Saturday, 14th December 2024

ಎಸಿಪಿ ವಾಸು ಅಮಾನತಿನಲ್ಲಿ ನನ್ನ ಪಾತ್ರವಿಲ್ಲ: ಮುರುಗನ್

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಅಕ್ರಮವಾಗಿ ಸರಕಾರಿ ವಾಹನದಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದ ಆರೋಪಿಗಳ ಮಾತನ್ನು ಕೇಳಿ ನನ್ನನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ ಎಂದು ಎಲೆಕ್ಟ್ರಾನಿಕ್ ಸಿಟಿ ಎಸಿಪಿ ವಾಸು ಅವರ ಆರೋಪಕ್ಕೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ. 11ರಂದು ತಮಿಳುನಾಡು ಕಡೆಯಿಂದ ನಗರಕ್ಕೆ ಸರಕಾರಿ ವಾಹನದಲ್ಲಿ ಮದ್ಯ ಜಪ್ತಿ ಮಾಡಿಕೊಂಡು ಬರುವಾಗ ಎಸಿಪಿ ವಾಸು ಅವರು ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರ ಬಳಿ ಹಣ ನೀಡುವಂತೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ. ಈ ಸಂಬಂಧ ಇಲಾಖಾ ಆಂತರಿಕ ತನಿಖೆ ನಡೆಸಿ ಡಿಸಿಪಿ ಅವರು ಸರಕಾರಕ್ಕೆ ವರದಿ ನೀಡಿದ್ದರು.

ಇದರಂತೆ ವಾಸು ಅವರು ಅಮಾನತು ಆಗಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಸಿಪಿ ಮಟ್ಟದ ಅಧಿಕಾರಿಗಳನ್ನು ನಾನು ಅಮಾನತು ಮಾಡಲು ಬರುವುದಿಲ್ಲ. ಈ ಪ್ರಕ್ರಿಯೆ ಸರಕಾರದ ಮಟ್ಟದಲ್ಲಿ ನಡೆಯುತ್ತದೆ.
ಈ ಬಗ್ಗೆ ಪಿರ್ಯಾದುದಾರರು ದೂರು ನೀಡಿದ ಅನ್ವಯ ಶಿಸ್ತು ಕ್ರಮವನ್ನು ಸರಕಾರ ಕೈಗೊಂಡಿದೆ ಎಂದು ತಮ್ಮ ಮೇಲೆ ಬಂದಿರುವ ಆರೋಪವನ್ನು ಮುರುಗನ್ ಅಲ್ಲಗಳೆದಿದ್ದಾರೆ.

ಎಸಿಪಿ ಅವರು ಜಾಮೀನು ಸಹಿತ ಅಪರಾಧ ಹಿನ್ನೆಲೆಯಲ್ಲಿ ಆರೋಪಿಯನ್ನು ಒಂದು ದಿನಕ್ಕಿಿಂತ ಹೆಚ್ಚಿನ ಕಾಲ ಲಾಕಪ್ನಲ್ಲಿ ಇಟ್ಟಿದ್ದರು. 50 ಲಕ್ಷ ಹಣಕ್ಕಾಗಿ ಎಸಿಪಿ ವಾಸು ಅವರು ಆರೋಪಿಯಲ್ಲಿ ಒತ್ತಾಯ ಮಾಡಿದ್ದರು ಎಂಬ ಆಪಾದನೆಯೂ ಕೇಳಿಬರುತ್ತಿದೆ ಎಂದು ಮುರುಗನ್ ತಿಳಿಸಿದರು.