Ranjani Srinivasan: ಹಿಂಸೆ, ಭಯೋತ್ಪಾದನೆಯನ್ನು ಪ್ರತಿಪಾದಿಸಿದ ಕಾರಣಕ್ಕೆ US ವೀಸಾ ಕಳೆದುಕೊಂಡ ಭಾರತೀಯ ವಿದ್ವಾಂಸೆ ರಂಜನಿ ಶ್ರೀನಿವಾಸನ್ ಯಾರು? ಏನಿವರ ಹಿನ್ನೆಲೆ?
Ranjani Srinivasan: ಉಗ್ರ ಸಂಘಟನೆ ಹಮಾಸ್ ಅನ್ನು ಬೆಂಬಲಿಸಿದ ಆರೋಪದ ಮೇಲೆ ವೀಸಾ ಕಳೆದುಕೊಂಡ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಸ್ವಯಂ ಪ್ರೇರಣೆಯಿಂದ ಗಡಿಪಾರು ಆಗಿದ್ದಾರೆ. ಹಾಗಿದ್ದರೆ ಏನಿವರ ಹಿನ್ನೆಲೆ? ಇಲ್ಲಿದೆ ವಿವರ.

ರಂಜನಿ ಶ್ರೀನಿವಾಸನ್.

ವಾಷಿಂಗ್ಟನ್: ಹಮಾಸ್ (Hamas) ಅನ್ನು ಬೆಂಬಲಿಸಿದ ಆರೋಪದ ಮೇಲೆ ವೀಸಾ ಕಳೆದುಕೊಂಡ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ (Ranjani Srinivasan) ಸ್ವಯಂ ಪ್ರೇರಣೆಯಿಂದ ಗಡಿಪಾರು (Self-Deports) ಆಗಿದ್ದಾರೆ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ತಿಳಿಸಿದೆ. ಸಿಬಿಪಿ ಹೋಮ್ ಆ್ಯಪ್ ಬಳಸಿ, ವಿದ್ಯಾರ್ಥಿನಿಯು ಅಮೆರಿಕದಿಂದ ನಿರ್ಗಮಿಸಲು ಸ್ವಯಂ ಆಗಿ ಮುಂದೆ ಬಂದಿದ್ದಾರೆ. ರಂಜನಿ ಶ್ರೀನಿವಾಸನ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಗರ ಯೋಜನೆಯಲ್ಲಿ ಡಾಕ್ಟರೇಟ್ ಪದವಿ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿನಿ. ಅವರು F-1 ವಿದ್ಯಾರ್ಥಿ ವೀಸಾದಡಿ ಅಮೆರಿಕಕ್ಕೆ ಪ್ರವೇಶಿಸಿದ್ದರು. ರಂಜನಿ ಅವರು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಲಾದ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ವಿಚಾರವನ್ನು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಬಹಿರಂಗಪಡಿಸಿದೆ.
ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಸ್ವೀಕರಿಸಿದ ರಂಜನಿ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಅವರು ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಮತ್ತು ಪ್ರಿಸರ್ವೇಶನ್ (GSAPP)ನಿಂದ ನಗರ ಯೋಜನೆಯಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಹೆಚ್ಚುವರಿಯಾಗಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಡಿಸೈನ್‌ನಿಂದ ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು CEPT ವಿಶ್ವವಿದ್ಯಾಲಯದಿಂದ ವಿನ್ಯಾಸದಲ್ಲಿ ಬ್ಯಾಚುಲರ್ ಆಫ್ ಡಿಸೈನ್ (B.Des.) ಪದವಿಯನ್ನು ಗಳಿಸಿದ್ದಾರೆ ಎಂದು NYU ವ್ಯಾಗ್ನರ್ ಅಧಿಕೃತ ವೆಬ್‌ಸೈಟ್‌ನಲ್ಲಿರುವ ರಂಜನಿಯ ಜೀವನ ಚರಿತ್ರೆಯ ಪುಟ ಹೇಳುತ್ತದೆ.
#BREAKING: US Homeland Security releases video of Indian student Ranjani Srinivasan self-deporting after visa cancellation for advocating violence and terrorism due to her support towards Hamas and role in rioting at the Columbia University. pic.twitter.com/l49D1BLjXW
— Aditya Raj Kaul (@AdityaRajKaul) March 15, 2025
“ಅವರ ಸಂಶೋಧನೆಯು ಭಾರತದ ಪಟ್ಟಣಗಳಲ್ಲಿನ ಭೂ-ಕಾರ್ಮಿಕ ಸಂಬಂಧಗಳ ವಿಕಸನದ ಸ್ವರೂಪದ ಮೇಲೆ ಕೇಂದ್ರೀಕರಿಸುತ್ತದೆ. ವಿಶಾಲವಾಗಿ ಹೇಳುವುದಾದರೆ, ಈ ಯೋಜನೆಯು ಪ್ರಸ್ತುತ ನಿರುದ್ಯೋಗ ಬೆಳವಣಿಗೆಯ ಬಿಕ್ಕಟ್ಟು ತಾರಕಕ್ಕೇರಿರುವಾಗ ಕಾರ್ಮಿಕರ ರಾಜಕೀಯ-ಆರ್ಥಿಕ ಬದಲಾವಣೆಗಳನ್ನು ಪರಿಶೀಲಿಸುವ ಗುರಿಯನ್ನು ಹೊಂದಿದೆ” ಎಂದು NYU ವ್ಯಾಗ್ನರ್ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
ಅವರ ಆಸಕ್ತಿಯ ಪ್ರಾಥಮಿಕ ಕ್ಷೇತ್ರಗಳು “ಅಭಿವೃದ್ಧಿಯ ರಾಜಕೀಯ ಆರ್ಥಿಕತೆ, ಭೂಮಿಯ ಪ್ರಾದೇಶಿಕ ರಾಜಕೀಯ ಮತ್ತು ಕಾರ್ಮಿಕರ ಸಮಾಜಶಾಸ್ತ್ರ” ಎಂದು ಅದು ಬಹಿರಂಗಪಡಿಸಿದೆ.
ಈ ಸುದ್ದಿಯನ್ನೂ ಓದಿ: Self-Deports : ಪ್ಯಾಲೆಸ್ತೀನ್ ಪರ ಪ್ರತಿಭಟನೆ: ಅಮೆರಿಕಾದಿಂದ ಭಾರತೀಯ ವಿದ್ಯಾರ್ಥಿನಿ ಗಡಿಪಾರು
ರಂಜನಿ ವೀಸಾ ರದ್ದುಗೊಳಿಸಿದ ಅಮೆರಿಕ ಇಲಾಖೆ
ರಂಜನಿ ಅವರ ವೀಸಾವನ್ನು ಅಮೆರಿಕ ವಿದೇಶಾಂಗ ಇಲಾಖೆ 2025ರ ಮಾರ್ಚ್ 5ರಂದು ರದ್ದುಗೊಳಿಸಿದೆ. ನಂತರ ಅವರು 2025ರ ಮಾರ್ಚ್ 11ರಂದು ಸಿಬಿಪಿ ಹೋಮ್ ಅಪ್ಲಿಕೇಶನ್ ಬಳಸಿ ಸ್ವಯಂಪ್ರೇರಣೆಯಿಂದ ತಮ್ಮನ್ನು ತಾವು ಗಡೀಪಾರು ಮಾಡಿಕೊಂಡಿದ್ದಾರೆ ಎಂದು ಇಲಾಖೆ ದೃಢಪಡಿಸಿದ್ದು, ಗಡೀಪಾರು ಪ್ರಕ್ರಿಯೆಯ ವೀಡಿಯೊವನ್ನು ಸಹ ದಾಖಲಿಸಿದೆ.
ಅಮೆರಿಕದ ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ನೀಡಲಾಗುತ್ತಿರುವುದು ಒಂದು ಸವಲತ್ತು. ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದಾಗ, ಆ ಸವಲತ್ತನ್ನು ರದ್ದುಗೊಳಿಸಲಾಗುತ್ತದೆ ಮತ್ತು ನೀವು ಈ ದೇಶದಲ್ಲಿ ಇರಲು ಅನರ್ಹರಾಗುತ್ತೀರಿ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಯೋತ್ಪಾದಕ ಪರ ಸಹಾನುಭೂತಿ ಹೊಂದಿರುವ ಒಬ್ಬರು ಸ್ವಯಂ ಗಡೀಪಾರು ಆಗಲು ಸಿಬಿಪಿ ಹೋಮ್ ಅಪ್ಲಿಕೇಶನ್ ಅನ್ನು ಬಳಸಿರುವುದು ನನಗೆ ಸಂತಸ ತಂದಿದೆ" ಎಂದಿದ್ದಾರೆ.