Friday, 13th December 2024

ಸ್ನೇಹಿತರಿಬ್ಬರು ಕೃಷಿಹೊಂಡದಲ್ಲಿ ಮುಳುಗಿ ಸಾವು

ಚನ್ನಪಟ್ಟಣ: ಬೆಂಗಳೂರಿನಿಂದ ತಾಲ್ಲೂಕಿನ ತೌಟನಹಳ್ಳಿಗೆ ಬಂದಿದ್ದ ಭಾನುವಾರದ ರಜೆ ಕಳೆಯಲು ಸ್ನೇಹಿತರಿಬ್ಬರು ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಎಚ್.ಎಸ್.ಆರ್ಲೇಔಟ್ ನಿವಾಸಿ ಶೃತಿಪ್ ಕುಮಾರ್ (30) ಮತ್ತು ಹರೀಶ್ (22) ಮೃತಪಟ್ಟವರು. ಶೃತಿಪ್ ಕುಮಾರ್ ತಮ್ಮ ನಾಲ್ವರು ಸ್ನೇಹಿತರೊಂದಿಗೆ ತೌಟನಹಳ್ಳಿಯ ಚಿಕ್ಕಪ್ಪನ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟದ ನಂತರ ಸ್ನೇಹಿತ ರೊಂದಿಗೆ ಗ್ರಾಮದ ಹೊರವಲಯದಲ್ಲಿ ಚಿಕ್ಕಪ್ಪನ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಈಜಲು ತೆರಳಿದಾಗ ಈ ದುರಂತ ನಡೆದಿದೆ.

ಕೃಷಿಹೊಂಡದ ಆಳ ಅಗಲ ಅರಿಯದ ಐವರು ಮೇಲಿನಿಂದ ನೀರಿಗೆ ಧುಮಕಿದ್ದರು. ಶೃತಿಪ್ ಹಾಗೂ ಹರೀಶ್ ಮೇಲೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳಗಿದ್ದಾರೆ. ಮೂವರು ಈಜಿ ಹೊರಬಂದಿದ್ದಾರೆ. ಇಬ್ಬರನ್ನು ಕಾಪಾಡಲು ಯತ್ನಿಸಿದರೂ ಸಾಧ್ಯ ವಾಗಿಲ್ಲ.

ಹರೀಶ್ ಸ್ಥಳದಲ್ಲೇ ಮೃತಪಟ್ಟರೆ, ಶೃತಿಪ್ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಲ್ಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.