Friday, 13th December 2024

ಮೂರು ವರ್ಷಗಳ ಬಳಿಕ ನೀರಜ್‌ ಚೋಪ್ರಾ ದೇಶೀಯ ಸ್ಪರ್ಧೆಗೆ ಎಂಟ್ರಿ

ನವದೆಹಲಿ: ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಮೂರು ವರ್ಷಗಳ ಬಳಿಕ ಮೊದಲ ಬಾರಿ ದೇಶೀಯ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ.

ಮೇ 12ರಿಂದ 15ರ ವರೆಗೆ ಭುವನೇಶ್ವರದಲ್ಲಿ ಸಾಗಲಿರುವ ರಾಷ್ಟ್ರೀಯ ಫೆಡರೇಶನ್‌ ಕಪ್‌ ಆಥ್ಲೆಟಿಕ್‌ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

ದೋಹಾದಲ್ಲಿ ನಡೆಯಲಿರುವ ಈ ಋತುವಿನ ಮೊದಲ ಸ್ಪರ್ಧೆಯಾದ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿದ ಬಳಿಕ 26ರ ಹರೆಯದ ನೀರಜ್‌ ಅವರು ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ. ಡೈಮಂಡ್‌ ಲೀಗ್‌ ಮೇ 10ರಂದು ನಡೆಯಲಿದೆ.

ನೀರಜ್‌ ಚೋಪ್ರಾ ಮತ್ತು ಕಿಶೋರ್‌ ಕುಮಾರ್‌ ಜೆನ ಅವರು ಮೇ 12ರಿಂದ ಆರಂಭವಾಗುವ ದೇಶೀಯ ಸ್ಪರ್ಧೆಯಲ್ಲಿ ಪಾಲ್ಗೊಳಲಿದ್ದಾರೆ ಎಂದು ಭಾರತೀಯ ಆಯತ್ಲೆಟಿಕ್‌ ಫೆಡರೇಶನ್‌ ತಿಳಿಸಿದೆ.

ನೀರಜ್‌ ಅವರು 2021ರ ಮಾ. 17ರಂದು ಇದೇ ರೀತಿಯ ಸ್ಪರ್ಧೆಯಲ್ಲಿ ಈ ಹಿಂದೆ ಭಾಗವಹಿಸಿದ್ದು 87.80 ಮೀ. ದೂರ ಎಸೆದ ಸಾಧನೆಯೊಂದಿಗೆ ಚಿನ್ನ ಗೆದ್ದಿದ್ದರು.