IND vs ENG: ಭಾರತದ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ ಜೋ ರೂಟ್!
ಭಾರತದ ವಿರುದ್ಧ ಲಂಡನ್‌ನ ಲಾರ್ಡ್ಸ ಅಂಗಣದಲ್ಲಿ ಜುಲೈ 10 ರಂದು ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅದ್ಭುತವಾಗಿ ಬ್ಯಾಟ್ ಮಾಡಿದರು. ಅವರು ತಮ್ಮ ಅರ್ಧಶತಕ ಸಿಡಿಸುವ ಮೂಲಕ ಭಾರತದ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ಭಾರತದ ವಿರುದ್ದ 3000 ಟೆಸ್ಟ್ ರನ್ ದಾಖಲಿಸಿದ ಜೋ ರೂಟ್.

ಲಂಡನ್: ಭಾರತದ ವಿರುದ್ದ ಮೂರನೇ ಟೆಸ್ಟ್ ಪಂದ್ಯದ(IND vs ENG) ಮೊದಲನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ (Joe Root) ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಜಸ್‌ಪ್ರೀತ್ ಬುಮ್ರಾ, ಆಕಾಶ್ ದೀಪ್ ಹಾಗೂ ಮೊಹಮ್ಮದ್ ಸಿರಾಜ್ ಅವರ ಮಾರಕ ದಾಳಿಯನ್ನು ಮಟ್ಟಿ ನಿಂತ ಜೋ ರೂಟ್ ಶತಕದಂಚಿನಲ್ಲಿದ್ದಾರೆ. ಈ ಅದ್ಭುತ ಇನಿಂಗ್ಸ್ ಮೂಲಕ ಜೋ ರೂಟ್, ಟೀಮ್ ಇಂಡಿಯಾ (India) ಎದುರು ಯಾರಿಂದಲೂ ಸಾಧ್ಯವಾಗದ ಒಂದು ದೊಡ್ಡ ದಾಖಲೆಯನ್ನು ಬರೆದಿದ್ದಾರೆ.
ಗುರುವಾರ ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, 43 ರನ್‌ಗಳಿಗೆ ಆರಂಭಿಕರಾದ ಝ್ಯಾಕ್ ಕ್ರಾವ್ಲಿ ಹಾಗೂ ಬೆನ್ ಡಕೆಟ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಮೂರನೇ ವಿಕೆಟ್‌ಗೆ ಜೊತೆಯಾದ ಒಲ್ಲಿ ಪೋಪ್ ಹಾಗೂ ಜೋ ರೂಟ್ ದೀರ್ಘಾವಧಿ ಬ್ಯಾಟ್ ಮಾಡಿ 109 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಅಪಾಯದಿಂದ ತಮ್ಮ ತಂಡವನ್ನು ಹೊರತಂದರು. 44 ರನ್ ಗಳಿಸಿದ ಬಳಿಕ ಒಲ್ಲಿ ಪೋಪ್ ವಿಕೆಟ್ ಒಪ್ಪಿಸಿದರು.
IND vs ENG: 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ಗೆ ಆಸರೆಯಾದ ಜೋ ರೂಟ್!
ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಜೋ ರೂಟ್, ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರು ಮೊದಲನೇ ದಿನದಾಟದ ಅಂತ್ಯಕ್ಕೆ 191 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಅಜೇಯ 99 ರನ್‌ಗಳನ್ನು ಗಳಿಸಿದ್ದಾರೆ ಹಾಗೂ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂದ ಹಾಗೆ ತಮ್ಮ ಈ ಇನಿಂಗ್ಸ್‌ನಿಂದ ಜೋ ರೂಟ್, ಭಾರತ ತಂಡದ ವಿರುದ್ಧ ನೂತನ ದಾಖಲೆಯನ್ನು ಬರೆದಿದ್ದಾರೆ.
9️⃣9️⃣*
— England Cricket (@englandcricket) July 10, 2025
That's stumps - Joe Root ends the day one run shy of his 37th Test century 😅 pic.twitter.com/st6EKtJ0EO
ಭಾರತದ ವಿರುದ್ಧ 3000 ರನ್ ಗಳಿಸಿದ ಜೋ ರೂಟ್
ಮೂರನೇ ಟೆಸ್ಟ್ ಮೊದಲನೇ ದಿನ ತಮ್ಮ ಅದ್ಭುತ ಇನಿಂಗ್ಸ್ ಮೂಲಕ ಜೋ ರೂಟ್, ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಟೀಮ್ ಇಂಡಿಯಾ ಎದುರು 3000 ಟೆಸ್ಟ್ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಜೋ ರೂಟ್ ಬರೆದಿದ್ದಾರೆ. ಕಳೆದ ವರ್ಷ ಭಾರತದ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಜೋ ರೂಟ್ ಮುರಿದಿದ್ದರು. ಆ ಮೂಲಕ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಇದೀಗ ಇದೇ ತಂಡದ ವಿರುದ್ದ 3000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು
ಜೋ ರೂಟ್: 3001*+ (10 ಶತಕ, 13 ಅರ್ಧಶತಕ)
ರಿಕಿ ಪಾಂಟಿಂಗ್: 2555 (8 ಶತಕ, 12 ಅರ್ಧಶತಕ)
ಆಲ್‌ಸ್ಟೈರ್ ಕುಕ್: 2431 (7 ಶತಕ, 9 ಅರ್ಧಶತಕ)
ಸ್ಟೀವನ್ ಸ್ಮಿತ್: 2356 (11 ಶತಕ, 5 ಅರ್ಧಶತಕ)
ಕ್ಲೈವ್ ಲಾಯ್ಡ್: 2344 (7 ಶತಕ, 12 ಅರ್ಧಶತಕ)