DK Shivakumar: ಬಿಜೆಪಿಯವರಿಗೆ ಈಗ ಬೆಂಗಳೂರು ನೆನಪಾಗಿದೆ ಎಂದ ಡಿ.ಕೆ. ಶಿವಕುಮಾರ್
DK Shivakumar: ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ವಿಶೇಷ ಅನುದಾನ ನೀಡಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರಿಗೆ ಈಗ ಬೆಂಗಳೂರು ನೆನಪಾಗಿದೆಯೇ? ಬಹಳ ಸಂತೋಷ. ರಾಜಕಾರಣಿಗಳು ಬೇಡಿಕೆ ಮಂಡಿಸುವುದು ಅವರ ಕೆಲಸ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಬಗ್ಗೆ ನಮಗೆ ಆಸಕ್ತಿ ಇದೆ. ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದ್ದು, ಯಾರಿಗೆ ಎಷ್ಟು ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಜೀವನದಲ್ಲಿ ಬದ್ಧತೆ ಹಾಗೂ ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿದರೆ ನೀವೂ ಸಿ.ವಿ ರಾಮನ್, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ರಾಕೇಶ್ ಶರ್ಮಾರಂತೆ ಸಾಧನೆ ಮಾಡಬಹುದು. ಗುರಿ ಮುಟ್ಟುವ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮಕ್ಕಳಿಗೆ ಕಿವಿಮಾತು ಹೇಳಿದರು. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರೊ. ಯು.ಆರ್. ರಾವ್ ಭವನದ ಉದ್ಘಾಟನೆ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, ಇಲ್ಲಿ ನೀವೆಲ್ಲರೂ ಅನೇಕ ವಿಜ್ಞಾನಿಗಳನ್ನು ನೋಡಿದ್ದೀರಿ. ನೀವು ಕೂಡ ಅವರಂತೆಯೇ ಸಾಧನೆ ಮಾಡಬಹುದು. ಯಾರೂ ಯಾರಿಗಿಂತ ಕಡಿಮೆ ಇಲ್ಲ. ನೀವು ಯಶಸ್ಸು ಸಾಧಿಸಬೇಕಾದರೆ, ಸಾಧನೆಯ ಕನಸು ಕಾಣಬೇಕು, ಆ ಕನಸು ಈಡೇರಿಸಲು ಇಚ್ಚೆ ಇರಬೇಕು, ಬದ್ಧತೆ, ಶಿಸ್ತು ಹೊಂದಿರಬೇಕು. ಆಗ ಮಾತ್ರ ಸಾಧನೆ ಸಾಧ್ಯ. ಈಗ ಸಾಧನೆ ಮಾಡಿರುವ ಅನೇಕ ವಿಜ್ಞಾನಿಗಳು ನಿಮ್ಮಂತೆಯೇ ಹುಟ್ಟಿ ಬೆಳೆದವರು. ನಿಮಗೆ ಇರುವಷ್ಟು ಅವಕಾಶ, ಸೌಲಭ್ಯಗಳು ಅವರಿಗೆ ಇರಲಿಲ್ಲ. ಆದರೂ ಅವರು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ನಾನು ಇತ್ತೀಚೆಗೆ ದುಬೈ ಪ್ರವಾಸ ಮಾಡಿದ್ದಾಗ ಒಬ್ಬ ಪ್ರೊಫೆಸರ್ ಜತೆ ಮಾತನಾಡುತ್ತಿದ್ದೆ. ಆಗ ಅವರು, ಮುಂದಿನ 15-20 ವರ್ಷಗಳಲ್ಲಿ ಶಿಕ್ಷಕರ ಅಗತ್ಯವೇ ಇರುವುದಿಲ್ಲ, ಕೃತಕ ಬುದ್ದಿಮತ್ತೆ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಬರಲಿದೆ ಎಂದು ಹೇಳಿದರು. ನೀವೆಲ್ಲರೂ ಕರ್ನಾಟಕ ರಾಜ್ಯದಲ್ಲಿದ್ದೀರಿ. ಏಷ್ಯಾದಲ್ಲಿ ಮೊದಲು ವಿದ್ಯುತ್ ಉತ್ಪಾದನೆ ಮಾಡಿದ್ದು ಕರ್ನಾಟಕದಲ್ಲಿ. ಜವಾಹರ್ ಲಾಲ್ ನೆಹರೂ ಅವರು ಬೆಂಗಳೂರಿನಲ್ಲಿ ಹೆಚ್ಎಎಲ್, ಹೆಚ್ಎಂಟಿ, ಇಸ್ರೋ, ಬಿಹೆಚ್ಇಎಲ್, ಐಐಟಿ ಮಾಡಿದರು? ಕಾರಣ ನಮ್ಮ ರಾಜ್ಯದ ಮಕ್ಕಳು ಬಹಳ ಪ್ರತಿಭಾವಂತರು. ಹೆಣ್ಣುಮಕ್ಕಳು ಕೂಡ ಸಾಧನೆ ಮಾಡಬಹುದು. ಸಂಸತ್ತಿನಲ್ಲಿ 33%ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಮಹಿಳೆಯರು ನಾಯಕಿಯರಾಗಿ ಬೆಳೆಯುತ್ತಿದ್ದಾರೆ ಎಂದರು.
ನಮ್ಮಲ್ಲಿ ಓದಿರುವ ಅತ್ಯುತ್ತಮ ವಿದ್ಯಾವಂತರು ವಿದೇಶಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಮ್ಮ ರಾಜ್ಯಗಳಲ್ಲಿ ಇರುವಷ್ಟು ಇಂಜಿನಿಯರಿಂಗ್ ಕಾಲೇಜು ಬೇರೆಲ್ಲೂ ಇಲ್ಲ. ಅತಿಹೆಚ್ಚು ವೈದ್ಯಕೀಯ ಶಿಕ್ಷಣ ಕಾಲೇಜು ಇರುವುದು ನಮ್ಮ ರಾಜ್ಯದಲ್ಲಿ. ಅತಿ ಹೆಚ್ಚು ಪ್ರತಿಭಾವಂತ ಮಾನವ ಸಂಪನ್ಮೂಲ ಇರುವುದು ನಮ್ಮ ರಾಜ್ಯದಲ್ಲೇ. ನೀವು ಎಂದಿಗೂ ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನೀವು ಸಾಧನೆ ಮಾಡುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ವಿಜ್ಞಾನಿಗಳು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಬಾಹ್ಯಾಕಾಶ ಸಂಶೋಧನೆ ಪ್ರಮುಖ ಕ್ಷೇತ್ರವಾಗಿದ್ದು, ನೆಹರೂ ಅವರ ಕಾಲದಿಂದಲೂ ಇದಕ್ಕೆ ಅತ್ಯುತ್ತಮ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದು ದೇಶದ ಭವಿಷ್ಯ. ನೀವುಗಳು ಹಳ್ಳಿಗಳಲ್ಲಿ ಓದುತ್ತಿದ್ದೇನೆ ಎಂಬ ಹಿಂಜರಿಕೆ ಇಟ್ಟುಕೊಳ್ಳಬೇಡಿ. ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಅವರನ್ನು ನಾಯಕರನ್ನಾಗಿ ತಯಾರು ಮಾಡಬೇಕು. ನಾಯಕರು ಎಂದರೆ ಕೇವಲ ರಾಜಕೀಯ ಮಾತ್ರವಲ್ಲ. ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಸಾಧನೆ ಮಾಡುವಂತೆ ತಯಾರು ಮಾಡುವುದು. ಜವಹಾರ್ ಲಾಲ್ ನೆಹರೂ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವಂತೆ ಕರೆ ನೀಡಿದರು. ಕಾರಣ ಮಕ್ಕಳ ಮನಸ್ಸು ಹಾಲಿನಂತೆ. ಅವರಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ. ನಿಮ್ಮ ಭವಿಷ್ಯ ದೊಡ್ಡದಾಗಿದೆ. ನಿಮ್ಮ ಪೋಷಕರು, ಶಿಕ್ಷಕರ ಕೊಡುಗೆಯನ್ನು ನಿಮ್ಮ ಜೀವನದಲ್ಲಿ ಮರೆಯಬೇಡಿ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ಮಾ.2 ರಂದು ʼಬೆಟ್ಟದ ಹೂವುʼ ಕೃತಿ ಲೋಕಾರ್ಪಣೆ
ಯಾರಿಗೆ ಎಷ್ಟು ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಗೊತ್ತಿದೆ
ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ವಿಶೇಷ ಅನುದಾನ ನೀಡಬೇಕು ಎಂದು ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ಬಿಜೆಪಿ ನಾಯಕರಿಗೆ ಈಗ ಬೆಂಗಳೂರು ನೆನಪಾಗಿದೆಯೇ? ಬಹಳ ಸಂತೋಷ. ರಾಜಕಾರಣಿಗಳು ಬೇಡಿಕೆ ಮಂಡಿಸುವುದು ಅವರ ಕೆಲಸ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಬಗ್ಗೆ ನಮಗೆ ಆಸಕ್ತಿ ಇದೆ. ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದ್ದು, ಯಾರಿಗೆ ಎಷ್ಟು ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದು ಅವರು ತಿಳಿಸಿದರು.