Sunday, 12th May 2024

ಐದನೇ ಸೋಲಿಗೆ ಗುರಿಯಾದ ರಾಯಲ್ ಚಾಲೆಂಜರ್ಸ್

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ಪಂದ್ಯಗಳಲ್ಲಿ ಐದನೇ ಸೋಲಿಗೆ ಗುರಿಯಾಗಿದೆ.

ವಾಂಖೆಡೆ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಹೀನಾಯ ಸೋಲಿಗೆ ಗುರಿಯಾಗಿತ್ತು. ಆ ಮೂಲಕ ನಾಯಕ ಫಫ್ ಡುಪ್ಲೆಸಿ (61), ದಿನೇಶ್ ಕಾರ್ತಿಕ್ (53*) ಹಾಗೂ ರಜತ್ ಪಾಟೀದಾರ್ (50) ಹೋರಾಟವು ವ್ಯರ್ಥವೆನಿಸಿತು.

197 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇನ್ನೂ 4.3 ಓವರ್‌ಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಮುಂಬೈ ತಂಡದ ಬಲಗೈ ವೇಗಿ ಜಸ್‌ಪ್ರೀತ್ ಬೂಮ್ರಾ, ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿದರು. 21 ರನ್ ಮಾತ್ರ ಬಿಟ್ಟುಕೊಟ್ಟ ಬೂಮ್ರಾ ಐದು ವಿಕೆಟ್ ಗಳಿಸಿದರು. ಅಲ್ಲದೆ ಆರ್‌ಸಿಬಿ ವಿರುದ್ಧ ಐದು ವಿಕೆಟ್ ಗಳಿಸಿದ ಮೊದಲ ಬೌಲರ್ ಎನಿಸಿದರು.

ಇದರೊಂದಿಗೆ ಐಪಿಎಲ್‌ನಲ್ಲಿ 21ನೇ ಸಲ ಬೂಮ್ರಾ, ಪಂದ್ಯವೊಂದರಲ್ಲಿ ಮೂರು ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಮುಂಬೈ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಮುಂಬೈ ಪರ ಎರಡನೇ ವೇಗದ ಅರ್ಧಶತಕದ ಸಾಧನೆಯಾಗಿದೆ. 2021ರಲ್ಲಿ ಇಶಾನ್ ಕಿಶಾನ್ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಇನ್ನು ತಮ್ಮ ಟ್ವೆಂಟಿ-20 ವೃತ್ತಿ ಜೀವನದಲ್ಲಿ ಸೂರ್ಯಕುಮಾರ್ ಗಳಿಸಿದ ಅತಿ ವೇಗದ ಅರ್ಧಶತಕ ಇದಾಗಿದೆ. ಅಂದ ಹಾಗೆ ಐಪಿಎಲ್‌ನ ವೇಗದ ಅರ್ಧಶತಕದ ದಾಖಲೆ ಯಶಸ್ವಿ ಜೈಸ್ವಾಲ್ (13 ಎಸೆತ) ಹೆಸರಲ್ಲಿದೆ.

ಇದೇ ಪಂದ್ಯದಲ್ಲಿ ಆರ್‌ಸಿಬಿಯ ದಿನೇಶ್ ಕಾರ್ತಿಕ್ 22, ರಜತ್ ಪಾಟೀದಾರ್ 21 , ನಾಯಕ ಫಫ್ ಡುಪ್ಲೆಸಿ 33 ಮತ್ತು ಮುಂಬೈ ತಂಡದ ಇಶಾನ್ ಕಿಶಾನ್ 23 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು.

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ರೋಹಿತ್ ಹಾಗೂ ಇಶಾನ್ ಕಿಶಾನ್ 101 ರನ್‌ಗಳ ಜೊತೆಯಾಟ ಕಟ್ಟಿದರು. 2019ರಲ್ಲಿ ಕ್ವಿಂಟನ್ ಡಿಕಾಕ್ ಜೊತೆ ರೋಹಿತ್ 96 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ 50ನೇ ಗೆಲುವು ದಾಖಲಿಸಿದೆ. ಆ ಮೂಲಕ ಐಪಿಎಲ್ ತಾಣವೊಂದರಲ್ಲಿ 50 ಗೆಲುವು ದಾಖಲಿಸಿದ ಮೊದಲ ತಂಡವೆನಿಸಿದೆ.

ಆರ್‌ಸಿಬಿಗೆ ಸತತ 4ನೇ ಸೋಲು…

ಮೊದಲ ಪಂದ್ಯ: ಚೆನ್ನೈ ವಿರುದ್ಧ 6 ವಿಕೆಟ್ ಅಂತರದ ಸೋಲು

2ನೇ ಪಂದ್ಯ: ಪಂಜಾಬ್ ವಿರುದ್ಧ 4 ವಿಕೆಟ್ ಜಯ

3ನೇ ಪಂದ್ಯ: ಕೋಲ್ಕತ್ತ ವಿರುದ್ದ 7 ವಿಕೆಟ್ ಸೋಲು

4ನೇ ಪಂದ್ಯ: ಲಖನೌ ವಿರುದ್ಧ 28 ರನ್ ಸೋಲು

5ನೇ ಪಂದ್ಯ: ರಾಜಸ್ಥಾನ ವಿರುದ್ಧ 6 ವಿಕೆಟ್ ಸೋಲು

6ನೇ ಪಂದ್ಯ: ಮುಂಬೈ ವಿರುದ್ಧ 7 ವಿಕೆಟ್ ಸೋಲು

Leave a Reply

Your email address will not be published. Required fields are marked *

error: Content is protected !!