು ಇಂಟರ್‌ಚೇಂಜ್ ಶುಲ್ಕಗಳನ್ನು ಹೊಂದಿಸುವುದು ಅನಿವಾರ್ಯ ಎನಿಸಿಕೊಂಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ 2021ರ ಜೂನ್‌ನಲ್ಲಿ ಇಂಟರ್‌ಚೇಂಜ್ ಶುಲ್ಕಗಳನ್ನು ಪರಿಷ್ಕರಿಸಿತ್ತು. ಈ ಶುಲ್ಕಗಳನ್ನು ಸಾಮಾನ್ಯವಾಗಿ ಬ್ಯಾಂಕುಗಳು ಗ್ರಾಹಕರಿಗೆ ವಿಧಿಸುತ್ತವೆ.
ಎಟಿಎಂಗಳ ಅವಶ್ಯಕತೆ ಏನಿದೆ ?
ಇತ್ತೀಚೆಗೆ ಯುಪಿಐ ಮತ್ತು ಡಿಜಿಟಲ್ ಪಾವತಿಗಳಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೂ ಎಟಿಎಂಗಳು ಹೆಚ್ಚಿನ ಮಹತ್ವವನ್ನು ಹೊಂದಿವೆ. ವಿಶೇಷವಾಗಿ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಎಟಿಎಂ ಮೂಲಕ ನಡೆಯುವ ನಗದು ವಹಿವಾಟುಗಳು ಜನಪ್ರಿಯವಾಗಿವೆ. ನಗರದ ಜನರು ಮೊಬೈಲ್ ವ್ಯಾಲೆಟ್‌ಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದರೂ ಹಿರಿಯ ನಾಗರಿಕರು ಮತ್ತು ದಿನಗೂಲಿ ಕಾರ್ಮಿಕರು ತಮ್ಮ ವ್ಯವಹಾರ, ದೈನಂದಿನ ಚಟುವಟಿಕೆಗಳಿಗೆ ನಗದನ್ನೇ ಬಳಸುತ್ತಿದ್ದಾರೆ.
ಅಲ್ಲದೆ ಎಟಿಎಂಗಳಲ್ಲಿ ಬ್ಯಾಲೆನ್ಸ್ ವಿಚಾರಣೆ, ಮಿನಿ-ಸ್ಟೇಟ್‌ಮೆಂಟ್ ಮತ್ತು ಹಣ ವರ್ಗಾವಣೆಯಂತಹ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ಇಂದಿಗೂ ಎಟಿಎಂ ನಿರಂತರ ಬೇಡಿಕೆಯನ್ನು ಉಳಿಸಿಕೊಂಡಿದೆ.
ಈ ಸುದ್ದಿಯನ್ನೂ ಓದಿ: ATM charges hike: ಬ್ಯಾಂಕ್ ಗ್ರಾಹಕರೇ ಗಮನಿಸಿ: ಉಚಿತ ವಿತ್‌ಡ್ರಾ ನಂತರದ ಎಟಿಎಂ ವಹಿವಾಟಿಗೆ ಇನ್ನು ಮುಂದೆ ಹೆಚ್ಚಿನ ಶುಲ್ಕ
ಸಣ್ಣ ಬ್ಯಾಂಕುಗಳಿಗೆ ಸಂಕಷ್ಟ ಯಾಕೆ ?
ಎಟಿಎಂ ಮೂಲಸೌಕರ್ಯವನ್ನು ವಿಸ್ತರಿಸಲು ಸಣ್ಣ ಬ್ಯಾಂಕ್‌ಗಳು ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ ಅವುಗಳು ದೊಡ್ಡ ಬ್ಯಾಂಕ್‌ಗಳ ಎಟಿಎಂ ನೆಟ್‌ವರ್ಕ್‌ಗಳನ್ನು ಅವಲಂಬಿಸಿವೆ. ತಮ್ಮ ಗ್ರಾಹಕರು ದೊಡ್ಡ ಬ್ಯಾಂಕ್‌ಗಳಿಂದ ನಿರ್ವಹಿಸಲ್ಪಡುವ ಎಟಿಎಂಗಳನ್ನು ಬಳಸಿದಾಗ ಅವರು ಹೆಚ್ಚಿನ ಇಂಟರ್‌ಚೇಂಜ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಕಾರ್ಯಾಚರಣೆಯ ವೆಚ್ಚವನ್ನು ಹೆಚ್ಚಿಸಿದೆ.
ಗ್ರಾಹಕರಲ್ಲದವರು ತಮ್ಮ ಎಟಿಎಂಗಳನ್ನು ಬಳಸಿದಾಗ ಬ್ಯಾಂಕ್ ಇಂಟರ್‌ಚೇಂಜ್ ಶುಲ್ಕ ಗಳಿಸುತ್ತದೆ. ಆದರೆ ಈ ಆದಾಯವು ವೆಚ್ಚಗಳನ್ನು ಸರಿದೂಗಿಸಲು ಸಾಕಾಗುತ್ತಿಲ್ಲ. ವ್ಯಾಪಕವಾದ ಎಟಿಎಂ ಜಾಲಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ದೊಡ್ಡ ಬ್ಯಾಂಕ್‌ಗಳ ಮೇಲಿನ ಹೆಚ್ಚಿನ ಗ್ರಾಹಕರ ಅವಲಂಬನೆಯು ಸಣ್ಣ ಬ್ಯಾಂಕ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಇದರಿಂದ ಅವರಿಗೆ ತಮ್ಮ ಎಟಿಎಂ ಕೇಂದ್ರಗಳನ್ನು ವಿಸ್ತರಿಸುವುದು ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಚ್ಚುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳು ಕೂಡ ಸಣ್ಣ ಬ್ಯಾಂಕುಗಳಿಗೆ ಲಾಭದಾಯಕವಾಗುತ್ತಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶಾದ್ಯಂತ ಹೆಚ್ಚಿನ ಎಟಿಎಂ ಕೇಂದ್ರಗಳನ್ನು ಹೊಂದಿದ್ದು, ಇತರ ಬ್ಯಾಂಕ್‌ಗಳ ಗ್ರಾಹಕರು ಅದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಇಂಟರ್‌ಚೇಂಜ್ ಶುಲ್ಕಗಳಿಂದ ಈ ಬ್ಯಾಂಕ್ ಗಮನಾರ್ಹವಾದ ಪ್ರಯೋಜನವನ್ನು ಪಡೆಯುತ್ತಿದೆ. ಇದು ಇತರ ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್‌ಬಿ)ಗಳನ್ನು ಸಂಕಷ್ಟಕ್ಕೆ ದೂಡಿದೆ. ಯಾಕೆಂದರೆ ಅವುಗಳ ಸಣ್ಣ ಎಟಿಎಂ ಕೇಂದ್ರಗಳು ಹೆಚ್ಚಿನ ಇಂಟರ್‌ಚೇಂಜ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಅಸಮತೋಲನವು ಅವುಗಳ ಲಾಭದ ಮೇಲೆ ಪರಿಣಾಮ ಬೀರುತ್ತಿವೆ. ಯಾಕೆಂದರೆ ಅವುಗಳು ಇತರ ಬ್ಯಾಂಕ್‌ಗಳಿಗೆ ಹೆಚ್ಚಿನ ಹಣವನ್ನು ಇಂಟರ್‌ಚೇಂಜ್ ಶುಲ್ಕವಾಗಿ ಪಾವತಿಸುತ್ತವೆ. ಹೀಗಾಗಿ ಅವುಗಳು ಭದ್ರತೆ, ನಗದು ನಿರ್ವಹಣೆ ಮತ್ತು ನಿರ್ವಹಣೆ ಸೇರಿದಂತೆ ಎಟಿಎಂ ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ.
ಅನೇಕ ಪಿಎಸ್‌ಬಿಗಳಿಗೆ ಇಂಟರ್‌ಚೇಂಜ್ ಶುಲ್ಕವನ್ನು ಲಾಭದಾಯಕ ಆದಾಯವಾಗಿ ಪರಿವರ್ತಿಸುವುದು ಕಷ್ಟವಾಗಿದೆ. ಹೀಗಾಗಿ ಈ ಬ್ಯಾಂಕುಗಳು ಇದಕ್ಕಾಗಿ ಹೊಸ ದಾರಿಯನ್ನು ಹುಡುಕಬೇಕಿದೆ.
ಸಣ್ಣ ಬ್ಯಾಂಕುಗಳು ಏನು ಮಾಡಬಹುದು?
- ಸಣ್ಣ ಬ್ಯಾಂಕ್‌ಗಳು ತಮ್ಮ ಎಟಿಎಂ ಜಾಲವನ್ನು ವಿಸ್ತರಿಸಿ ದೊಡ್ಡ ಬ್ಯಾಂಕ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು.
- ಎಟಿಎಂ ಬಳಕೆ, ಇಂಟರ್‌ಚೇಂಜ್ ಶುಲ್ಕ ವೆಚ್ಚವನ್ನು ಕಡಿಮೆ ಮಾಡಲು ಡಿಜಿಟಲ್ ವಹಿವಾಟುಗಳಿಗೆ ಗ್ರಾಹಕರನ್ನು ಪ್ರೋತ್ಸಾಹಿಸಬೇಕು.
- ಮಿತಿಮೀರಿದ ಶುಲ್ಕಗಳಿಗೆ ತಡೆ, ಎಟಿಎಂ-ಚಾಲಿತ ಬ್ಯಾಂಕುಗಳಿಗೆ ನ್ಯಾಯಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕರು ಇಂಟರ್‌ಚೇಂಜ್ ಶುಲ್ಕ ದರಗಳನ್ನು ಮರುಪರಿಶೀಲಿಸಬೇಕು.
- ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆ ಮತ್ತು ಠೇವಣಿ ಎರಡನ್ನೂ ಸಕ್ರಿಯಗೊಳಿಸಬೇಕು. ಇದು ನಗದು ಮರುಪೂರಣ ವೆಚ್ಚವನ್ನು ಕಡಿಮೆ ಮಾಡಿ ಎಟಿಎಂ ಅನ್ನು ಲಾಭದಾಯಕಗೊಳಿಸುತ್ತದೆ.
- ಎಟಿಎಂ ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಾಲು ವಿವಿಧ ಎಟಿಎಂ ಆಪರೇಟರ್‌ಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಬಹುದು.
- ಹೆಚ್ಚಿನ ಎಟಿಎಂಗಳ ಅಗತ್ಯವಿರುವ ಭೌಗೋಳಿಕ ಪ್ರದೇಶಗಳನ್ನು ಮೌಲ್ಯಮಾಪನ ಮಾಡಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು.
- ಎಟಿಎಂಗಳನ್ನು ಹಂತಹಂತವಾಗಿ ರದ್ದುಗೊಳಿಸುವ ಬದಲು ಠೇವಣಿ ಮತ್ತು ಹಿಂಪಡೆಯುವಿಕೆ ಎರಡನ್ನೂ ಬೆಂಬಲಿಸುವ ನಗದು ಮರುಬಳಕೆದಾರ ಎಟಿಎಂಗಳನ್ನು ಪರಿಚಯಿಸುವ ಮೂಲಕ ಬ್ಯಾಂಕುಗಳು ತಮ್ಮ ನೆಟ್‌ವರ್ಕ್‌ಗಳನ್ನು ಅತ್ಯುತ್ತಮವಾಗಿಸುವತ್ತ ಗಮನಹರಿಸಬಹುದು.
ದೇಶಾದ್ಯಂತ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದೆ. ಆದರೂ ಭಾರತ ಇನ್ನೂ ಸಂಪೂರ್ಣ ನಗದು ರಹಿತ ಆರ್ಥಿಕತೆಯಾಗಿಲ್ಲ. ಬ್ಯಾಂಕ್ ನ ಸುಸ್ಥಿರತೆಗೆ ಎಟಿಎಂ ಆಪ್ಟಿಮೈಸೇಶನ್, ಶುಲ್ಕ ನಿಯಂತ್ರಣ ಮತ್ತು ಡಿಜಿಟಲ್ ಬ್ಯಾಂಕಿಂಗ್ ವಿಸ್ತರಣೆಯಲ್ಲಿ ಸಮತೋಲಿತ ವಿಧಾನ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.