Aishwarya Rai Bachchan: ಮಗಳೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಅಭಿಷೇಕ್-ಐಶ್ವರ್ಯಾ; ಡಿವೋರ್ಸ್ ವದಂತಿಗೆ ಬ್ರೇಕ್
Abhishek Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ದಂಪತಿ ವಿಚ್ಚೇದನ ಪಡೆದುಕೊಳ್ಳುತ್ತಾರೆ ಎನ್ನುವ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಇವರಿಬ್ಬರು ತಮ್ಮ ಮಗಳು ಆರಾಧ್ಯಾ ಬಚ್ಚನ್ ಜತೆ ಸಮಾರಂಭವೊಂದರಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವ ಸಂದೇಶ ಸಾರಿದ್ದಾರೆ.

ಅಭಿಷೇಕ್ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್.

ಮುಂಬೈ: ಬಾಲಿವುಡ್ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ದಂಪತಿ ವಿಚ್ಚೇದನ ಪಡೆದುಕೊಳ್ಳುತ್ತಾರೆ ಎನ್ನುವ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಇವರಿಬ್ಬರು ತಮ್ಮ ಮಗಳು ಆರಾಧ್ಯಾ ಬಚ್ಚನ್ (Aaradhya Bachchan) ಜತೆ ಸಮಾರಂಭವೊಂದರಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವ ಸಂದೇಶ ಸಾರಿದ್ದಾರೆ. ಜತೆಗೆ ಡಿವೋರ್ಸ್ ವದಂತಿಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ತಮ್ಮ ಕುಟುಂಬದ ಸಮಾರಂಭದಲ್ಲಿ ಮಗಳೊಂದಿಗೆ ಭಾಗವಹಿಸಿದ್ದ ಈ ಜೋಡಿ ಒಟ್ಟಿಗೆ ನಿಂತು ಫೋಟೊಕ್ಕೆ ಪೋಸ್ ನೀಡಿದ್ದರು. ಇದೀಗ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಈ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಆರಾಧ್ಯಾ ಬಚ್ಚನ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ವಿಶೇಷ ಎಂದರೆ ಅವರು ಆಗಮಿಸುತ್ತಿದ್ದಂತೆ ಅಮಿತಾಭ್ ಬಚ್ಚನ್-ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿರುವ ʼಬಂಟಿ ಔರ್ ಬಬ್ಲಿʼ ಚಿತ್ರದ ʼಕರ್ಜಾ ರೇʼ ಹಾಡು ಮೂಡಿಬಂತು. ಈ ವೇಳೆ ಇವರು ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Empuraan Controversy: 17 ಅಲ್ಲ 24 ಕಡೆ ಕತ್ತರಿ: ʼಎಂಪುರಾನ್ʼ ಚಿತ್ರದಲ್ಲಿ ಮಹತ್ತರ ಬದಲಾವಣೆ: ನಿರ್ಮಾಪಕ ಹೇಳಿದ್ದೇನು?
ಅಭಿಷೇಕ್-ಐಶ್ವರ್ಯಾ ಮತ್ತು ಆರಾಧ್ಯಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು, ಈ ವೇಳೆ ಉಳಿದವರು ಚಪ್ಪಾಳೆ ತಟ್ಟಿ ಇವರಿಗೆ ಪ್ರೋತ್ಸಾಹ ನೀಡಿದ್ದಾರೆ. 2005ರಲ್ಲಿ ತೆರೆಕಂಡ ʼಬಂಟಿ ಔರ್ ಬಬ್ಲಿʼ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ಚಿತ್ರದ ವಿಶೇಷ ಹಾಡು ʼಕರ್ಜಾ ರೇʼಯಲ್ಲಿ ಐಶ್ವರ್ಯಾ ರೈ ಮೈ ಬಳುಕಿಸಿದ್ದರು. ತಂದೆ-ಮಗನ ಜೋಡಿಯೊಂದಿಗೆ ಐಶ್ವರ್ಯಾ ಕಾಂಬಿನೇಷನ್ ವರ್ಕ್‌ಔಟ್ ಆಗಿತ್ತು. 20 ವರ್ಷಗಳ ಬಳಿಕ ಇಂದಿಗೂ ಈ ಹಾಡು ಹಲವರ ಹಾಟ್ ಫೆವರೇಟ್ ಎನಿಸಿಕೊಂಡಿದೆ. ಆ ವೇಳೆ ಹಾಡು ಸೂಪರ್ ಹಿಟ್ ಎನಿಸಿಕೊಂಡಿತ್ತು.
2007ರಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ಆರಾಧ್ಯಾ ಜನಿಸಿದಳು. ಮದುವೆಯಾಗಿ ಸುಮಾರು 17 ವರ್ಷಗಳ ನಂತರ ಅಭಿಷೇಕ್-ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎನ್ನುವ ವದಂತಿ ಕಳೆದ ವರ್ಷ ಕೇಳಿ ಬಂದಿತ್ತು. ಈ ಬಗ್ಗೆ ಫ್ಯಾನ್ಸ್ ಆಘಾತ ವ್ಯಕ್ತಪಡಿಸಿದ್ದರು. ಆದರೆ ಅಧಿಕೃತವಾಗಿ ಇಬ್ಬರೂ ಮಾತನಾಡಿರಲಿಲ್ಲ. ಸ್ಪಷ್ಟವಾಗಿ ನಿರಾಕರಿಸಿರಲೂ ಇಲ್ಲ. ಹೀಗಾಗಿ ಈ ಬಗ್ಗೆ ಅನುಮಾನ ಬಲವಾಗಿತ್ತು.
ಇದೀಗ ಇಬ್ಬರೂ ಜತೆಯಾಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಡಿವೋರ್ಸ್ ವದಂತಿಗೆ ಬ್ರೇಕ್ ಬಿದ್ದಿದೆ. ಮಾತ್ರವಲ್ಲ ಆರಾಧ್ಯಾಳ ಬರ್ತ್‌ಡೇಯನ್ನು ಒಟ್ಟಿಗೆ ಆಚರಿಸಿಕೊಂಡಿದ್ದರು. ಅಲ್ಲದೆ ಇತ್ತೀಚೆಗೆ ನಡೆದ ಆರಾಧ್ಯಾಳ ಸ್ಕೂಲ್ ಡೇಯಲ್ಲಿ ಈ ದಂಪತಿ ಜತೆಯಾಗಿ ಭಾಗವಹಿಸಿದ್ದರು. ಇನ್ನು ಕಳೆದ ತಿಂಗಳು ಈ ದಂಪತಿ ಮುಂಬೈಯಲ್ಲಿ ನಡೆದ ಆಶುತೋಷ್ ಗೋವರಿಕರ್ ಅವರ ಪುತ್ರ ಕೋನಾರ್ಕ್ ಗೋವರಿಕರ್ ಮತ್ತು ನಿಯತಿ ಕಣಕಿಯಾ ಅವರ ವಿವಾಹದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಆ ವೇಳೆ ಇವರ ಫೋಟೊ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು.