Thursday, 7th December 2023

ಬಂದಳಿಗೆ ಅಮ್ಮನಿಗೆ ಪೊಡಮಡುವೆ

ತಾಳಗುಂದದ ಹತ್ತಿರವಿರುವ ಬಂದಳಿಕೆಯಲ್ಲಿ ವಾಸ್ತು ಶಿಲ್ಪ ಶೈಲಿಯಿಂದ ಪ್ರಮುಖ ಎನಿಸುವ ದೇಗುಲಗಳಿದ್ದು, ಅವುಗಳಲ್ಲಿ ಹಲವು ಅವಶೇಷಗಳ ರೂಪದಲ್ಲಿವೆ. ಐತಿಹಾಸಿಕವಾಗಿ ಇವು ಪ್ರಮುಖ ದೇಗುಲಗಳು. 

ಶ್ರೀನಿವಾಸ ಮೂರ್ತಿ ಎನ್. ಎಸ್.

ಪ್ರಸಿದ್ಧ ಬಳ್ಳಿಗಾವಿಯ ದೇವಾಲಯಗಳ ಹತ್ತಿರದಲ್ಲೇ, ಬಂದಳಿಕೆ ದೇಗುಲವಿದೆ. ಬಳ್ಳಿಗಾವಿಯಿಂದ ತಾಳಗುಂದದಲ್ಲಿರುವ ೨ ನೇ ಶತಮಾನದ ರಾಜ್ಯದ ಅತೀ ಪುರಾತನ ಶಿವಲಿಂಗ ನೋಡಿಕೊಂಡು ಮುಂದೆ ಸಾಗಿದರೆ ಸಿಗುವುದೇ ೧೧ ಮತ್ತು ೧೨ ನೇ
ಶತಮಾನ ದಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಬಂದಳಿಕೆ. ಇದು ಜೈನರ  ಪ್ರಮುಖ ಕೇಂದ್ರವಾಗಿದ್ದು ನಂತರ ಕಾಳಮುಖರ ಕೇಂದ್ರವಾಗಿ ಪರಿವರ್ತಿತವಾಗಿತ್ತು.

ಶಾಂತಿನಾಥ ಬಸದಿ ಬಂದಳಿಕೆಯಲ್ಲಿ ಈ ಮಾರ್ಗದಲ್ಲಿ ಬಂದಾಗ ಕೆರೆಯ ಬಲಭಾಗದಲ್ಲಿ ರಸ್ತೆಯಿಂದ ಕೆಳ ಮಟ್ಟದಲ್ಲಿ ಈ ಸುಂದರ ಬಸದಿ ಇದೆ. ಕ್ರಿ. ಶ. ರಾಷ್ಟ್ರಕೂಟರ ಕೃಷ್ಣನ ಕಾಲ 918 ರಲ್ಲಿ ಜಕ್ಕೆಯಬ್ಬೆ ದೀಣಿಗೆ ನೀಡಿ ಕಟ್ಟಿಸಿದ್ದಳು. ಈ ಬಸದಿಯನ್ನು ೧೩ ನೇ ಶತಮಾನದಲ್ಲಿ (1200) ವ್ಯಾಪಾರಿ ಬೊಪ್ಪಸಿಟ್ಟಿ ನವೀಕರಣಗೊಳಿಸಿದ. ಗರ್ಭಗುಡಿಯಲ್ಲಿ ಶಾಂತನಾಥ ಮೂರ್ತಿ ಇದ್ದು ಸುಖನಾಸಿಯಲ್ಲಿ ಸರಸ್ವತಿಯ ಶಿಲ್ಪ್ರವಿದೆ.

ತ್ರಿಮೂರ್ತಿ ನಾರಾಯಣ
ಈ ಬಸದಿಯ ಅನತಿ ದೂರದಲ್ಲಿ ದೇವಾಲಯದ ಅಳಿದು ಉಳಿದ ದೇವಾಲಯಗಳ ಸಂಕೀರ್ಣ ಇದೆ. ಇದರಲ್ಲಿ ಮೊದಲಿಗೆ ಕಾಣುವುದೇ ತ್ರಿಮೂರ್ತಿ ದೇವಾಲಯ. ಮೂಲತಹ ತ್ರೈಪುರಷ ದೇವಾಲಯವಾದ ಇಲ್ಲಿ ಮೂರು ಗರ್ಭಗುಡಿ, ೩ ಅಂತರಾಳ ಹಾಗು ಒಂದೇ ನವರಂಗ ಹೊಂದಿದೆ. ಗರ್ಭಗುಡಿಯ ಮೇಲೆ ಸುಂದರ ವೇಸರ ಮಾದರಿಯ ಶಿಖರ ಇದ್ದು ಮಧ್ಯದ (ಪಶ್ಚಿಮ) ಶಿಖರ ಬಿದ್ದು ಹೋಗಿದೆ. ಪಶ್ಚಿಮ ಮತ್ತು ದಕ್ಷಿಣ ಗರ್ಭಗುಡಿಯಲ್ಲಿ ಶಿವಲಿಂಗ, ಉತ್ತರದಲ್ಲಿ ವಿಷ್ಣುವಿನ ಮೂರ್ತಿ ಇದ್ದು ಪ್ರಭಾವಳಿಯಲ್ಲಿ ದಶಾವತಾರದ ಕೆತ್ತೆನೆ ಇದೆ. ಗರ್ಭಗುಡಿಯ ಬಾಗಿಲುವಾಡ ಮಕರ ತೋರಣದಿಂದ ಅಲಂಕರಣಗೊಂಡಿದೆ. ಇಲ್ಲಿ ಹಲವು ದೇವತೆಗಳ ಕೆತ್ತನೆಗಳಿವೆ. ಅಂತರಾಳದ ಬಾಗಿಲುವಾಡದಲ್ಲಿ ಗಜಲಕ್ಷ್ಮಿಯ ಕೆತ್ತನೆ ಇದೆ.

ಸಹಸ್ರಲಿಂಗ ದೇವಾಲಯ
ತ್ರಿಮೂರ್ತಿ ದೇವಾಲಯದ ಎದುರು ಭಾಗದಲ್ಲಿರುವ ದಿಬ್ಬದ ಮೇಲೆ ಇದನ್ನು ನಿರ್ಮಿಸಲಾಗಿದೆ. ೧೧ ನೇ ಶತಮಾನದಲ್ಲಿ ಮಚ್ಚಯ್ಯ ದಂಡನಾಯಕ ನಿರ್ಮಿ ಸಿದ ಈ ದೇವಾಲಯದಲ್ಲಿ ಗರ್ಭಗುಡಿ, ಸುಖನಾಸಿ ಮತ್ತು ನವರಂಗ ಇದೆ. ನವಂಗದಲ್ಲಿ ೪ ಕಂಭಗಳಿದ್ದು ಸಾಧಾರಣ ಮೇಲ್ಚಾವಣಿ ಇದೆ. ಇಲ್ಲಿನ ಪಾಣೀ ಪೀಠದ ಮೇಲೆ ಸಹಸ್ರ ಗೆರೆ ಇರುವದರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ.

ಸೋಮೇಶ್ವರಕ್ಕೆ ಹೋಗುವ ದಾರಿಯಲ್ಲಿನ ದಿಬ್ಬದ ಮೇಲೆ ಪಾಳು ಬಿದ್ದಿರುವ ಶಿಲಾಮಂಟಪವಿದ್ದು, ಇದನ್ನು ೧೨೦೬ ರಲ್ಲಿ ಮಲ್ಲ ದಂಡನಾಯಕ ನಿರ್ಮಿಸಿದ. ಇದು ಮಹಾನವಮಿ ದಿಬ್ಬ ಎನಿಸಿದೆ.

ಸೋಮೇಶ್ವರ
ದೇವಾಲಯವನ್ನು ಸೋಯಿದೇವನ ತಳವರ ಹಾಗು ಸುಂಕದ ಅಧಿಕಾರಿಯಾಗಿದ್ದ ಮಾಚೆನಾಯಕ ಸುಮಾರು ೧೧೬೩
ರಲ್ಲಿ ನಿರ್ಮಾಣ ಮಾಡಿದ. ಇಲ್ಲಿನ ಸಮೀಪದ ಶಾಸನದಲ್ಲಿ ಸುಮಾರು ೧೧೭೪ ರಲ್ಲಿ ಬೊಪ್ಪೇಶ್ವರ ದೇವಾಲಯದ ಉಲ್ಲೇಖವಿದೆ. ಈ ದೇವಾಲಯಕ್ಕೆ ಅನೇಕಲ್ ಸೋಮಯ್ಯನ ಗುಡಿ ಎಂದು ಕರೆಯಲಾಗುತ್ತದೆ. ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹೊಂದಿದ್ದು ಈ ಹಿಂದೆ ಇರಬಹುದಾಗಿದ್ದ ಮಂಟಪ ನಾಶವಾಗಿದೆ. ಮೂಲತಹ ತ್ರೈಪುರುಷ ದೇವಾಲಯವಾಗಿದ್ದು ಗರ್ಭಗುಡಿಯಲ್ಲಿ ಸುಮಾರು ೩೦ ಇಂಚು ಎತ್ತರದ ಶಿವಲಿಂಗವಿದೆ. ಉಳಿದ ೨ ಗರ್ಭಗುಡಿಯಲ್ಲಿ ಯಾವ ಮೂರ್ತಿಗಳಿಲ್ಲ.

ಈ ದೇವಾಲಯದ ಜಾಲಂದ್ರಗಳ ಮಧ್ಯೆ ಒಂದು ಬದಿಯಲ್ಲಿ ರಾಮಯಾಣ ಮತ್ತೊಂದ ರಲ್ಲಿ ಮಹಾಭಾರತದ ಕೆತ್ತೆನೆ ಇದೆ. ಇಲ್ಲಿ ರಾಮನ ಪಟ್ಟಾಭಿಷೇಕ, ವನವಾಸಕ್ಕೆ ತೆರೆಳುವ ಸನ್ನಿವೇಶ, ರಾವಣನ ಆಸ್ಥಾನ, ಆಶೋಕವನ ಚಿತ್ರಣವಿದೆ. ಮಹಾಭಾರತದ ಕೆತ್ತೆನೆ ಇನ್ನೂ ಸುಂದರವಾಗಿದ್ದೂ ಜೂಜಾಟ, ಯುದ್ಧದ ಸನ್ನೀವೇಶ, ಗದಾಯುದ್ಧ ಸುಂದರವಾಗಿದೆ. ಇಂತಹ ಕಥೆ ಹೇಳುವ ಕೆತ್ತನೆಗಳು, ಜಾಲಂದ್ರಗಳ ಚಿತ್ರಗಳು ಅಂದಿನ ಜನರಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ನೆನಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದವು.

ಬನಶಂಕರಿ ದೇವಾಲಯ
ಇಲ್ಲಿನ ಪ್ರಮುಖ ಶಕ್ತಿ ದೇವತೆ ಬನಶಂಕರಿಯ ಮೂಲ ದೇವಾಲಯ ಶಿಥಿಲಗೊಂಡ ನಂತರ, ಆಧುನಿಕ ಕಟ್ಟಡ ನಿರ್ಮಾಣ ವಾಗಿದ್ದರೂ ಇಲ್ಲಿನ ಶಿಲ್ಪ ಮಾತ್ರ ಪುರಾತನ ಕೊಂಡಿಯಂತೆ ಉಳಿದುಕೊಂಡಿದೆ. ೧೩೪೮ ರಲ್ಲಿ ಚಂಚಲ ಒಡೆಯ ಈ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಹೊಸದಾಗಿ ನಿರ್ಮಾಣಗೊಂಡ ದೇವಾಲಯದಲ್ಲಿ ಸುಂದರವಾದ ಪುರಾತನ ಬನಶಂಕರಿಯ ಶಿಲ್ಪವಿದ್ದು ಮುಖದ ಮೇಲಿನ ಮೀಸೆ ಹಾಗು ಕೈಗಳಲ್ಲಿನ ಬಳೆಗಳು ಬನಶಂಕರಿ ಅರಾಧನೆಗೆ ಹೊಸ ಕಲ್ಪನೆ ನೀಡುತ್ತದೆ.

ಬನಶಂಕರಿಯೇ ಆದಿ ಶಕ್ತಿಯಾದ ಕಾರಣ ಗಂಡು ಹಾಗು ಹೆಣ್ಣು ಎರಡರ ಸಂಕೇತದಂತೆ ಎಂಬ ನಂಬಿಕೆ. ದೇವಿಯ ಶಿಲ್ಪದಲ್ಲಿನ ಸರ್ಪದ ಕೆತ್ತೆನೆ ಜಾನಪದ ನಂಬಿಕೆಯ ಸಂಕೇತದಂತೆ ಮೂಡಿ ಬಂದಿದೆ. ಇನ್ನು ಸ್ಥಳೀಯವಾಗಿ ‘ಬಂದಳಿಗೆ ಅಮ್ಮ’ ಎಂದೇ ಕರೆಯಲಾಗುತ್ತದೆ.

ಸ್ಥಳಿಯವಾಗಿ ಇಲ್ಲಿನ ಸುತ್ತಮುತ್ತಲಿನ ಜನರಿಂದ ಪೂಜೆಗೊಳ್ಳುತ್ತಿರುವ ಬನಶಂಕರಿ ಅಧುನಿಕ ಹಾಗು ಪುರಾತನ ಸಂಸ್ಕೃತಿಗೆ ಕೊಂಡಿಯಂತೆ ಇದ್ದು ದಸರೆಯ ಸಮಯದಲ್ಲಿ ಇಲ್ಲಿ ವಿಷೇಶವಾದ ಪೂಜೆ ನಡೆಯುತ್ತದೆ. ಪ್ರತಿ ಶುಕ್ರವಾರ ಹಾಗು ಮಂಗಳವಾರ ಇಲ್ಲಿ ವಿಷೇಶ ಪೂಜೆ ಇದೆ. ಇದರ ಜತೆ ಈ ಊರಿನಲ್ಲಿ ಹಲವು ಅವಶೇಷಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳು ಇದ್ದು, ಇಲ್ಲಿ ನಡೆದ ಸಂಘರ್ಷಕ್ಕೆ ಸಾಕ್ಷಿ ಎನಿಸಿವೆ. ಸದ್ಯ ಈ ತಾಣವು ಪುರಾತತ್ವ ಇಲಾಖೆಯ ಸುಪರ್ದಿನಲ್ಲಿದೆ.

error: Content is protected !!