Saturday, 14th December 2024

ಮುಂದಿನ 7 ಪಂದ್ಯಗಳನ್ನು ಸೆಮಿ ರೀತಿ ಆಡಬೇಕಿದೆ: ಕೋಚ್ ಫ್ಲವರ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ 6 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉಳಿದ 7 ಪಂದ್ಯಗಳನ್ನು ಸೆಮಿಫೈನಲ್ ರೀತಿ ಭಾವಿಸಿ ಆಡಬೇಕಿದೆ ಎಂದು ಕೋಚ್ ಆಯಂಡಿ ಫ್ಲವರ್ ಹೇಳಿದ್ದಾರೆ.

ಹೈದರಾಬಾದ್‌ ವಿರುದ್ಧ 25 ರನ್‌ಗಳ ವೀರೋಚಿತ ಸೋಲು ಕಂಡ ಆರ್‌ಸಿಬಿ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ.

‘ಇದು ಖಂಡಿತಾ ನೌಕೌಟ್ ಸಮಯ. ಪ್ರತೀ ಪಂದ್ಯವೂ ಈಗ ನಮಗೆ ಸೆಮಿಫೈನಲ್ ಇದ್ದಂತೆ ಎಂದು ಅವರು ಹೇಳಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದ ಹೈದರಾಬಾದ್ ಬ್ಯಾಟರ್‌ಗಳು 287 ರನ್‌ಗಳ ದಾಖಲೆಯ ಮೊತ್ತ ಕಲೆಹಾಕಿದ್ದರು. ಆ ದಿನ ಅತ್ಯಂತ ಕಠಿಣವಾಗಿತ್ತು ಎಂಬುದನ್ನು ಫ್ಲವರ್ ಒಪ್ಪಿಕೊಂಡಿದ್ದಾರೆ.

ಸೋಲಿನಲ್ಲೂ ಅಬ್ಬರಿಸಿದ ಆರ್‌ಸಿಬಿ ಬ್ಯಾಟರ್‌ಗಳ ಧನಾತ್ಮಕ ಪ್ರವೃತ್ತಿಯನ್ನು ಫ್ಲವರ್ ಮೆಚ್ಚಿಕೊಂಡಿದ್ದಾರೆ. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಸಿಡಿಸಿದರೆ, ಡುಪ್ಲೆಸಿ 28 ಎಸೆತಗಳಲ್ಲಿ 62 ರನ್ ಬಾರಿಸಿದ್ದರು.

ನಾವು ಸೋತಿರಬಹುದು. ಆದರೆ, ನಮ್ಮ ಬ್ಯಾಟರ್‌ಗಳು ಹೋರಾಡಿದ ರೀತಿ ಬಗ್ಗೆ ಹೆಮ್ಮೆ ಇದೆ’ ಎಂದೂ ಫ್ಲವರ್ ಕೊಂಡಾಡಿದ್ದಾರೆ.

‘ದಿನೇಶ್ ಕಾರ್ತಿಕ್ ಅವರ ಈ ಪ್ರದರ್ಶನ ಟಿ-20 ವಿಶ್ವಕಪ್ ಸರಣಿಗೆ ಭಾರತ ತಂಡಕ್ಕೆ ಅವರ ಆಯ್ಕೆಗೆ ಉತ್ತೇಜನ ಕೊಟ್ಟಿದೆ’ ಎಂದಿದ್ದಾರೆ. ಮುಂದಿನ ಪಂದ್ಯದಲ್ಲಿ ಏ.21ರಂದು ಆರ್‌ಸಿಬಿ, ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.